ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Saturday, December 1, 2012

Prashnopanishad in Kannada-Prashna-VI (01-02)


ಷಷ್ಠಃ ಪ್ರಶ್ನಃ


ಅಥ ಹೈನಂ ಸುಕೇಶಾ ಭಾರದ್ವಾಜಃ ಪಪ್ರಚ್ಛ ಭಗವನ್ ಹಿರಣ್ಯನಾಭಃ ಕೌಸಲ್ಯೋ ರಾಜಪುತ್ರೋ ಮಾಮುಪೇತ್ಯೈತಂ ಪ್ರಶ್ನಮಪೃಚ್ಛತ ಷೋಡಶಕಲಂ ಭಾರದ್ವಾಜ ಪುರುಷಂ ವೇತ್ಥ   ತಮಹಂ ಕುಮಾರಂಬ್ರುವಂ ನಾಹಮಿಮಂ ವೇದ  ಯಧ್ಯಹಮಿಮಮವೇದಿಷ್ಯಂ ಕಥಂ ತೇ ನಾವಕ್ಷ್ಯಮಿತಿ   ಸಮೂಲೋ ವಾ ಏಷ ಪರಿಶುಷ್ಯತಿ ಯೋSನೃತಮಭಿವದತಿ ತಸ್ಮಾನ್ನಾರ್ಹಮ್ಯನೃತಂ ವಕ್ತುಂ ಸ ತೂಷ್ಣೀಂ ರಥಮಾರುಹ್ಯ ಪ್ರವವ್ರಾಜ ತಂ ತ್ವಾ ಪೃಚ್ಛಾಮಿ ಕ್ವಾಸೌಪುರುಷ ಇತಿ

ಆರು ಜನ ಋಷಿಗಳಲ್ಲಿ ಶ್ರೇಷ್ಠರಾದ ಸುಕೇಶಾ ಭಾರದ್ವಾಜರು ತಮ್ಮ ಪ್ರಶ್ನೆಯನ್ನು ಕೇಳುವುದರೊಂದಿಗೆ ಈ ಅಧ್ಯಾಯ ಆರಂಭವಾಗುತ್ತದೆ. ಅವರು ತಮ್ಮ ಪ್ರಶ್ನೆಯ ಮಹತ್ವವನ್ನು ವಿವರಿಸುವುದಕ್ಕೊಸ್ಕರ, ತಮ್ಮ ಪ್ರಶ್ನೆಗೆ ಸಂಬಂಧಿಸಿದ, ಅವರ ಜೀವನದಲ್ಲಿ  ನಡೆದ ಒಂದು ಘಟನೆಯನ್ನು ಮೊದಲು ವಿವರಿಸುತ್ತಾರೆ. ಅವರು ಹೇಳುತ್ತಾರೆ: “ನಾನು ಇಲ್ಲಿ ಕೇಳುವ ಪ್ರಶ್ನೆ ನನ್ನಲ್ಲಿ ಹಿಂದೆ ಒಬ್ಬರು ಕೇಳಿದ ಪ್ರಶ್ನೆ” ಎಂದು. ಒಮ್ಮೆ ಕೋಸಲ ದೇಶದ ರಾಜಕುಮಾರ ‘ಹಿರಣ್ಯನಾಭ’ ನನ್ನ ಬಳಿ ಬಂದು ನನ್ನಲ್ಲಿ ಈ ರೀತಿ ಪ್ರಶ್ನೆ ಹಾಕಿದ: “ಹದಿನಾರು ಕಲೆಯ ಒಡೆಯನಾದ ಒಬ್ಬ ಪರಮಪುರುಷನ ಉಪಾಸನೆ ಹೇಗೆ ಮಾಡಬೇಕು” ಎಂದು. ನಾವು ಪುರುಷಸೂಕ್ತವನ್ನು ನೋಡಿದಾಗ ಅಲ್ಲಿ “ಸಹಸ್ರಶೀರ್ಷಾ ಪುರುಷಃ” ಎಂದು ನಾರಾಯಣನನ್ನು ಸ್ತುತಿಸಿರುವುದನ್ನು ಕಾಣುತ್ತೇವೆ. ಆದ್ದರಿಂದ ಪುರುಷಃ ಎಂದರೆ ನಾರಾಯಣ. ಆದರೆ ಹದಿನಾರು ಕಲೆಗಳು ಯಾವುದು? ಅವುಗಳನ್ನು ನಿಯಂತ್ರಿಸುವ ಭಗವಂತನನ್ನು ಎಲ್ಲಿ ಹೇಗೆ ಉಪಾಸನೆ ಮಾಡಬೇಕು ಎನ್ನುವುದು ಇಲ್ಲಿರುವ ಪ್ರಶ್ನೆ. “ಈ ಪ್ರಶ್ನೆಗೆ ಉತ್ತರ ನನಗೆ ತಿಳಿಯದು” ಎಂದು  ಸುಕೇಶಾ ಭಾರದ್ವಾಜರು ಹೇಳಿದಾಗ, ಹಿರಣ್ಯನಾಭ ಪುನಃ  “ನಿಮಗೆ ಖಂಡಿತವಾಗಿ ತಿಳಿದಿದೆ. ಅದನ್ನು ನನಗೆ ಹೇಳಿ” ಎಂದು ಒತ್ತಾಯಿಸುತ್ತಾನೆ.[ಇಲ್ಲಿ ಅಬ್ರವಂ ಎನ್ನುವ ಪದವನ್ನು ‘ಅಬ್ರುವಮ್’ ಎಂದು ಬಳಸಿದ್ದಾರೆ. ಇದು ತಾತ್ಪರ್ಯಪೂರ್ವಕ ಅಥವಾ ಒತ್ತುಕೊಟ್ಟು ಹೇಳುವುದನ್ನು ಸೂಚಿಸುತ್ತದೆ. ಉದಾಹರಣೆಗೆ: ಬಹಳàಬಹಾಳ]   ಆಗ ಸುಕೇಶಾ ಭಾರದ್ವಾಜರು ಹೇಳುತ್ತಾರೆ. “ನನಗೆ ಈ ಜ್ಞಾನ ತಿಳಿದಿಲ್ಲ. ನಾನು ಸುಳ್ಳು ಹೇಳುತ್ತಿಲ್ಲ. ಯಾರು ಸುಳ್ಳುಹೇಳುತ್ತಾನೋ ಅವನ ಬದುಕು ಬೇರುಸಹಿತ ಒಣಗಿದ ಮರದಂತೆ ವ್ಯರ್ಥ ಎನ್ನುವುದು ನನಗೆ ತಿಳಿದಿದೆ. ಆದ್ದರಿಂದ ನನಗೆ ತಿಳಿಯದ್ದನ್ನು ನಿನಗೆ ಹೇಗೆ ಹೇಳಲಿ” ಎಂದು. ಇಲ್ಲಿ ‘ಅಭಿವದತಿ’ ಎನ್ನುವ ಪದ ಬಳಕೆಯಾಗಿದೆ. ಅಬಿವದತಿ ಅಂದರೆ ಒಳಗಿನಿಂದ ಮತ್ತು ಹೊರಗಿನಿಂದ ಸುಳ್ಳು ಹೇಳುವುದು. ಮೋಸಮಾಡಬೇಕೆನ್ನುವ ಉದ್ದೇಶದಿಂದ ಹೇಳುವ ಸುಳ್ಳ-ಅಭಿವದತಿ. ಇನ್ನೊಬ್ಬರ ಶ್ರೇಯಸ್ಸಿಗಾಗಿ ಹೇಳುವ ಸುಳ್ಳು ಸುಳ್ಳಲ್ಲ.   ಇಲ್ಲಿ ಸುಕೇಶಾ ಭಾರದ್ವಾಜರು ಮುಂದುವರಿದು: “ನಾನು ಅಪ್ರಾಮಾಣಿಕತೆಯಿಂದ ಸುಳ್ಳು ಹೇಳಿದರೆ, ನನ್ನ ಎಲ್ಲಾ ಪುಣ್ಯಗಳು ನಾಶವಾಗಿ, ನಾನು ನಿರ್ನಾಮವಾಗಿ ಹೋಗುತ್ತೇನೆ. ಸುಳ್ಳು ಹೇಳುವುದರಿಂದ ಇಡೀ ಮನುಷ್ಯನ ವ್ಯಕ್ತಿತ್ವ ನಾಶವಾಗಿ ಹೋಗುತ್ತದೆ. ಅವನು ಮಾಡಿದ ಪುಣ್ಯಕರ್ಮಗಳು ಕರಗಿ ಹೋಗುತ್ತವೆ. ಹೀಗಾಗಿ ಸುಳ್ಳು ಹೇಳುವುದರ ಅಪಾಯದ ಅರಿವು ನನಗಿದೆ. ಪ್ರಾಮಾಣಿಕವಾಗಿ ನನಗೆ ನಿನ್ನ ಪ್ರಶ್ನೆಗೆ ಉತ್ತರ ತಿಳಿದಿಲ್ಲ” ಎನ್ನುತ್ತಾರೆ. ಸುಕೇಶಾ ಭಾರದ್ವಾಜರು ಈ ರೀತಿ ನುಡಿದಾಗ ಹಿರಣ್ಯನಾಭ ತನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲವಲ್ಲಾ ಎಂದು ಬೇಸರದಿಂದ ತನ್ನ ವಾಹನವನ್ನು ಏರಿ  ಅಲ್ಲಿಂದ ಹೊರಟುಹೋಗುತ್ತಾನೆ.
“ಆ ರಾಜಕುಮಾರ ಕೇಳಿರುವ ಪ್ರಶ್ನೆಗೆ ಉತ್ತರ ನಿಮಗೆ ತಿಳಿದಿದೆ.  ಆದ್ದರಿಂದ ನಾನು ನಿಮ್ಮನ್ನು ಕೇಳುತ್ತಿದ್ದೇನೆ. ಆ  ಷೋಡಶ ಕಲೆಗಳು ಯಾವುದು?  ಷೋಡಶ ಕಲೆಗಳಿಗೂ ಭಗವಂತನಿಗೂ ಯಾವ ಸಂಬಂಧ? ಷೋಡಶಕಲಾ ಪುರುಷನನ್ನು ಎಲ್ಲಿ ಹೇಗೆ ಉಪಾಸನೆ ಮಾಡಬೇಕು?” ಇದು ಈ ಉಪನಿಷತ್ತಿನಲ್ಲಿರುವ ಆರನೆಯ ಮತ್ತು ಕೊನೇಯ ಪ್ರಶ್ನೆ. ಬನ್ನಿ, ಆರುಮಂದಿ ಋಷಿಗಳೊಂದಿಗೆ ಸೇರಿ, ನಾವೂ ಈ ಪ್ರಶ್ನೆಗೆ ಉತ್ತರ ರೂಪವಾಗಿರುವ ಅತ್ಯದ್ಭುತ ಜ್ಞಾನ ಸಂದೇಶವನ್ನು ಭಗವಂತನ ಕೃಪೆಬೇಡಿ, ಪಿಪ್ಪಲಾದರಿಂದ  ಕೇಳಿ ತಿಳಿದು ಧನ್ಯರಾಗೋಣ.   

ತಸ್ಮೈ ಸ ಹೋವಾಚ   ಇಹೈವಾಂತಃ ಶರೀರೇ ಸೋಮ್ಯ ಸ ಪುರುಷೇ ಯಸ್ಮಿನ್ನೇತಾಃ ಷೋಡಶಕಲಾಃ ಪ್ರಭವಂತೀತಿ

ಒಬ್ಬ ಸಾಧಕ ತಿಳಿಯಲೇಬೇಕಾಗಿರುವ ಅತ್ಯುತ್ತಮ ಪ್ರಶ್ನೆ ಇದಾಗಿರುವುದರಿಂದ, ಪಿಪ್ಪಲಾದರಿಗೆ ಬಹಳ ಸಂತೋಷವಾಯಿತು[ಹ-ಕಾರ ಇದನ್ನು ಸೂಚಿಸುತ್ತದೆ]. ಅವರು ಹೇಳುತ್ತಾರೆ: ಭಗವಂತನನ್ನು ನಾವು ನಮ್ಮ ದೇಹದೊಳಗೇ ಕಂಡು ಉಪಾಸನೆ ಮಾಡಬೇಕೇ ಹೊರತು, ಆತನನ್ನು ಎಲ್ಲೆಲ್ಲೋ ಹುಡುಕುವುದಲ್ಲ” ಎಂದು. ಇಲ್ಲಿ ಪಿಪ್ಪಲಾದರು ಸುಕೇಶಾ ಭಾರದ್ವಾಜರನ್ನು ‘ಸೋಮ್ಯ’ ಎಂದು ಸಂಬೋಧಿಸಿದ್ದಾರೆ. ಸೋಮ+ಇವ=ಸೋಮ್ಯ. ಅಂದರೆ ಚಂದ್ರನಂತೆ ತುಂಬಾ ತಂಪಾದ ಸ್ವಭಾವ ಉಳ್ಳವನು, ಯಾರ ಮನಸ್ಸಿಗೂ ನೋವಾಗದಂತೆ ಪ್ರೀತಿಯಿಂದ ಮಾತನಾಡುವವನು, ಮೃದು ಸ್ವಭಾವದವನು ಎಂದರ್ಥ. ಒಬ್ಬ ಶಾಸ್ತ್ರಜ್ಞ ಎಷ್ಟು ಸೌಮ್ಯನಾಗಿರಬೇಕೆಂದರೆ:  ಆತ ಯಾರನ್ನೂ ದ್ವೇಷ ಮಾಡುವಂತಿಲ್ಲ, ಇನ್ನೊಬ್ಬರನ್ನು ಅವಮಾನಗೊಳಿಸುವ ಕೆಟ್ಟ ಮಾತನ್ನಾಡುವಂತಿಲ್ಲ. ಇದು ಶಾಸ್ತ್ರದ ನಿಯಮ. “ಇದನ್ನೇ ವಿದ್ಯಾ ದದಾತಿ  ವಿನಯಮ್” ಎನ್ನುತ್ತಾರೆ. ಇದು ಅಧ್ಯಾತ್ಮದ ಮಾರ್ಗದಲ್ಲಿ ಮೊದಲು ಗಳಿಸಬೇಕಾದಂತಹ ಅರ್ಹತೆ. ‘ಸೋಮ್ಯ’ ಎಂದರೆ ಸೋಮಯಾಗ ಮುಂತಾದಂತಹ ವೇದೋಕ್ತವಾದ ಕರ್ಮಾನುಷ್ಠಾನ ಮಾಡುತ್ತಾ, ಕರ್ಮದಲ್ಲಿ ಪರಿಣತಿ ಪಡೆದವ ಎನ್ನುವುದು ಇನ್ನೊಂದು ಅರ್ಥ.
ಎಲ್ಲರ ಒಳಗೂ ಅಂತರ್ಯಾಮಿಯಾಗಿರುವ ಭಗವಂತ ‘ಪುರುಷಃ’. ನಮ್ಮ ಹೃತ್ಕಮಲ ಮಧ್ಯದಲ್ಲಿರುವ ಬಿಂಬರೂಪಿ ಪರಮಪುರುಷನನ್ನು, ಅಂತಃದೃಷ್ಟಿಯಿಂದ ಕಂಡು ಮಾಡುವ  ಉಪಾಸನೆಯೇ ಷೋಡಶಕಲಾ ಉಪಾಸನೆ. ಹದಿನಾರು ಕಲೆಗಳು ಭಗವಂತನ ಆಶ್ರಯದಿಂದ ಈ ಪ್ರಪಂಚವಾಗಿ ರೂಪುಗೊಂಡು, ತಮ್ಮತಮ್ಮ ಕಾರ್ಯನಿರ್ವಹಣೆ ಮಾಡುತ್ತವೆ. 

No comments:

Post a Comment