ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Sunday, October 28, 2012

Prashnopanishad in Kannada-Prashna-III (04-07)


ದೇಹವನ್ನು ಪ್ರವೇಶಿಸುವ ಪ್ರಾಣದೇವರು ತಮ್ಮನ್ನು ತಾವು ಎಷ್ಟು ವಿಭಾಗವನ್ನಾಗಿ ಮಾಡಿಕೊಳ್ಳುತ್ತಾರೆ ಮತ್ತು ಆ ವಿಭಾಗದ ಉದ್ದೇಶವೇನು, ಯಾವಯಾವ ವಿಭಾಗದಲ್ಲಿ ಏನೇನು ಕ್ರಿಯೆ ನಡೆಯುತ್ತದೆ ಎನ್ನುವುದನ್ನು ಪಿಪ್ಪಲಾದರು ‘ಒಂದು ದೇಶದ ಆಡಳಿತದ’ ಉದಾಹರಣೆಯೊಂದಿಗೆ ವಿವರಿಸುತ್ತಾರೆ.      

ಯಥಾ ಸಮ್ರಾಡೇವಾಧಿಕೃತಾನ್ ವಿನಿಯುಙಕ್ತೇ   ಏತಾನ್ ಗ್ರಾಮಾನಧಿತಿಷ್ಠಸ್ವೇತಾನ್ ಗ್ರಾಮಾನಧಿತಿಷ್ಠಸ್ವೇತಿ ಏವಮೇವೈಷ ಪ್ರಾಣ ಇತರಾನ್ ಪ್ರಾಣಾನ್ ಪೃಥಕ್ ಪೃಥಗೇವ ಸನ್ನಿಧತ್ತೇ

ಇಲ್ಲಿ ಪಿಪ್ಪಲಾದರು “ಒಬ್ಬ ಚಕ್ರವರ್ತಿ ತನ್ನ ದೇಶದಲ್ಲಿ ವಿವಿಧ ಆಡಳಿತಾಧಿಕಾರಿಗಳನ್ನು ನೇಮಿಸಿ ಹೇಗೆ ಸಮಸ್ತವಾಗಿ ಆಡಳಿತ ನಿರ್ವಹಣೆ ಮಾಡುತ್ತಾನೋ, ಹಾಗೆ ಪ್ರಾಣದೇವರು ದೇಹದಲ್ಲಿ ಕಾರ್ಯನಿರ್ವಹಿಸುತ್ತಾರೆ” ಎಂದಿದ್ದಾರೆ. ಈ ಮಾತು ನಮಗೆ ಅರ್ಥವಾಗಬೇಕಾದರೆ ನಾವು ನಮ್ಮ ಹಿಂದಿನ ದೇಶಾಡಳಿತ ಕ್ರಮವನ್ನು ತಿಳಿದಿರಬೇಕು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಒಂದು ದೇಶದ ಆಡಳಿತವನ್ನು ಯಾವ ರೀತಿ ನಿರ್ವಹಿಸಬೇಕು ಎನ್ನುವುದನ್ನು ಬಹಳ ಸುಂದರವಾಗಿ ವಿವರಿಸಲಾಗಿದೆ. ಹಿಂದೆ ಒಂದು ಗ್ರಾಮವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸುತ್ತಿದ್ದರು. ಈ ನಾಲ್ಕು ವಿಭಾಗದಲ್ಲಿ ಒಂದು ಅಂಶ ಜನವಸತಿಗೆ, ಒಂದು ಅಂಶ ಬೇಸಾಯಕ್ಕೆ, ಒಂದು ಅಂಶ ಹುಲ್ಲುಗಾವಲು ಮತ್ತು ಉಳಿದ ಒಂದು ಅಂಶ ಕಾಡು-ಹೀಗೆ ಅಭಿವೃದ್ಧಿಪಡಿಸುತ್ತಿದ್ದರು. ಇಲ್ಲಿ ಪ್ರತಿಯೊಂದು ಗ್ರಾಮವೂ ತಮಗೆ ಬೇಕಾದ ಆಹಾರ ಬೆಳೆದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಅಭಿವೃದ್ಧಿಪಡಿಸಲಾಗುತ್ತಿತ್ತು. ಇಂತಹ ಹತ್ತು ಗ್ರಾಮಗಳ(ತಾಲೋಕು) ಆಡಳಿತವನ್ನು ನಿರ್ವಹಿಸಲು ದೇಶದ ಚಕ್ರವರ್ತಿ ಒಬ್ಬ ಸಮರ್ಥ ವ್ಯಕ್ತಿಯನ್ನು ನಿಯಮಿಸುತ್ತಿದ್ದ. ಈ ಆಡಳಿತಾಧಿಕಾರಿಯನ್ನು ‘ದಶಪ’ ಎಂದು ಕರೆಯುತ್ತಿದ್ದರು. ಆತನಿಗೆ ಈ ಹತ್ತು ಗ್ರಾಮದ ಒಟ್ಟು ಕಂದಾಯದ ಹತ್ತನೇ ಒಂದು ಭಾಗವನ್ನು ಸಂಬಳವಾಗಿ ಕೊಡುತ್ತಿದ್ದರು. ದಶಪನ ನಂತರ ‘ವಿಂಶತಪ’. ಈತ ಇಬ್ಬರು ದಶಪರ ಮೇಲಾಧಿಕಾರಿ(ಜಿಲ್ಲಾಧಿಕಾರಿ). ಈತನ ನಂತರ ‘ಶತಪ’. ಈತನ ಆಡಳಿತ ವ್ಯಾಪ್ತಿ ನೂರು ಗ್ರಾಮಗಳು. ಇದನ್ನು ಒಂದು ರಾಜ್ಯ ಎನ್ನಬಹುದು(ರಾಜ್ಯಪಾಲ). ಚಕ್ರವರ್ತಿಯಾದವನು ಈ ಎಲ್ಲಾ ಅಧಿಕಾರಿಗಳ ನೆರವು ಪಡೆದು ದೇಶದ ಪೂರ್ಣಾಡಳಿತವನ್ನು ನಡೆಸುತ್ತಿದ್ದ. ಇದೇ ರೀತಿ ಇಲ್ಲಿ ನಾವು ನಮ್ಮ ದೇಹವನ್ನು ಒಂದು ದೇಶ ಎಂದುಕೊಂಡರೆ ದೇಹದ ಬೇರೆಬೇರೆ ಭಾಗಗಳೇ ತಾಲೋಕು, ಜಿಲ್ಲೆ ಮತ್ತು ರಾಜ್ಯಗಳು. ಅದಕ್ಕೆ ಬೇರೆ ಬೇರೆ ಅಧಿಕಾರಿಗಳು. ಆ ಎಲ್ಲಾ ಅಧಿಕಾರಿಗಳ ಮೂಲಕ ದೇಹದ ನಿಯಂತ್ರಣ ಮಾಡುವ ಚಕ್ರವರ್ತಿ ಪ್ರಾಣದೇವರು. ಪ್ರಾಣದೇವರ ರಾಜ್ಯಪಾಲರು- ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ.  ಇವರನ್ನು 'ಅವಾಂತರ ಪ್ರಾಣರು' ಎನ್ನುತ್ತಾರೆ. ಭಗವಂತನ ಸಾಕ್ಷಾತ್ ಪುತ್ರನಾದ ‘ಪ್ರಾಣ’ ಅವಾಂತರ ಪ್ರಾಣರನ್ನು ದೇಹದ ಬೇರೆಬೇರೆ ವಿಭಾಗದ ಆಡಳಿತ ನಡೆಸಲು ಕಳುಹಿಸುತ್ತಾನೆ. ಇಲ್ಲಿ ಒಂದು ವಿಶೇಷವೇನೆಂದರೆ ಒಬ್ಬ ಚಕ್ರವರ್ತಿಯಂತೆ ಪ್ರಾಣ ಮತ್ತು ಭಗವಂತ ಒಂದು ಕಡೆ ನೆಲಸಿ ಆಡಳಿತ ನಿರ್ವಹಿಸುವುದಿಲ್ಲ. ಬದಲಾಗಿ ಅವರು ಅವಾಂತರ ಅಧಿಕಾರಿಗಳ ಅಂತರ್ಯಾಮಿಯಾಗಿ ಸೇರಿ ಶಕ್ತಿಪಾತ ಮಾಡಿ ಕಾರ್ಯನಿರ್ವಹಣೆ ಮಾಡಿಸುತ್ತಾರೆ.

ಪಾಯೂಪಸ್ಥೇಽಪಾನಂ ಚಕ್ಷುಃಶ್ರೋತ್ರೇ ಮುಖನಾಸಿಕಾಭ್ಯಾಂ ಪ್ರಾಣಃ ಸ್ವಯಂ ಪ್ರತಿಷ್ಠತೇ ಮಧ್ಯೇ ತು ಸಮಾನಃ  ಏಷ ಹ್ಯೇತದ್ಧ್ರುತಮನ್ನಂ ಸಮಂ ನಯತಿ ತಸ್ಮಾದೇತಾಃ ಸಪ್ತಾರ್ಚಿಷೋ ಭವಂತಿ ಹೃದಿ ಹ್ಯೇಷ ಆತ್ಮಾ  

 ಇಲ್ಲಿ ಪಿಪ್ಪಲಾದರು ಪ್ರತಿಯೊಬ್ಬ ಅವಾಂತರ ಪ್ರಾಣರ ಆಡಳಿತ ವ್ಯಾಪ್ತಿಯನ್ನು ವಿವರಿಸಿದ್ದಾರೆ.  ನಮ್ಮ ದೇಹದ ಒಳಗೆ ಪ್ರತಿಯೊಂದು ಕ್ರಿಯೆಯನ್ನು ನಿರಂತರವಾಗಿ ಒಂದು ವ್ಯವಸ್ಥಿತ ರೀತಿಯಲ್ಲಿ ಪ್ರಾಣದೇವರು ತನ್ನ ಐದು ರೂಪಗಳಿಂದ ನಡೆಸುತ್ತಿದ್ದಾರೆ. ಮೊದಲನೆಯದಾಗಿ ದೇಹದ ಕೆಳಭಾಗ. ಈ ಭಾಗದ ಅಧಿಕಾರ ವ್ಯಾಪ್ತಿ ಅಪಾನನಿಗೆ ಸೇರಿದೆ. ಈತ ನಮ್ಮ ಪಾಯು(ಮಲ ವಿಸರ್ಜನೆ) ಮತ್ತು ಉಪಸ್ಥ(ಮೂತ್ರ ಮತ್ತು ಸಂತಾನ ಕ್ರಿಯೆ)ದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಾನೆ. ಎರಡನೆಯದಾಗಿ ದೇಹದ ಮೇಲ್ಭಾಗ. ನಮ್ಮ ಕಣ್ಣು, ಕಿವಿ, ಬಾಯಿ, ಉಸಿರು. ಈ ಕ್ರಿಯೆಯನ್ನು ಸ್ವಯಂ ಪ್ರಾಣ ದೇವರು ನಿರ್ವಹಿಸುತ್ತಾರೆ. ಅವರು ನಮಗೆ ಕಣ್ಣಿನಿಂದ ನೋಡಿಸುತ್ತಾರೆ, ಕಿವಿಯಿಂದ ಕೇಳಿಸುತ್ತಾರೆ, ಬಾಯಿಯಿಂದ ಮಾತನಾಡಿಸುತ್ತಾರೆ, ಮೂಗಿನಿಂದ ಉಸಿರಾಡಿಸಿ ಬದುಕಿಸುತ್ತಾರೆ. ಮೂರನೆಯದು ದೇಹದ ಮಧ್ಯಭಾಗ. ನಾವು ಸೇವಿಸುವ ಆಹಾರವನ್ನು ಜೀರ್ಣಗೊಳಿಸಿ, ಅದರಿಂದ ಬೇಡವಾದ ಸ್ಥೂಲಭಾಗವನ್ನು ವಿಭಾಗಿಸಿ, ದೇಹಕ್ಕೆ ಬೇಕಾದ ಆಹಾರದ ಅಂಶವನ್ನು ದೇಹದ ವಿವಿಧ ಭಾಗಕ್ಕೆ ತಲುಪಿಸಿ, ಶಕ್ತಿಯನ್ನು ನೀಡುವ ಕ್ರಿಯೆಯನ್ನು- ದೇಹದ ಮಧ್ಯಭಾಗದಲ್ಲಿ ಕುಳಿತ ‘ಸಮಾನ’ ನಾಮಕ ಪ್ರಾಣ ನಿರ್ವಹಿಸುತ್ತಾನೆ. [ಇದಕ್ಕಾಗಿ ಊಟ ಮಾಡುವ ಮೊದಲು ಪ್ರಾಣನಿಗೆ ಮತ್ತು ಪ್ರಾಣನ ಅಂತರ್ಯಾಮಿ ಭಗವಂತನಿಗೆ ಆಹುತಿ ಕೊಟ್ಟು ಊಟ ಮಾಡುವುದು ಪದ್ಧತಿ]. ಇಲ್ಲಿ ದೇಹದ ಮಧ್ಯಭಾಗ ಎಂದರೆ   ನಾಭಿಯಿಂದ ಹೃದಯದ ತನಕದ ಭಾಗ. ಶಾಸ್ತ್ರದಲ್ಲಿ ಹೊಟ್ಟೆಯನ್ನೂ ಕೂಡಾ ಮಧ್ಯಭಾಗ ಎನ್ನುತ್ತಾರೆ. ದೇಹದ ಮಧ್ಯಭಾಗದ ಕೇಂದ್ರಬಿಂದು ಹೃದಯ. ಇದು ದೇಹದಲ್ಲಿ ಭಗವಂತನ ಪ್ರತಿಬಿಂಬವಾಗಿರುವ ಜೀವನಿರುವ ಸ್ಥಾನ. ಬಿಂಬವಿರುವಲ್ಲೇ ಪ್ರತಿಬಿಂಬವಿರುವುದು ಸಾಧ್ಯ. ಆದ್ದರಿಂದ ಇದು ದೇಹದಲ್ಲಿ ಬಿಂಬರೂಪಿ ಭಗವಂತನಿರುವ ಸ್ಥಾನ ಕೂಡಾ ಹೌದು. ನಮಗೆ ತಿಳಿದಂತೆ ಪ್ರಾಣದೇವರು ಭಗವಂತನ ನಿತ್ಯಸಂಗಾತಿ. ಅವರು ಎಂದೂ ಭಗವಂತನನ್ನು ಬಿಟ್ಟಿರಲಾರರು. ಹಾಗಾಗಿ ಹೃತ್ಕಮಲದಲ್ಲಿ ಜೀವ-ಪ್ರಾಣ ಮತ್ತು ಬಿಂಬರೂಪಿ ಭಗವಂತ ಜೊತೆಯಾಗಿ ನೆಲೆಸಿರುತ್ತಾರೆ.
ಜೀವ ಅನ್ನುವುದು ಅತಿಸೂಕ್ಷ್ಮವಾದ ವಸ್ತು. ಅದು ಹೃತ್ಕಮಲ ಮಧ್ಯದಲ್ಲಿ ಅನಾಹತಚಕ್ರ(thymus gland)ವೆಂಬ ಶಕ್ತಿ ಕೇಂದ್ರದಲ್ಲಿದೆ. ಈ ಜೀವ ಎನ್ನುವುದು ಕೋಣೆಯಲ್ಲಿ ಹಚ್ಚಿದ ಪುಟ್ಟ ದೀಪದಂತೆ. ದೀಪ ಇಡೀ ಕೋಣೆಯನ್ನು ಬೆಳಗಿಸುವಂತೆ  ಜೀವ  ಅತಿಸೂಕ್ಷ್ಮವಾದರೂ ಕೂಡಾ ಅದರ ಬೆಳಕು ಇಡೀ ದೇಹವನ್ನು ವ್ಯಾಪಿಸಿರುತ್ತದೆ. ಇಲ್ಲೇ ಭಗವಂತ ಮತ್ತು ಪ್ರಾಣ ಜೀವನನ್ನು ಧರಿಸಿ ನೆಲೆಸಿರುತ್ತಾರೆ. ನಾರಾಯಣ ಸೂಕ್ತದಲ್ಲಿ ಹೇಳುವಂತೆ: “ಪದ್ಮಕೋಶ-ಪ್ರತೀಕಾಶಗ್ಂ ಹೃದಯಂಚಾಪ್ಯಧೋಮುಖಮ್”  ಕೆಳಮುಖವಾಗಿರುವ ಕೆಂದಾವರೆಯ ಮೊಗ್ಗಿನಂತಿರುವ ಶಕ್ತಿ ಕೇಂದ್ರದಲ್ಲಿರುವ ಅತ್ಯಂತ ಸೂಕ್ಷ್ಮ ನೆಲೆಮನೆಯಲ್ಲಿ ಜೀವನನ್ನು ಪ್ರಾಣಾಂತರ್ಗತ ಭಗವಂತ ಧರಿಸಿ ನಿಂತಿದ್ದಾನೆ. ದೇಹದ ಸಮಸ್ತ ಚಟುವಟಿಕೆಗಳೂ ನಡೆಯುವುದು ಈ ಶಕ್ತಿ ಕೇಂದ್ರದಿಂದ.
ದೇಹದ ಮಧ್ಯಭಾಗದಲ್ಲಿ ನೆಲೆಸಿರುವ ‘ಸಮಾನ’ ನಾಮಕ ಅವಾಂತರ ಪ್ರಾಣನ ಅಂತರ್ಯಾಮಿಯಾಗಿ ಪ್ರಾಣದೇವರು ನಾವು ಆಹುತಿ ರೂಪದಲ್ಲಿ ಸೇವಿಸುವ ಆಹಾರವನ್ನು ಸಮನಾಗಿ(ಸಮಮ್-ನಯತಿ) ದೇಹದ ಆಯಾ ಭಾಗಗಳಿಗೆ ತಲುಪಿಸುತ್ತಾರೆ. ದೇಹದಲ್ಲಿ ಆಹಾರ ವಿತರಣೆ ಮಾಡುವ ‘ಸಮಾನ’ ನಾಮಕ ಪ್ರಾಣನಿಂದಾಗಿ ನಮಗೆ ಏಳು ಬಗೆಯ ಅರಿವು(ಜ್ಞಾನ) ಮೂಡುತ್ತದೆ. ಕಣ್ಣಿನಿಂದ ರೂಪದ ಅರಿವು, ಕಿವಿಯಿಂದ ಶಬ್ದದ ಅರಿವು, ಮೂಗಿನಿಂದ ಗಂಧದ ಅರಿವು, ನಾಲಿಗೆಯಿಂದ ರಸದ ಅರಿವು, ಚರ್ಮದಿಂದ ಸ್ಪರ್ಶದ ಅರಿವು, ಮನಸ್ಸಿನಲ್ಲಿ ಬಯಕೆ, ಬುದ್ಧಿಯಿಂದ ಬೇಕು ಬೇಡಗಳ ತೀರ್ಮಾನ-ಇವೇ ಆ ಏಳು ಬಗೆಯ ಬೆಳಕುಗಳು. ಹೀಗೆ  ಎಲ್ಲಾ ಇಂದ್ರಿಯಗಳಿಗೆ ಶಕ್ತಿ ಆಧಾನ ಮಾಡಿ, ಜ್ಞಾನಪೂರ್ಣವಾದ  ಸಮಸ್ತ ಚಟುವಟಿಕೆಗಳನ್ನು ಹೃದಯದಲ್ಲಿ ನೆಲಸಿರುವ ‘ಸಮಾನ’ ನಿರ್ವಹಿಸುತ್ತಾನೆ.      

ಅತ್ರೈತದೇಕಶತಂ ನಾಡೀನಾಂ ತಾಸಾಂ ಶತಂಶತಮೇಕೈಕಸ್ಯಾಂ ದ್ವಾಸಪ್ತತಿಂದ್ವಾಸಪ್ತತಿಮ್ ಪ್ರತಿಶಾಖಾನಾಡೀಸಹಸ್ರಾಣಿ ಭವಂತ್ಯಾಸು ವ್ಯಾನಶ್ಚರತಿ  

ಪ್ರಾಣ, ಅಪಾನ ಮತ್ತು ಸಮಾನರ ಕಾರ್ಯವ್ಯಾಪ್ತಿಯನ್ನು ವಿವರಿಸಿದ ಪಿಪ್ಪಲಾದರು ಇಲ್ಲಿ ‘ವ್ಯಾನ’ ನ ಕಾರ್ಯವ್ಯಾಪ್ತಿಯನ್ನು ವಿವರಿಸುತ್ತಾರೆ. ಇದೊಂದು ಅಪೂರ್ವವಾದ ವಿಷಯ. ಈ ವಿಷಯ ಅಧ್ಯಾತ್ಮ ಶಾಸ್ತ್ರದಲ್ಲಿ ಇನ್ನೆಲ್ಲಿಯೂ ಕಾಣಸಿಗುವುದಿಲ್ಲ. ನಮ್ಮ ಹೃದಯದ ಕೇಂದ್ರ ಭಾಗದಿಂದ  ೧೦೧ ನಾಡಿಗಳು ಕವಲೊಡೆದಿವೆ. [ಐವತ್ತು ಎಡ ಭಾಗದಲ್ಲಿ, ಐವತ್ತು ಬಲಭಾಗದಲ್ಲಿ ಮತ್ತು ನಡುವೆ ಸುಷುಮ್ನಾ ನಾಡಿ]. ಇಲ್ಲಿರುವ ಪ್ರತಿಯೊಂದು ನಾಡಿಗಳಿಗೂ ೧೦೦ ಉಪನಾಡಿಗಳಿವೆ. ಹಾಗಾಗಿ ಒಟ್ಟು ೧೦,೧೦೦ ಉಪನಾಡಿಗಳು. ಪ್ರತಿಯೊಂದು ಉಪನಾಡಿಗಳಿಗೂ ಕೂಡಾ ೭೨,೦೦೦ ಪ್ರತಿನಾಡಿಗಳಿವೆ. ಆದ್ದರಿಂದ ನಮ್ಮ ದೇಹದಲ್ಲಿರುವ ಒಟ್ಟು ನಾಡಿಗಳ ಸಂಖ್ಯೆ: ೭೨ ಕೋಟಿ ೭೨ ಲಕ್ಷ! ಇದು ಇಂದಿನ ವೈದ್ಯಶಾಸ್ತ್ರಕ್ಕೆ ತಿಳಿಯದ ವಿಚಾರ. ಏಕೆಂದರೆ ಇದರಲ್ಲಿ ಕಣ್ಣಿಗೆ ಕಾಣುವ ಮತ್ತು ಕಾಣದ ಸೂಕ್ಷ್ಮಾತಿಸೂಕ್ಷ್ಮ ಶಕ್ತಿ ಸಂಪರ್ಕಗಳು ಸೇರಿವೆ.  ಈ ಎಲ್ಲಾ ನಾಡಿಗಳಲ್ಲಿ, ಕಾಲಿನ ಬೆರಳಿನಿಂದ ಹಿಡಿದು, ತಲೆಕೂದಲಿನ ತನಕ  ‘ವ್ಯಾನ’ ಬೇರೆ ಬೇರೆ ಶಕ್ತಿಯನ್ನು ಹರಿಸುತ್ತಾನೆ. ನಮ್ಮ ದೇಹದಲ್ಲಿ ವ್ಯಾನ ಶಕ್ತಿ ದೇಹದ ಎಲ್ಲಾ ಭಾಗದಲ್ಲಿ ಹರಿಯುತ್ತಿದ್ದರೆ ಆಗ ದೇಹ ಗಟ್ಟಿಮುಟ್ಟಾಗಿರುತ್ತದೆ. ಎಲ್ಲಿ ವ್ಯಾನ ಶಕ್ತಿ ಕಡಿಮೆಯಾಯಿತೋ ಅಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ ದೇಹದಲ್ಲಿನ ಪ್ರತಿನಾಡಿಯಲ್ಲೂ ವಿಶೇಷ ಶಕ್ತಿಯನ್ನು ತುಂಬುವ ವಿಶಿಷ್ಟವಾದ ಕಾರ್ಯವನ್ನು ವ್ಯಾನ ನಾಮಕ ವಾಯುವಿನ ಅಂತರ್ಯಾಮಿಯಾಗಿ ಕುಳಿತು ಪ್ರಾಣದೇವರು ಮಾಡಿಸುತ್ತಿರುತ್ತಾರೆ.

ಅಥೈಕಯೋರ್ಧ್ವ ಉದಾನಃ ಪುಣ್ಯೇನ ಪುಣ್ಯಂ ಲೋಕಂ ನಯತಿ ಪಾಪೇನ ಪಾಪಮುಭಾಭ್ಯಾಮೇವ ಮನುಷ್ಯಲೋಕಮ್  

ಕಂಠದಲ್ಲಿ ಕಿರುನಾಲಿಗೆಯ ಕೆಳಗೆ ಸೂಜಿ ಮೊನೆಯಷ್ಟು ಸೂಕ್ಷ್ಮವಾಗಿರುವ ವಿಶುದ್ಧಿಚಕ್ರದ ಮೂಲಕ ನಮಗೆ ಕನಸಿನ ಅನುಭವವನ್ನು ಕೊಡುವವನು ಉದಾನ. ಜೀವನನ್ನು ದೇಹದ ಯಾವುದಾದರೊಂದು ನಾಡಿಯ ಮೂಲಕ ಹೊರ ಕರೆದುಕೊಂಡು ಹೋಗಿ, ಜೀವ ಸೇರಬೇಕಾದ ಲೋಕಕ್ಕೆ ಸೇರಿಸುವವನೂ ಅವನೇ.  ಜೀವ ದೇಹದಿಂದ ಯಾವುದೇ ಭಾಗದಿಂದ ಕೂಡಾ ಹೊರ ಹೋಗಬಹುದು. ಕೇವಲ ನವದ್ವಾರದಲ್ಲಷ್ಟೇ ಅಲ್ಲ ರೋಮಕೂಪದಲ್ಲಿ ಕೂಡಾ ಜೀವ ಹೊರ ಹೋಗಬಹುದು. ಸಾಮಾನ್ಯವಾಗಿ ಪುಣ್ಯ ಮಾಡಿದ ಜೀವ ದೇಹದ ಊರ್ಧ್ವಭಾಗದಿಂದ ಹೊರ ಹೋಗುತ್ತದೆ. ಇಂತಹ ಜೀವರನ್ನು  ಉದಾನ ಸುಖವನ್ನು ಅನುಭವಿಸುವ ಸ್ವರ್ಗದಂತಹ ಪುಣ್ಯಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ಪಾಪ ಮಾಡಿದ ಜೀವ ದೇಹದ ಸೊಂಟದ ಕೆಳಗಿನ ಭಾಗದಿಂದ ಹೊರ ಹೋಗುತ್ತದೆ. ಅಂತಹ ಜೀವರನ್ನು ಪ್ರಾಣದೇವರು ದುಃಖವನ್ನು ಅನುಭವಿಸುವ ನರಕಾದಿ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಪುಣ್ಯ-ಪಾಪಗಳೆರಡೂ ಸಮನಾಗಿದ್ದಾಗ ಅಂತಹ ಜೀವ ನೇರವಾಗಿ ಮನುಷ್ಯ ಲೋಕದಲ್ಲಿ ಹುಟ್ಟುತ್ತದೆ. ಕೆಲವೊಮ್ಮೆ ಪ್ರಸವಕಾಲದಲ್ಲಿ  ಜೀವ ದೇಹವನ್ನು ಬಿಟ್ಟು ಹೋಗುವುದುಂಟು. ಅಂತಹ ಸಮಯದಲ್ಲಿ  ನೇರ ಮನುಷ್ಯಲೋಕದಲ್ಲಿ ಹುಟ್ಟಬೇಕಾದ ಜೀವ ಆ ದೇಹವನ್ನು ಪ್ರವೇಶಿಸಿ ಹುಟ್ಟಬಹುದು. ಇದು ಅತ್ಯಂತ ವಿರಳ. ಆದರೆ ಈ ರೀತಿ ಜೀವ ಇನ್ನೊಂದು ಶರೀರವನ್ನು ತಕ್ಷಣ ಪ್ರವೇಶಿಸಿದರೆ ಆಗ ಆ ಜೀವನಿಗೆ ತನ್ನ ಹಿಂದಿನ ಜನ್ಮದ ಸ್ಮರಣೆ ಇರುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಗರ್ಭದಲ್ಲಿರುವ ಒಂಬತ್ತು ತಿಂಗಳಿನಿಂದ ಹಿಡಿದು, ಹುಟ್ಟಿ ಸಾಯುವ ತನಕ, ಸತ್ತ ನಂತರ ಲೋಕಾಂತರ ಹೋಗಿ ಮತ್ತೆ ಹುಟ್ಟುವ ತನಕ, ಪ್ರತಿಯೊಂದು ಜೀವರ ಕ್ರಿಯೆ ಪಂಚಪ್ರಾಣರ ಅಧೀನವಾಗಿ ನಡೆಯುತ್ತಿರುತ್ತದೆ. ಈ ಪ್ರಾಣತತ್ತ್ವವನ್ನು ತಿಳಿದರೆ ಪ್ರಪಂಚದ ರಹಸ್ಯವನ್ನು ತಿಳಿದಂತೆ. 

No comments:

Post a Comment