ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Friday, November 2, 2012

Prashnopanishad in Kannada-Prashna-III (09-12)


ತೇಜೋ ಹವಾ ಉದಾನಃ ತಸ್ಮಾದುಪಶಾಂತತೇಜಾಃ   ಪುನರ್ಭವಮಿಂದ್ರಿಯೈರ್ಮನಸಿ ಸಂಪಧ್ಯಮಾನೈರ್ಯಚ್ಚಿತ್ತಸ್ತೇನೈಷ ಪ್ರಾಣ ಆಯತಿ  
ಪ್ರಾಣಸ್ತೇಜಸಾ ಯುಕ್ತಃ ಸ ಹಾSತ್ಮನಾ ಯಥಾಸಂಕಲ್ಪಿತಂ ಲೋಕಂ ನಯತಿ   ೧೦

 ಈ ಹಿಂದೆ ವಿವರಿಸಿದಂತೆ: ‘ಉದಾನ’ ಜೀವನನ್ನು  ದೇಹದಲ್ಲಿನ ಯಾವುದೋ ಒಂದು ನಾಡಿಯ ಮುಖೇನ ದೇಹದಿಂದ ಹೊರ ಕರೆದುಕೊಂಡು ಹೋಗುತ್ತಾನೆ. ಪ್ರಾಣದೇವರು ಜೀವನೊಂದಿಗೆ ದೇಹವನ್ನು ಬಿಟ್ಟ ತಕ್ಷಣ, ದೇಹ ಶವವಾಗುತ್ತದೆ ಮತ್ತು ತಣ್ಣಗಾಗುತ್ತದೆ. ಹೇಗೆ ನಮ್ಮ ದೇಹದ ಒಳಗೆ ಪ್ರಾಣಾಗ್ನಿಯಾಗಿ ತೇಜಸ್ಸಿನ ದೇವತೆ ‘ಉದಾನ’ ಸನ್ನಿಹಿತನಾಗಿದ್ದಾನೋ, ಹಾಗೇ ದೇಹದ ಹೊರಗೆ ಪಂಚಭೂತಗಳಲ್ಲಿ ‘ಉದಾನ’ ನಾಮಕ ಪ್ರಾಣ ಅಗ್ನಿಯಲ್ಲಿ ಸನ್ನಿಹಿತನಾಗಿದ್ದಾನೆ.
ಹೀಗೆ ಸಮಸ್ತ ಬ್ರಹ್ಮಾಂಡ ಮತ್ತು ಪಿಂಡಾಂಡದಲ್ಲಿರುವ ಒಂದೊಂದು ಶಕ್ತಿಯ ಹಿಂದಿರುವ ಮೂಲಶಕ್ತಿ ಪ್ರಾಣದೇವರು. ಪ್ರಪಂಚದಲ್ಲಿ ಪ್ರಾಣದೇವರ ಪ್ರವೇಶವಿಲ್ಲದೇ ಒಂದು ಹುಲ್ಲುಕಡ್ಡಿಗೂ ಅಸ್ತಿತ್ವವಿಲ್ಲ. ಇಡೀ ಬ್ರಹ್ಮಾಂಡದಲ್ಲಿ ಪಂಚಭೂತಗಳ ಒಳಗೆ, ಪಂಚೇಂದ್ರಿಯದ ಒಳಗೆ, ಪಂಚಪ್ರಾಣನಾಗಿ ತುಂಬಿ, ಇಡೀ ಪ್ರಪಂಚವನ್ನು ನಿಯಂತ್ರಿಸುವ ಈ ಪಂಚಪ್ರಾಣರ ಮಹಿಮೆಯೇ ಇಷ್ಟಿರುವಾಗ, ಇನ್ನು  ಈ ಪ್ರಾಣದೇವರನ್ನೂ ನಿಯಂತ್ರಿಸುವ ಭಗವಂತನ ಮಹಿಮೆ ಅದೆಷ್ಟಿರಬಹುದು? ಅದು ನಮ್ಮ ಮನಸ್ಸು ಗ್ರಹಿಸಲು ಅಸಾಧ್ಯವಾದ ಅಗಣಿತ ಶಕ್ತಿ!
ದೇಹದಿಂದ ಜೀವನನ್ನು ಆಚೆ ಕರೆದುಕೊಂಡು ಹೋಗುವ ಪ್ರಾಣದೇವರು, ಆ ಜೀವದ ಮುಂದಿನ ಗತಿಯನ್ನು ಜೀವದ ಕರ್ಮಕ್ಕನುಸಾರವಾಗಿ ನಿರ್ಧರಿಸುತ್ತಾರೆ. ಜೀವಕ್ಕೆ ಮರುಹುಟ್ಟು ತಕ್ಷಣ ಆಗಬಹುದು ಅಥವಾ ಸೂಕ್ಷ್ಮಲೋಕದಲ್ಲಿ ಸುಖವನ್ನೋ ಅಥವಾ ದುಃಖವನ್ನೋ ಅನುಭವಿಸಿದ ನಂತರ ಆಗಬಹುದು. ಜೀವ ದೇಹವನ್ನು ಬಿಟ್ಟು ಹೊರ ಹೋದಾಗ, ಆ ಜೀವಕ್ಕೆ ಸಂಬಂಧಿಸಿದ ಚಕ್ಷುರಾದಿ ಇಂದ್ರಿಯಗಳು  ಮನಸ್ಸಿನ ಜೊತೆಗೆ ಜೀವದ ಸೂಕ್ಷ್ಮ ಶರೀರದೊಂದಿಗಿರುತ್ತವೆ.
ಮೂಲತಃ ಎಲ್ಲಾ ಇಂದ್ರಿಯಗಳು ಇರುವುದು ಸೂಕ್ಷ್ಮ ಶರೀರದಲ್ಲೇ. ಸ್ಥೂಲ ಶರೀರದ ಭೌತಿಕ ಇಂದ್ರಿಯ ಕೆಲಸ ಮಾಡದೇ ಇರಬಹುದು, ಆದರೆ ಸೂಕ್ಷ್ಮ ಶರೀರದಲ್ಲಿನ ಎಲ್ಲಾ ಇಂದ್ರಿಯಗಳು ಸುಸೂತ್ರವಾಗಿರುತ್ತವೆ. ಆದ್ದರಿಂದ ಒಬ್ಬ ವ್ಯಕ್ತಿ ಕುರುಡನಾಗಿದ್ದರೆ, ಆತನ ಸೂಕ್ಷ್ಮ ಶರೀರದ ಇಂದ್ರಿಯ ಕುರುಡಾಗಿರುವುದಿಲ್ಲ. [ಈ ಕುರಿತು ಕೆಲವು ನೈಜ ಘಟನೆಗಳನ್ನೊಳಗೊಂಡ ವಿಷಯವನ್ನು ನಾವು Raymond moody ಬರೆದಿರುವ Life after life  ಎನ್ನುವ ಪುಸ್ತಕದಲ್ಲಿ ಕಾಣಬಹುದು]. ಜೀವ ಮರುಹುಟ್ಟು ಪಡೆದಾಗ ಇದೇ ಇಂದ್ರಿಯಗಳೊಂದಿಗೆ ಮರಳಿ ಹುಟ್ಟುತ್ತಾನೆ.
ಜೀವದ ಮರುಜನ್ಮಕ್ಕೆ ನಿರ್ಣಾಯಕ ‘ದೇಹತ್ಯಾಗ ಮಾಡುವ ಕೊನೇ ಕ್ಷಣದಲ್ಲಿ ಜೀವ ಮಾಡುವ ಚಿಂತನೆ’. ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ: ಯಂ ಯಂ ವಾSಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಳೇಬರಮ್ । ತನ್ತಮೇವೈತಿ ಕೌಂತೇಯ ಸದಾ ತದ್ ಭಾವಭಾವಿತಃ  ॥ಭಗವದ್ಗೀತಾ-೮-೬॥ ಕೃಷ್ಣ ಹೇಳುತ್ತಾನೆ: “ಕೊನೆಯಲ್ಲಿ ಯಾವ ಯಾವ ವಿಷಯವನ್ನು ನೆನೆಯುತ್ತಾ ದೇಹವನ್ನು ತೊರೆಯುತ್ತಾನೋ, ಅದರಲ್ಲೇ ಅನುಗಾಲ ಬೇರೂರಿದ ಸಂಸ್ಕಾರದಿಂದ ಅದನ್ನೆ ಪಡೆಯುತ್ತಾನೆ” ಎಂದು. [ಇದಕ್ಕೆ ಉತ್ತಮ ದೃಷ್ಟಾಂತ ಭರತ ಚಕ್ರವರ್ತಿ ಜಿಂಕೆಯಾಗಿ ಹುಟ್ಟುವ ಕಥೆ (ಭಾಗವತ-೫-೮)]. ಇಲ್ಲಿ ಪಿಪ್ಪಲಾದರು ಇದನ್ನೇ ‘ಯಚ್ಚಿತ್ತಃ’ ಎಂದು ವಿವರಿಸಿದ್ದಾರೆ. ಪ್ರಾಣದೇವರು ಜೀವದ ಕೊನೇ ಕ್ಷಣದ ಇಚ್ಛೆಗನುಗುಣವಾಗಿ ಮತ್ತು ಜೀವದ ಕರ್ಮಕ್ಕನುಗುಣವಾಗಿ, ಆ ಜೀವ ಎಲ್ಲಿ ಮರಳಿ ಹುಟ್ಟಬೇಕೋ ಅಲ್ಲಿಗೆ ಕರೆದುಕೊಂಡು ಹೋಗಿ ಹುಟ್ಟಿಸುತ್ತಾರೆ.[ಇಲ್ಲಿ ಎಲ್ಲವೂ ಪರಾಬ್ಧ ಕರ್ಮಕ್ಕನುಗುಣವಾಗಿ ಭಗವಂತನ ಇಚ್ಛೆಯಂತೆಯೇ ನಡೆಯುತ್ತದೆ. ಚಿತ್ತದ ದೇವತೆ ಕೂಡಾ ಪ್ರಾಣನಾಗಿರುವುದರಿಂದ ಜೀವದ ಕೊನೇ ಇಚ್ಛೆ ಕೂಡಾ ಪ್ರಾಣದೇವರ ಅಧೀನ!]
ಇಲ್ಲಿಯ ತನಕ ಪಿಪ್ಪಲಾದರು ಒಂದು ಅದ್ಭುತವಾದ ಪ್ರಾಣತತ್ತ್ವದ ಮಹಿಮೆಯನ್ನು ವಿವರಿಸಿದರು. ಈ ಪ್ರಾಣತತ್ತ್ವದ ಮಹತ್ವವನ್ನು ನಾವೆಲ್ಲರೂ ಎಲ್ಲಾ ಸಮಯದಲ್ಲೂ ತಿಳಿದಿರಬೇಕು. ಉದಾಹರಣೆಗೆ ನಾವು ದೇವಸ್ಥಾನಕ್ಕೆ ಹೋಗುತ್ತೇವೆ, ಅಥವಾ ಮನೆಯಲ್ಲಿ ಪ್ರಾಣದೇವರ ಉಪಾಸನೆ ಮಾಡುತ್ತೇವೆ. ಈ ರೀತಿ ಪೂಜೆ ಮಾಡುವಾಗ ನಮಗೆ ಪ್ರಾಣದೇವರ ಈ ಮಹಿಮೆಯ ಎಚ್ಚರ ಇರಬೇಕು. ತಿಳಿದು ಉಪಾಸನೆ ಮಾಡಿದಾಗ ಅಲ್ಲಿ ಸಿಗುವ ಆನಂದ ಅಪರಂಪಾರವಾದುದು. ಆ ಆನಂದವನ್ನು ವಿವರಿಸಲು ಸಾಧ್ಯವಿಲ್ಲ, ಕೇವಲ ಅನುಭವಿಸಬೇಕು!  ಇಲ್ಲಿ ಮುಂದುವರಿದು  ಪಿಪ್ಪಲಾದರು ಪ್ರಾಣದೇವರ ಬಗಿಗಿನ ಈ ಜ್ಞಾನವನ್ನು ಅರಿತು ಉಪಾಸನೆ ಮಾಡುವುದರ ಫಲಶ್ರುತಿಯನ್ನು ವಿವರಿಸುತ್ತಾರೆ.

ಯ ಏವಂ ವಿದ್ವಾನ್ ಪ್ರಾಣಂ ವೇದ ನ ಹಾಸ್ಯ ಪ್ರಜಾ ಹೀಯತೇಽಮೃತೋ ಭವತಿ   ೧೧

ಪ್ರಾಣದೇವರು ಒಳಗಿನಿಂದ ಪಂಚಪ್ರಾಣರಾಗಿದ್ದಾರೆ; ಹೊರಗೆ ಪಂಚಭೂತಗಳಲ್ಲಿದ್ದಾರೆ; ಸೂರ್ಯನಲ್ಲಿದ್ದಾರೆ; ಇಂದ್ರಿಯಗಳಲ್ಲಿದ್ದಾರೆ; ಹುಟ್ಟು-ಸಾವುಗಳಲ್ಲಿದ್ದಾರೆ; ಪಂಚಕೋಶಗಳಲ್ಲಿ ತುಂಬಿ ನಮ್ಮನ್ನು ನಡೆಸುತ್ತಿದ್ದಾರೆ; ನಮ್ಮ ಬದುಕಿನ ಒಂದೊಂದು ಕ್ಷಣವೂ ಪ್ರಾಣದೇವರಿಂದ ನಿಯಂತ್ರಿಸಲ್ಪಡುತ್ತದೆ-  ಎಂದು ತಿಳಿದು ಯಾರು ಉಪಾಸನೆ ಮಾಡುತ್ತಾರೋ: ಅವರು ಜೀವನದಲ್ಲಿ ಎಂದೂ ದುರಂತವನ್ನು[ಚಿಕ್ಕವರು ತಮ್ಮ ಕಣ್ಣ ಮುಂದೆ ಸಾಯುವ ದುರಂತ] ಕಾಣುವುದಿಲ್ಲ; ಅವರ ಬುದ್ಧಿಶಕ್ತಿ ಎಂದೂ ಕುಂದುವುದಿಲ್ಲ; ಅವರು ಬುದ್ಧಿವಂತ ಜ್ಞಾನಿಯಾಗಿ ಬೆಳೆಯುತ್ತಾರೆ; ಬಂದ ಜ್ಞಾನ ಅವರಲ್ಲಿ ಕೊನೇ ತನಕ ಸ್ಮರಣಶಕ್ತಿಯಾಗಿ ಉಳಿಯುತ್ತದೆ. ಮುಖ್ಯವಾಗಿ ಪ್ರಾಣದೇವರ ಉಪಾಸನೆ ಮಾಡುವುದರಿಂದ ಅವರು ಸಂಸಾರದಿಂದ ಪಾರಾಗಿ, ಶಾಶ್ವತವಾಗಿ ಮೋಕ್ಷದಲ್ಲಿ ಭಗವಂತನನ್ನು ಸೇರುತ್ತಾರೆ.
ಮೋಕ್ಷ ಸಾಧನೆಯಲ್ಲಿ ಅತ್ಯಂತ ಶ್ರೇಷ್ಠ ಸಾಧನೆ –ಭಗವಂತನನ್ನು ಪ್ರಾಣದೇವರ ಮೂಲಕ ಉಪಾಸನೆ ಮಾಡುವುದು. ಇದನ್ನೇ  ವೇದದಲ್ಲಿ ಈ ರೀತಿ ಹೇಳಲಾಗಿದೆ ಎಂದು ಪಿಪ್ಪಲಾದರು ವೇದದ ಒಂದು ಮಂತ್ರವನ್ನು ಉಲ್ಲೇಖಿಸುತ್ತಾರೆ:

ತದೇಷ ಶ್ಲೋಕಃ -
ಉತ್ಪತ್ತಿಮಾಗತಿಂ ಸ್ಥಾನಂ ವಿಭುತ್ವಂ ಚೈವ ಪಂಚಧಾ
ಅಧ್ಯಾತ್ಮಂ ಚೈವ ಪ್ರಾಣಸ್ಯ ವಿಜ್ಞಾಯಾಮೃತಮಶ್ನುತೇ ವಿಜ್ಞಾಯಾಮೃತಮಶ್ನುತ ಇತಿ ೧೨

ನಾವು ತಿಳಿಯಬೇಕಾದುದು: ಪ್ರಾಣದೇವರ ಹುಟ್ಟಿನ ಮಹಿಮೆಯನ್ನು; ಇಡೀ ವಿಶ್ವದಲ್ಲಿ ತುಂಬಿರುವ ಪ್ರಾಣಶಕ್ತಿಯ ಮಹಿಮೆಯನ್ನು; ಪಂಚಭೂತಗಳಲ್ಲಿ ಮತ್ತು ಪಂಚಪ್ರಾಣರಾಗಿ ನಮ್ಮ ದೇಹದಲ್ಲಿ ತುಂಬಿರುವ ಅವರ ಮಹಿಮೆಯನ್ನು. ನಾವು ಬ್ರಹ್ಮಾಂಡ ಮತ್ತು ಪಿಂಡಾಂಡದಲ್ಲಿ ಪ್ರಾಣದೇವರ ವೈಭವವನ್ನು ಅರಿತಿರಬೇಕು. ಇದನ್ನೆಲ್ಲವನ್ನು ತಿಳಿದರೆ ಮಾತ್ರ ಭಗವಂತನನ್ನು ಕಾಣಲು ಸಾಧ್ಯ. ಪ್ರಾಣದೇವರನ್ನು ತಿಳಿಯದೇ ಭಗವಂತನನ್ನು ತಿಳಿಯಲು ಸಾಧ್ಯವಿಲ್ಲ.
ಇಲ್ಲಿ ಬಳಕೆಯಾದ ‘ಚ’-ಕಾರ ಅಧ್ಯಾತ್ಮದಲ್ಲಿ ಪ್ರಾಣದೇವರ ಮಹಿಮೆ ಅತ್ಯಂತ ಮುಖ್ಯವಾದುದು ಎನ್ನುವುದನ್ನು ಸೂಚಿಸುತ್ತದೆ. ಅದೇ ರೀತಿ ನಾವು ಅಧ್ಯಾತ್ಮದಲ್ಲಿ ಪ್ರಾಣದೇವರ ಮಹಿಮೆಯನ್ನು ತಿಳಿದಿರಲೇಬೇಕು ಎನ್ನುವುದನ್ನು ‘ಏವ’-ಕಾರ ಸೂಚಿಸುತ್ತದೆ. ಪ್ರಾಣದೇವರ ಈ ಮಹಿಮೆಯನ್ನು ಅರಿತವನು ಸಾವಿಲ್ಲದ, ಆನಂದಮಯವಾದ ಮೋಕ್ಷವನ್ನು ಸೇರುತ್ತಾನೆ ಎನ್ನುತ್ತದೆ ವೇದ.
ಇಲ್ಲಿ ಕೊನೆಯಲ್ಲಿ ‘ವಿಜ್ಞಾಯಾಮೃತಮಶ್ನುತ’ ಎನ್ನುವ ಪದವನ್ನು ಎರಡು ಬಾರಿ ಬಳಸಲಾಗಿದೆ. ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅಧ್ಯಾಯ ಮುಗಿಯಿತು ಎನ್ನುವುದನ್ನು ಸೂಚಿಸಲು ಈ ರೀತಿ ಕೊನೆಯಲ್ಲಿ ಒಂದು ಪದವನ್ನು ಎರಡು ಬಾರಿ ಬಳಸುತ್ತಾರೆ. ಅದೇ ರೀತಿ  ಇಲ್ಲಿ ಬಳಸಲಾದ ‘ಇತಿ’ ಎನ್ನುವ ಪದ ಇಲ್ಲಿಗೆ ಮೂರನೇ ಪ್ರಶ್ನೆಗೆ ಉತ್ತರರೂಪವಾದ ಗ್ರಂಥ ಸಮಾಪ್ತಿಯಾಯಿತು ಎನ್ನುವುದನ್ನು ಸೂಚಿಸುತ್ತದೆ.

ಇತಿ ಪ್ರಶ್ನೋಪನಿಷದಿ ತೃತೀಯಃ ಪ್ರಶ್ನಃ
ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ಮೂರನೇ ಪ್ರಶ್ನೆ/ಅಧ್ಯಾಯ ಮುಗಿಯಿತು.

*******

No comments:

Post a Comment