ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Monday, November 26, 2012

Prashnopanishad in Kannada-Prashna-V (05-06)


ಯಃ ಪುನರೇತಂ ತ್ರಿಮಾತ್ರೇಣೋಮಿತ್ಯೇತೇನೈವಾಕ್ಷರೇಣ ಪರಂ ಪುರುಷಮಭಿಧ್ಯಾಯೀತ ಸ ತೇಜಸಿ ಸೂರ್ಯೇ ಸಂಪನ್ನೋ ಯಥಾ ಪಾದೋದರಸ್ತ್ವಚ ವಿನಿರ್ಮುಚ್ಯತೇ ಏವಂ ಹ ವೈ ಸ ಪಾಪ್ಮನಾ ವಿನಿರ್ಮುಕ್ತಃ ಸ ಸಾಮಭಿರುನ್ನೀಯತೇ ಬ್ರಹ್ಮಲೋಕಮ್ 

ಮೇಲೆ ವಿವರಿಸಿದಂತೆ ತ್ರಿಮಾತ್ರೆ ಉಪಾಸನೆ ಅಂದರೆ ‘ಮ’ ಕಾರದ ಉಪಾಸನೆ; ನಾದ ಅಥವಾ ಸಂಗೀತದಿಂದ ಭಗವಂತನ ಉಪಾಸನೆ; ಸಾಮವೇದದಿಂದ ಭಗವಂತನ ಉಪಾಸನೆ. ಈ ಪ್ರಪಂಚದಲ್ಲಿರುವ ಎಲ್ಲಾ ನಾದಗಳೂ, ಎಲ್ಲಾ  ಭಾಷೆಗಳೂ, ಭಗವಂತನನ್ನೇ ಹೇಳುತ್ತವೆ. ಪಕ್ಷಿಗಳ ಚಿಲಿಪಿಲಿ, ಪ್ರಾಣಿಗಳ ಕೂಗು, ನೀರಿನ ಝುಳು-ಝುಳು, ಸಮುದ್ರದ ಮೊರೆತ, ಗಾಳಿಯ ಸುಯಿಲು, ಎಲೆಗಳ ಮರ್ಮರ, ಎಲ್ಲಾ ಸಮಸ್ತ ನಾದದಲ್ಲೂ ಭಗವಂತನನ್ನು ಕಂಡು ಉಪಾಸನೆ ಮಾಡುವುದು ತ್ರಿಮಾತ್ರೆಯ ಉಪಾಸನೆ.
ಋಗ್ವೇದದ ಮಂತ್ರಗಳಲ್ಲಿ ಬರುವ ಶಬ್ದಗಳನ್ನು ಒಡೆದು, ಅದರಲ್ಲಿ ನಾದವನ್ನು ತುಂಬಿ, ನಾದದ ಅರ್ಥವನ್ನು ಹುಡುಕತಕ್ಕ ಉಪಾಸನೆ ಸಾಮವೇದದ ಉಪಾಸನೆ. ಉದಾಹರಣೆಗೆ: ಋಗ್ವೇದದಲ್ಲಿ ಅಗ್ನಿಮೀಳೇ... ಎಂದು ಹೇಳಿದರೆ, ಸಾಮವೇದದಲ್ಲಿ ಅಗ್ನಿ ಪದವನ್ನು ಒಡೆದು “ಅಗ್ನಆಯಾಹೀ” ಎಂದು ನಾದ ತುಂಬಿ ಹೇಳುತ್ತಾರೆ.  ಇದು ಸಂಗೀತದ ಉಪಾಸನೆ.
ಒಂದು ಕಡೆ ಯಾಜ್ಞವಲ್ಕ್ಯರು ಹೇಳುತ್ತಾರೆ: “ವೀಣಾವಾದನ ತತ್ತ್ವಜ್ಞಃ ಪರಮ್ ಬ್ರಹ್ಮಾದಿಗಚ್ಛತಿ” ಎಂದು. ಅಂದರೆ “ವೀಣೆ ಬಾರಿಸಲು ಬಂದರೆ ಭಗವಂತನನ್ನು ಕಾಣುವುದು ಸುಲಭ” ಎಂದರ್ಥ!  ಏಕೆಂದರೆ ವೀಣೆ ಬಾರಿಸಲು ನಾದ ಜ್ಞಾನ ಬೇಕು. ಶ್ರುತಿ, ಲಯದ ಜೊತೆಗೆ ತನ್ಮಯತೆ, ಏಕಾಗ್ರತೆ  ಬೇಕು. ಅದು ಬಂದರೆ ಭಗವಂತನನ್ನು ತಿಳಿಯುವುದು ಸುಲಭ. ನಾದದ ಬಗ್ಗೆ ಹಿಂದಿನ ವೈದಿಕ ಪರಂಪರೆಯಲ್ಲಿ ಅಪಾರ ಕಾಳಜಿ ಇತ್ತು. ವೀಣಾವಾದನ ತಿಳಿದವರು ವೇದವನ್ನು ಸ್ಪಷ್ಟವಾಗಿ ಶ್ರುತಿಬದ್ಧವಾಗಿ ಹೇಳಬಲ್ಲರು. ತ್ರಿಮಾತ್ರೆ ಉಪಾಸನೆ ಅಂದರೆ ಮಂತ್ರಗಳನ್ನು, ಪದಗಳನ್ನು, ಅಕ್ಷರಗಳನ್ನು ಮತ್ತು ನಾದವನ್ನೂ ಕೂಡಾ ಭಗವಂತನಪರ ಮಾಡುವಂತಹ ‘ಮ’-ಕಾರ ವಾಚ್ಯ ಭಗವಂತನ ಉಪಾಸನೆ.  ಇದು ನಿದ್ರೆಯಲ್ಲೂ ಕೂಡಾ ಭಗವಂತ ನಮಗೆ ಆನಂದವನ್ನಿತ್ತು  ರಕ್ಷಿಸುತ್ತಾನೆ ಎನ್ನುವ ಉಪಾಸನೆ.
ಈ ಹಿಂದೆ ಹೇಳಿದಂತೆ ಮ-ಕಾರ ನರಸಿಂಹ ರೂಪದಲ್ಲಿ ಪ್ರತಿಪಾದ್ಯನಾದ ಭಗವಂತನನ್ನು ಹೇಳುತ್ತದೆ. ಇದು ದುಷ್ಟರನ್ನು ನಿರ್ನಾಮ ಮಾಡತಕ್ಕ ಮಹಾಶಕ್ತಿ. ನಮ್ಮೆಲ್ಲಾ ದೋಷಗಳನ್ನು ಕಳೆದುಕೊಂಡು, ಪುಟಕ್ಕಿಟ್ಟ ಚಿನ್ನದಂತೆ ಅಪ್ಪಟ ಬಂಗಾರವಾಗುವುದು ‘ಮ’ಕಾರ ಉಪಾಸನೆಯಿಂದ. ಈ ರೀತಿ ಒಳಗೂ ಹೊರಗೂ ಮ-ಕಾರದಿಂದ ಓಂಕಾರ ವಾಚ್ಯನಾದ ಭಗವಂತನನ್ನು ಉಪಾಸನೆ ಮಾಡಿದರೆ, ಸೂರ್ಯಲೋಕವನ್ನು ಸೇರಿ, ಅಲ್ಲಿಂದ ಭಗವಂತನೆಂಬ ಮಹಾಜ್ಯೋತಿಕಡೆಗೆ ನಾವು ಸಾಗಬಹುದು. ಇಲ್ಲಿ ಸೂರ್ಯಲೋಕ ಎಂದರೆ ನಮಗೆ ಕಾಣುವ  ಸೂರ್ಯಗ್ರಹವಲ್ಲ. ಇದು ದೇವತೆಗಳಿರುವ ಸೂಕ್ಷ್ಮಲೋಕ. ಇಲ್ಲಿ ನಾವು ಹಾವು ತನ್ನ ಪೋರೆಯನ್ನು ಕಳಚಿಕೊಂಡಂತೆ ನಮ್ಮೆಲ್ಲಾ ಪಾಪಗಳನ್ನು ಕಳಚಿಕೊಂಡು, ಪರಿಶುದ್ಧರಾಗುತ್ತೇವೆ. ಇಲ್ಲಿಂದ ಸಾಮವೇದದ ಮಂತ್ರಾಭಿಮಾನಿ ದೇವತೆಗಳು ಜೀವನನ್ನು ಸತ್ಯಲೋಕಕ್ಕೆ ಕೊಂಡೊಯ್ಯುತ್ತಾರೆ. ಇದು ಈ ವಿಶ್ವದಲ್ಲಿರುವ ಲೋಕಗಳಲ್ಲೆಲ್ಲಾ ಅತ್ಯುನ್ನತವಾದ ಲೋಕ. ಇಲ್ಲಿಗೆ ತಲುಪಿದ ಜೀವ ಎಂದೂ ಮರಳಿ ಭೂಲೋಕದಲ್ಲಿ ಹುಟ್ಟುವುದಿಲ್ಲ.

ಸ ಏತಸ್ಮಾಜ್ಜೀವಘನಾತ್ ಪರಾತ್ಪರಂ ಪುರಿಶಯಂ ಪುರುಷಮೀಕ್ಷತೇ

ತ್ರಿಮಾತ್ರೆ ಉಪಾಸನೆಯ ಫಲವಾಗಿ ಸತ್ಯಲೋಕವನ್ನು ಸೇರಿದ ಜೀವ, ಸತ್ಯಲೋಕದಲ್ಲಿ, ಜೀವಕಲಾಭಿಮಾನಿಯಾದ  ಚತುರ್ಮುಖನ ಉಪದೇಶ ಪಡೆದು, ತನ್ನ ಲಿಂಗಶರೀರವನ್ನೂ ಕಳಚಿಕೊಂಡು, ಸಾಕ್ಷಾತ್ ಭಗವಂತನನ್ನು ಕಾಣುತ್ತಾನೆ ಮತ್ತು ಚತುರ್ಮುಖನೊಂದಿಗೆ ಮೋಕ್ಷವನ್ನು ಸೇರುತ್ತಾನೆ.  [ಇಲ್ಲಿ ಭಗವಂತನನ್ನು ‘ಪರಿಶಯ’ ಎಂದಿದ್ದಾರೆ. ಪರಿಶಯ ಎಂದರೆ ನಮ್ಮ ಹೃದಯವೆಂಬ ಪುರದಲ್ಲಿರುವ ಭಗವಂತ ಎಂದರ್ಥ].   

No comments:

Post a Comment