ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Sunday, November 18, 2012

Prashnopanishad in Kannada-Prashna-IV (05-11)


ಅತ್ರೈಷ ದೇವಃ ಸ್ವಪ್ನೇ ಮಹಿಮಾನಮನುಭವತಿ ಯದ್ ದೃಷ್ಟನ್ದೃಷ್ಟಮನುಪಶ್ಯತಿ ಶ್ರುತಂ- ಶ್ರುತಮೇವಾರ್ಥಮನುಶೃಣೋತಿ ದೇಶದಿಗಂತರೈಶ್ಚ ಪ್ರತ್ಯನುಭೂತಂ ಪುನಃ ಪುನಃ ಪ್ರತ್ಯನುಭವತಿ ದೃಷ್ಟಂ ಚಾದೃಷ್ಟಂ ಚ ಶ್ರುತಂ ಚಾಶ್ರುತಂ ಚಾನುಭೂತಂ ಚಾನನುಭೂತಂ ಚ ಸ್ಚ್ಚಾಸಚ್ಚ ಸರ್ವಂ ಪಶ್ಯತಿ ಸರ್ವಃ ಪಶ್ಯತಿ

ಗಾರ್ಗ್ಯರ ಪ್ರಶ್ನೆಯ ಮುಂದಿನ ಭಾಗ “ಕತರ ಏಷ ದೇವಃ ಸ್ವಪ್ನಾನ್ ಪಶ್ಯತಿ” – ಕನಸು ಕಾಣುವವನು ಮತ್ತು ಕಾಣಿಸುವವನು ಯಾರು ಎನ್ನುವುದು. ಈ ಪ್ರಶ್ನೆಗೆ ಪಿಪ್ಪಲಾದರು ಉತ್ತರಿಸುತ್ತಾ ಕನಸಿನ ವಿವಿಧ ಮುಖಗಳನ್ನು ಇಲ್ಲಿ ವಿವರಿಸಿದ್ದಾರೆ. ಹಿಂದೆ ಹೇಳಿದಂತೆ ಕನಸಿನ ಪ್ರಪಂಚ ಅತ್ಯಂತ ವಿಸ್ಮಯ. ಇಂತಹ ಅಂತರಂಗದ ವಿಸ್ಮಯವನ್ನು ಪ್ರಾಣದೇವರು ಭಗವಂತನೊಂದಿಗೆ ನೋಡುತ್ತಾರೆ ಮತ್ತು ಸ್ವಪ್ನದಲ್ಲಿ ನಮಗೆ ತೋರಿಸುತ್ತಾರೆ. ನಾವು ಅನೇಕ ಹಿನ್ನೆಲೆಯಲ್ಲಿ ಕನಸನ್ನು ಕಾಣುತ್ತೇವೆ. ಸಾಮಾನ್ಯವಾಗಿ ನಾವು ಕಂಡಿರುವ ಅಥವಾ ಕೇಳಿರುವ ವಸ್ತು ನಮ್ಮ ಮೇಲೆ ಗಾಢವಾದ ಪರಿಣಾಮ ಬೀರಿದ್ದರೆ ಅದು ರಾತ್ರಿ ಕನಸಾಗ ಕಾಣಬಹುದು. ಹಾಗೆ ಕನಸು ಬಿದ್ದಾಗ ಅಲ್ಲಿ ಯಥಾಸ್ಥಿತಿಗಿಂತ ಭಿನ್ನವಾದುದ್ದನ್ನು ನಾವು ಕಾಣಬಹುದು. ಕೆಲವೊಮ್ಮೆ ದಿಕ್ಕು-ದೇಶಗಳ ಹಂಗಿಲ್ಲದೆ, ಯಾವುದೋ ಒಂದು ದೇಶದಲ್ಲಿ ಯಾವುದೋ ಕಾಲದಲ್ಲಿ ನಡೆದ ಅಥವಾ ನಡೆಯದೇ ಇರುವ ಘಟನ ಕನಸಾಗಿ ಕಾಣಬಹುದು. ಈ ಜನ್ಮದಲ್ಲಿ ನಾವು ಕಾಣದ್ದು ಅಥವಾ ಕೇಳರಿಯದ್ದು ನಮಗೆ ಕನಸಿನಲ್ಲಿ ಕಾಣಬಹುದು. ಯಾವುದು ಎಚ್ಚರದಲ್ಲಿ ಅಸಂಭವವೋ ಅದು ಕನಸಾಗಿ ಕಾಣಬಹುದು. [ಉದಾಹರಣೆಗೆ ಕೊಂಬಿರುವ ಮೊಲ, ಬಿಳಿ ಆನೆ ಇತ್ಯಾದಿ]. ಈ ರೀತಿಯ ಎಲ್ಲಾ ಅದ್ಭುತವನ್ನು ಕನಸಿನಲ್ಲಿ ಕಾಣಬಹುದು. ಏಕೆಂದರೆ ಈ ಕನಸನ್ನು ಕಾಣಿಸುವವ ಎಲ್ಲವನ್ನು ಬಲ್ಲವನು.
ನಮ್ಮಲ್ಲಿ ಕೆಲವರಿಗೆ ಕನಸಿನ ಅನುಭವ ಕಡಿಮೆ, ಇನ್ನು ಕೆಲವರಿಗೆ ಕನಸು ನೆನಪಿರುವುದಿಲ್ಲ, ಮತ್ತ ಕೆಲವರಿಗೆ ರಾತ್ರಿಯಿಂದ ಬೆಳಗಿನ ತನಕ ನಿದ್ದೆಯೇ ಇಲ್ಲದ ಕನಸಿನ ಪ್ರಪಂಚ. ನಾವು ಕಾಣುವ ಕನಸು ಅರ್ಥಪೂರ್ಣವಾಗಿದ್ದು ಅದರಲ್ಲಿ ಯಾವೊದೋ ಒಂದು ಸಂದೇಶವಿರಬಹುದು. ಕನಸಿನ ಪ್ರಪಂಚದಲ್ಲಿನ ಸಂದೇಶವನ್ನು ಅಲ್ಲಿನ ಬಣ್ಣ, ದಿಕ್ಕು, ವಸ್ತುಗಳ ಆಧಾರದಮೇಲೆ ತಿಳಿಯಲಾಗುತ್ತದೆ. ಇದನ್ನು ಕನಸಿನ ಮನಃಶಾಸ್ತ್ರ[dream psychology] ಎನ್ನುತ್ತಾರೆ. ಕನಸಿನಲ್ಲಿ ಬಿಳಿ ಬಣ್ಣ ಬಹಳ ಶುಭಸೂಚಕವಾದರೆ, ಕೆಂಪು ಬಣ್ಣ –ಕೆಲಸ ಕೈಗೂಡದ ಮುನ್ಸೂಚನೆಯಾಗಿರುತ್ತದೆ. ಸೀತೆಯನ್ನು ಲಂಕೆಗೆ ಅಪಹರಿಸಿಕೊಂಡು ಹೋದ ರಾವಣ ಆಕೆಯಲ್ಲಿ ತನ್ನನ್ನು ಮದುವೆಯಾಗು ಎಂದು ಪದೇಪದೇ ಒತ್ತಡ ತರುತ್ತಿರುವ ಸಮಯದಲ್ಲಿ ಅಲ್ಲಿದ್ದ ತ್ರಿಜಟೆ ಎನ್ನುವ ಒಬ್ಬ ರಾಕ್ಷಸ ವೃದ್ಧೆಗೆ  ಒಂದು ಕನಸು ಬೀಳುತ್ತದೆ. ಅಲ್ಲಿ ಆಕೆ ಬಿಳಿ ಬಣ್ಣದ ವಸ್ತ್ರವನ್ನು ತೊಟ್ಟ ರಾಮ-ಲಕ್ಷ್ಮಣರು ಸೀತೆಯನ್ನು ಬಿಳಿಬಣ್ಣದ ಆನೆಯ ಮೇಲೆ ಕುಳ್ಳಿರಿಸಿಕೊಂಡು ಕರೆದುಕೊಂಡು ಹೋದಂತೆ, ರಾವಣ ಕೆಂಪು ಬಣ್ಣದ ಬಟ್ಟೆಯನ್ನು ತೊಟ್ಟು, ಮೈತುಂಬಾ ಎಣ್ಣೆಯನ್ನು ಸವರಿಕೊಂಡು, ದಕ್ಷಿಣಾಭಿಮುಖವಾಗಿ ಕತ್ತೆಯಮೇಲೆ ಸವಾರಿ ಮಾಡಿಕೊಂಡು ಹೋದಂತೆ ಕನಸು ಕಾಣುತ್ತಾಳೆ. ತಕ್ಷಣ ಆಕೆ ಹೇಳುತ್ತಾಳೆ: ಸೀತೆಗೆಂದೂ ಅಪಾಯವಿಲ್ಲ, ಅಪಾಯವಿರುವುದು ಲಂಕೆಗೆ ಎಂದು. ಹೀಗೆ ಭಗವಂತ ತೋರಿಸುವ ಕನಸಿನ ಪ್ರಪಂಚ ಬಹಳ ವಿಚಿತ್ರ. ಅಲ್ಲಿ ಬರುವ ಪಾತ್ರಗಳಿಗೆ, ಬಣ್ಣಕ್ಕೆ, ವಸ್ತುವಿಗೆ ವಿಶೇಷ ಅರ್ಥವಿರುತ್ತದೆ. ಆದರೆ ಅದು ನಮಗೆ ತಿಳಿಯಲಾಗದ (ದುಃ)ಸ್ವಪ್ನವೂ ಆಗಿರಬಹುದು!
[ಪದೇಪದೇ ದುಃಸ್ವಪ್ನ ಬಿದ್ದಾರೆ ಆ ಬಗ್ಗೆ ಎಂದೂ ಭಯಪಡಬೇಕಾಗಿಲ್ಲ. ಏಕೆಂದರೆ ಇದು ಭಗವಂತ ನಮಗೆ ಕೊಟ್ಟ ಮುನ್ಸೂಚನೆ. ಇಂತಹ ಸಂಧರ್ಭದಲ್ಲಿ ಆ ಭಗವಂತನಲ್ಲಿ ಸಂಪೂರ್ಣ ಶರಣಾದರೆ ಆತ ಖಂಡಿತವಾಗಿ ನಮಗೆ ಪರಿಹಾರವನ್ನು ತೋರಿಸುತ್ತಾನೆ. ಮುಂದೆ ಆಗತಕ್ಕಂತಹ ಅನಿಷ್ಟದಿಂದ ನಮ್ಮನ್ನು ಪಾರು ಮಾಡುತ್ತಾನೆ. ವಿಷ್ಣುಸಹಸ್ರನಾಮದಲ್ಲಿ ಬರುವ ಭಗವಂತನ “ದುಃಸ್ವಪ್ನನಾಶನಃ” ನಾಮವನ್ನು ಶ್ರದ್ಧಾ-ಭಕ್ತಿಯಿಂದ ನಿರಂತರ ಪಾರಾಯಣ ಮಾಡಿದರೆ ದುಃಸ್ವಪ್ನ ಮುಕ್ತಿ ಸಾಧ್ಯ.]

ಸ ಯದಾ ತೇಜಸಾಽಭಿಭೂತೋ ಭವತ್ಯತ್ರೈಷ ದೇವಃ ಸ್ವಪ್ನಾನ್ ನ ಪಶ್ಯತಿ ಅಥ ಯದೇತದಸ್ಮಿನ್ ಶರೀರೇ ಸುಖಂ  ಭವತಿ

ಕನಸಿನ ಪ್ರಪಂಚದಿಂದ ನಿದ್ದೆಯ ಪ್ರಪಂಚಕ್ಕೆ ನಮ್ಮನ್ನು ಕೊಂಡೊಯ್ಯುವವ ಉದಾನ. ಉದಾನನ ತೇಜಸ್ಸಿನೊಂದಿಗೆ ಭಗವಂತನ ತೇಜಸ್ಸು ಸೇರಿದಾಗ ಜೀವ ಭಗವಂತನ ಮಡಿಲಲ್ಲಿ ಆನಂದವನ್ನು ಪಡೆಯುತ್ತಾನೆ. ನಮಗೆ ನಿದ್ದೆಯಲ್ಲಿ ಯಾವ ಎಚ್ಚರವೂ ಇರುವುದಿಲ್ಲವಾದರೂ ಸಹ ಅಲ್ಲಿ ಆನಂದದ ಅರಿವು(Awareness of bliss), ಕಾಲದ ಅರಿವು (Awareness of time), ನಮ್ಮ ಅಜ್ಞಾನದ ಅರಿವು (Awareness of ignorance)  ಮತ್ತು ಆತ್ಮದ ಅರಿವಿರುತ್ತದೆ(Awareness of self). ನಮಗೆ ತಿಳಿದಂತೆ ಜೀವ ಸುಖವನ್ನು ಅನುಭವಿಸಬೇಕಾದರೆ ಅದರ ಶರೀರ, ಇಂದ್ರಿಯ, ಮನಸ್ಸು ಕಾರ್ಯನಿರ್ವಹಿಸುತ್ತಿರಬೇಕು. ಜೀವನಿಗೆ ಬಾಹ್ಯ ವಸ್ತುವಿನ ಸಂಪರ್ಕ ಇಂದ್ರಿಯ ಮತ್ತು ಮನಸ್ಸಿನ ಮೂಲಕವಾಗುತ್ತದೆ. ಉದಾಹರಣೆಗೆ ಒಂದು ಸುಂದರವಾದ ವಸ್ತುವನ್ನು ನೋಡಿದಾಗ, ಒಂದು ಸುಂದರ ನಾದವನ್ನು ಕೇಳಿದಾಗ, ಒಳ್ಳೆಯ ಸುಗಂಧ ಮೂಸಿದಾಗ, ರುಚಿಯಾದ ಆಹಾರವನ್ನು ಸೇವಿಸಿದಾಗ, ಕೋಮಲವಾದ ವಸ್ತುವನ್ನು ಮುಟ್ಟಿದಾಗ ಸುಖದ ಅನುಭವವಾಗುತ್ತದೆ. ಇಂದ್ರಿಯಗಳಿಂದ ಬಂದ ಸಂದೇಶವನ್ನು ಮನಸ್ಸು ಸ್ವೀಕರಿಸಿ ಒಳಗಿರುವ ಆತ್ಮಕ್ಕೆ ತಲುಪಿಸಿದಾಗ ಜೀವಕ್ಕೆ ಆನಂದದ ಅನುಭವವಾಗುತ್ತದೆ. ಇದು ಜೀವಕ್ಕೆ ಆನಂದದ ಅನುಭವವಾಗುವ ಸಹಜ  ವಿಧಾನ.
ಕನಸಿನಲ್ಲಿ ನಮ್ಮ ಯಾವ ಇಂದ್ರಿಯಗಳೂ ಕೆಲಸ ಮಾಡುವುದಿಲ್ಲ. ಆದರೆ ಕೇವಲ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಅದು ತಾನು ಹಿಂದೆ ಕಂಡಿರುವ, ಕೇಳಿರುವ ವಿಷಯಗಳ ಸಂಸ್ಕಾರದಿಂದ ತನಗೆ ಬೇಕಾಗಿರುವ ಚಿತ್ರ ಬಿಡಿಸಿ  ಆ ಚಿತ್ರವನ್ನು ಆತ್ಮ ನೋಡುವಂತೆ ಮಾಡುತ್ತದೆ.  ಒಟ್ಟಿನಲ್ಲಿ ಹೇಳಬೇಕೆಂದರೆ ನಮ್ಮ ಮನಸ್ಸು ಕಾರ್ಯ ನಿರ್ವಹಿಸುವುದರಿಂದ ನಮಗೆ ಎಚ್ಚರ ಮತ್ತು ಕನಸಿನಲ್ಲಿ ಆನಂದದ ಅನುಭವವಾಗುತ್ತದೆ. ಆದರೆ ನಾವು ನಿದ್ದೆ(Deep Sleep) ಮಾಡಿದಾಗ ನಮ್ಮ ಯಾವ ಇಂದ್ರಿಯಗಳೂ ಕೆಲಸ ಮಾಡುವುದಿಲ್ಲ; ಮನಸ್ಸೂ ಕೆಲಸ ಮಾಡುವುದಿಲ್ಲ. ಹಾಗಿರುವಾಗ  ದುಃಖ ಸ್ಪರ್ಶವಿಲ್ಲದ ಆನಂದವನ್ನು ಜೀವ ಹೇಗೆ ಪಡೆಯುತ್ತಾನೆ ಎನ್ನುವುದು ಇಲ್ಲಿರುವ ಪ್ರಶ್ನೆ.[ಕಸ್ಯ ಏತತ್   ಸುಖಂ ಭವತಿ].
ಪಿಪ್ಪಲಾದರು ಹೇಳುತ್ತಾರೆ: “ಅಥ ಏತದ್ ತಸ್ಮಿನ್ ಶರೀರೇ ಸುಖಂ  ಭವತಿ” ಎಂದು. ಅಂದರೆ ಸುಖ ಆಗುವುದು ಶರೀರದ ಮೂಲಕ ಎಂದು. ಇಲ್ಲಿ ನಾವು ಪಿಪ್ಪಲಾದರು ಹೇಳಿರುವ ‘ಶರೀರ’ ಯಾವುದು ಎನ್ನುವುದನ್ನು ತಿಳಿಯಬೇಕು. ಮನಸ್ಸು ಇಂದ್ರಿಯಗಳು ನಿದ್ರಿಸುವಾಗ ಈ ಸ್ಥೂಲವಾದ ಶರೀರ ಕೂಡಾ ನಿದ್ರಿಸುತ್ತಿರುತ್ತದೆ. ಆದರೆ ನಿದ್ರಿಸದೇ ಸುಖದ ಅನುಭವವನ್ನು ಪಡೆಯುವ ಶರೀರ ಯಾವುದು? ನಮಗೆ ತಿಳಿದಂತೆ ಜೀವನಿಗೆ ಒಟ್ಟು ನಾಲ್ಕು ಶರೀರ. ಒಂದು ಬಾಹ್ಯವಾಗಿ ಕಾಣುವ ಸ್ಥೂಲಶರೀರ. ಇದು ವ್ಯಕ್ತಿ ಸತ್ತಾಗ ಬಿದ್ದು ಹೋಗುವ ಶರೀರ. ಸ್ಥೂಲಶರೀರದ ಒಳಗೆ  ಸ್ವರ್ಗಾದಿ ಸೂಕ್ಷ್ಮಲೋಕದ ಅನುಭವವನ್ನು ಪಡೆಯುವ ಸೂಕ್ಷ್ಮಶರೀರವಿದೆ. ಇದು ಪ್ರಳಯ ಕಾಲದಲ್ಲಿ ಬಿದ್ದು ಹೋಗುವ ಶರೀರ. ಸೂಕ್ಷ್ಮಶರೀರದ  ಒಳಗೆ ಅನಾದಿ ಕಾಲದಿಂದಲೂ ಪಡೆದು ಬಂದಿರುವ ಲಿಂಗಶರೀರವಿದೆ. ಇದು ಮುಕ್ತಿ ಪ್ರಾಪ್ತಿಯಾದಾಗ ಬಿದ್ದು ಹೋಗುವ ಶರೀರ. ಈ ಲಿಂಗ ಶರೀರದ ಒಳಗೆ ಪ್ರಾಣ-ನಾರಾಯಣರಿಗೆ ಶರೀರ ಸ್ಥಾನೀಯವಾಗಿರುವ ಸ್ವರೂಪಭೂತ ಶರೀರವಿದೆ. ಈ ಶರೀರದಿಂದ ಸ್ವರೂಪಭೂತನಾದ ಭಗವಂತನನ್ನು ಕಾಣಲು ಮತ್ತು ಸೇರಲು ಸಾಧ್ಯ. ಈ ಸ್ವರೂಪಭೂತವಾದ ಶರೀರ ನಿದ್ದೆಯಲ್ಲಿ ಸ್ವರೂಪಭೂತನಾದ ಭಗವಂತನಿಂದ ಆನಂದದ ಅನುಭವವನ್ನು ಪಡೆಯುತ್ತದೆ.
ಮೋಕ್ಷದಲ್ಲಿ ಮತ್ತು ನಿದ್ದೆಯಲ್ಲಿ ಭಗವಂತನನ್ನು ಕಾಣುವುದರಲ್ಲಿ ಇರುವ ವ್ಯತ್ಯಾಸವೇನೆಂದರೆ ಮೋಕ್ಷದಲ್ಲಿ ಜೀವನಿಗೆ ಭಗವಂತನೊಂದಿಗಿದ್ದೇನೆ ಎನ್ನುವ ಎಚ್ಚರವಿರುತ್ತದೆ, ಆದರೆ ನಿದ್ದೆಯಲ್ಲಿ ಆ ಎಚ್ಚರ ಇರುವುದಿಲ್ಲ.
ವೇದ ಉಪನಿಷತ್ತುಗಳಲ್ಲಿ ಬಂದಿರುವ ಈ ವಿವರಣೆ ಇಂದಿನ ವಿಜ್ಞಾನಕ್ಕೆ ತಿಳಿಯದ ವಿಚಾರ. ಇಂದಿನ ವಿಜ್ಞಾನ ಅಂದರೆ ಅದು ನಿರಂತರ ಸಂಶೋಧನೆ. ವಿಜ್ಞಾನಿಗಳು ಇಂದು ನಿಜವೆಂದು ನಾವು ಭಾವಿಸಿರುವುದನ್ನು ನಾಳೆ ತಪ್ಪು ಎಂದು ಹೊಸ ಸಂಶೋಧನೆಯಿಂದ ತಿದ್ದಬಹುದು. ಆದರೆ ಉಪನಿಷತ್ತಿನಲ್ಲಿ ಹೇಳಿರುವ ವಿಷಯಗಳಿಗೆ ಎಂದೂ ಯಾವುದೇ ತಿದ್ದುಪಡಿ ಇಲ್ಲ. ಅದು ಸತ್ಯವನ್ನು[ಭಗವತನನ್ನು] ಸಾಕ್ಷಾತ್ಕರಿಸಿಕೊಂಡ ಋಷಿಗಳು ಕಂಡ ಸತ್ಯ. ನಿದ್ದೆಯ ಈ ವಿಸ್ಮಯ ಮತ್ತು ಸಮಾಧಿಸ್ಥಿತಿ(ತುರಿಯಾವಸ್ಥೆ ಅಥವಾ ಉನ್ಮನೀಭಾವ)ಯಲ್ಲಿನ ಆನಂದಕ್ಕೆ ಕಾರಣ ಏನೆಂಬುದನ್ನು  ಇಂದಿನ ವಿಜ್ಞಾನ ವಿವರಿಸುವುದಿಲ್ಲ.
ನಿದ್ದೆಯಲ್ಲಿ ನಮ್ಮ ದೇಹದಲ್ಲಿರುವ  ಪಂಚಭೂತಗಳು, ಪಂಚಜ್ಞಾನೇಂದ್ರಿಯಗಳು, ಪಂಚಕರ್ಮೇಂದ್ರಿಯಗಳು, ಪಂಚತನ್ಮಾತ್ರೆಗಳು, ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ, ಚೇತನ ಯಾವುದೂ  ಕೆಲಸ ಮಾಡುವುದಿಲ್ಲ; ಕೇವಲ ಪಂಚಪ್ರಾಣರು ಮತ್ತು ಪಂಚರೂಪಿ ಭಗವಂತ[ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ, ನಾರಾಯಣ] ಸದಾ ಎಚ್ಚರವಾಗಿದ್ದು, ನಿರಂತರ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಹೀಗಿರುವಾಗ ನಿದ್ದೆಯ ಸಮಯದಲ್ಲಿ ದೇಹದಲ್ಲಿರುವ ಉಳಿದ ತತ್ತ್ವಾಭಿಮಾನಿ ದೇವತೆಗಳು ಎಲ್ಲಿ ಹೋಗುತ್ತಾರೆ ಎನ್ನುವುದು ನಮ್ಮ ಮುಂದಿನ ಪ್ರಶ್ನೆ. [“ಕಸ್ಮಿನ್ನು ಸರ್ವೇ ಸಂಪ್ರತಿಷ್ಠಿತಾ ಭವಂತಿ”]. ಬನ್ನಿ, ಈ ಪ್ರಶ್ನೆಗೆ ಉತ್ತರ ರೂಪವಾಗಿರುವ ಪಿಪ್ಪಲಾದರ ಉಪದೇಶವನ್ನಾಲಿಸೋಣ.

ಸ ಯಥಾ ಸೋಮ್ಯ ವಯಾಂಸಿ ವಾಸೋವೃಕ್ಷಂ ಸಂಪ್ರತಿಷ್ಠಂತೇ   ಏವಂ ಹ ವೈ ತತ್ ಸರ್ವಂ ಪರ ಆತ್ಮನಿ ಸಂಪ್ರತಿಷ್ಠತೇ

ಇಲ್ಲಿ ಪಿಪ್ಪಲಾದರು ತನ್ನ ಶಿಷ್ಯನನ್ನು ‘ಸೋಮ್ಯ’ ಎಂದು ಸಂಬೋಧಿಸಿದ್ದಾರೆ. ಈ ಪದ ಕನ್ನಡದಲ್ಲಿ ಬಳಕೆಯಲ್ಲಿಲ್ಲ. ಸೋಮ್ಯ ಎನ್ನುವುದಕ್ಕೆ ಎರಡು ಅರ್ಥವಿದೆ. ಸೋಮಯಾಗ ಮಾಡಿ, ವೇದದಲ್ಲಿ ಹೇಳಿರುವ ಎಲ್ಲಾ ಕರ್ಮಾನುಷ್ಠಾನದಲ್ಲಿ ಪರಿಣತನಾಗಿ, ಆ ಕರ್ಮದ ಆಚೆಗಿರುವ ಜ್ಞಾನದ ಮುಖವನ್ನು ತಿಳಿಯ ಬಂದವ ಸೋಮ್ಯ; ಭಕ್ತಿಯಿಂದ ಭಗವದ್ ಉಪಾಸನೆ ಮಾಡಿದವ ಸೋಮ್ಯ.
ಇಲ್ಲಿ ಪಿಪ್ಪಲಾದರು ಹೇಳುತ್ತಾರೆ: “ಹೇಗೆ ಪಕ್ಷಿಗಳು ಸಂಜೆ ಹೊತ್ತು ತಮ್ಮ ವಾಸಸ್ಥಾನವಾದ ವೃಕ್ಷಕ್ಕೆ ಬಂದು ಸೇರುತ್ತವೋ, ಹಾಗೇ ಜೀವ ನಿದ್ರಿಸಿದಾಗ ಎಲ್ಲಾ ತತ್ತ್ವಾಭಿಮಾನಿ ದೇವತೆಗಳು ತಮ್ಮ  ವಾಸದ ನೆಲೆವೀಡಾದ ಪ್ರಾಣಾಂತರ್ಗತ ಭಗವಂತನನ್ನು ಹೋಗಿ ಸೇರುತ್ತಾರೆ” ಎಂದು. ಇಲ್ಲಿ ಪಿಪ್ಪಲಾದರು ಬಳಸಿರುವ ದೃಷ್ಟಾಂತ ಅದೆಷ್ಟು ಸುಂದರವಾಗಿದೆ. ಈ ರೀತಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವ ಹಾಗೆ  ಸರಳ ದೃಷ್ಟಾಂತವನ್ನು ಬಳಸಿ ಜ್ಞಾನ ಧಾರೆಯನ್ನು ಹರಿಸಿರುವ ಪಿಪ್ಪಲಾದರಿಗೆ ನಾವು ಚಿರಋಣಿಗಳು.

ಪೃಥಿವೀ ಚ ಪೃಥಿವೀಮಾತ್ರಾ ಚಾSಪಶ್ಚಾSಪೋಮಾತ್ರಾ ಚ ತೇಜಶ್ಚ ತೇಜೋಮಾತ್ರಾ ಚ ವಾಯುಶ್ಚ ವಾಯುಮಾತ್ರಾ ಚಾSಕಾಶಶ್ಚಾSಕಾಶಮಾತ್ರಾ ಚ ಚಕ್ಷುಶ್ಚ ದ್ರಷ್ಟವ್ಯಂ ಚ ಶ್ರೋತ್ರಂ ಚ ಶ್ರೋತವ್ಯಂ ಚ ಗ್ರಾಣಂ ಚ ಘ್ರಾತವ್ಯಂ ಚ ರಸಶ್ಚ ರಸಯಿತವ್ಯಂ ಚ ತ್ವಕ್ ಚ ಸ್ಪರ್ಶಯಿತವ್ಯಂ ಚ ವಾಕ್ ಚ ವಕ್ತವ್ಯಂ ಚ ಹಸ್ತೌ ಚಾSದಾತವ್ಯಂ ಚ ಪಾದೌ ಚ ಗಂತವ್ಯಂ ಚ  ಪಾಯುಶ್ಚ ವಿಸರ್ಜಯಿತವ್ಯಂ ಚೋಪಸ್ಥಶ್ಚಾSನಂದಯಿತವ್ಯಂ  ಮನಶ್ಚ ಮಂತವ್ಯಂ ಚ ಬುದ್ಧಿಶ್ಚ ಬೋದ್ಧಿವ್ಯಂ ಚಾಹಂಕಾರಶ್ಚಾಹಂಕರ್ತವ್ಯಂ ಚ ಚಿತ್ತಂ ಚ ಚೇತಯಿತವ್ಯಂ ಚ ತೇಜಶ್ಚ ವಿದ್ಯೋತಯಿತವ್ಯಂ ಚ ಪ್ರಾಣಶ್ಚ ವಿಧಾರಯಿತವ್ಯಂ ಚ

ಯಾವ ಯಾವ ದೇವತೆಗಳು ಭಗವಂತನೆಂಬ ಗೂಡನ್ನು ಸೇರುತ್ತಾರೆ ಎನ್ನುವುದನ್ನು ಈ ಗದ್ಯದಲ್ಲಿ ವಿವರಿಸಲಾಗಿದೆ. ಈ ಪಿಂಡಾಂಡದಲ್ಲಿ ಮುಖ್ಯವಾಗಿ ಕಾರ್ಯನಿರ್ವಹಿಸುವ ತತ್ತ್ವಗಳ[ತತ್ತ್ವಾಭಿಮಾನಿ ದೇವತೆಗಳ] ಒಂದು ಪಟ್ಟಿಯನ್ನು ಇಲ್ಲಿ  ನೀಡಲಾಗಿದೆ. ಮೊದಲು ಇಲ್ಲಿ ಪಂಚಭೂತಗಳಿಂದಾದ ಅನ್ನಮಯ ಮತ್ತು ಪ್ರಾಣಮಯ ಕೋಶದ ವಿವರವನ್ನು ಹೇಳುತ್ತಾ ಪಿಪ್ಪಲಾದರು ಹೇಳುತ್ತಾರೆ: “ಪೃಥಿವೀ ಚ ಪೃಥಿವೀಮಾತ್ರಾ ಚ; ಆಪಶ್ಚ ಆಪೋಮಾತ್ರಾ ಚ” ಎಂದು. ನಮಗೆ ಕಾಣುವ ಸ್ಥೂಲಶರೀರ ಅನ್ನಮಯಕೋಶ. ಅದು ಮಣ್ಣು ಮತ್ತು ನೀರಿನಿಂದಾಗಿದೆ. ಇಲ್ಲಿ ಪೃಥಿವಿ ಮತ್ತು ಪೃಥಿವೀಮಾತ್ರೆ ಎಂದಿದ್ದಾರೆ. ‘ಪೃಥಿವಿ’ ಎಂದರೆ ಮಣ್ಣು, ‘ಪೃಥಿವೀಮಾತ್ರೆ’ ಎಂದರೆ ಮಣ್ಣಿನ ಅತ್ಯಂತ ಸೂಕ್ಷ್ಮಾವಸ್ಥೆ. ಮಣ್ಣಿನ ಅತ್ಯಂತ ಸೂಕ್ಷ್ಮಾವಸ್ಥೆ ಎಂದರೆ ಅದು ಪರಮಾಣು. ಅದು ಕೇವಲ ಗಂಧ. ನಂತರ ನೀರು ಮತ್ತು ನೀರಿನ ಮೂಲದ್ರವ್ಯವಾದ ಜಲಪರಮಾಣು(ರಸ). ಒಟ್ಟಿನಲ್ಲಿ ಮಣ್ಣು ಮತ್ತು ನೀರು ಸೇರಿ ಕಾಣುವ ಅನ್ನಮಯಕೋಶ ನಿರ್ಮಾಣವಾಯಿತು.
ಅನ್ನಮಯಕೋಶದ ನಂತರ ಅನ್ನಮಯಕೋಶದ ಒಳಗಿರುವ ಪ್ರಾಣಮಯಕೋಶ. ಅದು ಬೆಂಕಿ, ಗಾಳಿ ಮತ್ತು ಆಕಾಶದಿಂದಾಗಿದೆ. ದೇಹದಲ್ಲಿ ಪ್ರಾಣಾಗ್ನಿ ಇರುವುದರಿಂದ ಅಲ್ಲಿ ಉಷ್ಣತೆ ಇದೆ. ಗಾಳಿ ಇರುವುದರಿಂದ ಉಸಿರಾಟವಿದೆ, ಉಸಿರಾಟಕ್ಕೆ ಬೇಕಾದ ಅವಕಾಶವಾಗಿ ಆಕಾಶವಿರುವುದರಿಂದ ಈ ದೇಹದ ಒಳಗೆ ಗಾಳಿ ಸಂಚಾರವಾಗುತ್ತದೆ. ಹಾಗಾಗಿ  ಪಂಚಭೂತಗಳಿಂದ ಅನ್ನಮಯ ಮತ್ತು ಪ್ರಾಣಮಯಕೋಶ ನಿರ್ಮಾಣವಾಗಿದೆ.
ಪಂಚಭೂತಕ್ಕೆ ಸಂಬಂಧಿಸಿದ ತನ್ಮಾತ್ರೆಗಳು ಐದು. ಮಣ್ಣಿನ ತನ್ಮಾತ್ರೆ ಗಂಧ, ನೀರಿನ ತನ್ಮಾತ್ರೆ ರಸ, ಬೆಂಕಿಯ ತನ್ಮಾತ್ರೆ ರೂಪ, ಗಾಳಿಯ ತನ್ಮಾತ್ರೆ ಸ್ಪರ್ಶ ಮತ್ತು ಆಕಾಶದ ತನ್ಮಾತ್ರೆ ಶಬ್ದ. ಈ ಪಂಚ ತನ್ಮಾತ್ರೆಗಳನ್ನು ಗ್ರಹಣ ಮಾಡುವ ಇಂದ್ರಿಯಗಳು ಐದು. ಚಕ್ಷುಶ್ಚ ದ್ರಷ್ಟವ್ಯಂ ಚ -ಕಣ್ಣು ಮತ್ತು ಕಣ್ಣಿನ ಮುಂದಿರುವ ರೂಪ; ಶ್ರೋತ್ರಂ ಚ ಶ್ರೋತವ್ಯಂ ಚ - ಕಿವಿ ಮತ್ತು ಶಬ್ದ; ಗ್ರಾಣಂ ಚ ಘ್ರಾತವ್ಯಂ ಚ - ಮೂಗು ಮತ್ತು ಕಂಪು; ರಸಶ್ಚ ರಸಯಿತವ್ಯಂ ಚ - ನಾಲಿಗೆ ಮತ್ತು ರುಚಿ; ತ್ವಕ್ಚ ಸ್ಪರ್ಶಯಿತವ್ಯಂ ಚ - ತ್ವಗೇಂದ್ರಿಯ ಮತ್ತು ಅದರ ಗುಣವಾದ ಸ್ಪರ್ಶ. ಇವಿಷ್ಟು ಪಂಚಜ್ಞಾನೇಂದ್ರಿಯಗಳು ಮತ್ತು ಅವುಗಳ ಮುಖೇನ ಆಗುವ ಕ್ರಿಯೆಗಳು. ನಂತರ ಪಂಚ ಕರ್ಮೇಂದ್ರಿಯಗಳು: ವಾಕ್ಚ ವಕ್ತವ್ಯಂ ಚ- ಬಾಯಿ ಮತ್ತು ಮಾತು; ಹಸ್ತೌ ಚಾದಾತವ್ಯಂಚ - ಕೈ ಮತ್ತು ಸ್ವೀಕರಿಸುವ ಕ್ರಿಯೆ; ಯಾದೌ ಚ ಗಂತವ್ಯಂಚ - ಕಾಲು ಹಾಗೂ ನಡೆಯುವ ಕ್ರಿಯೆ. ಈ ಮೂರು ಕರ್ಮೇಂದ್ರಿಯಗಳು ಮುಖ್ಯವಾಗಿ ಮನುಷ್ಯನಲ್ಲಿ ಜ್ಞಾನ ಸಾಧನಗಳಾಗಿವೆ. ಬಾಯಿ ಇರುವುದು ನಮ್ಮ ಜ್ಞಾನದ ಅರಿವನ್ನು ಇನ್ನೊಬ್ಬರಿಗೆ ಮುಟ್ಟಿಸಲು; ಕಾಲು ಪುಣ್ಯಕ್ಷೇತ್ರಗಳಿಗೆ ಹೋಗಲು ಅಥವಾ ಎಲ್ಲಿ ಜ್ಞಾನವಿದೆ ಅಲ್ಲಿಗೆ ಹೋಗಲು; ಕೈ- ಜ್ಞಾನ ಸಾಧನವಾದ ಕುಸುರಿ ಕೆಲಸ, ಶಿಲ್ಪಕಲೆ,  ಇತ್ಯಾದಿಯೊಂದಿಗೆ ಮುಖ್ಯವಾಗಿ ಸ್ವೀಕರಿಸುವ ಕ್ರಿಯೆಗೆ.  ಹೀಗೆ ಈ ಮೂರು ಕರ್ಮೇಂದ್ರಿಯಗಳು ಮನುಷ್ಯನ ಜ್ಞಾನ ಸಾಧನಗಳಾಗಿವೆ. ಇದಲ್ಲದೆ ಆರೋಗ್ಯ ಸಾಧನವಾಗಿ ಪಾಯು ಮತ್ತು ಉಪಸ್ಥಗಳಿವೆ. ಇಲ್ಲಿ ಪಾಯು ವಿಸರ್ಜನ ಕ್ರಿಯೆಗಾಗಿ ಎಂದು ಹೇಳಿದರೆ, “ಉಪಸ್ಥಚ ಆನಂದಯಿತವ್ಯಂ ಚ” ಎಂದು ಹೇಳಿದ್ದಾರೆ. ಏಕೆಂದರೆ ಉಪಸ್ಥದ[ಜನನೇಂದ್ರಿಯದ] ಪ್ರಧಾನ ಕ್ರಿಯೆ ಸ್ತ್ರೀ-ಪುರುಷ ಸಮಾಗಮದಿಂದ ಆನಂದವನ್ನನುಭವಿಸುವುದು. ಹೀಗೆ ಪಂಚಭೂತಗಳು, ಪಂಚತನ್ಮಾತ್ರೆಗಳು, ಪಂಚಜ್ಞಾನೇಂದ್ರಿಯಗಳು ಹಾಗೂ ಪಂಚಕರ್ಮೇಂದ್ರಿಯದ ವಿವರಣೆ ನೀಡಿದ ನಂತರ ಇಲ್ಲಿ ಮುಂದೆ ಪಂಚವಿಧ ಅಂತಃಕರಣದ ಪಟ್ಟಿ ಮಾಡಿರುವುದನ್ನು ಕಾಣುತ್ತೇವೆ.
ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಮತ್ತು ಚೇತನ ಇವು  ಐದು ವಿಧದ ಅಂತಃಕರಣಗಳು. ನಾವು ಒಂದು ವಸ್ತುವನ್ನು ನೋಡಿದ ತಕ್ಷಣ ಅದು ಬೇಕು ಅನಿಸುವುದು ನಮ್ಮ ಮನ್ಸಸ್ಸಿನಿಂದ. ಆದರೆ ಅದು ಬೇಕೋ ಬೇಡವೋ ಅನ್ನುವ ತೀರ್ಮಾನ ಮಾಡುವುದು ಬುದ್ಧಿ. ಹೊರಗಿನ ಪ್ರಪಂಚಕ್ಕೂ ತನಗೂ ಸಂಬಂಧವನ್ನು ಕಲ್ಪಿಸುವ ಅಂತರಂಗ ಪ್ರಪಂಚ ‘ಅಹಂಕಾರ’. [ಇಲ್ಲಿ ಅಹಂಕಾರ ಎಂದರೆ ಹೆಮ್ಮೆ(Ego), ಭೂಟಾಟಿಕೆ  ಅಲ್ಲ, ಬದಲಿಗೆ ‘ನಾನು ಎನ್ನುವ ಅರಿವು’ (Awareness of self)]. ನೋಡಿದ್ದನ್ನು ಕೇಳಿದ್ದನ್ನು ನೆನಪಿಟ್ಟುಕೊಳ್ಳುವುದು ನಮ್ಮ ಚಿತ್ತ. ಚಿತ್ತವಿಲ್ಲದೆ ನಮಗೆ ಬದುಕೇ ಇಲ್ಲ. ಚಿತ್ತ ವಿಸ್ತಾರವಾದರೆ ಅದು ತೇಜಸ್ಸು. ಅದು  ನಮಗೆ ಜನ್ಮಾಂತರದ ನೆನಪು ಕೊಡುವ ಬೆಳಕು.  ಭೂತ ಮತ್ತು ಭವಿಷ್ಯತ್ಕಾಲ  ವರ್ತಮಾನವಾಗಿ ಕಾಣುವುದು ‘ಚೇತನ’ದಿಂದ.
ಪಂಚಭೂತಗಳು, ಪಂಚತನ್ಮಾತ್ರೆಗಳು, ಪಂಚಜ್ಞಾನೇಂದ್ರಿಯ, ಪಂಚಕರ್ಮೇಂದ್ರಿಯ ಮತ್ತು ಪಂಚವಿಧ ಅಂತಃಕರಣ ಈ ಇಪ್ಪತ್ತೈದು ತತ್ತ್ವಗಳನ್ನು[ಅದರ ಅಭಿಮಾನಿ ದೇವತಗಳನ್ನು] ಇಲ್ಲಿ ಭಗವಂತನೆಂಬ ಗೂಡು ಸೇರುವ ಹಕ್ಕಿಗಳು ಎಂದು ಕರೆದಿದ್ದಾರೆ. ಈ ಎಲ್ಲವನ್ನೂ ಧಾರಣೆ ಮಾಡಿರುವ ಶಕ್ತಿ ಪ್ರಾಣದೇವರು. ಈ ಶಕ್ತಿಯನ್ನೇ ನಾವು ‘ಮುಖ್ಯಪ್ರಾಣ’ ಎಂದು ಉಪಾಸನೆ ಮಾಡುತ್ತೇವೆ.
ಭಗವಂತ ತಾಯಿಯಂತೆ ಎಲ್ಲಾ ತತ್ವಾಭಿಮಾನಿ ದೇವತೆಗಳನ್ನು ನಿದ್ದೆಯ ಕಾಲದಲ್ಲಿ ತನ್ನೊಳಗೆ ಹುದುಗಿಸಿಕೊಂಡು ಮತ್ತೆ ಎಚ್ಚರವಾದಾಗ ಮರಳಿ ಅವರವರ ಕರ್ತವ್ಯಕ್ಕೆ ಕಳುಹಿಸಿ ಕೊಡುತ್ತಾನೆ.  ಪಿಂಡಾಂಡ ಬ್ರಹ್ಮಾಂಡವನ್ನು ಧಾರಣೆ ಮಾಡಿ ಅಹೋರಾತ್ರಿ ಕಾರ್ಯನಿರ್ವಹಿಸುವ ಪ್ರಾಣದೇವರೂ ಸಹ ಭಗವಂತನ ಮಡಿಲಲ್ಲಿ ಪುಟ್ಟ ಮಗುವಿದ್ದಂತೆ. ನಮಗೆ ಇಡೀ ಪ್ರಪಂಚವನ್ನು ಧಾರಣೆ ಮಾಡಿರುವ ಪ್ರಾಣಶಕ್ತಿಯೇ ಒಂದು ಅದ್ಭುತ. ಹಾಗಿರುವಾಗ ಈ ಪ್ರಾಣಶಕ್ತಿಯನ್ನೂ ಧಾರಣೆ ಮಾಡಿರುವ ಆ ಭಗವಂತನನ್ನು ನಾವು ಕಲ್ಪಿಸುವುದೂ ಅಸಾಧ್ಯ!
ಮೇಲೆ ಹೇಳಿದಂತೆ ಇಲ್ಲಿ ಹೇಳಿರುವುದು ಕೇವಲ ತತ್ತ್ವವನ್ನಷ್ಟೇ ಅಲ್ಲ ತತ್ತ್ವಾಭಿಮಾನಿ ದೇವತೆಗಳನ್ನೂ ಕೂಡಾ ಹೌದು. ಈ ಹಿನ್ನೆಲೆಯಲ್ಲಿ ನಾವು ತತ್ತ್ವಾಭಿಮಾನಿ ದೇವತೆಗಳು ಯಾರು ಮತ್ತು ಅವರು ಯಾವ ಕಕ್ಷೆಯಲ್ಲಿದ್ದರೆ  ಎನ್ನುವುದನ್ನು ಅರಿತು ಮುಂದುವರಿಯೋಣ.
ಮೊದಲನೆಯದಾಗಿ ಮಣ್ಣಿನ ದೇವತೆ. ಇಪ್ಪತ್ನಾಲ್ಕನೇ ಕಕ್ಷೆಯಲ್ಲಿರುವ ‘ಶನಿ’ ನೇರವಾಗಿ ಮಣ್ಣಿನ ಅಭಿಮಾನಿ ದೇವತೆ. ಶನಿಯ ನಂತರ ಶನಿಗಿಂತ ಎತ್ತರದಲ್ಲಿ  ಹದಿನೆಂಟನೇ ಕಕ್ಷೆಯಲ್ಲಿರುವ ಪ್ರಥಿವೀ ಮಾತೆ, ಹತ್ತನೇ ಕಕ್ಷೆಯಲ್ಲಿರುವ ಅನಿರುದ್ಧ ಕೂಡಾ ಮಣ್ಣಿನ ಅಭಿಮಾನಿ ದೇವತೆಗಳು. ಎಲ್ಲಕ್ಕಿಂತ ಎತ್ತರದಲ್ಲಿ ಎರಡನೇ ಕಕ್ಷೆಯಲ್ಲಿರುವ ಸಾಕ್ಷಾತ್ ಶ್ರೀಲಕ್ಷ್ಮಿಯ ಭೂ ನಾಮಕ ರೂಪವೂ ಕೂಡಾ ಮಣ್ಣಿನ ದೇವತೆ.
ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧದ ಅಭಿಮಾನಿ ದೇವತೆಗಳು ಹದಿನೆಂಟನೇ ಕಕ್ಷೆಯಲ್ಲಿರುವ ಪ್ರಾಣದೇವರ ಪುತ್ರರಾದ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ. ಹೇಗೆ ಪ್ರಥಿವಿಯ ದೇವತೆ ಶ್ರೀಲಕ್ಷ್ಮಿಯೋ ಹಾಗೇ ಗಂಧದ ಅಭಿಮಾನಿ ದೇವತೆ ಏಳನೇ ಕಕ್ಷೆಯಲ್ಲಿರುವ ಪಾರ್ವತಿ. ನೀರಿನ ಅಭಿಮಾನಿ ದೇವತೆ ನೇರವಾಗಿ ಇಪ್ಪತ್ತೆರಡನೇ ಮೆಟ್ಟಿಲಲ್ಲಿರುವ ಬುಧ. ಇದಕ್ಕೂ ಮೇಲಕ್ಕೆ ಹದಿಮೂರನೇ ಮೆಟ್ಟಿಲಲ್ಲಿರುವ ವರುಣ ಮತ್ತು ಒಂಬತ್ತನೇ ಮೆಟ್ಟಿಲಲ್ಲಿರುವ ಅಹಂಕಾರಿಕ ಪ್ರಾಣ ಕೂಡಾ ನೀರಿನ ಅಭಿಮಾನಿ ದೇವತೆಯರು. ರಸದ ದೇವತೆ ಏಳನೇ ಮೆಟ್ಟಿಲಲ್ಲಿರುವ ಶೇಷ ಪತ್ನಿ ವಾರುಣಿ. ಸ್ಥೂಲವಾಗಿ ತೇಜಸ್ಸಿನ ಅಭಿಮಾನಿ ದೇವತೆ ಹತ್ತೊಂಬತ್ತನೇ ಕಕ್ಷೆಯಲ್ಲಿರುವ ಅಗ್ನಿಯ ಜೇಷ್ಠಪುತ್ರ ಪಾವಕ. ಇದಕ್ಕೂ ಎತ್ತರದಲ್ಲಿ ಹದಿನೈದನೇ ಕಕ್ಷೆಯಲ್ಲಿರುವ ಅಗ್ನಿ ಮತ್ತು ಎಂಟನೇ ಕಕ್ಷೆಯಲ್ಲಿರುವ ಇಂದ್ರ ತೇಜಸ್ಸಿನ ಅಭಿಮಾನಿ ದೇವತೆ. ಏಳನೇ ಕಕ್ಷೆಯಲ್ಲಿರುವ ಶೇಷ ಪತ್ನಿ ವಾರುಣಿ ರೂಪ ರಸಗಳ ಅಭಿಮಾನಿ ದೇವತೆ. ಹತ್ತೊಂಬತ್ತನೇ ಮೆಟ್ಟಿಲಲ್ಲಿರುವ ವಾಯು ಪುತ್ರ ಮರೀಚಿ ಮತ್ತು ಹನ್ನೊಂದನೇ ಮೆಟ್ಟಿಲಲ್ಲಿರುವ ಪ್ರವಹವಾಯು ಗಾಳಿಯ ಅಭಿಮಾನಿ ದೇವತೆಯರು. ಎಲ್ಲಕ್ಕೂ ಮುಖ್ಯವಾಗಿ ಮೂರನೇ ಮೆಟ್ಟಿಲಲ್ಲಿರುವ ಮುಖ್ಯಪ್ರಾಣ ವಾಯುವಿನ ಪ್ರಧಾನ ಅಭಿಮಾನಿ ದೇವತೆ. ಏಳನೇ ಕಕ್ಷೆಯಲ್ಲಿರುವ ಗರುಡಪತ್ನಿ ಸುಪರ್ಣಿ ಶಬ್ದ ಮತ್ತು ಸ್ಪರ್ಶದ ಅಭಿಮಾನಿ ದೇವತೆ. ಹದಿನೆಂಟನೇ ಕಕ್ಷೆಯಲ್ಲಿರುವ ವಿನಾಯಕ ನೇರವಾಗಿ ಆಕಾಶದ ಅಭಿಮಾನಿ ದೇವತೆಯಾದರೆ, ಆತನಿಗಿಂತ ಎತ್ತರದಲ್ಲಿರುವ ಐದನೇ ಕಕ್ಷೆಯಲ್ಲಿರುವ ಶಿವ, ಮೂರನೇ ಕಕ್ಷೆಯಲ್ಲಿರುವ ಮುಖ್ಯಪ್ರಾಣ ಹಾಗೂ ಎರಡನೇ ಕಕ್ಷೆಯಲ್ಲಿರುವ ಶ್ರೀಲಕ್ಷ್ಮಿ ಕೂಡಾ ಆಕಾಶದ ಅಭಿಮಾನಿ ದೇವತೆಯರು. ಕಣ್ಣಿನ ಅಭಿಮಾನಿ ದೇವತೆ ಹನ್ನೆರಡನೇ ಕಕ್ಷೆಯಲ್ಲಿರುವ ಸೂರ್ಯ. ಕಿವಿಯ ಅಭಿಮಾನಿ ದೇವತೆ ಮುಖ್ಯವಾಗಿ ಹನ್ನೆರಡನೇ ಕಕ್ಷೆಯಲ್ಲಿರುವ ಚಂದ್ರ. ಇದಲ್ಲದೆ ಹದಿನೆಂಟನೇ ಕಕ್ಷೆಯಲ್ಲಿರುವ ಕುಬೇರ, ಹದಿನೇಳನೇ ಕಕ್ಷೆಯಲ್ಲಿರುವ ಮಿತ್ರ, ಹದಿಮೂರನೇ ಕಕ್ಷೆಯಲ್ಲಿರುವ ವರುಣ ಹಾಗೂ ಹನ್ನೆರಡನೇ ಕಕ್ಷೆಯಲ್ಲಿರುವ ಯಮ ಕೂಡಾ ಕಿವಿಯ ಅಭಿಮಾನಿ ದೇವತೆಯರು. ಇವರು ದಿಗ್ದೇವತೆಯರು ಕೂಡಾ ಹೌದು. ಹದಿನೆಂಟನೇ ಕಕ್ಷೆಯಲ್ಲಿರುವ ಅಶ್ವಿನೀ ದೇವತೆಗಳು ಮೂಗಿನ ಅಭಿಮಾನಿ ದೇವತೆಯರು. ಹದಿಮೂರನೇ ಕಕ್ಷೆಯಲ್ಲಿರುವ ವರುಣ ನಾಲಿಗೆಯ ಅಭಿಮಾನಿಯಾದರೆ ಹದಿನೆಂಟನೇ ಕಕ್ಷೆಯಲ್ಲಿರುವ ಕುಬೇರ ಮತ್ತು ಹನ್ನೊಂದನೇ ಕಕ್ಷೆಯಲ್ಲಿರುವ ಪ್ರವಹವಾಯು ತ್ವಗೀಂದ್ರಿಯದ ಅಭಿಮಾನಿ ದೇವತೆಗಳು. ವಾಗೇಂದ್ರಿಯ ದೇವತೆ ಹದಿನೈದನೇ ಕಕ್ಷೆಯಲ್ಲಿರುವ ಅಗ್ನಿ. ಮಾತನಾಡುವ ಕ್ರಿಯೆಯ ಅಭಿಮಾನಿ ದೇವತೆ ಏಳನೇ ಕಕ್ಷೆಯಲ್ಲಿರುವ ಗರುಡಪತ್ನಿ ಸುಪರ್ಣಿ. ಕೈಯ ಅಭಿಮಾನಿ ದೇವತೆ ಎಂಟನೇ ಕಕ್ಷೆಯಲ್ಲಿರುವ ಇಂದ್ರ ಹಾಗೂ ಅವಾಂತರ ದೇವತೆಯಾಗಿ ಹತ್ತನೇ ಕಕ್ಷೆಯಲ್ಲಿರುವ ದಕ್ಷಪ್ರಜಾಪತಿ. ಕೈಯಿಂದ ನಡೆಯುವ ಕ್ರಿಯೆಯ ಅಭಿಮಾನಿ ದೇವತೆ ಗರುಡಪತ್ನಿ ಸುಪರ್ಣಿ. ಹತ್ತೊಂಬತ್ತನೇ ಮೆಟ್ಟಿಲಲ್ಲಿರುವ ಇಂದ್ರಪುತ್ರ ಜಯಂತ ಕಾಲಿನ ಅಭಿಮಾನಿ ದೇವತೆ. ಗಮನಕ್ರಿಯೆಯ ಅಭಿಮಾನಿ ದೇವತೆ ಶೇಷ ಪತ್ನಿ ವಾರುಣಿ. ವಿಸರ್ಜನಾಂಗ ಪಾಯುವಿನ ಅಭಿಮಾನಿ ದೇವತೆ ಮಿತ್ರ(೧೭ನೇ ಕಕ್ಷೆ), ಯಮ(೧೨ನೇ ಕಕ್ಷೆ) ಮತ್ತು ನಿರ್ಋತಿ(೧೭ನೇ ಕಕ್ಷೆ). ವಿಸರ್ಜನ ಕ್ರಿಯೆಯ ದೇವತೆ ವಾರುಣಿ. ಹತ್ತನೇ ಕಕ್ಷೆಯಲ್ಲಿರುವ ಧಕ್ಷಪ್ರಜಾಪತಿ ಮತ್ತು ಸ್ವಾಯಂಭುವ ಮನು ಉಪಸ್ಥದ ದೇವತೆಗಳಾದರೆ ಸಂತಾನಕ್ರಿಯೆಯ ಅಭಿಮಾನಿ ದೇವತೆ ಶಿವ ಪತ್ನಿ ಪಾರ್ವತಿ(೭). ಮನಸ್ಸು-ಬುದ್ಧಿ ಮತ್ತು ಅಹಂಕಾರದ ದೇವತೆಗಳು ಎಂಟನೇ ಕಕ್ಷೆಯಲ್ಲಿರುವ ಇಂದ್ರ-ಕಾಮರಾದರೂ ಕೂಡಾ, ಮೂಲಭೂತವಾಗಿ ಅಭಿಮಾನಿ ದೇವತೆಗಳು ಐದನೇ ಕಕ್ಷೆಯಲ್ಲಿರುವ ಗರುಡ-ಶೇಷ-ರುದ್ರರು. ಬುದ್ಧಿಯ ಅಭಿಮಾನಿ ದೇವತೆಯರು ಸರಸ್ವತಿ ಮತ್ತು ಭಾರತಿಯರು. ಇವರು  ನಾಲ್ಕನೇ ಕಕ್ಷೆಯಲ್ಲಿನ ದೇವತೆಗಳು. ಚಿತ್ತದ ದೇವತೆ ಮೂರನೇ ಕಕ್ಷೆಯಲ್ಲಿರುವ ಬ್ರಹ್ಮ-ವಾಯು. ಕರ್ಮದ ದೇವತೆ ಇಪ್ಪತ್ತೈದನೇ ಕಕ್ಷೆಯಲ್ಲಿರುವ ಪುಷ್ಕರ. ತೇಜಸ್ಸಿನ ಅಥವಾ ಚೇತನದ ದೇವತೆ ಎರಡನೇ ಕಕ್ಷೆಯಲ್ಲಿರುವ ಶ್ರೀಲಕ್ಷ್ಮಿ. ಹೀಗೆ ಎರಡನೇ ಕಕ್ಷೆಯಲ್ಲಿರುವ ಶ್ರಿಲಕ್ಷ್ಮಿಯಿಂದ ಇಪ್ಪತೈದನೇ ಕಕ್ಷೆಯಲ್ಲಿರುವ ಪುಷ್ಕರನ ತನಕ ಎಲ್ಲಾ ದೇವತೆಗಳು, ಮೊತ್ತಮೊದಲಿಗನಾಗಿ ಮೊದಲ ಕಕ್ಷೆಯಲ್ಲಿರುವ ಭಗವಂತನ ಅಧೀನವಾಗಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಹಕ್ಕಿಗಳು ಗೂಡು ಸೇರುವಂತೆ ಭಗವಂತನೆಂಬ ಗೂಡನ್ನು ಸೇರಿ ವಿಶ್ರಮಿಸುತ್ತಾರೆ.

ಏಷ ಹಿ ದ್ರಷ್ಟ ಸ್ಪ್ರಷ್ಟಾ ಶ್ರೋತಾ ಘ್ರಾತಾ ರಸಯಿತಾ ಮಂತಾ ಬೋದ್ಧಾ ಕರ್ತಾ ವಿಜ್ಞಾನಾತ್ಮಾ ಪುರುಷಃ

ಭಗವಂತ ವಿಶ್ವದಲ್ಲಿ ಎಲ್ಲವನ್ನೂ ಸಾಕ್ಷಾತ್ ನೋಡಬಲ್ಲ, ಕೇಳಬಲ್ಲ. ಅಂತರ್ಯಾಮಿಯಾಗಿದ್ದು, ಸರ್ವಗತನಾಗಿದ್ದು ಸಾಕ್ಷಾತ್ ಎಲ್ಲವನ್ನೂ ಮುಟ್ಟಬಲ್ಲ. ಆತ ಎಲ್ಲವನ್ನೂ ಆಘ್ರಾಣಿಸಬಲ್ಲ; ಎಲ್ಲಾ ಜೀವರೊಳಗಿರುವ ಭಗವಂತ ಸಾಕ್ಷಾತ್ ಎಲ್ಲಾ ರುಚಿಯನ್ನೂ ಸವಿಯಬಲ್ಲ. ಎಲ್ಲವನ್ನೂ ಮನನಮಾಡಬಲ್ಲ. ಎಲ್ಲವನ್ನೂ ತಿಳಿಯಬಲ್ಲವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲವನ್ನೂ ಸೃಷ್ಟಿಸಿದ ಸೃಷ್ಟಾರ. ಎಲ್ಲಾ ಜ್ಞಾನಗಳಿಗಿಂತಲೂ ವಿಶಿಷ್ಠ ಜ್ಞಾನ ಉಳ್ಳವ ಆ ‘ಪುರುಷಃ’ ನಾಮಕ ಭಗವಂತ. [ಎಲ್ಲಾ ಪುರ(ದೇಹ)ದೊಳಗಿದ್ದು ಎಲ್ಲಾ ಕ್ರಿಯೆಗಳನ್ನು ನಿಯಂತಿಸುವವ  ಪುರುಷಃ]. ಎಲ್ಲಾ ದೇಹದೊಳಗಿದ್ದು ಎಲ್ಲಾ ಇಂದ್ರಿಯಗಳ ವ್ಯಾಪಾರವನ್ನು ಆಸ್ವಾದಿಸಿ, ಇಡೀ ವಿಶ್ವವನ್ನು ವ್ಯಾಪಿಸಿರುವ ಶಕ್ತಿ ಆ ಭಗವಂತ-‘ಆತ್ಮಃ’. ಎಲ್ಲರಿಗೂ ಆಶ್ರಯನಾಗಿರುವ ಭಗವಂತನನ್ನು ಇಲ್ಲಿ ಹತ್ತು ಶಬ್ದಗಳಲ್ಲಿ ವಿವರಿಸಿರುವುದನ್ನು ನಾವು ಗಮನಿಸಬೇಕು[ದ್ರಷ್ಟ, ಸ್ಪ್ರಷ್ಟಾ, ಶ್ರೋತಾ, ಘ್ರಾತಾ, ರಸಯಿತಾ, ಮಂತಾ, ಬೋದ್ಧಾ ,ಕರ್ತಾ, ವಿಜ್ಞಾನಾತ್ಮಾ ಮತ್ತು  ಪುರುಷಃ]. ಇವು ಹತ್ತು ರೂಪದ ಭಗವಂತನನ್ನು ವರ್ಣಿಸುವ ಹತ್ತು ಶಬ್ದಗಳು. ಇಲ್ಲಿ ಇನ್ನೊಂದು ವಿಶೇಷತೆ ಇದೆ. ಹಿಂದೆ ಜ್ಞಾನೇಂದ್ರಿಯದ ವಿವರಣೆ ಬಂದಿದೆ ಹಾಗೂ ಕರ್ಮೇಂದ್ರಿಯದ ವಿವರಣೆಯೂ ಬಂದಿದೆ. ನಂತರ ಜ್ಞಾನೇಂದ್ರಿಯ, ಕರ್ಮೇಂದ್ರಿಯ, ಮನಸ್ಸು, ಅಂತಃಕರಣದ ಅಭಿಮಾನಿ ದೇವತೆಗಳೆಲ್ಲರೂ ಭಗವಂತನಲ್ಲಿ ಹೋಗಿ ಸೇರುತ್ತಾರೆ ಎಂದೂ ಹೇಳಿದ್ದರು. ಈಗ ಇಲ್ಲಿ ಭಗವಂತನ ಕುರಿತು ಹೇಳುವಾಗ ಮೊದಲು ಐದು ಜ್ಞಾನೇಂದ್ರಿಯದ ಕುರಿತು [ದ್ರಷ್ಟ, ಸ್ಪ್ರಷ್ಟಾ, ಶ್ರೋತಾ, ಘ್ರಾತಾ ಮತ್ತು ರಸಯಿತಾ] ಹೇಳುವುದನ್ನು ಕಾಣುತ್ತೇವೆ. ಇದೇ ವಿವರಣೆ ಗೀತೆಯಲ್ಲಿ ಕೂಡಾ ಬಂದಿದೆ: ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ। ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ ॥ಭಗವದ್ಗೀತಾ-ಅ-೧೫-೯॥. ಎರಡೂ ಕಡೆ ಕೇವಲ ಜ್ಞಾನೇಂದ್ರಿಯವನ್ನು ಹೇಳಿದ್ದಾರೆ ಹೊರತು ಕರ್ಮೇಂದ್ರಿಯವನ್ನು ಹೇಳಿಲ್ಲ. ಇದರರ್ಥ ಭಗವಂತ ಕೇವಲ ಜ್ಞಾನೇಂದ್ರಿಯದಲ್ಲಿದ್ದು ಆನಂದ ಪಾನ ಮಾಡುತ್ತಾನೆ ಆದರೆ ಕರ್ಮೆಂದ್ರಿಯದಿಂದ ಮಾಡುವುದಿಲ್ಲ ಎಂದಲ್ಲ. ಜ್ಞಾನಸ್ವರೂಪನಾದ ಭಗವಂತನಿಗೆ ಎಲ್ಲಾ ಇಂದ್ರಿಯಗಳೂ ಜ್ಞಾನೇಂದ್ರಿಯಗಳೇ. ಆದ್ದರಿಂದ ಇಲ್ಲಿ ಕರ್ಮೇಂದ್ರಿಯವನ್ನು ಪ್ರತ್ಯೇಕವಾಗಿ ಹೇಳಿಲ್ಲ ಅಷ್ಟೇ.  ನಂತರ ‘ಬಯಕೆ’ ಮತ್ತು ‘ನಿಶ್ಚಯ’ ಎರಡನ್ನೂ ಮಂತಾ ಮತ್ತು  ಬೋದ್ಧಾ ಎಂದು ಇಲ್ಲಿ ಹೇಳಿದ್ದಾರೆ [ಗೀತೆಯಲ್ಲಿ ಅಧಿಷ್ಠಾಯ ಮನಶ್ಚಾಯ ಎಂದಿದ್ದಾರೆ]. ಭಗವಂತ ಬಯಕೆ ಮತ್ತು ನಿಶ್ಚಯ ಈ ಎರಡು ಮುಖದಿಂದ ಕಾರ್ಯ ನಿರ್ವಹಿಸುತ್ತಾನೆ. [ಉದಾಹರಣೆಗೆ: ಭಗವಂತ ಸೃಷ್ಟಿ ನಿರ್ಮಾಣ ಮಾಡಬೇಕೆಂದು ಬಯಸಿದ ಮತ್ತು ಸೃಷ್ಟಿ ಮಾಡಿದ].  ಹಿಂದೆ ದೇವತೆಗಳನ್ನು ಹೇಳುವಾಗ ಅಹಂಕರ್ತಾ ಎಂದು ಹೇಳಿದ್ದರೆ ಇಲ್ಲಿ ಭಗವಂತನನ್ನು ಹೇಳುವಾಗ ಕೇವಲ ‘ಕರ್ತಾ’ ಎಂದಿದ್ದಾರೆ. ಕಾರಣ ಏನೆಂದರೆ ಭಗವಂತನಿಗೆ ನಾನು ನನ್ನದು ಎನ್ನುವ ಅಹಂಕಾರವಿಲ್ಲ. ಆತ ಯಾವುದರ ಅಭಿಮಾನಿಯೂ ಅಲ್ಲ.
ಸಮಸ್ತ ವಿಶ್ವದ ಸಮಸ್ತ ಕ್ರಿಯೆಯನ್ನು ನಿರ್ವಹಿಸುವ, ಸಮಸ್ತ ಪದಾರ್ಥವನ್ನು ನಿರ್ಮಾಣ ಮಾಡಿದ ಭಗವಂತನನ್ನು ಇಲ್ಲಿ  ‘ವಿಜ್ಞಾನಾತ್ಮಾ’ ಎಂದು ಸಂಬೋಧಿಸಿದ್ದಾರೆ. ಒಂದು ದೃಷ್ಟಿಯಿಂದ ವಿಜ್ಞಾನಾತ್ಮಾ ಎನ್ನುವುದು ವಿಷ್ಣುಃ ಶಬ್ದದ ವ್ಯಾಖ್ಯಾನ. ವಿಷ್ಣುಃ ಎನ್ನುವುದಕ್ಕೆ ಸಂಸ್ಕೃತದಲ್ಲಿ ಒಂದು ವಿಶಿಷ್ಠ ಅರ್ಥವಿದೆ. ವಿಷ್ಣು ಎನ್ನುವ ಶಬ್ದದಲ್ಲಿ ಒಟ್ಟು ನಾಲ್ಕು ಅಕ್ಷರಗಳಿವೆ. ಅವುಗಳೆಂದರೆ ವಿ, ಶ, ಣ ಮತ್ತು ಉ. ಇಲ್ಲಿ ‘ವಿ’-ಎಲ್ಲಕ್ಕಿಂತ ವಿಶಿಷ್ಠ ಮತ್ತು ವಿಲಕ್ಷಣವಾದ ಶಕ್ತಿ ಎನ್ನುವ ಅರ್ಥವನ್ನು ಕೊಡುತ್ತದೆ. ‘ಉ’ ಸಹಜ ಸ್ವಭಾವವಾಗಿ ಉಳ್ಳವನು ಅಥವಾ ಸ್ವರೂಪ ಎನ್ನುವ ಅರ್ಥವನ್ನು ಕೊಡುತ್ತದೆ. [ಉದಾಹರಣೆಗೆ:ದಯಾಳು: ದಯೆಯೇ ಸಹಜ ಸ್ವಭಾವವಾಗಿ ಉಳ್ಳವನು-ದಯಾಳು].  ಐತರೆಯ ಉಪನಿಷತ್ತಿನಲ್ಲಿ ಹೇಳುವಂತೆ: ಣ-ಕಾರೋ ಬಲಂ ಶ-ಕಾರಃ ಪ್ರಾಣೋ ಆತ್ಮಾ.  ಆದ್ದರಿಂದ ‘ಣ’ ಎಂದರೆ ಬಲ ಸ್ವರೂಪ. ‘ಶ’ ಎಂದರೆ ಸರ್ವಚಾಲಕ ಶಕ್ತಿ. ಇದನ್ನು ‘ಚೇಷ್ಟೆ’ ಅಥವಾ ‘ಕ್ರಿಯೆ’ ಎನ್ನಬಹುದು. ಸತ್ಯಸಂಕಲ್ಪನಾದ ಭಗವಂತನ ಕ್ರಿಯೆ ಇರುವುದು ಕೇವಲ ಜ್ಞಾನ ಮತ್ತು ಆನಂದದಲ್ಲಿ. ಆದ್ದರಿಂದ ವಿಷ್ಣುಃ ಎಂದರೆ ‘ವಿಶಿಷ್ಟವಾದ ಜ್ಞಾನಾನಂದ ಬಲ ಸ್ವರೂಪನಾದ ಭಗವಂತ’ ಎಂದರ್ಥ. ಇಂತಹ ಭಗವಂತ ಎಲ್ಲರ ಇಂದ್ರಿಯದಲ್ಲಿದ್ದು, ಎಲ್ಲ ಪುರದಲ್ಲಿದ್ದು, ದುಃಖ ಮತ್ತು ಅಜ್ಞಾನದ ಸ್ಪರ್ಶವೇ ಇಲ್ಲದ ಕೇವಲ ಜ್ಞಾನಾನಂದವನ್ನು ಅನುಭವಿಸುವ ‘ಪುರುಷಃ’.    

ಸಯೋ ಹ ವೈ ತದಚ್ಛಾಯಮಶರೀರಮ್ಲೋಹಿತಂ ಶುಭ್ರಮಕ್ಷರಂ ವೇದಯತೇ ಯಸ್ತು ಸೋಮ್ಯ   ಸ ಸರ್ವಜ್ಞಃ ಸರ್ವೋ ಭವತಿ  ೧೦

ಭಗವಂತ ನೆರಳಿಲ್ಲದ ಪುರುಷಃ. ಅಂದರೆ ಬೆಳಕಿನ ಪುಂಜವಾದ  ಭಗವಂತನಿಗೆ ನೆರಳಿನ ಸ್ಪರ್ಶವಿಲ್ಲ ಎನ್ನುವುದು ಒಂದು ಅರ್ಥವಾದರೆ,  ಭಗವಂತ ಜ್ಞಾನಾನಂದ ಸ್ವರೂಪ; ತಮಸ್ಸಿನ(ಕತ್ತಲೆಯ) ಮತ್ತು ಅಜ್ಞಾನದ ಸ್ಪರ್ಶ ಆತನಿಗಿಲ್ಲ ಎನ್ನುವುದು ಇದರ ಇನ್ನೊಂದು ಅರ್ಥ.  ಇದನ್ನೇ ಗಾಯತ್ತ್ರಿಯಲ್ಲಿ ‘ಭರ್ಗ’ ಎಂದಿದ್ದಾರೆ. ಭ+ರ+ಗ=ಭರ್ಗ. ಇಲ್ಲಿ ಭ=ಬೆಳಕು; ರ=ಆನಂದ; ಗ=ಜ್ಞಾನ. ಭಗವಂತ ಕತ್ತಲಿನ ಅಥವಾ ಅಜ್ಞಾನದ ಛಾಯೆ ಇಲ್ಲದ, ಶುದ್ಧ ಜ್ಞಾನದ  ಬೆಳಕಿನ ಸ್ವರೂಪ.
ಭಗವಂತ ಅಶರೀರ. ಅಂದರೆ ಅವನಿಗೆ ನಮ್ಮಂತೆ ಪಾಂಚಭೌತಿಕವಾದ, ಒಂದುದಿನ ಬಿದ್ದುಹೋಗುವ, ವೃದ್ಧಿ-ಕ್ಷಯಗಳಿಗೆ ಒಳಪಡುವ ಸ್ಥೂಲ/ಸೂಕ್ಷ್ಮ/ಲಿಂಗ ಶರೀರವಿಲ್ಲ. ಆದರೆ ಭಗವಂತ ಅಹಃ-ಶರೀರ. ಅಂದರೆ ಆತನ ಶರೀರ ಜ್ಞಾನಾನಂದಮಯಸ್ವರೂಪವಾದುದು. ಇಲ್ಲಿ ಭಗವಂತನ ಶರೀರ ‘ಅಲೋಹಿತಂ’ ಎಂದಿದ್ದಾರೆ. ಲೋಹಿತಂ ಅಂದರೆ ನೆತ್ತರು. ನೆತ್ತರು ನಮ್ಮ ದೇಹದಲ್ಲಿನ ಸಪ್ತಧಾತುಗಳಲ್ಲಿ ಒಂದು. ನೆತ್ತರಿನಿಂದ ಕೂಡಿದ ಶರೀರ ಭಗವಂತನಿಗಿಲ್ಲ. ಅವತಾರ ರೂಪದಲ್ಲಿ ಕೂಡಾ ಭಗವಂತನ ದೇಹ ಜ್ಞಾನಾನಂದಸ್ವರೂಪವಾಗಿಯೇ ಇರುತ್ತದೆ. ಆದರೆ ನಮಗೆ ಸ್ವರೂಪಭೂತವಾದ ಭಗವಂತನ ಶರೀರವನ್ನು ನಮ್ಮ ಭೌತಿಕವಾದ ಕಣ್ಣಿಂದ ಕಾಣಲು ಸಾಧ್ಯವಿಲ್ಲವಾದ್ದರಿಂದ ಆತ ನಮಗೆ ಪಾಂಚಭೌತಿಕ ಶರೀರಿಯಾಗಿ ಕಾಣಿಸಿಕೊಳ್ಳುತ್ತಾನೆ ಅಷ್ಟೇ. ಮಹಾಭಾರತದಲ್ಲಿ ತನ್ನ ಅಜ್ಜ ಭೀಷ್ಮಾಚಾರ್ಯರ ಜೊತೆಗೆ ಯುದ್ಧ ಮಾಡುವಾಗ ಅರ್ಜುನ ಸಂಕೋಚದಿಂದ ತುಂಬಾ ನಿಧಾನವಾಗಿ ಯುದ್ಧ ಮಾಡುತ್ತಾನೆ. ಇದನ್ನು ಗಮನಿಸಿದ ಭೀಷ್ಮಾಚಾರ್ಯರು ಅರ್ಜುನನನ್ನು ಕೆಣಕಲು ಒಂದು ತಂತ್ರವನ್ನು ಮಾಡುತ್ತಾರೆ. ಅವರು ಅರ್ಜುನನ ಸಾರಥಿಯಾಗಿರುವ ಕೃಷ್ಣನ ಮೇಲೆ ಬಾಣ ಪ್ರಯೋಗ ಮಾಡುತ್ತಾರೆ. ಆ ಬಾಣ ಪ್ರಯೋಗದಿಂದ ಕೃಷ್ಣನ ಕವಚ ತುಂಡಾಗಿ ಕೃಷ್ಣನ ದೇಹದಿಂದ ರಕ್ತ ಧಾರಾಕಾರವಾಗಿ ಹರಿಯಿತು ಎನ್ನುವ ವರ್ಣನೆ ಭಾರತ ಮತ್ತು ಭಾಗವತ ಎರಡರಲ್ಲೂ ಬಂದಿರುವುದನ್ನು ಕಾಣಬಹುದು. ಈ ವರ್ಣನೆಗೆ ಉತ್ತರ ರೂಪವಾಗಿ ಇಲ್ಲಿ ‘ಅಲೋಹಿತಂ’ ಎಂದಿದ್ದಾರೆ. ಅಂದರೆ ಭಗವಂತನಿಗೆ ಪಾಂಚಭೌತಿಕವಾದ, ನೆತ್ತರಿನಿಂದ ಕೂಡಿದ, ತ್ರಿಗುಣಾತ್ಮಕವಾದ  ಶರೀರವಿಲ್ಲ. ಅವತಾರ ರೂಪಿ ಭಗವಂತ ನಮಗೆ ಆ ರೀತಿ ತನ್ನ ಲೀಲೆಯನ್ನು ತೋರುತ್ತಾನೆ ಅಷ್ಟೇ. ಭಗವಂತ ಸ್ವಚ್ಛವಾದ ಬೆಳಕು. ಪರಿಶುದ್ಧವಾದ ಜ್ಞಾನಾನಂದಮಾಯವಾದ ರೂಪ ಆತನದು. ಭಗವಂತ ಅ-ಕ್ಷರ. ಅಂದರೆ ಎಂದೂ ನಾಶವಿಲ್ಲದ ಶರೀರ ಉಳ್ಳವನು. ಅಕ್ಷ(ಇಂದ್ರಿಯ)ಗಳಲ್ಲಿದ್ದು ರಮಿಸುವ, ಸ್ವತಂತ್ರವಾಗಿ ಎಲ್ಲಾ ದೇಶ ಕಾಲದಲ್ಲೂ ವ್ಯಾಪಿಸಿರುವ ಇಂತಹ ಓಂಕಾರ ವಾಚ್ಯ ಭಗವಂತನನ್ನು ಯಾರು ತಿಳಿದು, ಕರ್ಮಾನುಷ್ಠಾನ ಮಾಡಿ, ಕರ್ಮದಿಂದ ಜ್ಞಾನವನ್ನು ಪಡೆದು  ಉಪಾಸನೆ ಮಾಡುತ್ತಾರೋ, ಅವರು ಭಗವಂತನನ್ನು ಕಾಣಬಲ್ಲರು ಎಂದಿದ್ದಾರೆ ಪಿಪ್ಪಲಾದರು.
ಇಲ್ಲಿ ಸರ್ವಜ್ಞಃ ಎಂದರೆ ಎಲ್ಲವನ್ನೂ ತಿಳಿದವನಲ್ಲ. ಸರ್ವಂ ಪರಿಪೂರ್ಣಂ ಭಗವಂತಂ ಜ್ಞಾನಾತೀತಿ ಸರ್ವಜ್ಞಃ. ಮೂಲತಃ ಪರಿಪೂರ್ಣನಾದ, ಸರ್ವಶಕ್ತ ಭಗವಂತನನ್ನು ತಿಳಿದವನು ಎಂದರ್ಥ. ಎಲ್ಲವನ್ನೂ ತಿಳಿದವನು ಕೇವಲ ಭಗವಂತ ಮಾತ್ರ. ಅಪರೋಕ್ಷಜ್ಞಾನಿಗೂ ಕೂಡಾ ಕೇವಲ ಭಗವಂತನ ದರ್ಶನ ಸಾಧ್ಯವೇ ಹೊರತು, ಆತನಿಗೆ ಎಲ್ಲಾ ಕಾಲದಲ್ಲಿ ಎಲ್ಲವನ್ನೂ ತಿಳಿದಿರಲು ಸಾಧ್ಯವಿಲ್ಲ.
ಈ ರೀತಿ ಭಗವಂತನ ಅನುಗ್ರಹಕ್ಕೆ ಪಾತ್ರರಾದವರು ಬಯಸಿದ್ದನ್ನು ಪಡೆಯಬಲ್ಲರು ಹಾಗೂ  ಎಲ್ಲವುದಕ್ಕೂ ಮುಖ್ಯವಾಗಿ ಸರ್ವಶಕ್ತಿ ಭಗವಂತನನ್ನು ಸೇರಬಲ್ಲರು. ಇಷ್ಟು ವಿವರಣೆ ಕೊಟ್ಟ ಪಿಪ್ಪಲಾದರು ಈ ಇಡೀ ಪೂರ್ವಪಕ್ಷಕ್ಕೆ ಉತ್ತರರೂಪವಾಗಿ, ತಾನು ಕೊಟ್ಟ ವಿವರಣೆಗೆ ಸಂವಾದಿಯಾಗಿ ಒಂದು ವೇದ ಮಂತ್ರವನ್ನು  ಇಲ್ಲಿ ಉಲ್ಲೇಖಿಸುತ್ತಾರೆ. ಆ ಶ್ಲೋಕ ಹೀಗಿದೆ:

ತದೇಷ ಶ್ಲೋಕಃ
ವಿಜ್ಞಾನಾತ್ಮಾ ಸಹ ದೇವೈಶ್ಚ ಸರ್ವೈಃ ಪ್ರಾಣಾ ಭೂತಾನಿ ಸಂಪ್ರತಿಷ್ಠಂತಿ ಯತ್ರ
ತದಕ್ಷರಂ ವೇದಯತೇ ಯಸ್ತು ಸೋಮ್ಯ ಸ ಸರ್ವಜ್ಞಃ ಸರ್ವಮೇವಾSವಿವೇಶೇತಿ ೧೧

ಪಿಪ್ಪಲಾದರು ಯಾವ ಅನುಭವವನ್ನು ಸೌರ್ಯಾಯಣಿ ಗಾರ್ಗ್ಯರಿಗೆ ಹೇಳಿದರೋ ಅದೇ ಅನುಭವವನ್ನು ಈ ಮಂತ್ರ ಹೇಳುತ್ತದೆ. ಇಲ್ಲಿ ‘ವಿಜ್ಞಾನಾತ್ಮಾ’ ಎಂದರೆ ಜ್ಞಾನಾನಂದಸ್ವರೂಪನಾದ ಪರಮಾತ್ಮ. ಇಲ್ಲಿ ಬಳಕೆಯಾದ ‘ಸಹ’ ಶಬ್ದ ಬಹಳ ವಿಶೇಷ ಅರ್ಥವನ್ನು ಕೊಡುತ್ತದೆ. ಇದು ಎಲ್ಲಾ ದೇವತಗಳೊಂದಿಗೆ ಎನ್ನುವ ಅರ್ಥದೊಂದಿಗೆ ದೋಷರಹಿತ ಮತ್ತು ಗುಣಸ್ವರೂಪ ಭಗವಂತ ಎನ್ನುವ ಅರ್ಥವನ್ನೂ ಕೊಡುತ್ತದೆ. [ಎಲ್ಲಾ ಗುಣಗಳ ಸಾರ ಸ್ವರೂಪನಾದ ಭಾಗವತ ಸ-ಕಾರ ವಾಚ್ಯ; ಎಲ್ಲಾ ದೋಷಗಳ ಹಾನ ಹ-ಕಾರ ವಾಚ್ಯ]
ಈ ಹಿಂದೆ ಹೇಳಿದ ತತ್ತ್ವಗಳು ಮತ್ತು ತತ್ತ್ವಾಭಿಮಾನಿ ದೇವತೆಗಳು ಯಾವ ಭಗವಂತನಲ್ಲಿ  ಆಶ್ರಿತವಾಗಿರುತ್ತವೋ, ಅವನು ಎಲ್ಲಾ ಕಾಲ ದೇಶದಲ್ಲಿ ತುಂಬಿರುವವನು. ಆತ ಸರ್ವಗುಣಪೂರ್ಣ; ಎಲ್ಲವನ್ನೂ ಸೃಷ್ಟಿ ಮಾಡುವವನು ಆತ; ಸರ್ವಾಭೀಷ್ಟವನ್ನು ಕೊಡುವವನು ಆ ಭಗವಂತ. ಅಂತಹ  ಸರ್ವಶಬ್ದವಾಚ್ಯನಾದ ಭಗವಂತನ ಅರಿವು ಪಡೆದು(ಸೋಮ್ಯ) ಯಾರು ಪ್ರತ್ಯಕ್ಷ ಅನುಭವಿಸುತ್ತಾರೋ ಅವರು ಸರ್ವಶಕ್ತನಾದ ಭಗವಂತನನ್ನು ತಿಳಿಯುತ್ತಾರೆ ಮತ್ತು ಸರ್ವಶಕ್ತನಾದ ಭಗವಂತನನ್ನು ಮೋಕ್ಷದಲ್ಲಿ ಹೋಗಿ ಸೇರುತ್ತಾರೆ.

ಇತಿ ಪ್ರಶ್ನೋಪನಿಷದಿ ಚತುರ್ಥಃ ಪ್ರಶ್ನಃ
ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ನಾಲ್ಕನೇ ಪ್ರಶ್ನೆ/ಅಧ್ಯಾಯ ಮುಗಿಯಿತು.
*******

No comments:

Post a Comment