ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Saturday, November 24, 2012

Prashnopanishad in Kannada-Prashna-V (02)


ತಸ್ಮೈ ಸ ಹೋವಾಚ:
ಏತದ್ ವೈ ಸತ್ಯಕಾಮ ಪರಂ ಚಾಪರಂ ಚ ಬ್ರಹ್ಮ ಯದೋಂಕಾರಸ್ತಸ್ಮಾದ್ ವಿದ್ವಾನೇತೇನೈವಾಯನೇನೈ-ಕತರಮನ್ವೇತಿ

ಉಪಾಸನೆಯಲ್ಲೇ ಅತಿಶ್ರೇಷ್ಠ ಉಪಾಸನೆಯಾದ ಓಂಕಾರದ ಉಪಾಸನೆ ಕುರಿತಾದ ಶೈಬ್ಯಃ ಸತ್ಯಕಾಮರ ಪ್ರಶ್ನೆಯನ್ನು ಕೇಳಿ, ಪಿಪ್ಪಲಾದರಿಗೆ ಬಹಳ ಸಂತೋಷವಾಯಿತು. ಓಂಕಾರದ ಉಪಾಸನೆ ದೊಡ್ಡ ಸಾಧಕರಿಗೆ ಮಾತ್ರ ದಕ್ಕುವಂತಹ ಉಪಾಸನೆ. ಸಾಮಾನ್ಯವಾಗಿ ಓಂಕಾರದಿಂದ ಭಗವಂತನ ಉಪಾಸನೆಯನ್ನು ಮಾಡುವವರು ಯತಿಗಳು. ಗ್ರಹಸ್ಥರಾದವರು ಹತ್ತಕ್ಕಿಂತ ಹೆಚ್ಚು ಬಾರಿ ಓಂಕಾರ ಜಪ ಮಾಡುವುದರಿಂದ ಅವರಿಗೆ ಸಂಸಾರಿಕ ಜೀವನದಲ್ಲಿ ಜಿಗುಪ್ಸೆ ಬರಬಹುದು ಎನ್ನುತ್ತಾರೆ. ಆದರೆ ಓಂಕಾರದ ಅರ್ಥಾನುಸಂಧಾನ ಯಾರು ಬೇಕಾದರೂ ಮಾಡಬಹುದು. ಓಂಕಾರದ ಅರ್ಥಚಿಂತನೆ ಮಾಡಿ ಎತ್ತರಕ್ಕೇರಲು ಯಾವುದೇ ಅಡ್ಡಿ ಇಲ್ಲ.  
‘ಓಂ-ಕಾರ’ ಅಂದರೆ ‘ಓಂ’ ಎನ್ನುವ ಅಕ್ಷರದಿಂದ ಕರೆಯಲ್ಪಡುವ ಪರತತ್ತ್ವ. ಇಲ್ಲಿ ಪಿಪ್ಪಲಾದರು ಹೇಳುತ್ತಾರೆ: “ಪರಬ್ರಹ್ಮ ಮತ್ತು ಅಪರಬ್ರಹ್ಮ ಎರಡೂ ಆ ಓಂಕಾರ ವಾಚ್ಯ ಭಗವಂತ” ಎಂದು. ಕಾಲತಃ, ದೇಶತಃ ದೂರವಿರುವ ಭಗವಂತ ‘ಪರ’; ಕಾಲ ಮತ್ತು ದೇಶತಃ ಸಮೀಪವಿರುವ ಭಗವಂತ ‘ಅಪರ’. ಉದಾಹರಣೆಗೆ: ಸ್ವಾಯಂಭುವ ಮನ್ವಂತರದಲ್ಲಿನ ಭಗವಂತನ ಅವತಾರವಾದ: ಕಪಿಲ, ದತ್ತಾತ್ರಯ, ಇತ್ಯಾದಿ ರೂಪಗಳು ಭಗವಂತನ ಬಹಳ ಹಿಂದಿನ ರೂಪವಾದುದರಿಂದ, ಇಂದು ಅದು ನಮಗೆ ಆತನ ‘ಪರ-ರೂಪಗಳು’. ಈ ಮನ್ವಂತರದಲ್ಲಿ ಆದ ‘ರಾಮ, ಕೃಷ್ಣ, ವೇದವ್ಯಾಸ’-ಇವೆಲ್ಲವೂ ಅಪರ ರೂಪಗಳು. ನನ್ನೊಳಗಿರುವ ಭಗವಂತ ನನಗೆ ‘ಅಪರ’, ನಿಮಗೆ ‘ಪರ’; ಅದೇ ರೀತಿ ನಿಮ್ಮೊಳಗಿರುವ ಭಗವಂತ ನನಗೆ ಪರ ಆದರೆ ನಿಮಗೆ ಅಪರ.  ಹೀಗಾಗಿ ಓಂಕಾರ ಹೇಳುವುದು ಒಬ್ಬನೇ ಒಬ್ಬ ಭಗವಂತನನ್ನು. ಅವನೇ ಕಾಲತಃ, ದೇಶತಃ ದೂರದಲ್ಲಿರುವವ; ಅವನೇ ಕಾಲತಃ ದೇಶತಃ ಸಮೀಪವಿರುವ ದೇವರು. ಓಂಕಾರ ಭಗವಂತನ ಯಾವುದೋ ಒಂದು ರೂಪವನ್ನಷ್ಟೇ ಹೇಳುವ ನಾಮವಲ್ಲ. ಇದು ಆತನ ಅನಂತ  ‘ಪರ-ಅಪರ’ ರೂಪಗಳನ್ನು ಹೇಳತಕ್ಕಂತಹ ಏಕಮಾತ್ರ ಬೀಜಾಕ್ಷರ.
ಓಂಕಾರದ ಮೂರು ಅಕ್ಷರಗಳಾದ ಅ-ಕಾರ, ಉ-ಕಾರ ಮತ್ತು ಮ-ಕಾರ ಶಬ್ದದಿಂದ ವಾಚ್ಯನಾದ ಭಗವಂತನ ಗುಣವಿಶೇಷಗಳನ್ನು ತಿಳಿದು, ಉಪಾಸನೆ ಮಾಡುವ ಸಾಧಕ, ಭಗವಂತನ ಮಾರ್ಗದಲ್ಲಿ ನಡೆದು, ಭಗವಂತನನ್ನು ಸೇರುತ್ತಾನೆ.  ‘ಓಂ’ ಎನ್ನುವುದು ಎಲ್ಲಾ ರೂಪಗಳ ಹೆಸರಾದರೂ ಕೂಡ, ಇದರಲ್ಲಿರುವ ಪ್ರತೀ ಅಕ್ಷರವೂ ಕೂಡಾ ವಿಶೇಷವಾಗಿ ಜಯ-ವಿಜಯರು ಧೈತ್ಯರಾಗಿ ಹುಟ್ಟಿದಾಗ ಅವರನ್ನು ಸಂಹಾರ ಮಾಡಿ ಶಾಪ ವಿಮೋಚನೆ ಮಾಡಿದ  ರೂಪಗಳನ್ನು ಹೇಳುತ್ತವೆ. ಅ-ಕಾರ ಶಿಶುಪಾಲ-ದಂತವಕ್ರರನ್ನು ಸಂಹಾರ ಮಾಡಿದ ಕೃಷ್ಣ ರೂಪವನ್ನು ಹೇಳಿದರೆ,  ಉ-ಕಾರ ರಾವಣ-ಕುಂಭಕರ್ಣರನ್ನು ಸಂಹಾರ ಮಾಡಿದ ರಾಮ ರೂಪವನ್ನೂ ಹಾಗೂ ಮ-ಕಾರ ಹಿರಣ್ಯಕಷಿಪುವನ್ನು ಸಂಹಾರ ಮಾಡಿದ ನರಸಿಂಹ ರೂಪವನ್ನೂ ಹೇಳುತ್ತದೆ. ಇದಲ್ಲದೆ, ಓಂಕಾರದಲ್ಲಿರುವ ‘ನಾದ’ ಹಿರಣ್ಯಾಕ್ಷನನ್ನು ಕೊಂದ ಭಗವಂತನ ವರಾಹ ರೂಪವನ್ನು ಹೇಳುತ್ತದೆ.
ಓಂಕಾರದ ಉಪಾಸನೆಯಲ್ಲಿ ಮೂರು ಮುಖ. ಮೊದಲು ಅ-ಕಾರದ ಉಪಾಸನೆ, ನಂತರ ಅ-ಕಾರದ ಜೊತೆಗೆ ಉ-ಕಾರದ ಉಪಾಸನೆ[ಅಂದರೆ ಓ-ಕಾರದ ಉಪಾಸನೆ]. ನಂತರ ಅ-ಉ ಮತ್ತು ಮ-ಕಾರದಿಂದ ಭಗವಂತನ ಉಪಾಸನೆ. ಈ ರೀತಿ ಓಂಕಾರದಿಂದ ಭಗವಂತನನ್ನು ಉಪಾಸನೆ ಮಾಡುವ ಜ್ಞಾನಿ, ಮೇಲೆ ಹೇಳಿದ ಮೂರು ಲೋಕಗಳಲ್ಲಿ ಒಂದು ಲೋಕವನ್ನು ಸೇರುತ್ತಾನೆ ಎನ್ನುತ್ತಾರೆ ಪಿಪ್ಪಲಾದರು. ಅ-ಕಾರದ ಉಪಾಸನೆಯಿಂದ ಹೋಗತಕ್ಕ ಲೋಕ ಭೂ-ಲೋಕ; ಉ-ಕಾರದ ಉಪಾಸನೆಯಿಂದ ಸೇರತಕ್ಕ ಲೋಕ ಸ್ವರ್ಗಲೋಕ ಮತ್ತು ಮ-ಕಾರದ ಉಪಾಸನೆಯಿಂದ ಮೋಕ್ಷಲೋಕ ಸಿದ್ಧಿಯಾಗುತ್ತದೆ.
ಇನ್ನು ಉಪಾಸನೆಯ ದೃಷ್ಟಿಯಲ್ಲಿ ನೋಡಿದರೆ: ಓಂಕಾರ ಉಪಾಸನೆಯಲ್ಲಿ ಕೂಡಾ ಮೂರು ವಿಧ. ಅ-ಕಾರದಿಂದ ಉಪಾಸನೆ ಮಾಡುವವರಿಗೆ ಬಾಹ್ಯ ಪ್ರತಿಮೆಯಲ್ಲಿ ಭಗವಂತನ ಪೂಜೆ; ಉ-ಕಾರದಲ್ಲಿ ಉಪಾಸನೆ ಮಾಡುವವರಿಗೆ ಮನಸ್ಸಿನಲ್ಲಿ ಭಗವಂತನ ಪೂಜೆ; ಮ-ಕಾರದಲ್ಲಿ ಉಪಾಸನೆ ಮಾಡುವವರಿಗೆ ಸ್ವರೂಪದಿಂದ ಭಗವಂತನ ದರ್ಶನ. ಈ ಉಪಾಸನೆಗನುಗುಣವಾಗಿ ಭೂಲೋಕ, ಸ್ವರ್ಗಲೋಕ ಮತ್ತು ಮೋಕ್ಷಲೋಕದಲ್ಲಿ ಅದರ ಫಲ ಸಿಗುತ್ತದೆ. 

[ಓಂಕಾರದ ವಿಶೇಷ ಅರ್ಥ ವಿವರಣೆಯನ್ನು ಸಂಕ್ಷಿಪ್ತವಾಗಿ ಭಗವದ್ಗೀತೆಯ ಏಳನೇ ಅಧ್ಯಾಯದಲ್ಲಿ ನೀಡಲಾಗಿದೆ.  ವಿವರಕ್ಕಾಗಿ ಈ ಕೊಂಡಿಯನ್ನು ಸಂದರ್ಶಿಸಿ: http://bhagavadgitakannada.blogspot.in/

No comments:

Post a Comment