ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Sunday, November 25, 2012

Prashnopanishad in Kannada-Prashna-V (03-04)


ಸ ಯಧ್ಯೇಕಮಾತ್ರಮಭಿಧ್ಯಾಯೀತ ಸ ತೇನೈವ ಸಂವೇದಿತಸ್ತೂರ್ಣಮೇವ ಜಗತ್ಯಾಮಭಿಸಂಪಧ್ಯತೇ   ತಮೃಚೋ ಮನುಷ್ಯಲೋಕಮುಪನಯಂತೇ ಸ ತತ್ರ ತಪಸಾ ಬ್ರಹ್ಮಚರ್ಯೇಣ ಶ್ರದ್ಧಯಾ ಸಂಪನ್ನೋ ಮಹಿ-ಮಾನಮನುಭವತಿ

ಓಂಕಾರದಲ್ಲಿ ಒಂದು ಮಾತ್ರೆಯ ಉಪಾಸನೆ ಮಾಡುವುದರ ಫಲವೇನು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಇಲ್ಲಿ ಒಂದು ಮಾತ್ರೆ ಎಂದರೆ ಓಂಕಾರದಲ್ಲಿ ಅ-ಕಾರ ವಾಚ್ಯನಾದ ಭಗವಂತನ ರೂಪದ ಉಪಾಸನೆ. ಒಂದು ಮಾತ್ರೆಯ ಉಪಾಸನೆಯಲ್ಲಿ ಜಪ ಮಾಡುವಾಗ ‘ಓಂ’ ಎಂದು ಜಪ ಮಾಡುವುದೇ ಹೊರತು, ‘ಅ’ ಎಂದಲ್ಲ. ಹಾಗೆ ಓಂಕಾರ ಜಪ ಮಾಡುವಾಗ ಅಲ್ಲಿ ಉಳಿದ ಅರ್ಥದ ಅನುಸಂಧಾನ ಮಾಡದೇ, ಕೇವಲ ಅ-ಕಾರಕ್ಕೆ ಒತ್ತುಕೊಟ್ಟು ಉಪಾಸನೆ ಮಾಡುವುದರಿಂದ, ಇದನ್ನು ಒಂದು ಮಾತ್ರೆಯ ಉಪಾಸನೆ ಎನ್ನುತ್ತಾರೆ. ಈ ರೀತಿ ಉಪಾಸನೆ ಮಾಡಿದವರು, ತಮ್ಮ ಉಪಾಸನೆಯ ಫಲವಾಗಿ, ಮುಂದಿನ ಜನ್ಮದಲ್ಲಿ ಋಗ್ವೇದದ ಮಂತ್ರಾಭಿಮಾನಿದೇವತೆಗಳ ಆಶೀರ್ವಾದದೊಂದಿಗೆ, ಭೂಲೋಕದಲ್ಲಿ,  ಮನನಮಾಡುವ ಜ್ಞಾನಿಗಳ ಸಮುದಾಯದಲ್ಲಿ,  ಬಹಳ ಎತ್ತರದ ವ್ಯಕ್ತಿಯಾಗಿ ಹುಟ್ಟುತ್ತಾರೆ. ಅಂದರೆ ಅತ್ಯಂತ ಶ್ರೇಷ್ಠವಾದ ಭಗವಂತನ ಬಾಹ್ಯ ಪ್ರತೀಕದ ಉಪಾಸನೆ ಮಾಡುವ ಭಾಗ್ಯ ಅ-ಕಾರ ಉಪಾಸಕರಿಗೆ ಸಿಗುತ್ತದೆ.
ಅ-ಕಾರ ಉಪಾಸನೆಯ ಫಲವಾಗಿ, ಭೂಲೋಕದಲ್ಲಿ ಮತ್ತೆ ಹುಟ್ಟಿಬಂದವರು ತಪಸ್ಸು, ಬ್ರಹ್ಮಚರ್ಯ ಮತ್ತು ಶ್ರದ್ದೆ ಎನ್ನುವ ಮಹಾನ್ ಸಂಪತ್ತಿನೊಂದಿಗೆ, ಬಹಳ ಎತ್ತರದ ಸ್ಥಾನದಲ್ಲಿ, ಗೌರವಾನ್ವಿತ ವ್ಯಕ್ತಿಯಾಗಿ ಬದುಕುತ್ತಾರೆ.  [ಉದಾಹರಣೆಗೆ ಉಡುಪಿಯ ಕೃಷ್ಣನನ್ನು ಪೂಜಿಸುವ ಯತಿಗಳು. ಅವರು ತಮ್ಮ ಹಿಂದಿನ ಜನ್ಮದಲ್ಲಿ ಅ-ಕಾರ ದಿಂದ ಭಗವಂತನನ್ನು ಆರಾಧಿಸಿ, ಇಂದು ಅಂತಹ ಪರಮ ಪವಿತ್ರ ಸ್ಥಾನವನ್ನು ಪಡೆದಿದ್ದಾರೆ ಎನ್ನಬಹುದು. ಅ-ಕಾರ ಉಪಾಸನೆಯ ಫಲವನ್ನು ಪೂರ್ಣಪ್ರಮಾಣದಲ್ಲಿ ಆಚರಣೆಗೆ ತರಬೇಕು ಎನ್ನುವ ಸಂಕಲ್ಪದಿಂದ ಆಚಾರ್ಯರು ಉಡುಪಿಯಲ್ಲಿ ಕೃಷ್ಣನನ್ನು ಪ್ರತಿಷ್ಠಾಪನೆ ಮಾಡಿದರು ಎಂದರೆ ತಪ್ಪಾಗಲಾರದು].
ಇಲ್ಲಿ ತಪಸ್ಸು, ಬ್ರಹ್ಮಚರ್ಯ ಮತ್ತು ಶ್ರದ್ದೆ ಎನ್ನುವ ಸಂಪತ್ತು ಎಂದಿದ್ದಾರೆ. ತಪಸ್ಸು ಎಂದರೆ ಕಾಡಿಗೆ ಹೋಗಿ ಧ್ಯಾನ ಮಾಡುವುದು ಎಂದರ್ಥವಲ್ಲ. ನಿರಂತರ ಶಾಸ್ತ್ರ ಚಿಂತನೆ ಮಾಡಿ, ಶಾಸ್ತ್ರವನ್ನು ತಿಳಿದು, ಪಾಠಪ್ರವಚನದ ಮೂಲಕ, ಜ್ಞಾನವನ್ನು ಇನ್ನೊಬ್ಬರಿಗೆ ಹಂಚುವುದು ತಪಸ್ಸು. ಅದೇ ರೀತಿ ಬ್ರಹ್ಮಚರ್ಯ ಎಂದರೆ: ಇಂದ್ರಿಯ ನಿಗ್ರಹದ ಮೂಲಕ ವೇದಾಧ್ಯಯನ, ಹಾಗೂ ವೇದಾಧ್ಯಯನದ ಮೂಲಕ ಭಗವಂತನ ಜ್ಞಾನ. ತಪಸ್ಸು ಮತ್ತು ಬ್ರಹ್ಮಚರ್ಯದ ಹಿಂದೆ ಅತ್ಯಂತ ಮುಖ್ಯವಾಗಿ ಬೇಕಾಗಿರುವ ಸಂಪತ್ತು ಶ್ರದ್ಧೆ. ಶ್ರದ್ಧೆ ಇಲ್ಲದೆ ಮಾಡುವ ಕ್ರಿಯೆ ಕೇವಲ ಭೂಟಾಟಿಕೆಯಾಗುತ್ತದೆ. ಶ್ರದ್ಧೆ ಅಂದರೆ  ಆಸ್ತಿಕ್ಯ(ಶ್ರತ್)ದ  ಧಾರಣೆ. ನಾವು ಏನನ್ನು ಹೇಳುತ್ತೇವೆ, ಮೊದಲು ಅದನ್ನು ನಂಬಬೇಕು. ನಂಬಿ ಹೇಳಬೇಕು. ಹೀಗೆ ನಂಬುವ ಮತ್ತು ನಂಬಿಸುವ ಕ್ರಿಯೆ ಶ್ರದ್ಧೆ. ಯಾರಿಗೆ ಶ್ರದ್ಧೆ ಇಲ್ಲವೋ ಅವರು ವೇದಾಂತ ಹೇಳಿದರೆ ಅದು ವ್ಯರ್ಥ!

ಅಥ ಯದಿ ದ್ವಿಮಾತ್ರೇಣ ಮನಸಿ ಸಂಪಧ್ಯತೇ ಸೋಽನ್ತರಿಕ್ಷಂ ಯಜುರ್ಭಿರುನ್ನೀಯತೇ ಸೋಮಲೋಕಂ  ಸ ಸೋಮಲೋಕೇ ವಿಭೂತಿಮನುಭೂಯಪುನರಾವರ್ತತೇ

ಏಕ ಮಾತ್ರೆಯ ನಂತರ ದ್ವಿಮಾತ್ರೆ. ಅ-ಕಾರ ಮತ್ತು ಉ-ಕಾರ ಅಥವಾ ಓ-ಕಾರದಿಂದ ಭಗವಂತನ ಉಪಾಸನೆ. ಸರ್ವವಿಲಕ್ಷಣ, ಸರ್ವದೋಷದೂರ, ಸರ್ವಗುಣಪರಿಪೂರ್ಣ ಎನ್ನುವುದು ಅ-ಕಾರದ ಉಪಾಸನೆಯ ಒಂದು ಮುಖ. ಇದು ಎಚ್ಚರಾವಸ್ಥೆಯ ಪ್ರತಿಯೊಂದು ಹಂತದಲ್ಲಿ, ಎಚ್ಚರದ ಅನುಭವ ಕೊಡತಕ್ಕಂತಹ ಭಗವಂತನ ಉಪಾಸನೆ. ಇನ್ನು ಉ-ಕಾರ ಎಂದರೆ ಉತ್ಕರ್ಷ. ಹೊರಗಿನ ಪ್ರಪಂಚದಲ್ಲಿ ಕಂಡ ಅನುಭವವನ್ನು ಒಳಗೆ ಎಳೆದುಕೊಳ್ಳುವುದು. ಅಂದರೆ  ಕನಸಿನ ಅವಸ್ಥೆಯಲ್ಲಿ ನಮ್ಮನ್ನು ನಿಯಮಿಸುವ ಭಗವಂತನ ಉಪಾಸನೆ. ಹೀಗೆ ಅ-ಕಾರ ಮತ್ತು ಉ-ಕಾರ ಎರಡರಿಂದಲೂ ಭಗವಂತನ ಉಪಾಸನೆ ಮಾಡಿದರೆ, ಆಗ ನಮ್ಮ ಮಾನಸಲೋಕದಲ್ಲಿ ಭಗವಂತನ ರೂಪ ಕಾಣಲಾರಂಭಿಸುತ್ತದೆ. ಆದರೆ ಇದು ಮನಸ್ಸೇ ಕಡೆದ ಭಗವಂತನ ಮಾನಸ ಪ್ರತೀಕವೇ ಹೊರತು, ಭಗವಂತನ ಸ್ವರೂಪರೂಪವಲ್ಲ. ಈ ರೀತಿ ದ್ವಿಮಾತ್ರೆಯಿಂದ ಭಗವಂತನ ಉಪಾಸನೆ ಮಾಡುವವರನ್ನು, ಯಜುರ್ವೇದದ ಮಂತ್ರಾಭಿಮಾನಿದೇವತೆಗಳು,  ಸ್ವರ್ಗಲೋಕದಲ್ಲಿ ಅತ್ಯುನ್ನತ ಸ್ಥಾನವಾದ, ಚಂದ್ರಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಚಂದ್ರಲೋಕವನ್ನು ಸೇರಿದ ‘ಜೀವ’ ಅಲ್ಲಿ ಹಲವು ಕಾಲ ದಿವ್ಯ ಸುಖವನ್ನು ಅನುಭವಿಸಿ, ಮರಳಿ ಭೂಮಿಯಲ್ಲಿ ಹುಟ್ಟಿ, ಭೂಲೋಕದಲ್ಲಿ ತನ್ನ ಸಾಧನೆ ಮುಂದುವರಿಸುತ್ತಾನೆ.
ಏಕಮಾತ್ರೆ ಉಪಾಸನೆ ಅಂದರೆ: ಋಗ್ವೇದದಿಂದ ಭಗವಂತನನ್ನು ಕಾಣುವುದು. [“ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ” ಎಂದು ಆರಂಭವಾಗುವ ಋಗ್ವೇದದ ಸಂಕ್ಷಿಪ್ತ ಅಕ್ಷರ(abbreviation) ‘ಅ-ಕಾರ]. ಋಗ್ವೇದದಲ್ಲಿ ಅನೇಕ ಸ್ತುತಿಗಳಿವೆ. ಅವು ಅನೇಕ ದೇವತೆಗಳ ಹೆಸರನ್ನು ಹೇಳುತ್ತವೆ. ಉದಾಹರಣೆಗೆ ಅಗ್ನಿ, ವಾಯು ಇತ್ಯಾದಿ. ಇಲ್ಲಿ ಈ ಶಬ್ದಗಳನ್ನು ಭಗವಂತನ ಪರ ಅರ್ಥಮಾಡಿಕೊಂಡಾಗ, ಇಡೀ ಋಗ್ವೇದ ಭಗವಂತನ ಪರವಾಗಿ ಅರ್ಥವಾಗುತ್ತದೆ. ಅಗ್ನಿ= ಅ+ಗ+ನಿ. ಚಲನೆ ಇಲ್ಲದ ವಸ್ತುವಿಗೆ(ಅಗ) ಚಲನೆ ಕೊಡುವವನು-ಅಗ-ನಿ. ಭಗವಂತ ಇಡೀ ವಿಶ್ವಕ್ಕೆ ಚಲನೆ ಕೊಡುವವ. ಆದ್ದರಿಂದ ಆತ ಅಗ್ನಿ. ಹೀಗೆ ಋಗ್ವೇದದಲ್ಲಿ ಬರುವ ಪ್ರತೀ ದೇವತಗಳ ಹೆಸರನ್ನು ಭಗವಂತನ ಪರ ಮಾಡಿ, ಉಪಾಸನೆ ಮಾಡಿದಾಗ, ಅದು ಏಕಮಾತ್ರೆ ಉಪಾಸನೆಯಾಗುತ್ತದೆ.
ದ್ವಿಮಾತ್ರೆ ಉಪಾಸನೆ ಎಂದರೆ ಅದು ಯಜುರ್ವೇದದಿಂದ ಭಗವಂತನನ್ನು ಕಾಣುವುದು. ಇದು ಏಕಮಾತ್ರೆ ಉಪಾಸನೆಗಿಂತ ಕಷ್ಟದ ಉಪಾಸನೆ. ಏಕೆಂದರೆ ಯಜುರ್ವೇದ ಋಗ್ವೆದದಂತೆ ಭಗವಂತನ ಸ್ತುತಿ ಅಲ್ಲ. ಅಲ್ಲಿ ಹೆಚ್ಚಾಗಿ ‘ಕರ್ಮಕಾಂಡ’ವನ್ನು ಕಾಣುತ್ತೇವೆ. ಉದಾಹರಣೆಗೆ:  “ವಸಂತೇ ವಸಂತೇ ಜ್ಯೋತಿಷಾ ಯಜೇತಾ”: ಇದರ ನೇರ ಅರ್ಥ: “ಪ್ರತಿಯೊಂದು ವಸಂತದಲ್ಲೂ ಜ್ಯೋತಿಷ್ಟೋಮಯಾಗ ಮಾಡು” ಎಂದರ್ಥ. ಇದನ್ನು ಭಗವಂತನ ಪರ ಮಾಡುವುದು ಹೇಗೆಂದರೆ: ಇಲ್ಲಿ ಬರುವ ಪ್ರತಿಯೊಂದು ಪದವನ್ನೂ ಭಗವಂತನ ಪರ ಮಾಡಿ ಅರ್ಥ ಮಾಡಬೇಕು. ಹಾಗೆ ಮಾಡಿದಾಗ: ವಸಂತೇ ಅಂದರೆ: ಎಲ್ಲವುದರ ಒಳಗೂ ವಾಸ ಮಾಡುವವನು, ಎಲ್ಲೆಡೆ ತುಂಬಿರುವವನು ಎನ್ನುವ ಅರ್ಥವನ್ನು ಕೊಡುತ್ತದೆ. ಅದೇ ರೀತಿ  ‘ಜ್ಯೋತಿಷಾ’. ಇಲ್ಲಿ ಷ-ಕಾರೋ ಪ್ರಾಣೋ ಆತ್ಮಾ. ಅಂದರೆ ಸರ್ವಚೇಷ್ಠಕತ್ವ. ಆದ್ದರಿಂದ ಸ್ವಯಂ ಪ್ರಕಾಶಸ್ವರೂಪನೂ ಸರ್ವಚೇಷ್ಠಕನೂ ಆದವ ಜ್ಯೋತಿಷಾ. ಇನ್ನು ‘ಆಯುಜೇತಾ’ ಎಂದರೆ: ಎಲ್ಲಾ ಯಜ್ಞಗಳಿಂದ ಪೂಜಿತನಾದವನು ಎಂದರ್ಥ. ಈ ಎಲ್ಲಾ ಅರ್ಥಗಳಿಂದ ನೋಡಿದಾಗ, ಮೇಲಿನ ಮಂತ್ರ ಸಂಪೂರ್ಣ ಭಗವದ್ ಪರ ಅರ್ಥವನ್ನು ಕೊಡುತ್ತದೆ. ಇದು ದ್ವಿಮಾತ್ರೆಯಿಂದ ಭಗವಂತನ ಉಪಾಸನೆ ಮಾಡುವವರು ಯಜುರ್ವೇದದಲ್ಲಿ ಭಗವಂತನನ್ನು ಕಾಣುವ ವಿಧಾನ.    
 ಎಲ್ಲಕ್ಕಿಂತ ಕ್ಲಿಷ್ಟಕರವಾದುದು  ತ್ರಿಮಾತ್ರೆ ಉಪಾಸನೆ. ಇದು ಮ-ಕಾರದ ಉಪಾಸನೆ ಅಥವಾ ಸಾಮವೇದದಿಂದ ಭಗವಂತನನ್ನು ಕಾಣುವ ಉಪಾಸನೆ. ಸಾಮವೇದದಲ್ಲಿ ಯಾವುದೇ ಸ್ವತಂತ್ರವಾದ ವಿಶೇಷ ಮಂತ್ರಗಳಿಲ್ಲ. ಅಲ್ಲಿರುವುದು ಋಗ್ವೇದದ ಮಂತ್ರಗಳು ಮತ್ತು ಕೆಲವು ಯಜುರ್ವೇದದ ಮಂತ್ರಗಳು. ಸಾಮವೇದದ ವಿಶೇಷತೆ ‘ನಾದ’. ಕೇವಲ ಶಬ್ದಗಳಲ್ಲಷ್ಟೇ ಭಗವಂತನನ್ನು ಹೇಳುವುದಲ್ಲ, ಈ ಪ್ರಪಂಚದಲ್ಲಿನ ಎಲ್ಲಾ ನಾದಗಳೂ ಭಗವಂತನನ್ನು ಹೇಳುತ್ತವೆ- ಎಂದು ಉಪಾಸನೆ ಮಾಡುವುದು ತ್ರಿಮಾತ್ರೆ ಉಪಾಸನೆ.  “ಸರ್ವೈಃ ಶಬ್ದ್ಯಃ ಘೋಷ್ಯಸ್ಯ ನೀಯತೇ ಇತಿ ಮಃ”. ಅಂದರೆ ಎಲ್ಲಾ ನಾದಗಳಿಂದ ವಾಚ್ಯನಾದವನು ಮ-ಕಾರ ವಾಚ್ಯ ಭಗವಂತ ಎಂದರ್ಥ. ನಾದದಿಂದ ಭಗವಂತನ ಉಪಾಸನೆ ಬಹಳ ಕಷ್ಟದ ಕೆಲಸ! ಇದನ್ನು ಅರ್ಥ ಮಾಡಿಕೊಳ್ಳಲು ಆಚಾರ್ಯರು ಕೊಟ್ಟ ಒಂದು ಉದಾಹರಣೆಯನ್ನು ನೋಡಿದರೆ, ನಮಗೆ ನಾದದಲ್ಲಿ ಭಗವಂತನನ್ನು ಹೇಗೆ ಕಾಣಬಹುದು ಎನ್ನುವುದು ಕಿಂಚಿತ್ ಅರ್ಥವಾಗಬಹುದು. ನಮಗೆ ತಿಳಿದಂತೆ ಆಗಾಗ ನಮ್ಮ ಮನೆಗಳಲ್ಲಿ ಹಲ್ಲಿ ಲೊಚಗುಟ್ಟುತ್ತಿರುತ್ತದೆ. ಇದನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ, ನಾವೂ ಕೂಡಾ ನಮಗೆ ಬಹಳ ಆಶ್ಚರ್ಯವಾದಾಗ ‘ಅದ್ಭುತ’ ಎನ್ನುವುದನ್ನು ವ್ಯಕ್ತಪಡಿಸಲು ನಮ್ಮ ಬಾಯಿಯಿಂದ  ಹಲ್ಲಿಯಂತೆ ಶಬ್ದ ಮಾಡುತ್ತೇವೆ. ಈ ರೀತಿ ಸಂಬಂಧಕಲ್ಪಿಸಿ ಯೋಚಿಸಿದರೆ:  “ಭಗವಂತ ಅದ್ಭುತ” ಎನ್ನುವುದು ಹಲ್ಲಿಯ ನಾದದ ಅರ್ಥ! ಹೀಗೆ ಭಗವಂತನನ್ನು ಹೇಳದೇ ಇರುವ ಒಂದು ಶಬ್ದ, ಒಂದು ನಾದ ಈ ಪ್ರಪಂಚದಲ್ಲಿಲ್ಲ. ಮೂರು ಮಾತ್ರೆಯ ಉಪಾಸಕರು ನಾದೋಪಾಸನೆಯಿಂದ ತಮ್ಮ ಸ್ವರೂಪದಲ್ಲಿ ಭಗವಂತನನ್ನು ಕಂಡು, ಯಾವ ಫಲವನ್ನು ಪಡೆಯುತ್ತಾರೆ ಎನ್ನುವುದನ್ನು ಮುಂದಿನ ಗದ್ಯ ಭಾಗದಲ್ಲಿ ಪಿಪ್ಪಲಾದರು ವಿವರಿಸುತ್ತಾರೆ. 

No comments:

Post a Comment