ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Saturday, November 3, 2012

Prashnopanishad in Kannada-Prashna-IV (03-04)


ಪ್ರಾಣಾಗ್ರಯ ಏವೈತಸ್ಮಿನ್ ಪುರೇ ಜಾಗ್ರತಿ ಗಾರ್ಹಪತ್ಯೋ ಹವಾ ಏಷೋಽಪಾನೋ ವ್ಯಾನೋಽನ್ವಾಹಾರ್ಯಪಚನೋ ಯದ್ ಗಾರ್ಹಪತ್ಯಾತ್ ಪ್ರಣೀಯತೇ ಪ್ರಣಯನಾದಾಹವನೀಯಃ ಪ್ರಾಣಃ

ನಾವು ಗಾಢ ನಿದ್ದೆ ಮಾಡಿದಾಗಲೂ ಎಚ್ಚರವಾಗಿದ್ದು ಕಾರ್ಯ ನಿರ್ವಹಿಸುವವರು ‘ಪ್ರಾಣದೇವರು ಎನ್ನುವ ಬೆಂಕಿ’ ಎನ್ನುತ್ತಾರೆ ಪಿಪ್ಪಲಾದರು. ಪ್ರಾಣದೇವರು ಎಂದೂ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಆಯಾಸವಾದರೆ ಮಾತ್ರ ವಿಶ್ರಾಂತಿಯ ಅವಶ್ಯಕತೆ. ಆದರೆ ಪ್ರಾಣದೇವರಿಗೆ ಎಂದೂ ಆಯಾಸವಿಲ್ಲ. ಇದನ್ನು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಹೀಗೆ ವಿವರಿಸಿದ್ದಾರೆ: ನೈವಾತ್ರ ವಿಶ್ರಮಣಾಮೈಚ್ಛತ ನಿಃಶ್ರಮೋSಸೌ ನಿಃಸ್ಸೀಮಪೌರುಷಗುಣಸ್ಸ್ಯ ಕುತಃ ಶ್ರಮೋSಸ್ಯ ಆಶ್ಲಿಷ್ಯ ಪರ್ವತವರಂ ಸ ದದರ್ಶ ಗಚ್ಛನ್ ದೇವೈಸ್ತು ನಾಗಜನ ನೀಂ ಪ್ರಹಿತಾ ವರೇಣ ಮಹಾಭಾರತ ತಾತ್ಪರ್ಯ ನಿರ್ಣಯ ೭.೪  ಪ್ರಾಣದೇವರಿಗೆ ಆಯಾಸವೂ ಇಲ್ಲ, ವಿಶ್ರಾಂತಿಯೂ ಇಲ್ಲ. “ಪ್ರಳಯೇ ಅಪಿ ಪ್ರತಿಭಾತ ಪರಾ-ವರಾಹ”-ಅವರು ಪ್ರಳಯಕಾಲದಲ್ಲಿ ಕೂಡಾ ಎಚ್ಚರವಾಗಿದ್ದು, ಸದಾ ಭಗವಂತನನ್ನು ನೆನೆಯುತ್ತಿರುತ್ತಾರೆ.  ಹೀಗೆ ಪ್ರಾಣದೇವರು ಅನಾದಿ ಅನಂತ ಕಾಲದಲ್ಲಿ ವಿಶ್ರಾಂತಿ ಇಲ್ಲದೇ ಕಾರ್ಯಪ್ರವೃತ್ತರಾಗಿರುವ ತತ್ತ್ವ.
ಪ್ರಾಣ ಎಂದರೆ ಬೆಂಕಿ. ಅದು ಬೆಳಕು. ಜ್ಞಾನದ ಪುಂಜ. ದೇಹದಲ್ಲಿ ಪ್ರಾಣದೇವರ ಐದು ರೂಪಗಳು ಸದಾ ಎಚ್ಚರವಾಗಿರುತ್ತವೆ. ಪ್ರಾಣದೇವರು ದೇಹದ ಒಳಗೆ ಅಗ್ನಿಯ ಕಾರ್ಯವನ್ನು ಮಾಡುವುದರಿಂದ  ಅವರನ್ನು ಇಲ್ಲಿ ಅಗ್ನಿ ಎಂದು ಕರೆದಿದ್ದಾರೆ. [“ನಾನು ವೈಶ್ವಾನರ ಅಗ್ನಿಯಾಗಿ ದೇಹದಲ್ಲಿರುವಾಗ ನನಗೆ ಸಹಾಯಕರಾಗಿ ಪ್ರಾಣಾಪಾನರು ಕಾರ್ಯ ನಿರ್ವಹಿಸುತ್ತಾರೆ”  ಎಂದು ಕೃಷ್ಣ ಗೀತೆಯಲ್ಲಿ ಹೇಳಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.]
ಇಲ್ಲಿ ನಮಗೆ ಪಿಪ್ಪಲಾದರ ಮಾತು ಅರ್ಥವಾಗಬೇಕಾದರೆ, ನಮಗೆ ಪಂಚಾಗ್ನಿಯ ಪರಿಚಯವಿರಬೇಕಾಗುತ್ತದೆ. ಹಿಂದೆ ಯಜ್ಞ ಮಾಡುವಾಗ  ಐದು ಕುಂಡಗಳನ್ನು ಮಾಡಿ ಆರಾಧನೆ ಮಾಡುತ್ತಿದ್ದರು.  ಗಾರ್ಹಪತ್ಯ, ಆಹವನೀಯ, ದಕ್ಷಿಣಾಗ್ನಿ ಇವು ತ್ರೇತಾಗ್ನಿಗಳು. ಇದರೊಂದಿಗೆ ಸಭ್ಯ ಮತ್ತು ಆವಸಥ್ಯ ಎನ್ನುವ ಎರಡು ಉಪ ಅಗ್ನಿ ಸೇರಿದಾಗ ಅದು ಪಂಚಾಗ್ನಿ. ಗ್ರಹಸ್ಥರಾದವರು ಮನೆಯಲ್ಲಿ ತಪ್ಪದೇ ಅಗ್ನಿಹೋತ್ರ  ಮಾಡುವುದು ಹಿಂದಿನ ಕ್ರಮವಾಗಿತ್ತು.[ಹಿಂದಿನವರ ಅಗ್ನಿಕಾರ್ಯ ಉಪನಯನ ಆದ ತಕ್ಷಣ ಆರಂಭವಾಗುತ್ತಿತ್ತು. ಅವರು ಪ್ರಯಾಣ ಕಾಲದಲ್ಲಿ ಸಹ ಅಗ್ನಿ ಸಮೇತರಾಗಿ ಪ್ರಯಾಣಿಸುತ್ತಿದ್ದರು. ರಾಮಾಯಣದಲ್ಲಿ “ಕಾಡಿಗೆ ಹೋದ ಶ್ರೀರಾಮನನ್ನು ಮರಳಿ ಕರೆ ತರಲು ಎಲ್ಲಾ ಪುರುಷರು ಅಗ್ನಿಸಮೇತರಾಗಿ ಹೊರಟರು” ಎಂದು ವಾಲ್ಮೀಕಿ ಉಲ್ಲೇಖ ಮಾಡಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಸನ್ಯಾಸಿಗಳಿಗೆ ಅಗ್ನಿಕಾರ್ಯವಿಲ್ಲ. ಅವರು  ಅಗ್ನಿ ತ್ಯಾಗಿಗಳು. ಜ್ಞಾನಾಗ್ನಿಯೇ ಅವರ ಅಗ್ನಿ ]. ಮನೆಯಲ್ಲಿ ನಿತ್ಯಪೂಜೆಯ ಹೋಮಕ್ಕೆ ಬಳಸುವ ಅಗ್ನಿ ಗಾರ್ಹಪತ್ಯ. ಇದು ನಂದದೇ ನಿತ್ಯ ಉರಿಯುವ ಬೆಂಕಿ. ವಿಶೇಷಯಜ್ಞ ಮಾಡುವಾಗ ಗಾರ್ಹಪತ್ಯದಿಂದ ಪ್ರಜ್ವಲಿಸುವ ಬೆಂಕಿಯನ್ನು ತಂದು ಇನ್ನೊಂದು ಕುಂಡದಲ್ಲಿ ಅಗ್ನಿ ಸ್ಥಾಪನೆ ಮಾಡುತ್ತಾರೆ. ಅದನ್ನು ಆಹವನೀಯ ಎನ್ನುತ್ತಾರೆ. ಪ್ರತಿಯೊಂದು ಶುಭಕರ್ಮ ಮಾಡುವಾಗ ದೇವತೆಗಳ ಆರಾಧನೆಯ ಜೊತೆಗೆ ಪಿತೃಆರಾಧನೆ ಮಾಡಬೇಕು. ಅದಕ್ಕೆ ನಾಂದಿ ಅಥವಾ ನಾಂದಿಶ್ರಾದ್ಧ ಎಂದೂ ಕರೆಯುತ್ತಾರೆ. ಹಾಗಾಗಿ ಪ್ರತಿಯೊಂದು ಯಜ್ಞದಲ್ಲೂ ಕೂಡಾ ಪಿತೃದೇವತೆಗಳ ಆರಾಧನೆ ಮಾಡುವುದು ಕ್ರಮ. ಪಿತೃಗಳಿಗೆ ಆಹುತಿ ಕೊಡಲು ಗಾರ್ಹಪತ್ಯದಿಂದ ತುಂಡು ಬೆಂಕಿಯನ್ನು(ಕೆಂಡವನ್ನು) ತಂದು, ತೆಂಕುಬದಿಯ ಕುಂಡದಲ್ಲಿ ಅಗ್ನಿ ಸ್ಥಾಪನೆ ಮಾಡುತ್ತಾರೆ. ಅದನ್ನು ದಕ್ಷಿಣಾಗ್ನಿ ಎನ್ನುತ್ತಾರೆ. ಹೀಗೆ ಗಾರ್ಹಪತ್ಯ, ಆಹವನೀಯ, ದಕ್ಷಿಣಾಗ್ನಿ ಇವು ತ್ರೇತಾಗ್ನಿಗಳು.
ಪ್ರಾಣದೇವರು ಪಂಚರೂಪದಿಂದ ದೇಹವನ್ನು ರಕ್ಷಣೆ ಮಾಡುವ ಅಗ್ನಿ. ಆದ್ದರಿಂದ ಐದು ಪ್ರಾಣಾಗ್ನಿ ದೇಹದ ಒಳಗಾದರೆ ಐದು ಅಗ್ನಿ  (ಪಂಚಾಗ್ನಿ) ದೇಹದಿಂದ ಹೊರಗೆ. ನಮ್ಮ ಮೂಲಾಧಾರದಲ್ಲಿರುವ ಅಪಾನವಾಯು ಇಡೀ ದೇಹದ ವ್ಯವಸ್ಥೆಗೆ ಮೂಲಶಕ್ತಿ. ಆದ್ದರಿಂದ ಅವನೇ  ಗಾರ್ಹಪತ್ಯಾಗ್ನಿ. ಆತನ ನಂತರ ನಮ್ಮ ನರನಾಡಿಗಳಲ್ಲಿ ಹರಿದು ನಮ್ಮ ನೆತ್ತರನ್ನು ಶುದ್ಧಗೊಳಿಸುವ ವ್ಯಾನನೇ ದಕ್ಷಿಣಾಗ್ನಿ. [ದಕ್ಷಿಣಾಗ್ನಿಯನ್ನು ಗಾರ್ಹಪತ್ಯಾಗ್ನಿಯ ತುಂಡು ಬೆಂಕಿಯಿಂದ ಸ್ಥಾಪನೆ ಮಾಡುತ್ತಾರೆ. ವಿಭಜ್ಯ(ವಿ)+ಆನಯತಿ(ಆ)->ವ್ಯಾನಃ]. ನಮ್ಮ ಊರ್ಧ್ವಭಾಗದ ನಿಯಂತ್ರಣ ಮಾಡುವ ಪ್ರಾಣಃ ಆಹವನೀಯಾಗ್ನಿ.  [ಗಾರ್ಹಪತ್ಯದಿಂದ ಪ್ರಜ್ವಲಿಸುತ್ತಾ ತರಲ್ಪಡುವ ಆಹವನೀಯ  ಪ್ರಜ್ವಲಂ(ಪ್ರ)+ಆನಯತಿ(ಆ)->ಪ್ರಾಣಃ].
ಹಿಂದೆ ಹೇಳಿದಂತೆ ನಮ್ಮ ದೇಹದಲ್ಲಿ ಪ್ರಾಣಃ ಮುಖ್ಯವಾಗಿ ಮುಖದಲ್ಲಿನ ಇಂದ್ರಿಯ ನಿರ್ವಹಣೆ ಮಾಡುತ್ತಾನೆ. ನಮ್ಮ ದೇಹದಲ್ಲಿ  ಮುಖ್ಯವಾಗಿ ಎಲ್ಲಾ ವಿಷಯಗಳ ಹೋಮ ನಡೆಯುವುದು ಮುಖದಲ್ಲಿ. ಕಣ್ಣಿನಲ್ಲಿ-ರೂಪದಹೋಮ, ಕಿವಿಯಲ್ಲಿ-ಶಬ್ದದಹೋಮ, ಮೂಗಿನಲ್ಲಿ-ಗಂಧದಹೋಮ, ಬಾಯಿಯಲ್ಲಿ-ಅನ್ನದಹೋಮ. ಇದೇ ರೀತಿ ಬಾಹ್ಯ ಯಜ್ಞದಲ್ಲಿ ಆಹುತಿ ಕೊಡುವಂತಹ ಜ್ವಲನಶಕ್ತಿ ಇರುವುದು ಪ್ರಾಣನಿಗೆ. ಆದ್ದರಿಂದ ಪ್ರಧಾನ ಹೋಮ ನಡೆಯುವುದು ಆಹವನೀಯಾಗ್ನಿಯಲ್ಲಿ. ಹೀಗೆ ಇಲ್ಲಿ ಪಿಪ್ಪಲಾದರು ತ್ರೇತಾಗ್ನಿ ಮತ್ತು ಅದಕ್ಕೆ ಸಂಬಂಧಸಿದ ಅಂತರಂಗದ ಮುಖ್ಯಪ್ರಾಣ ದೇವರ ಮೂರು ರೂಪಗಳನ್ನು ವಿವರಿಸಿದರು. ಮುಂದೆ ಪಿಪ್ಪಲಾದರು ಮುಖ್ಯಪ್ರಾಣ ದೇವರ ಇನ್ನೆರಡು ರೂಪವನ್ನು ಭಿನ್ನ ಮುಖದಲ್ಲಿ ವಿವರಿಸುವುದನ್ನು ಕಾಣಬಹುದು.        

ಯದುಚ್ಛ್ವಾಸನಿಃ ಶ್ವಾಸಾವೇತಾವಾಹುತಿ ಸಮಂ ನಯತೀತಿ ಸ  ಸಮಾನೋ  ಮನೋ ಹ ವಾವ ಯಜಮಾನ  ಇಷ್ಟಫಲಮೇವೋದಾನಃ   ಸ ಏನಂ ಯಜಮಾನಮಹರಹರ್ಬ್ರಹ್ಮ ಗಮಯತಿ

ಉಚ್ಛ್ವಾಸ ಮತ್ತು ನಿಶ್ವಾಸ ಕೂಡಾ ಪ್ರಾಣದೇವರ ಎರಡು ಆಹುತಿ. ಈ ಆಹುತಿ ದೇಹದಲ್ಲಿರುವ ಸಮಸ್ತ ಅಂಗಾಂಗಗಳಿಗೂ ಅನ್ವಯಪಡುವುದರಿಂದ ಮತ್ತು ಅದನ್ನು ಪ್ರಾಣದೇವರು ಸಮವಾಗಿ ಹಂಚುವುದರಿಂದ, ಅವರಿಗೆ ಸಮಾನ ಎಂದು ಹೆಸರು. ಅಗ್ನಿಹೊತ್ರದಲ್ಲಿ ಅಗ್ನಿಯೇ ಸಮಾನನಾಗಿ ಕೆಲಸ ಮಾಡುವ ಒಂದು ವಿಧಾನವಿದೆ. ಇದನ್ನು ತಿಳಿಯಲು ನಾವು ಅಗ್ನಿಹೋತ್ರದ ಒಂದು ಅದ್ಭುತ ವಿಚಾರವನ್ನು ತಿಳಿದಿರಬೇಕು. ಬನ್ನಿ, ಅಗ್ನಿಹೊತ್ರದ ಷೋಡಶ ಕಲೆಗಳ ಕುರಿತು ತಿಳಿದು, ‘ಸಮಾನ’ ನಾಮಕ ಪ್ರಾಣದೇವರ ಕಾರ್ಯವ್ಯಾಪ್ತಿಯನ್ನರಿಯೋಣ.
ಅಗ್ನಿಹೊತ್ರದಲ್ಲಿ ಪ್ರಧಾನ ಆಹುತಿ ‘ಹಸುವಿನ ಹಾಲು’. ಇಲ್ಲಿ ಮನೆಯಲ್ಲಿ ಸಾಕಿದ ಹಸುವಿನ ಹಾಲನ್ನು ಕರೆದು ಕಾಯಿಸಿ ಅರ್ಪಣೆ ಮಾಡುತ್ತಾರೆ. ಈ ರೀತಿ ಅರ್ಪಣೆ ಮಾಡಲು ಒಟ್ಟು ಹದಿನಾರು ಹಂತಗಳನ್ನು ಅನುಸರಿಸಲಾಗುತ್ತದೆ ಮತ್ತು ಪ್ರತೀ ಹಂತಕ್ಕೂ ಒಬ್ಬ ದೇವತೆ ಇರುತ್ತಾನೆ. ಮೊದಲು ಹಾಲು ದನದ ಕೆಚ್ಚಲಿನಲ್ಲಿರುತ್ತದೆ. ಐತರೇಯ ಆರಣ್ಯಕದಲ್ಲಿ ಹೇಳುವಂತೆ ‘ರೌದ್ರಂ ಗವಿಸತ್’. ಕೆಚ್ಚಲಲ್ಲಿರುವ ಹಾಲಿಗೆ ರುದ್ರದೇವರು ದೇವತೆ. ನಂತರ ಹಾಲನ್ನು ಕರೆಯುವುದಕ್ಕಾಗಿ ಕರುವನ್ನು ಬಿಡುತ್ತೇವೆ. ಕೆಚ್ಚಲಿಗೆ ಕರು ಬಾಯಿ ಹಾಕುವಾಗ ಅದರ ದೇವತೆ ವಾಯು. ನಂತರ ಹಾಲು ಕರೆಯುವುದು; ಕೆಚ್ಚಲಿನಿಂದ ಪಾತ್ರೆಗೆ ಹಾಲು ಬೀಳುವ ಹಂತದ   ದೇವತೆ ಅಶ್ವಿನೀ ದೇವತೆಗಳು. ಆನಂತರ ಪಾತ್ರೆಯಲ್ಲಿ ಹಾಲು ತುಂಬುತ್ತದೆ. ‘ಸೌಮ್ಯಂ ದುಗ್ಧಂ’ – ಹಾಲುತುಂಬಿದ ಪಾತ್ರೆಯ ದೇವತೆ ಚಂದ್ರ. ಈ ಹಾಲನ್ನು ಒಲೆಯ ಮೇಲೆ ಇಟ್ಟೆವು; ಈ ಹಂತದ   ದೇವತೆ ವರುಣ. ಒಲೆಯ ಮೇಲಿಟ್ಟಿರುವ ಹಾಲು ಉಕ್ಕುತ್ತದೆ. ಉಕ್ಕುವ ಹಾಲಿನ ದೇವತೆ ಆದಿತ್ಯ(ಪೂಷಾ). ಹಾಲು ಉಕ್ಕಿ ಕೆಳಕ್ಕೆ ಹರಿಯಿತು; ಈ ಉಕ್ಕಿ ಹರಿಯುವ ಹಾಲಿನ ದೇವತೆ ಮರುತ್ತು. [ಹಾಲು ಉಕ್ಕಿ ಹರಿಯಬೇಕು, ಅದು ಪರಮ ಮಾಂಗಲಿಕ. ಇದಕ್ಕಾಗಿ ಗೃಹ ಪ್ರವೇಶಕಾಲದಲ್ಲಿ ಹಾಲನ್ನು ಉಕ್ಕಿಸುತ್ತಾರೆ]. ಹಾಲು ಉಕ್ಕಿದಮೇಲೆ ಬೆಂಕಿ ಕಡಿಮೆ ಮಾಡುತ್ತೇವೆ. ಆಗ ಹಾಲಿನ ಮೇಲೆ ಸಣ್ಣಸಣ್ಣ ಬಿಂದುಗಳು ಕಾಣಿಸಿಕೊಳ್ಳುತ್ತವೆ. ಈ ರೀತಿ ಚುಕ್ಕೆಬಿದ್ದ ಹಾಲಿಗೆ ದೇವತೆ ವಿಶ್ವೇದೇವತೆಗಳು. ಆ ನಂತರ ಚುಕ್ಕೆ ಹೋಗಿ ಕೆನೆ ಕಾಣಿಸಿಕೊಳ್ಳುತ್ತದೆ. ಕೆನೆ ಕಟ್ಟಿದ ಹಾಲಿಗೆ ಮಿತ್ರ ನಾಮಕ ಆದಿತ್ಯ ದೇವತೆ. ಇಂತಹ ಹಾಲನ್ನು ಒಲೆಯಿಂದ ಕೆಳಗಿಳಿಸುತ್ತೇವೆ. ಹೀಗೆ ಕೆಳಕ್ಕಿಟ್ಟ ಹಾಲಿಗೆ ದ್ಯಾವಾ-ಪ್ರಥ್ವೀ ದೇವತೆಗಳು. ಹಾಲು ತಣ್ಣಗಾದ ಮೇಲೆ ಅದನ್ನು ಎತ್ತಿಕೊಂಡು ಹೋಗುತ್ತೇವೆ. ಆ ಹಂತದಲ್ಲಿ ಸವಿತ್ರ ಅದರ ದೇವತೆ. ಈ ಹಾಲನ್ನು ಯಜ್ಞಶಾಲೆಯೊಳಗೆ ವಯ್ಯುತ್ತೇವೆ. ಆಗ ಸ್ವಯಂ ವಿಷ್ಣು ಅದರ ದೇವತೆ. ಇಂತಹ ಹಾಲನ್ನು ಪುರೋಹಿತರ ಪಕ್ಕದಲ್ಲಿ ಇಟ್ಟೆವು. ಆಗ ಅದಕ್ಕೆ ಬೃಹಸ್ಪತಿ ದೇವತೆ. ನಂತರ ಮೊದಲನೇ ಆಹುತಿ. ಆ ಆಹುತಿಯ ದೇವತೆ  ಅಗ್ನಿ [ಅಗ್ನಯೇ ಪೂರ್ವಾಹುತಿಃ]. ‘ಅಗ್ನಯೇ ಸ್ವಾಹಾ-ಅಗ್ನಯ ಇದಂ ನ ಮಮ’ ಎಂದು ಆಹುತಿ ಕೊಡುವುದು. ನಂತರ - ಪ್ರಜಾಪತೆಯೇ ಸ್ವಾಹ ಪ್ರಜಾಪತಯ ಇದಂ ನ ಮಮ ಎಂದು ಆಹುತಿ ಕೊಡುತ್ತಾರೆ. ಕೊನೆಯದಾಗಿ  ‘ಇಂದ್ರಮ್ ಹುತಮ್’- ಎಂದು ಇಂದ್ರನಿಗೆ ಆಹುತಿ ಕೊಡುತ್ತಾರೆ. ಈತ ಹದಿನಾರನೇ ದೇವತೆ.  ಇವಿಷ್ಟು ಅಗ್ನಿಹೊತ್ರದ ಷೋಡಶ ಕಲೆಗಳು. ಏತದ್ವಾ ಅಗ್ನಿಹೋತ್ರಂ ವೈಶ್ವೇದೇವಂ ಷೋಡಶಕಲಮ್ ಎಂದು ಐತರೇಯ ಹೇಳುತ್ತದೆ. ಈ ಹದಿನಾರು ಕಲೆಗಳಲ್ಲಿ ಸಮಾನವಾಗಿ ಎಲ್ಲಾ ಕಲಾ ದೇವತೆಗಳಿಗೂ ಆಹುತಿಯನ್ನು ಮುಟ್ಟಿಸುವವ ಅಗ್ನಿ. ಆತನನ್ನು  ಹುತವಃ ಎಂದು ಕರೆಯುತ್ತಾರೆ.  ಇದೇ ರೀತಿ ದೇಹದಲ್ಲಿ ಉಚ್ಛ್ವಾಸ ಮತ್ತು ನಿಶ್ವಾಸ ಪೂರ್ವಾಪರ ಆಹುತಿಗಳು. ಈ ಆಹುತಿಯನ್ನು ಸಮನಾಗಿ ದೇಹದ ಅಂಗಾಂಗಗಳಿಗೆ ತಲುಪಿಸುವವರು ಸಮಾನ ನಾಮಕ ಮುಖ್ಯಪ್ರಾಣದೇವರು.
ಸಮಾನನ ನಂತರ ಉದಾನನ ಕುರಿತು ವಿವರಿಸುತ್ತಾ ಪಿಪ್ಪಲಾದರು ಹೇಳುತ್ತಾರೆ: “ಇಷ್ಟಫಲಮೇವೋದಾನಃ” ಎಂದು. ನಾವು ಕೊಡುವ ಆಹುತಿಯಿಂದ ಬರುವ ಪುಣ್ಯಫಲವನ್ನು ಕೊಡುವವ ಉದಾನ. [ಉತ್+ಆನಯತಿ=ಮೇಲಕ್ಕೆ ಕರೆದುಕೊಂಡು ಹೋಗುವವ->ಉದಾನ]. ಪುಣ್ಯದ ಸುಖವನ್ನು ಅನುಭವಿಸುವುದಕ್ಕೊಸ್ಕರ ಊರ್ಧ್ವಲೋಕಕ್ಕೆ ಕೊಂಡೊಯ್ಯುವವನು ಉದಾನ. ಬಾಹ್ಯವಾಗಿ ಅಗ್ನಿಯೂ ಕೂಡ ಪುಣ್ಯಫಲವನ್ನು ಕೊಡುವುದಕ್ಕೊಸ್ಕರ ನಮ್ಮನ್ನು ಊರ್ಧ್ವಲೋಕಕ್ಕೆ ವಯ್ಯುತ್ತಾನೆ.
ಉದಾನ ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾನೆ ಎಂದರೆ-“ಕೊನೇಗೆ ವೈಕುಂಠ ಲೋಕಕ್ಕೆ ಕರೆದುಕೊಂಡು ಹೋಗಬಹುದು” ಎಂದುಕೊಂಡರೆ, ಇಲ್ಲಿ ಪಿಪ್ಪಲಾದರು ಹೇಳುತ್ತಾರೆ: “ಸ ಏನಂ ಯಜಮಾನಮಹರಹರ್ಬ್ರಹ್ಮ ಗಮಯತಿ” - ಪ್ರತಿ ದಿನವೂ ಪ್ರಾಣದೇವರು ನಿಮ್ಮನ್ನು ದೇವರ ಬಳಿ ಕೊಂಡೊಯ್ಯುತ್ತಾರೆ” ಎಂದು. ಪ್ರತಿ ದಿನವೂ ಜೀವ ನಿದ್ರೆಯಲ್ಲಿ ತನ್ನ ಹೃದಯದಲ್ಲಿರುವ ಭಗವಂತನನ್ನು ಸೇರುತ್ತಾನೆ. ಆತನನ್ನು ಅಲ್ಲಿಗೆ ಕರೆದುಕೊಂಡು ಹೋಗುವವರು ಉದಾನ ನಾಮಕ ಪ್ರಾಣದೇವರು. ಹೀಗೆ ಪ್ರತಿದಿನವೂ ನಿದ್ರೆಯಲ್ಲಿ ತಾನು ಎಚ್ಚರವಾಗಿದ್ದು, ನಮ್ಮನ್ನು ಭಗವಂತನ ಬಳಿ ಕರೆದುಕೊಂಡು ಹೋಗಿ, ನಿದ್ರೆಯ ಸುಖವನ್ನು ಕೊಡುವವರು ಪ್ರಾಣದೇವರು. ಇದೇ ಅವರು ನಮಗೆ ಕೊಡುವ ಇಷ್ಟಫಲ. ಹೀಗೆ ಎಚ್ಚರ ಅನ್ನುವುದೇ ಒಂದು ಯಜ್ಞ ಹಾಗೂ ನಿದ್ದೆ ಎನ್ನುವುದೇ ಆ ಯಜ್ಞದ ಇಷ್ಟಫಲ. ಎಚ್ಚರದಲ್ಲಿ ಮಾಡಿದ ಯಜ್ಞದ ಫಲವಾಗಿ ಜೀವ ನಿದ್ರೆಯಲ್ಲಿ ಭಗವಂತನ ಸಮೀಪದಲ್ಲಿ ಕುಳಿತು ಆನಂದಾನುಭವವನ್ನು ಪಡೆಯುತ್ತದೆ. ಇದೊಂದು ಅತ್ಯಂತ ಅಪೂರ್ವವಾದ  ಜೀವನಯಜ್ಞ. ಈ ಯಜ್ಞವನ್ನು  ನಡೆಸುವವರು ನಾವಲ್ಲ,  ನಮ್ಮೊಳಗೆ ಪಂಚರೂಪದಲ್ಲಿದ್ದು ನಿರಂತರ ಎಚ್ಚರ-ಕನಸುಗಳಲ್ಲಿ ಜೀವನಯಜ್ಞ ನಡೆಸುವವರು ಉದಾನ ನಾಮಕ ಪ್ರಾಣತತ್ತ್ವ.
ಎಲ್ಲಾ ಸರಿ, ಇಲ್ಲಿ ಯಜ್ಞದ ಯಜಮಾನ ಯಾರು  ಎನ್ನುವುದು ನಿಮ್ಮ ಪ್ರಶ್ನೆಯಾಗಿದ್ದರೆ ಅದಕ್ಕೆ ಪಿಪ್ಪಲಾದರು ಇಲ್ಲಿ ಉತ್ತರಿಸಿದ್ದಾರೆ.  ಪಿಪ್ಪಲಾದರು ಹೇಳುತ್ತಾರೆ: “ಮನೋ ಹ ವಾವ ಯಜಮಾನಃ ಎಂದು. ಇಲ್ಲಿ ಮನಸ್ಸು ಎಂದರೆ ಮನನಶೀಲವಾದ ಜೀವ. ಈ ‘ಜೀವ’ನ ಮೂಲಕ ದೇವತಾಶಕ್ತಿಗಳು ಯಜ್ಞ ಮಾಡಿಸುತ್ತಾರೆ. ಮಾಡಿದ ಯಜ್ಞದ ಫಲವಾಗಿ  ಉದಾನ ‘ಜೀವ’ನನ್ನು ಪ್ರತಿದಿನ ಭಗವಂತನ ಬಳಿ ಕರೆದುಕೊಂಡುಹೋಗಿ ಆನಂದದ ಅನುಭವನ್ನು ನೀಡುತ್ತಾನೆ. ಹೀಗೆ ನಮ್ಮೊಳಗೆ ಪಂಚರೂಪದಲ್ಲಿ ಪಂಚಾಗ್ನಿಯಾಗಿ ಪ್ರಾಣದೇವರು ನಿರಂತರ ಕಾರ್ಯನಿರ್ವಹಿಸುತ್ತಿರುತ್ತಾರೆ.    

1 comment:

  1. ಒಳ್ಳೆಯ ಮಾಹಿತಿಗಳಿಗಾಗಿ ಧನ್ಯವಾದಗಳು 🙏

    ReplyDelete