ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Thursday, November 1, 2012

Prashnopanishad in Kannada-Prashna-III (08)


ಆದಿತ್ಯೋ ಹ ವೈ ಬಾಹ್ಯಃ ಪ್ರಾಣಃ ಉದಯತ್ಯೇಷ ಹ್ಯೇನಂ ಚಾಕ್ಷುಷಂ ಪ್ರಾಣಮನುಗೃಹ್ಣಾನಃ   ಪೃಥಿವ್ಯಾಂ ಯಾ ದೇವತಾ ಸೌಷಾ ಪುರುಷಸ್ಯಾಪಾನಮವಷ್ಟಭ್ಯಾಂತರಾ ಯದಾಕಾಶಃ ಸ ಸಮಾನೋ ವಾಯುರ್ವ್ಯಾನಃ  

ನಮ್ಮ ಅಂತರಂಗ ಪ್ರಪಂಚ(ಪಿಂಡಾಂಡ)ದಲ್ಲಿ ಪ್ರಾಣದೇವರ ಕಾರ್ಯವ್ಯಾಪ್ತಿಯನ್ನು ವಿವರಿಸಿದ ಪಿಪ್ಪಲಾದರು, ಮುಂದೆ  ಬ್ರಹ್ಮಾಂಡದಲ್ಲಿ ಪ್ರಾಣದೇವರ ಐದು ರೂಪಗಳ ಕಾರ್ಯಕ್ಷೇತ್ರವನ್ನು ವಿವರಿಸುತ್ತಾರೆ. ಇಲ್ಲಿ ದೇಹದ ಒಳಗೆ ಮತ್ತು ದೇಹದ ಹೊರಗೆ ಪ್ರಾಣದೇವರ ಕ್ರಿಯೆಯನ್ನು ಸಮನ್ವಯ ಮಾಡಿ ವಿವರಿಸಲಾಗಿದೆ. ಪಂಚಪ್ರಾಣರಿಗೂ ಮತ್ತು ಪಂಚಭೂತಗಳಿಗೂ ಇರುವ ಸಂಬಂಧವನ್ನು ಇಲ್ಲಿ ಪಿಪ್ಪಲಾದರು ವಿವರಿಸಿದ್ದಾರೆ.
ಹೇಗೆ ನಮ್ಮ ದೇಹದ ಊರ್ಧ್ವಭಾಗದಲ್ಲಿದ್ದು ಪ್ರಾಣದೇವರು ಜ್ಞಾನದಬೆಳಕು ನೀಡುತ್ತಾರೋ, ಹಾಗೇ ದೇಹದ ಹೊರಗೆ ಸೂರ್ಯನಲ್ಲಿದ್ದು, ಇಡೀ ವಿಶ್ವವನ್ನು ಬೆಳಗುವ ಶಕ್ತಿ ಪ್ರಾಣದೇವರು. ಸೂರ್ಯನಿಗೂ ನಮ್ಮ ಕಣ್ಣಿಗೂ ನೇರ ಸಂಬಂಧ. ಬ್ರಹ್ಮಾಂಡದಲ್ಲಿರುವ ಸೂರ್ಯನೇ ಪಿಂಡಾಂಡದಲ್ಲಿ ಕಣ್ಣಾಗಿದ್ದಾನೆ. ಐತರೇಯ ಉಪನಿಷತ್ತಿನಲ್ಲಿ ಹೇಳುವಂತೆ: ಆದಿತ್ಯಶ್ಚಕ್ಷುರ್ಭೂತ್ವಾSಕ್ಷಿಣೀ ಪ್ರಾವಿಶದ್ ಐ-ಉ-೨-೪ ॥ ಸೂರ್ಯಶಕ್ತಿಯಿಂದಲೇ ನಮಗೆ ಕಣ್ಣು ಕಾಣುವುದು. ಇಲ್ಲಿ ವಿಶೇಷವೇನೆಂದರೆ ಪ್ರಾಣದೇವರೇ ಸೂರ್ಯನಲ್ಲಿ ನಿಂತು ಬೆಳಕು ನೀಡುವವರು ಹಾಗೂ ನಮ್ಮ ಕಣ್ಣಿನಲ್ಲಿ ನಿಂತು ನಮಗೆ ನೋಡುವ ಶಕ್ತಿ ಕೊಡುವವರು. ಎಲ್ಲಾ ಇಂದ್ರಿಯಗಳನ್ನು ನಿಯಂತ್ರಿಸುವ ಶಕ್ತಿ ಪ್ರಾಣ ಶಕ್ತಿಯಾದರೂ ಸಹ, ಇದೊಂದು ಪ್ರಾಣದೇವರ ವಿಶೇಷ ಸನ್ನಿಧಾನ.
ಪ್ರಾಣದೇವರು ಪಂಚಭೂತಗಳಲ್ಲಿ ಒಂದಾದ ನೀರಿನಲ್ಲಿ ಸನ್ನಿಹಿತರಾಗಿದ್ದಾರೆ. ನಾವು ಒಂದು ವೇಳೆ ಊಟ ಮಾಡದೇ ಕೆಲವು ದಿನ ಬದುಕಬಹುದು, ಆದರೆ ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ನೀರಿನಲ್ಲಿ ಮತ್ತು ಕಣ್ಣಿನಲ್ಲಿ ಪ್ರಾಣದೇವರ ವಿಶೇಷ ಸನ್ನಿಧಾನವಿದೆ. ಹಾಗಾಗಿ ನಮಗೆ ಬಹಳ ಆನಂದವಾದಾಗ ಅಥವಾ ಬಹಳ ದುಃಖವಾದಾಗ ಕಣ್ಣಿನಿಂದ ನೀರು ಬರುತ್ತದೆ. ಅದೇ ರೀತಿ ಹೊರಗೆ ನೀರನ್ನು ಆವಿಯಾಗಿಸಿ ಮಳೆ ಸುರಿಸುವವರೂ ಸೂರ್ಯನ ಅಂತರ್ಯಾಮಿಯಾಗಿರುವ ಪ್ರಾಣದೇವರು. ‘ಮೇಘೇ ಭೂತ್ವಾ ಪ್ರಾವಸ್ಯತಿ’ ಎನ್ನುವ ಒಂದು ಮಾತಿದೆ. ಇದು ಪ್ರಾಣದೇವರ ಒಂದು ವಿಶೇಷ ಕ್ರಿಯೆಯನ್ನು ಹೇಳುತ್ತದೆ. ಪ್ರಾಣದೇವರು ಸಮುದ್ರಕ್ಕೆ ಸೇರುವ ಎಲ್ಲಾ ನದಿನೀರನ್ನು ಸಮುದ್ರದ ಲವಣನೀರಿನಿಂದ ಬೇರ್ಪಡಿಸಿ ಮಳೆ ಬರಿಸುತ್ತಾರೆ. ಹೀಗೆ ಆಕಾಶದಿಂದ ಮಳೆ ಸುರಿಯುವುದೂ ಪ್ರಾಣದೇವರಿಂದ ಮತ್ತು ಕಣ್ಣಿನಿಂದ ನೀರು ಸುರಿಯುವುದೂ ಪ್ರಾಣದೇವರಿಂದ.  ಒಟ್ಟಿನಲ್ಲಿ ಹೇಳಬೇಕೆಂದರೆ: ಪ್ರಾಣದೇವರು ಕಣ್ಣಿನಲ್ಲಿ ಸನ್ನಿಹಿತರಾಗಿ ಅರಿವಿನ ಬೆಳಕು ನೀಡುತ್ತಾರೆ; ನೀರಿನಲ್ಲಿ ಸನ್ನಿಹಿತರಾಗಿ ಜೀವನವನ್ನು ಕೊಡುತ್ತಾರೆ; ಸೂರ್ಯನ ಅಂತರ್ಯಾಮಿಯಾಗಿ ನಿಂತು, ಆದಿತ್ಯನಾಮಕರಾಗಿ, ಉದಯಿಸುವ ಸೂರ್ಯನಲ್ಲಿದ್ದು, ಸೌರಶಕ್ತಿ ಹರಿಸುತ್ತಾ, ನಮಗೆ ಕಾಣಿಸಿಕೊಳ್ಳುತ್ತಾರೆ. ಇದು ನಮ್ಮ ಪ್ರಾಚೀನ ಋಷಿಗಳು ಕಂಡುಕೊಂಡ ದೈವವಿಜ್ಞಾನ.
 ದೇಹದಲ್ಲಿ ಅಪಾನನಾಮಕನಾಗಿ ನಮ್ಮ ಮಲ-ಮೂತ್ರ ವಿಸರ್ಜನೆಗೆ ಕಾರಣವಾಗಿರುವ ಶಕ್ತಿಯೇ, ಭೂಮಿಯಲ್ಲಿ ಮೇಲಿನಿಂದ ಕೆಳಕ್ಕೆಳೆಯುವ ಶಕ್ತಿಯಾಗಿದೆ. ಇದೇ ಭೂಮಿಯ ಗುರುತ್ವಾಕರ್ಷಣ ಶಕ್ತಿ. [ಪಿಪ್ಪಲಾದರ ಈ ಮಾತಿನಿಂದ ಇಲ್ಲಿ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ: ನಮ್ಮ ಪ್ರಾಚೀನ ಋಷಿಗಳಿಗೆ ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಪೂರ್ಣ ತಿಳುವಳಿಕೆ ಇತ್ತು; ಅದು ಇಂದಿನ ಪಾಶ್ಚಾತ್ಯರು ಕಂಡುಕೊಂಡ ಹೊಸ ವಿಚಾರವೇನೂ ಅಲ್ಲ ಎನ್ನುವುದು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಆರ್ಯಭಟ್ಟ “ಆಕೃಷ್ಟಿ ಶಕ್ತಿಶ್ಚ ಮಹೀ” ಎಂದು ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಹೇಳಿರುವುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬೇಕು. ಭೂಮಿಯನ್ನು ‘ಭೂಗೋಲ’ ಎಂದು ಕರೆದಿದ್ದ ನಮ್ಮ ಪ್ರಾಚೀನ ಋಷಿಗಳು, ಭೂಮಿ ದುಂಡಗಿದೆ ಎಂದು ತಿಳಿದಿದ್ದರು ಎನ್ನುವುದು ಅವರು ಬಳಸಿರುವ ‘ಗೋಲ’ ಎನ್ನುವ ಪದದಿಂದಲೇ ತಿಳಿಯುತ್ತದೆ. ದುರಾದೃಷ್ಟವಶಾತ್ ಇಂದು ನಮಗೆ ನಮ್ಮ ಪೂರ್ವಿಕರು ಕೊಟ್ಟ ಅಪೂರ್ವ ವಿಜ್ಞಾನದ ಬಗ್ಗೆ ಯಾವುದೇ ತಿಳುವಳಿಕೆ/ಗೌರವ ಇಲ್ಲಾ ]. ಭೂಮಿಯಲ್ಲಿ ಅಪಾನಶಕ್ತಿ ಇರುವುದರಿಂದ ಅದು ತನ್ನ ಕಕ್ಷೆಯಲ್ಲಿ, ಭೌತಿಕವಾಗಿ ನಿರಾಲಂಭವಾಗಿ ನಿಂತಿದೆ. ಇಂತಹ ಪ್ರಕೃತಿಸತ್ಯ ಹಿಂದೆ ಋಷಿಗಳಿಗೆ ಸ್ಫುರಣವಾಗುತ್ತಿತ್ತು. ನ್ಯೂಟನ್ ಕೂಡಾ ಈ ಸತ್ಯವನ್ನು ಕಂಡುಕೊಂಡಿದ್ದು ಯಾವುದೇ ಸಂಶೋಧನೆಯಿಂದಲ್ಲ, ಬದಲಾಗಿ ಸೇಬುಹಣ್ಣಿನ ಮರದಿಂದ ಸೇಬು ಕೆಳಕ್ಕೆ ಬಿದ್ದಾಗ ಅದು ಅವನಿಗೆ ಸ್ಫುರಣವಾಯಿತು.
ಪ್ರಾಣ ಮತ್ತು ಅಪಾನರು ಮಣ್ಣು-ನೀರಿನಲ್ಲಿ ತುಂಬಿ ಈ ವಿಶ್ವದ ಭೌತಿಕ ರೂಪಕ್ಕೆ ಕಾರಣರಾದರು. ಅವರೇ ನಮ್ಮ ಪಿಂಡಾಂದಲ್ಲಿದ್ದು, ನಮ್ಮ ಅನ್ನಮಯಕೋಶಕ್ಕೆ ಆಕಾರ ಕೊಟ್ಟವರು. ಪಂಚಭೂತಗಳಲ್ಲಿ ಮಣ್ಣು ಮತ್ತು ನೀರಿನಲ್ಲಿ ತುಂಬಿರುವ ಪ್ರಾಣಶಕ್ತಿಯನ್ನು ವಿವರಿಸಿದ ಪಿಪ್ಪಲಾದರು, ಮುಂದೆ ಆಕಾಶದಲ್ಲಿರುವ ಪ್ರಾಣಶಕ್ತಿಯನ್ನು ವಿವರಿಸುತ್ತಾರೆ. ಅವರು ಹೇಳುತ್ತಾರೆ: “ಅಂತರಾ ಯದಾಕಾಶಃ ಸ ಸಮಾನಃ” ಎಂದು. ಹಿಂದೆ ಹೇಳಿದಂತೆ ನಮ್ಮ ಹೃದಯಾಕಾಶದಲ್ಲಿ ಹೇಗೆ ‘ಸಮಾನ’ ನಾಮಕ ಪ್ರಾಣ ತುಂಬಿ ನಿಂತು ನಡೆಸುತ್ತಿದ್ದಾನೋ, ಹಾಗೇ ಹೊರಗೆ ಭೂಮಿ ಮತ್ತು ಸ್ವರ್ಗಲೋಕದ ನಡುವೆ ಇರುವ ಆಕಾಶದಲ್ಲಿ, ‘ಅವಕಾಶವಾಗಿ’, ಪ್ರಾಣದೇವರು ಆಕಾಶದ ದೇವತೆಯಾದ ಗಣಪತಿಯ ಅಂತರ್ಯಾಮಿಯಾಗಿ ನೆಲಸಿ, ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಪಂಚದ ಸಮಸ್ತ ಚಟುವಟಿಕೆಗಳು ನಡೆಯುವುದು ಆಕಾಶದಲ್ಲಿ. ಆಕಾಶವೇ ಇಲ್ಲದಿದ್ದರೆ ಯಾವ ಚಟುವಟಿಕೆಗೂ ಅವಕಾಶವಿಲ್ಲ. ವಿಶ್ವದಲ್ಲಿ ಪ್ರತಿಯೊಂದು ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವವರು ‘ಸಮಾನ’ ಅಂತರ್ಯಾಮಿ ಮುಖ್ಯಪ್ರಾಣ ದೇವರು. ದೇಹದಲ್ಲಿರುವ ೭೨ಕೋಟಿ ೭೨ಲಕ್ಷ ನಾಡಿಗಳಲ್ಲಿ ಜೀವವಾಗಿ ತುಂಬಿರುವ ‘ವ್ಯಾನ’ ನಾಮಕ ಪ್ರಾಣ, ಹೊರಗೆ ಆಕಾಶದಲ್ಲಿ ವಾಯುವಾಗಿ ನಮಗೆ ಜೀವವಾಯುವಾದ ಆಮ್ಲಜನಕವನ್ನು ನೀಡುತ್ತಾರೆ. ಆಕಾಶದಲ್ಲಿ ಗಾಳಿ ಇರುವುದರಿಂದ ನಮಗೆ ಶಬ್ದದ ಅನುಭವವಾಗುತ್ತದೆ. ಗಾಳಿಯಲ್ಲಿ, ಹತ್ತು ದಿಕ್ಕುಗಳಲ್ಲಿ, ನಮ್ಮ ಗ್ರಹಣೇಂದ್ರಿಯದಲ್ಲಿ ತುಂಬಿ ನಮಗೆ ಶಬ್ದ ಕೇಳುವಂತೆ ಮಾಡುವವರು ‘ವ್ಯಾನ’ ಅಂತರ್ಗತ ಮುಖ್ಯಪ್ರಾಣ ದೇವರು.   ಈ ಎಲ್ಲಾ ವಿಚಾರಗಳೂ ಬಹಳ ಅದ್ಭುತವಾದ ವಿಜ್ಞಾನ. ಇದು ಯಾವುದೇ ಸಂಶೋಧನೆಗೆ ನಿಲುಕದ ವಿಷಯ. ಇದು ನಮ್ಮ ಪ್ರಾಚೀನ ಋಷಿಗಳು ಭಗವದನುಗ್ರಹದಿಂದ ಅಂತರ್ದರ್ಶನದಲ್ಲಿ ಕಂಡುಕೊಂಡ ಸತ್ಯ.     

No comments:

Post a Comment