ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Wednesday, November 28, 2012

Prashnopanishad in Kannada-Prashna-V (07-08)


ತದೇತೌ ಶ್ಲೋಕೌ ಭವತಃ -
ತಿಸ್ರೋ ಮಾತ್ರಾ ಮೃತ್ಯುಮತ್ಯಃ ಪ್ರಯುಕ್ತಾ ಅನ್ಯೋನ್ಯಸಕ್ತಾ ಅನವಿಪ್ರಯುಕ್ತಾಃ
ಕ್ರಿಯಾಸು ಬಾಹ್ಯಾಂತರಮಧ್ಯಮಾಸು ಸಮ್ಯಕ್ ಪ್ರಯುಕ್ತಾಸು ನ ಕಂಪತೇ ಜ್ಞಃ

ಋಗ್ಭಿರೇತಂ ಯಜುರ್ಭಿರಂತರಿಕ್ಷಂ ಸಾಮಭಿರ್ಯತ್ ತತ್ ಕವಯೋ ವೇದಯಂತೇ
ತಮೋಂಕಾರೇಣಯನೇನಾನ್ವೇತಿ ವಿದ್ವಾನ್ ಯತ್ ತಚ್ಛಾಂತಮಜರಮಮೃತಮಭಯಂ ಪರಂ ಚೇತಿ

ಮೇಲೆ ವಿವರಿಸಲಾದ ವಿಷಯಗಳಿಗೆ ಸಂವಾದಿಯಾಗಿ/ಪೂರಕವಾಗಿ ಪಿಪ್ಪಲಾದರು ಎರಡು ವೇದ ಮಂತ್ರಗಳನ್ನು ಉಲ್ಲೇಖ ಮಾಡುತ್ತಾರೆ. ಇಲ್ಲಿ “ತದೇತೌ ಶ್ಲೋಕೌ ಭವತಃ” ಎನ್ನುವಲ್ಲಿ ‘ಶ್ಲೋಕ’ ಅಂದರೆ ೩೨ ಅಕ್ಷರ ಎಂದರ್ಥವಲ್ಲ.  ಭಗವಂತನ ಗುಣಗಾನ ಮಾಡುವ ಮಂತ್ರ ಎಂದರ್ಥ.  ಶ್ಲೋಕ ಎಂದರೆ ಕೀರ್ತಿ ಅಥವಾ ಕೀರ್ತನ ಎನ್ನುವ ಅರ್ಥ ಸಂಸ್ಕೃತದಲ್ಲಿದೆ.  ಅ-ಕಾರದ ಉಪಾಸನೆಯಾಗಲಿ, ಓ-ಕಾರದ (ಅ ಮತ್ತು ಉ ಕಾರದ) ಉಪಾಸನೆಯಾಗಲಿ, ಅವು ಮೋಕ್ಷವನ್ನು ಕೊಡುವ ಉಪಾಸನೆಗಳಲ್ಲ. ಆದರೆ ಮೂರು ಅಕ್ಷರಗಳನ್ನು ಜೋಡಿಸಿ, ಓಂಕಾರದಿಂದ ಭಗವಂತನ ಮೂರು ರೂಪಗಳ ಉಪಾಸನೆ ಮಾಡಿದರೆ, [ಮೂರು ರೂಪಗಳು ಎಂದರೆ: ಕೃಷ್ಣ, ರಾಮ, ನರಸಿಂಹ  ಅಥವಾ ವಿಶ್ವ, ತೈಜಸ ಪ್ರಾಜ್ಞ ಅಥವಾ ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧರೂಪ ಇತ್ಯಾದಿ] ಆ ಉಪಾಸನೆಯ ಫಲದಿಂದ ನಾವು ಮೃತ್ಯುವನ್ನು ದಾಟಬಹುದು. ಆದ್ದರಿಂದ ಮೃತ್ಯುವನ್ನು ದಾಟಿಸಿ ಮೋಕ್ಷವನ್ನು ಕೊಡುವ ವಿದ್ಯೆ ಈ ತ್ರಿಮಾತ್ರಾ ಉಪಾಸನೆ.
ಉಪಾಸನೆ ಮಾಡುವಾಗ ಓಂಕಾರವನ್ನು ಉಚ್ಛಾರ ಹೇಗೆ ಮಾಡಬೇಕು ಎನ್ನುವುದನ್ನು ವಿವರಿಸುತ್ತಾ, ಇಲ್ಲಿ “ಅನ-ವಿಪ್ರಯುಕ್ತಾಃ” ಎಂದಿದ್ದಾರೆ. ಅಂದರೆ ಉಚ್ಛಾರ ಮಾಡುವಾಗ ಪ್ರಾಣ ಶಕ್ತಿಯನ್ನು ತುಂಬಿ ಉಚ್ಛಾರ ಮಾಡಬೇಕು. ಆ ಉಚ್ಛಾರದಲ್ಲಿ ಗಾಂಭೀರ್ಯವಿರಬೇಕು. [ಒಂದು ಅಕ್ಷರವನ್ನು ಉಚ್ಛರಿಸುವಾಗ ಎಷ್ಟು ನಿಗಾ ಇರಬೇಕು ಎನ್ನುವುದು ನಮಗೆ ಈ ವಿವರಣೆಯಿಂದ ತಿಳಿಯುತ್ತದೆ. ಹಿಂದಿನ ಕಾಲದಲ್ಲಿ ಜ್ಯೋತಿಷ್ಯ ಮತ್ತು ಆಯುರ್ವೇದಕ್ಕೆ ವ್ಯಕ್ತಿಯ ಬಾಯಿಂದ ಬರುವ ಉಚ್ಛಾರವನ್ನು ಆಧಾರವಾಗಿ ಬಳಸುತ್ತಿದ್ದರು ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು].
“ಓಂಕಾರದ ಮೂರು ಅಕ್ಷರಗಳನ್ನು ಒಟ್ಟಿಗೆ ಸೇರಿಸಿ, ಹೊಸ ನಾದವನ್ನು ಸೃಷ್ಟಿಮಾಡಿ, ಬಾಹ್ಯವಾಗಿ, ಮಾನಸಿಕವಾಗಿ, ಅಂತಃಪ್ರಜ್ಞೆಯಿಂದ,  ತನ್ಮಯತೆಯಿಂದ, ಓಂಕಾರದಿಂದ ಭಗವಂತನ ಉಪಾಸನೆ ಮಾಡಿದರೆ, ಭಗವಂತನ ರಕ್ಷೆಯಲ್ಲಿ ನಾವು ಸುರಕ್ಷ” ಎನ್ನುತ್ತದೆ ಈ ವೇದಮಂತ್ರ.
ಋಗ್ವೇದದ ದೇವತೆಗಳ ಸಹಾಯದಿಂದ ಅ-ಕಾರದ ಉಪಾಸನೆ ಮಾಡಿದವರು, ಭೂಲೋಕದಲ್ಲಿ ಭಗವಂತನ ಶ್ರೇಷ್ಠವಾದ ಪ್ರತೀಕದ ಆರಾಧಕರಾಗಿ ಹುಟ್ಟುತ್ತಾರೆ. ಶತಮಾನಗಳಿಂದ ಜ್ಞಾನಿಗಳು ಪೂಜೆಮಾಡಿ, ವಿಶೇಷ ಸನ್ನಿಧಾನ ತುಂಬಿರುವ, ಪುಣ್ಯಸ್ಥಳದಲ್ಲಿನ ಭಗವಂತನ ಪ್ರತಿಮೆಯ ಆರಾಧಕರಾಗಿ, ಇವರು ತಮ್ಮ ಸಾಧನೆಯನ್ನು ಮುಂದುವರಿಸುತ್ತಾರೆ. ಅ-ಕಾರ ಮತ್ತು ಉ-ಕಾರದ ಉಪಾಸನೆ ಮಾಡಿದವರಿಗೆ ಹೃದಯಾಕಾಶದಲ್ಲಿ ಭಗವಂತನ ಪ್ರತೀಕದ ದರ್ಶನವಾಗುತ್ತದೆ. ಮತ್ತು ಅಂತರಿಕ್ಷದಲ್ಲಿನ ಊರ್ಧ್ವಲೋಕ ಪ್ರಾಪ್ತಿಯಾಗುತ್ತದೆ. ಅವರಿಗೆ ಯಜುರ್ವೇದದ ದೇವತೆಗಳು ಇಂತಹ ಭಾಗ್ಯವನ್ನು ಒದಗಿಸಿಕೊಡುತ್ತಾರೆ. ಇನ್ನು ಮೂರೂ ಅಕ್ಷರಳನ್ನು ಸೇರಿಸಿ, ಓಂಕಾರದಿಂದ ಭಗವಂತನ ಉಪಾಸನೆ ಮಾಡಿದರೆ: “ನಮ್ಮ ಹೃತ್ಕಮಲ ಮಧ್ಯದಲ್ಲಿ ಮತ್ತು ಕ್ಷೀರಸಾಗರದಲ್ಲಿ ನೆಲೆಸಿರುವ ಭಗವಂತನ ಸ್ಥಾನವಾದ ಮೋಕ್ಷ ಪ್ರಾಪ್ತಿಯಾಗುತ್ತದೆ.
ಇಲ್ಲಿ ಭಗವಂತನನ್ನು ಶಾಂತಃ, ಅಜರಃ, ಅಮೃತಃ, ಅಭಯಃ ಮತ್ತು ಪರಮ್ ಎಂದು ವಿಶೇಷವಾದ ಹೆಸರಿನಿಂದ ಸಂಬೋಧಿಸಿರುವುದನ್ನು ಕಾಣುತ್ತೇವೆ.   ಇವು ಭಗವಂತನ ಗುಣವಾಚಕ ನಾಮಗಳು. ಶಾಂತಃ ಎನ್ನುವಲ್ಲಿ ‘ಶ’ ಎಂದರೆ ಆನಂದ. ಅಂತಹ ಆನಂದದ ತುತ್ತತುದಿ ಶಾಂತಿ. ಆನಂದದ ಪರಾಕಾಷ್ಠೆಯಲ್ಲಿರುವ ಭಗವಂತ  ‘ಶಾಂತಃ’.  ಸಂಸಾರ ಸಾಗರದಲ್ಲಿರುವ ನಾವು ಒಂದಲ್ಲಾ ಒಂದು ಭಯದಲ್ಲಿ ಬದುಕುತ್ತೇವೆ. ಆದರೆ ದುಃಖದ ಸ್ಪರ್ಶವೇ ಇಲ್ಲದ ಪೂರ್ಣಾನಂದ ಸ್ವರೂಪ ಭಗವಂತ ಅಭಯಃ. ಮುಪ್ಪು ಮತ್ತು ಸಾವಿಗೆ ಒಳಗಾಗದ ಭಗವಂತ ‘ಅಮೃತಃ ಮತ್ತು ಅಜರಃ’. ಎಲ್ಲಕ್ಕಿಂತ ಹಿರಿದಾದ ಮತ್ತು ಪರಿಪೂರ್ಣನಾದ ಭಗವಂತ ‘ಪರಮ್’.   
ವಿ.ಸೂ: ಭಗವಂತನ ಗುಣವಾಚಕ ನಾಮಗಳ ಸುಂದರ ವಿವರಣೆಯನ್ನು ಆಸಕ್ತ ಓದುಗರು ‘ವಿಷ್ಣುಸಹಸ್ರನಾಮ ಅರ್ಥಸಹಿತ’  ಪುಸ್ತಕದಲ್ಲಿ ಕಾಣಬಹುದು. ಅಂತರ್ಜಾಲ ಕೊಂಡಿ: http://kannadavishnusahasranama.blogspot.in/

ಇತಿ ಪ್ರಶ್ನೋಪನಿಷದಿ ಪಂಚಮಃ ಪ್ರಶ್ನಃ
ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ಐದನೇ ಪ್ರಶ್ನೆ/ಅಧ್ಯಾಯ ಮುಗಿಯಿತು.

No comments:

Post a Comment