ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Tuesday, November 20, 2012

Prashnopanishad in Kannada-Prashna-V (01)


ಅಥ ಪಂಚಮಃ ಪ್ರಶ್ನಃ


ಹಿಂದಿನ ನಾಲ್ಕು ಅಧ್ಯಾಯಗಳಲ್ಲಿ, ನಾಲ್ಕು ಪ್ರಶ್ನೆಗಳಿಗೆ ಪಿಪ್ಪಲಾದರು ಕೊಟ್ಟ ಉತ್ತರದಲ್ಲಿ, ಭಗವಂತ ಮತ್ತು ಮುಖ್ಯಪ್ರಾಣದೇವರ ಮಹತ್ವ; ಅವರ ಸೃಷ್ಟಿ ಕ್ರಿಯೆ; ಎಚ್ಚರ ಕನಸು ನಿದ್ದೆ ಎನ್ನುವ ಮೂರು ಅವಸ್ಥೆಗಳಲ್ಲಿ ನಮ್ಮನ್ನು ನಿಯಂತ್ರಿಸುವ ಶಕ್ತಿಗಳ ವಿವರವನ್ನು ತಿಳಿದೆವು. ಈ ಅಧ್ಯಾಯ ಐದನೇ ಋಷಿ  ತನ್ನ ಪ್ರಶ್ನೆಯನ್ನು ಪಿಪ್ಪಲಾದರ ಮುಂದಿಡುವುದರೊಂದಿಗೆ ಪ್ರಾರಂಭವಾಗುತ್ತದೆ. ಇಲ್ಲಿ ಮುಖ್ಯವಾಗಿ ಭಗವಂತನ ಉಪಾಸನೆ, ಉಪಾಸನೆಯ ಬೀಜಮಂತ್ರ ಮತ್ತು ಉಪಾಸನೆಯ ಫಲದ ಕುರಿತಾದ ವಿವರಣೆಯನ್ನು ಕಾಣಬಹುದು.

ಅಥ ಹೈನಂ ಶೈಬ್ಯಃ ಸತ್ಯಕಾಮಃ ಪಪ್ರಚ್ಛ   ಸ ಯೋ ಹ ವೈ ತದ್ ಭಗವನ್ ಮನುಷ್ಯೇಷು ಪ್ರಾಯಣಾಂತಮೋಂಕಾರಮಭಿಧ್ಯಾಯೀತ ಕತಮಂ ವಾವ ಸ ತೇನ ಲೋಕಂ ಜಯತೀತಿ  

ಶೈಬ್ಯಃ ಸತ್ಯಕಾಮಃ ಎನ್ನುವ ಋಷಿ ಐದನೇ ಪ್ರಶ್ನೆ ಹಾಗಿದ ಶಿಷ್ಯ. ಇಲ್ಲಿ ‘ಶೈಬ್ಯ’ ಎಂದರೆ ಶಿಬಿಯ ಮಗ ಅಥವಾ ಶಿಬಿಯ ವಂಶಸ್ಥ ಎನ್ನುವ ಅರ್ಥವನ್ನು ಕೊಡುತ್ತದೆ. [ಪ್ರಾಚೀನ ಸಂಸ್ಕೃತ ಪಾಠಗಳಲ್ಲಿ ‘ಶೈವ್ಯ’ ಎನ್ನುವ ಪದ ಬಳಕೆಯಾಗಿರುವುದನ್ನು ಕಾಣುತ್ತವೆ. ಶೈವ್ಯ ಎಂದರೆ ಶಿವಿಯ ಮಗ ಅಥವಾ ಶಿವಿಯ ವಂಶಸ್ಥ  ಎಂದರ್ಥ.] ಇಲ್ಲಿ ಶಿಬಿ(ವಿ) ಪಿಪ್ಪಲಾದರಲ್ಲಿ ಕೇಳಿದ ಪ್ರಶ್ನೆ ಹೀಗಿದೆ: “ಗುರುಗಳೇ,  ಭೂಮಿಯಲ್ಲಿ ಸಾಧನೆ ಮಾಡುವ ಮನನಶೀಲ(ಮನುಷ್ಯ), ಓಂಕಾರವಾಚ್ಯ ಭಗವಂತನನ್ನು, ‘ಓಂ’ ಎನ್ನುವ ಬೀಜಾಕ್ಷರದ ಮೂಲಕ,  ಅಂತರಂಗ ಮತ್ತು ಬಹಿರಂಗ ಭಗವದರ್ಪಣಾ ಭಾವದಿಂದ, ತನ್ನ ಪ್ರತಿಯೊಂದು ಕ್ರಿಯೆಯನ್ನೂ ಭಗವಂತನ ಪೂಜೆ ಎಂದು(ಅಭಿಧ್ಯಾನ), ಸಾಯುವ ತನಕ ಉಪಾಸನೆ ಮಾಡಿದರೆ, ಅಂತಹ ವ್ಯಕ್ತಿ, ಓಂಕಾರವಾಚ್ಯ ಭಗವಂತನ ಅನುಗ್ರಹದಿಂದ, ಭೂಲೋಕ-ಸ್ವರ್ಗಲೋಕ-ವೈಕುಂಠಲೋಕ ಇವುಗಳಲ್ಲಿ ಯಾವ ಲೋಕವನ್ನು ಪಡೆಯುತ್ತಾನೆ?”. 
ಈ ಪ್ರಶ್ನೆ, ನಿರಂತರ ಆಳವಾದ ಚಿಂತನೆ ಮಾಡುವ ಮನುಷ್ಯರ ಸಾಧನೆಯ ಕುರಿತಾಗಿ ಕೇಳಿರುವ ಪ್ರಶ್ನೆ. ಇಲ್ಲಿ ಅಭಿಧ್ಯಾನ ಎಂದರೆ: ಎಲ್ಲಾ ವಿಧದಿಂದಲೂ ಅಥವಾ ಎಲ್ಲಾ ಕ್ರಿಯೆಯನ್ನು ಭಗವಂತನ ಪೂಜೆಯಾಗಿ ಮಾಡುವುದು ಮತ್ತು ಉಭಯತಃ [ಅಭಿತಃ=ಉಭಯತಃ=ಅಂತರಂಗ ಮತ್ತು ಬಹಿರಂಗ.] ಭಗವದರ್ಪಣೆ ಭಾವದಿಂದ ಉಪಾಸನೆ ಮಾಡುವುದು ಎಂದರ್ಥ. ಇನ್ನು ‘ಪ್ರಾಯಾಣ’ ಎಂದರೆ: ಪ್ರ+ಅಯನ;  ಪ್ರಕೃಷ್ಟವನ್ನು ಹೊಂದುವುದು ಅಥವಾ ಎತ್ತರದ ಲೋಕಕ್ಕೆ ಹೋಗುವುದು ಎಂದರ್ಥ. ಎತ್ತರದ ಲೋಕಗಳು ಮೂರು: ಸಾಧನೆ ಮಾಡುವ ಭೂಲೋಕ, ಸ್ವರ್ಗಸುಖವನ್ನು ಅನುಭವಿಸುವ ಸ್ವರ್ಗಲೋಕ ಹಾಗೂ ಕೊನೆಯದಾಗಿ ಮೋಕ್ಷಲೋಕವಾದ ವೈಕುಂಠ. ಓಂಕಾರ ಉಪಾಸನೆಯಿಂದ ಈ ಮೂರು ಲೋಕಗಳಲ್ಲಿ ಯಾವ ಲೋಕ ಪ್ರಾಪ್ತಿಯಾಗುತ್ತದೆ ಎನ್ನುವುದು ಶಿವಿಯ ಪ್ರಶ್ನೆ.
ಪ್ರೀತಿಯ ಅಧ್ಯಾತ್ಮ ಬಂಧುಗಳೇ, ಈ ಅಪೂರ್ವವಾದ ಪ್ರಶ್ನೆಗೆ ಪಿಪ್ಪಲಾದರ ಉಪದೇಶವೇ ಈ ಅಧ್ಯಾಯದ ಮುಂದಿನ ಭಾಗ. ಬನ್ನಿ, ಆ ಭಗವಂತನ ಕೃಪೆ ಕೋರಿ, ಮುಖ್ಯಪ್ರಾಣದೇವರಿಗೆ ನಮಿಸಿ, ಅತ್ಯದ್ಭುತವಾದ ಈ ಗುರುಶಿಷ್ಯರ ಸಂಭಾಷಣೆಯನ್ನಾಲಿಸೋಣ.  

No comments:

Post a Comment