ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Friday, November 2, 2012

Prashnopanishad in Kannada-Prashna-IV (01-02)


ಅಥ ಚತುರ್ಥಃ ಪ್ರಶ್ನಃ

ಇಲ್ಲಿಯ ತನಕ  ಪ್ರಾಣ ದೇವರು ಭೌತಿಕವಾಗಿ, ಪ್ರಾಪಂಚಿಕವಾಗಿ, ಆಧ್ಯಾತ್ಮಿಕವಾಗಿ, ಹುಟ್ಟಿನಲ್ಲಿ, ಸಾವಿನಲ್ಲಿ ಮತ್ತು  ಬದುಕಿನಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಎಲ್ಲವನ್ನೂ ಹೇಗೆ ನಿಯಂತ್ರಿಸುತ್ತಾರೆ ಎನ್ನುವುದನ್ನು ಪಿಪ್ಪಲಾದರು ವಿವರಿಸಿದರು. ಈ ಎಲ್ಲಾ ವಿವರಣೆಯನ್ನು ಕೇಳಿದ ‘ಸೌರ್ಯಾಯಣಿ ಗಾರ್ಗ್ಯಃರು’ ನಮ್ಮ ನಿದ್ದೆ  ಹಾಗೂ  ಕನಸಿನ ಮನಃಶಾಸ್ತ ಮತ್ತು ಅದರ ಹಿಂದಿನ ವಿಜ್ಞಾನವನ್ನು ತಿಳಿಯಬಯಸಿ ಮುಂದಿನ ಪ್ರಶ್ನೆ ಕೇಳುವುದರೊಂದಿಗೆ ಪ್ರಶ್ನೋಪನಿಷತ್ತಿನ ನಾಲ್ಕನೇ ಅಧ್ಯಾಯ ಆರಂಭವಾಗುತ್ತದೆ.  ಪ್ರೀತಿಯ ಅಧ್ಯಾತ್ಮ ಬಂಧುಗಳೇ, ಬನ್ನಿ, ಎಲ್ಲಿಯೂ ಕಾಣಸಿಗದ ಈ ಅಪೂರ್ವ ವಿಷಯವನ್ನು ಪ್ರಾಣದೇವರ ಮತ್ತು ಪ್ರಾಣಾಂತರ್ಗತ ಭಗವಂತನ ಕೃಪೆ ಬೇಡಿ,  ಆರು ಋಷಿಗಳ ಜೊತೆ ಸೇರಿ ಪಿಪ್ಪಲಾದರಿಂದ ಕೇಳಿ ತಿಳಿಯೋಣ.

ಅಥ ಹೈನಂ ಸೌರ್ಯಾಯಣಿ ಗಾರ್ಗ್ಯಃ ಪಪ್ರಚ್ಛ   ಭಗವನ್ನೇತಸ್ಮಿನ್ ಪುರುಷೇ ಕಾನಿ ಸ್ವಪಂತಿ ಕಾನ್ಯಸ್ಮಿನ್ ಜಾಗ್ರತಿ ಕತರ ಏಷ ದೇವಃ ಸ್ವಪ್ನಾನ್ ಪಶ್ಯತಿ ಕಸ್ಯೈತತ್  ಸುಖಂ ಭವತಿ ಕಸ್ಮಿನ್ನು ಸರ್ವೇ ಸಂಪ್ರತಿಷ್ಠಿತಾ ಭವಂತೀತಿ

ಸೌರ್ಯಾಯಣಿ ಗಾರ್ಗ್ಯಃರು’ ಪಿಪ್ಪಲಾದರ ಮುಂದೆ ತಮ್ಮ ಪ್ರಶ್ನೆಯನ್ನು ನಿವೇದಿಸಿಕೊಳ್ಳುತ್ತಾರೆ. ಅವರು ಕೇಳುವ ಪ್ರಶ್ನೆ ಹೀಗಿದೆ: ಎಚ್ಚರ-ಕನಸು-ನಿದ್ದೆ ಇವು ನಾವು ಅನುಭವಿಸುವ ಮೂರು ಅವಸ್ಥೆಗಳು. ನಮ್ಮ ದೇಹದಲ್ಲಿ ನಮ್ಮ ಇಂದ್ರಿಯಗಳನ್ನು ನಿಯಂತ್ರಿಸುವ ತತ್ತ್ವಾಭಿಮಾನಿ ದೇವತೆಗಳಿದ್ದಾರೆ. ನಾವು ಎಚ್ಚರವಾಗಿದ್ದಾಗ ಈ ತತ್ತ್ವಾಭಿಮಾನಿ ದೇವತೆಗಳು ತಮ್ಮ ಕಾರ್ಯನಿರ್ವಹಿಸಿ ನಮಗೆ ಇಂದ್ರಿಯಾನುಭವವನ್ನು ಕೊಡುತ್ತಾರೆ. ನಾವು ಪೂರ್ಣನಿದ್ರಾವಸ್ಥೆಯಲ್ಲಿದ್ದಾಗ[Deep Sleep] ನಮ್ಮ ದೇಹವನ್ನು ನಿಯಂತ್ರಿಸುವ ಯಾವ ದೇವತೆಗಳು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ? ನಾವು ನಿದ್ದೆ ಮಾಡಿದಾಗಲೂ ಎಚ್ಚರವಾಗಿದ್ದು ಈ ದೇಹವನ್ನು ನಿಯಂತ್ರಿಸುವ ದೇವತೆಗಳು ಯಾರು? ನಿದ್ದೆಯಲ್ಲೂ ಜೀವನನ್ನು ಬದುಕಿಸಿ ಜೀವದಾನ ಮಾಡುವ ಶಕ್ತಿ ಯಾವುದು? ಇದು ಗಾರ್ಗ್ಯಃರ ಪ್ರಶ್ನೆ.
ಮುಂದುವರಿದು ಗಾರ್ಗ್ಯಃರು ಕನಸಿನ ಸ್ಥಿತಿಯ ಬಗ್ಗೆ ತಮ್ಮ ಪ್ರಶ್ನೆಯನ್ನು ಪಿಪ್ಪಲಾದರ ಮುಂದೆ ಪ್ರಸ್ತಾಪಿಸುತ್ತಾರೆ. ಎಚ್ಚರವೂ ಅಲ್ಲದ, ನಿದ್ದೆಯೂ ಅಲ್ಲದ ಮೂರನೇ ಸ್ಥಿತಿ ‘ಕನಸಿನ’ ಸ್ಥಿತಿ. ಈ ಕನಸಿನ ಪ್ರಪಂಚ ಬಹಳ ವಿಸ್ಮಯ. ನಾವು ಎಚ್ಚರದಲ್ಲಿ ಕಾಣಲು ಸಾಧ್ಯವೇ ಇಲ್ಲದ ವಿಷಯವನ್ನು ಕನಸಿನಲ್ಲಿ ಕಾಣುತ್ತೇವೆ. ನಾವು ಬಯಸಿದಂತೆ ನಮ್ಮ ಕನಸಿರುವುದಿಲ್ಲ. ನಮಗೆ ನಮ್ಮ ಕನಸಿನ ಮೇಲೆ ನಿಯಂತ್ರಣವಿಲ್ಲ. ಕೆಲವೊಮ್ಮೆ ನಮ್ಮ ಜೀವನದಲ್ಲಿ ಮುಂದೆ ನಡೆಯಬಹುದಾದ ವಿಷಯವನ್ನು ಕನಸಿನರೂಪದಲ್ಲಿ ಕಾಣುತ್ತೇವೆ. ಇನ್ನು ಕೆಲವೊಮ್ಮೆ ಅರ್ಥಶೂನ್ಯ ಕನಸುಗಳನ್ನೂ ಕಾಣುತ್ತೇವೆ. ಈ ಕಾಣದ ಪ್ರಪಂಚವನ್ನು ನಮಗೆ ಕಾಣಿಸುವವರು ಯಾರು? ಯಾವ ದೇವತಾ ಶಕ್ತಿ ನಮಗೆ ಕನಸಿನ ಅನುಭವವನ್ನು ಕೊಡುತ್ತದೆ?
ಸಾಮಾನ್ಯವಾಗಿ ನಾವು ಒಳ್ಳೆಯ ನಿದ್ದೆ ಮಾಡಿ ಎದ್ದಾಗ “ಬಹಳ ಆನಂದವಾಗಿ ನಿದ್ರಿಸಿದೆ” ಎನ್ನುತ್ತೇವೆ. ಕನಸಿನಲ್ಲಿ ದುಃಖ ಪಡಬಹುದು, ಆದರೆ ನಿದ್ದೆಯಲ್ಲಿ ಯಾರೂ ದುಃಖ ಪಡುವುದಿಲ್ಲ. ಜೀವನಿಗೆ ಸುಖದ ಅನುಭವವಾಗುವುದು ಇಂದ್ರಿಯಾನುಭವದಿಂದ. [ನೋಡುವುದು, ಕೇಳುವುದು, ಮುಟ್ಟುವುದು, ತಿನ್ನುವುದು ಇತ್ಯಾದಿ]  ನಿದ್ದೆಯಲ್ಲಿ ನಮಗೆ ಇಂದ್ರಿಯಾನುಭವ ಇರುವುದಿಲ್ಲ. ನಿದ್ದೆಯಲ್ಲಿ ಇಂದ್ರಿಯ ಮತ್ತು ಮನಸ್ಸು ಎರಡೂ ಕಾರ್ಯ ನಿರ್ವಹಿಸುವುದಿಲ್ಲ. ಹೀಗಿರುವಾಗ ಆನಂದ ಆಗುವುದು ಹೇಗೆ? ಈ ಆನಂದವನ್ನು ನೀಡುವವರು ಯಾರು? ನಾವು ನಿದ್ದೆ ಮಾಡಿದಾಗ ನಮ್ಮ ಇಂದ್ರಿಯಾಭಿಮಾನಿ ದೇವತೆಗಳು ಏನಾಗುತ್ತಾರೆ? ಅವರೇಕೆ ಕೆಲಸ ಮಾಡುವುದಿಲ್ಲ? ನಿದ್ದೆಯಲ್ಲಿ ನಮಗೆ ತಿಳಿಯದೇ ಅನೇಕ ಕ್ರಿಯೆಗಳು ನಡೆಯುತ್ತವೆ [ಉದಾಹರಣೆಗೆ: ಜೀರ್ಣಕ್ರಿಯೆ, ಉಸಿರಾಟ]. ನಾವು ನಿದ್ರಿಸಿದಾಗ ಎಚ್ಚರವಾಗಿದ್ದು ಈ  ಕ್ರಿಯೆಗಳನ್ನು ಮಾಡಿ ನಮ್ಮನ್ನು ರಕ್ಷಿಸುವ ಶಕ್ತಿ ಯಾವುದು? ಇದು ಪ್ರಶ್ನೋಪನಿಷತ್ತಿನ ನಾಲ್ಕನೇ ಪ್ರಶ್ನೆ. ಈ ಪ್ರಶ್ನೆ ಅಪೂರ್ವವಾದುದು ಮತ್ತು     ಈ ಪ್ರಶ್ನೆಯ ಉತ್ತರ ಆನಂದ ತರುವಂತಹದ್ದು ಎನ್ನುವುದನ್ನು ಇಲ್ಲಿ ಬಳಸಿರುವ[ಅಥ ಹೈನಂ ಎನ್ನುವಲ್ಲಿ]  ‘ಹ’ಕಾರ ಸೂಚಿಸುತ್ತದೆ. 

ತಸ್ಮೈ ಸ ಹೋವಾಚ   ಯಥ ಗಾರ್ಗ್ಯ ಮರೀಚಯೋಽರ್ಕಸ್ಯಾಸ್ತಂ ಗಚ್ಛತಃ ಸರ್ವಾ ಏತಸ್ಮಿಂಸ್ತೇಜೋಮಂಡಲ ಏಕೀಭವಂತಿ   ತಾಃ ಪುನರುದಯತಃ ಪ್ರಚರಂತ್ಯೇವಂ ಹ ವೈ ತತ್ ಸರ್ವಂ ಪರೇ ದೇವೇ ಮನಸ್ಯೇಕೀಭವತಿ
ತೇನ ತರ್ಹ್ಯೇಷ ಪುರುಷೋ ನ ಶೃಣೋತಿ ನ ಪಶ್ಯತಿ ನ ಜಿಘ್ರತಿ ನ ರಸಯತೇ ನ ಸ್ಪೃಶತೇ ನಾಭಿವದತೇ ನಾSದತ್ತೇ ನಾSನಂದಯತೇ ನ ವಿಸೃಜತೇ ನೇಯಾಯತೇ ಸ್ವಪಿತೀತ್ಯಾಚಕ್ಷತೇ

ಗಾರ್ಗ್ಯಃರ ಪ್ರಶ್ನೆಗೆ ಇಲ್ಲಿ ಪಿಪ್ಪಲಾದರು ಕೊಡುವ ಉತ್ತರ ಅಪೂರ್ವವಾದುದು(‘ತಸ್ಮೈ ಸ ಹೋವಾಚ’  ಎನ್ನುವಲ್ಲಿ ಹ-ಕಾರ ಈ ಅಪೂರ್ವತೆಯನ್ನು ಸೂಚಿಸುತ್ತದೆ). ನಾವು ನಿತ್ಯವೂ ಅನುಭವಿಸುವ, ಆದರೂ ನಮಗೆ ತಿಳಿಯದ; ಎಂದೂ ಯೋಚಿಸದ; ನಾವು ಯೋಚಿಸಲೇ ಇಲ್ಲವಲ್ಲಾ ಎಂದು ಗಾಬರಿಗೊಳಿಸುವ ಮತ್ತು ಕಣ್ಣುತೆರೆಸುವ; ರೋಚಕವಾದ ಉತ್ತರವನ್ನು ಒಂದು ದೃಷ್ಟಾಂತದ ಮುಖೇನ ಪಿಪ್ಪಲಾದರು ಇಲ್ಲಿ ವಿವರಿಸಿದ್ದಾರೆ.
ಸಂಜೆಯಾದಾಗ ಸೂರ್ಯ ಮುಳುಗುತ್ತಾನೆ. ಆಗ ನಮಗೆ ಆತನ ಕಿರಣಗಳು ಆತನ ಒಳಗೆ ಸೇರಿಕೊಂಡಂತೆ ಕಾಣುತ್ತದೆ. ಆದರೆ ವಾಸ್ತವವಾಗಿ ಸೂರ್ಯ ಮುಳುಗುವುದಿಲ್ಲ, ಆತನ ಕಿರಣಗಳು ಆತನ ಒಳ ಸೇರುವುದಿಲ್ಲ. ಸೂರ್ಯ ಮುಳುಗಿದಂತೆ ಮತ್ತು ಆತನ ಕಿರಣಗಳು ಆತನ ಒಳ ಸೇರಿದಂತೆ ಭೂಮಿಯಲ್ಲಿರುವ ನಮಗೆ ಕಾಣಿಸುತ್ತದೆ ಅಷ್ಟೇ. ಅದೇ ರೀತಿ ಮುಂಜಾನೆ ಸೂರ್ಯ ಉದಯಿಸುತ್ತಾನೆ ಮತ್ತು ಆತನ ಪ್ರಖರವಾದ  ಕಿರಣಗಳು ಆತನಿಂದ ಹೊರಬಂದಂತೆ ಕಾಣುತ್ತವೆ. ಇದೇ ರೀತಿ ನಾವು ಮಲಗಿದಾಗ ನಮ್ಮೊಳಗಿರುವ ದೇವತಾಶಕ್ತಿಗಳು  ತಮ್ಮ ಪರಶಕ್ತಿಯಾದ, ನಮ್ಮ ಮನಸ್ಸಿನಲ್ಲಿ ಸದಾ ಸನ್ನಿಹಿತನಾಗಿರುವ, ಜ್ಞಾನಸ್ವರೂಪ ಭಗವಂತನನ್ನು ಹೋಗಿ ಸೇರುತ್ತವೆ ಮತ್ತು ಮುಂಜಾನೆ ಎದ್ದಾಗ, ಭಗವಂತನಿಂದ ಹೊರಬಂದು ಕಾರ್ಯ ನಿರ್ವಹಿಸುತ್ತವೆ. ವಾಸ್ತವವಾಗಿ ದೇವತೆಗಳು ಭಗವಂತನಲ್ಲಿ ಐಕ್ಯ ಹೊಂದುವುದಿಲ್ಲ.  ಆದರೆ ನಮಗೆ ಆ ರೀತಿ ಅನುಭವವಾಗುತ್ತದೆ.
ಭಗವಂತ ಜ್ಞಾನಸ್ವರೂಪ. ಹೇಗೆ ಸೂರ್ಯನಿಗೆ ಬೆಳಕಿನ ಲೋಪವಿಲ್ಲವೋ ಹಾಗೇ ಭಗವಂತನಿಗೆ ಜ್ಞಾನದ ಲೋಪವಿಲ್ಲ. ಸೂರ್ಯ ಬೆಳಕಿನ ಉಂಡೆಯಾದರೆ ಭಗವಂತ ಜ್ಞಾನಸಾಗರ. ಈ ಜ್ಞಾನಸ್ವರೂಪ ಭಗವಂತ ಮತ್ತು ಪ್ರಾಣದೇವರು ನಿದ್ದೆಯಲ್ಲಿ ನಮ್ಮನ್ನು ನಿಯಂತ್ರಿಸುತ್ತಾರೆ. ಅವರು ನಿದ್ದೆಯಲ್ಲೂ ಸದಾ ನಮ್ಮನ್ನು ಉಸಿರಾಡಿಸಿ, ನಾವು ಸೇವಿಸಿದ ಆಹಾರವನ್ನು ಪಚನ ಮಾಡಿ, ನಮ್ಮನ್ನು ರಕ್ಷಿಸುತ್ತಾರೆ. ಇತರ ದೇವತಾಶಕ್ತಿಗಳು ಈ ಸಮಯದಲ್ಲಿ ಪ್ರಾಣದೇವರು ಮತ್ತು ಭಗವಂತನಲ್ಲಿ  ಸೇರಿಕೊಂಡಿರುತ್ತಾರೆ. ಹೇಗೆ ಭಗವಂತ ಪ್ರಾಣದೇವರ ಅಂತರ್ಯಾಮಿಯಾಗಿ ನೆಲಸಿ ನಾವು ಉಂಡ ಆಹಾರವನ್ನು ಜೀರ್ಣಗೊಳಿಸುತ್ತಾನೆ ಎನ್ನುವುದನ್ನು ಕೃಷ್ಣ ಗೀತೆಯಲ್ಲಿ ಸುಂದರವಾಗಿ ವಿವರಿಸಿದ್ದಾನೆ. ಕೃಷ್ಣ ಹೇಳುತ್ತಾನೆ : ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ । ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ॥ಭಗವದ್ಗೀತಾ-೧೫-೧೪॥ “ನಾನು ವೈಶ್ವಾನರನಾಗಿ ಜೀವಿಗಳ ದೇಹದೊಳಗಿದ್ದು, ಪ್ರಾಣ-ಅಪಾನರಿಂದೊಡಗೂಡಿ [ತಿನ್ನುವ, ಚೀಪುವ, ನೆಕ್ಕುವ, ಕುಡಿಯುವ] ನಾಲ್ಕು ಬಗೆಯ ಆಹಾರವನ್ನು ಕರಗಿಸುತ್ತೇನೆ” ಎಂದು.
ಇಂದ್ರಿಯಾಭಿಮಾನಿ ದೇವತೆಗಳೆಲ್ಲರೂ ಭಗವತನಲ್ಲಿ ಸೇರಿಕೊಂಡಾಗ ಜೀವನಿಗೆ(ಪುರುಷಃ) ಯಾವುದೇ ಇಂದ್ರಿಯಾನುಭವ ಆಗುವುದಿಲ್ಲ. ಆತನಿಗೆ ಮಾತು ಕೇಳದು, ಕಣ್ಣು ಕಾಣದು, ವಾಸನೆ ಗ್ರಹಣವಾಗದು, ರುಚಿ ತಿಳಿಯದು, ಸ್ಪರ್ಶಜ್ಞಾನವಿಲ್ಲ, ಮಾತನಾಡಲಾಗುವುದಿಲ್ಲ, ಕೊಟ್ಟರೆ ಕೈ ತೆಗೆದುಕೊಳ್ಳುವುದಿಲ್ಲ, ಆನಂದಕೊಡುವ ಜನನೇಂದ್ರಿಯ ಕೆಲಸ ಮಾಡದು, ವಿಸರ್ಜನೆ ಕ್ರಿಯೆ ಇಲ್ಲ, ನಡೆಯಲು ಸಾಧ್ಯವಿಲ್ಲ. ಹೀಗೆ ನಿದ್ದೆಯಲ್ಲಿ ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯಗಳೆರಡೂ ಕೆಲಸ ಮಾಡುವುದಿಲ್ಲ. ಈ ಸ್ಥಿತಿಯನ್ನು ‘ಸ್ವಪೀತಿ’ ಎನ್ನುತ್ತಾರೆ. ಮೇಲ್ನೋಟಕ್ಕೆ ಸ್ವಪೀತಿ ಎಂದರೆ ನಿದ್ರಿಸಿದ್ದಾನೆ ಎಂದರ್ಥ. ಆದರೆ ಸ್ವಪೀತಿ ಎಂದರೆ ಸ್ವತಂತ್ರನಾದ ಭಗವಂತನನ್ನು ಸೇರಿದ್ದಾನೆ ಎಂದರ್ಥ.
ಓದುಗರು ಇಲ್ಲಿ ಒಂದು ಅಪೂರ್ವವಾದ ಭಾಷಾ ವಿಶೇಷವನ್ನು ಗಮನಿಸಬೇಕು. ಇಲ್ಲಿ ಇಂದ್ರಿಯಗಳ ಕ್ರಿಯೆಯನ್ನು ಹೇಳುವಾಗ ಕೆಲವು ‘ಪರಸ್ಮೈಪದ’ ಮತ್ತೆ ಕೆಲವು ‘ಆತ್ಮನೇಪದ’ವನ್ನು ಬಳಸಲಾಗಿದೆ. ಪ್ರಾಚೀನ ಸಂಸ್ಕೃತದಲ್ಲಿ ಈ ರೀತಿ ಪ್ರಯೋಗವಿದ್ದರೆ ಅದಕ್ಕೆ  ಅಲ್ಲಿ ಒಂದು ವಿಶೇಷ ಅರ್ಥವಿದೆ ಎಂದರ್ಥ. ಇದನ್ನು ನಾವು ತಿಳಿಯಬೇಕಾದರೆ ಮೊದಲು ನಮಗೆ  ಪರಸ್ಮೈಪದ ಮತ್ತು ಆತ್ಮನೇಪದ ಅಂದರೆ ಏನು ಎನ್ನುವುದು ತಿಳಿದಿರಬೇಕು. ಉದಾಹರಣೆಗೆ ಅಡಿಗೆ ಮಾಡುವುದನ್ನು ಸಂಸ್ಕೃತದಲ್ಲಿ ‘ಪಚತಿ’ ಅಥವಾ ‘ಪಚತೇ’ ಎನ್ನುತ್ತಾರೆ. ಇಲ್ಲಿ ‘ಪಚತಿ’ ಪರಸ್ಮೈಪದ. ಅಡಿಗೆಯನ್ನು ಬೇರೆಯವರಿಗಾಗಿ ಮಾಡುತ್ತಿದ್ದರೆ ಅದು ಪಚತಿ. ತನಗಾಗಿ ತಾನು ಅಡಿಗೆ ಮಾಡಿಕೊಂಡರೆ ಅದು  ಪಚತೇ(ಆತ್ಮನೇಪದ).
ಇಲ್ಲಿ ಮೊದಲ ಮೂರು ಕ್ರೀಯಾಪದಗಳು(ಶೃಣೋತಿ, ಪಶ್ಯತಿ ಮತ್ತು  ಜಿಘ್ರತಿ) ಪರಸ್ಮೈಪದದಲ್ಲಿವೆ.  ಉಳಿದ ಎಲ್ಲಾ ಪದಗಳೂ ಆತ್ಮನೇಪದಗಳು. ಇದನ್ನು ವಿಶ್ಲೇಷಿಸಿದಾಗ ನಮಗೆ ಇದರ ಹಿಂದಿನ ಕಾರಣ ತಿಳಿಯುತ್ತದೆ. ಶೃಣೋತಿ, ಪಶ್ಯತಿ ಮತ್ತು  ಜಿಘ್ರತಿ ಅಂದರೆ ಕೇಳುವುದು, ನೋಡುವುದು ಮತ್ತು ಆಘ್ರಾಣ ಮಾಡುವುದು. ಈ ಮೂರೂ ಕ್ರಿಯೆಗಳು  ಹೊರಗಿನಿಂದ ಬರುವಂತವು. ಇವು ಏಕಕಾಲದಲ್ಲಿ ಎಲ್ಲರಿಗೂ ಅನ್ವಯವಾಗುವ ಕ್ರಿಯೆ. ಏಕಕಾಲದಲ್ಲಿ ಒಂದು ವಸ್ತುವನ್ನು ಅನೇಕ ಮಂದಿ ನೋಡಿ, ಕೇಳಿ, ಮೂಸಿ ಅನುಭವಿಸಬಹುದು. ಆದ್ದರಿಂದ ಈ ಮೂರು ಕ್ರಿಯೆಗಳನ್ನು ಹೇಳುವಾಗ ಪರಸ್ಮೈಪದ ಬಳಸಿದ್ದಾರೆ. ಇತರ ಕ್ರಿಯೆಗಳನ್ನು ನೋಡಿದರೆ ಅವು ಸಾರ್ವತ್ರಿಕವಲ್ಲ. ಅವು ಇಂದ್ರಿಯದಲ್ಲಿದ್ದು ಅನುಭವ ಕೊಡುವಂತಹದ್ದು. ಉದಾಹರಣೆಗೆ ‘ರಸಯತೇ’ . ಇಲ್ಲಿ ರುಚಿಯನ್ನು ಯಾರು ತಿನ್ನುತ್ತಿದ್ದಾನೋ ಅವನಷ್ಟೇ ಅನುಭವಿಸಬಲ್ಲ. ಅದು ಸಾರ್ವತ್ರಿಕವಲ್ಲ. ಅದೇ ರೀತಿ  ಸ್ಪೃಶತೇ-ಸ್ಪರ್ಶ, ನಾಭಿವದತೇ-ಮಾತನಾಡುವುದು, ನಾSದತ್ತೇ-ಸ್ವೀಕರಿಸುವುದು, ನಾSನಂದಯತೇ-ಆನಂದ ಹೊಂದುವುದು[ಗಂಡು-ಹೆಣ್ಣು ಪರಸ್ಪರ, ಆದರೆ ಅದು ಸಾರ್ವತ್ರಿಕವಲ್ಲ] , ವಿಸೃಜತೇ-ವಿಸರ್ಜಿಸುವುದು ಮತ್ತು  ನೇಯಾಯತೇ-ನಡೆಯುವುದು. ಇದು ಸಂಸ್ಕೃತ ಭಾಷೆಯ ಚೆಲುವು. ಈ ಸೊಗಸು ಇನ್ನ್ಯಾವುದೇ ಭಾಷೆಯಲ್ಲಿ ಕಾಣಸಿಗುವುದಿಲ್ಲ.

No comments:

Post a Comment