ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Saturday, October 20, 2012

Prashnopanishad in Kannada-Prashna-II (12-13)



ಯಾ ತೇ ತನೂರ್ವಾಚಿ ಪ್ರತಿಷ್ಠಿತಾ ಯಾ ಶ್ರೋತ್ರೇ ಯಾ ಚ ಚಕ್ಷುಷಿ
ಯಾ ಚ ಮನಸಿ ಸಂತತಾ ಶಿವಾಂ ತಾಂ ಕುರೂ ಮೋತ್ಕ್ರಮೀಃ   ೧೨

ಈ ವಿಶೇಷವಾದ ಚರ್ಚೆಯಲ್ಲಿ ಪಾಲ್ಗೊಂಡ ಪ್ರಮುಖ ದೇವತೆಗಳಾದ ಅಗ್ನಿ(ವಾಗ್ದೇವತೆ), ಇಂದ್ರ, ಗರುಡ, ಶೇಷ, ರುದ್ರ(ಮನೋಭಿಮಾನಿಗಳು), ಸೂರ್ಯ(ಕಣ್ಣಿನ ಅಭಿಮಾನಿ) ಮತ್ತು ಚಂದ್ರ(ಕಿವಿಯ ಅಭಿಮಾನಿ) ಈಗ ಹೇಳುತ್ತಾರೆ: “ಅಗ್ನಿಯಲ್ಲಿ ಕೂತು ನುಡಿಸುವವನು ನೀನು. ಆದ್ದರಿಂದ ವಾಗೇಂದ್ರಿಯದಲ್ಲಿರುವ ನಿನ್ನ ರೂಪವನ್ನು ದೇಹದಿಂದ ಹೊರಕಳುಹಿಸಬೇಡ. ಕಿವಿಯಲ್ಲಿ ನಿನ್ನ ಪ್ರಾಣಶಕ್ತಿ ಇದೆ, ಕಣ್ಣಿನಲ್ಲಿ ನಿನ್ನ ಸನ್ನಿಧಾನವಿದೆ. ನೀನಿಲ್ಲದೆ ಸೂರ್ಯ ಚಂದ್ರರು ಏನೂ ಮಾಡಲು ಸಾಧ್ಯವಿಲ್ಲ. ಮನಸ್ಸನ್ನು ನಿಯಂತ್ರಿಸುವ ನಿನ್ನ ರೂಪವನ್ನು ಮನಸ್ಸಿನಲ್ಲಿ ಇರಗೊಡು. ಎಲ್ಲಾ ದೇವತೆಗಳ ಒಳಗಿದ್ದು ಸಮಸ್ತ ಇಂದ್ರಿಯಗಳ ವ್ಯಾಪಾರವನ್ನು ನಿಯಂತ್ರಿಸಿ ಈ ಜಗತ್ತಿಗೆ ಬೆಳಕು ನೀಡುವವನು ನೀನು. ನಿನ್ನ ಮಾಂಗಲಿಕವಾದ ದೃಷ್ಟಿ ಎಲ್ಲಾ ಇಂದ್ರಿಯಗಳ ಮೇಲಿರಲಿ. ಇದರಿಂದ ಕಣ್ಣು ಒಳ್ಳೆಯದನ್ನು ನೋಡಲಿ, ಕಿವಿ ಒಳ್ಳೆಯದನ್ನು ಕೇಳಲಿ, ಬಾಯಿ ಒಳ್ಳೆಯದನ್ನು ನುಡಿಯಲಿ, ಮನಸ್ಸು ಒಳ್ಳೆಯದನ್ನು ಗ್ರಹಿಸಲಿ. ಎಲ್ಲವೂ ಮಾಂಗಲಿಕವಾಗಿ ಒಳ್ಳೆಯ ಅನುಭವ ಬರುವಂತೆ ಮಾಡು. ದಯವಿಟ್ಟು ಈ ದೇಹದಿಂದ ನೀನು ಹೊರ ಹೋಗಬೇಡ. ನಮ್ಮೊಳಗೆ ಕೂತು ನಮ್ಮನ್ನು ನಡೆಸು” ಎಂದು ದೇವತೆಗಳು ಪ್ರಾಣದೇವರನ್ನು ಪ್ರಾರ್ಥಿಸುತ್ತಾರೆ.
ಈ ಮೇಲಿನ ಎಂಟು ಮಂತ್ರಗಳಲ್ಲಿ ಬಂದಿರುವ ಮಳೆ, ಸುಡುವುದು, ಉಸಿರಾಡಿಸುವುದು, ಗರ್ಭರಕ್ಷಣೆ, ಇತ್ಯಾದಿ ಕ್ರಿಯೆಗಳು ಮತ್ತು ಸೂರ್ಯ, ಚಂದ್ರ, ಅಗ್ನಿ, ವಹ್ನಿ, ಪರ್ಜನ್ಯ, ಪ್ರಜಾಪತಿ ಇತ್ಯಾದಿ ಶಬ್ದಗಳು ಮೂಲತಃ ಭಗವಂತನನ್ನು ಹೇಳುತ್ತವೆ. ಭಗವಂತನ ಆನಂತರ ಇವು ವಾಯುದೇವರನ್ನು ಹೇಳುತ್ತವೆ. ಇದು ನೇರವಾಗಿ ವಾಯುದೇವರ ಮುಂದೆ ದೇವತೆಗಳು ಮಾಡಿದ ಶ್ಲೋಕವಾದ್ದರಿಂದ  ಇದು ವಾಯುಸ್ತುತಿ. ಆದರೆ ಇದು ವಿಷ್ಣುಸ್ತೋತ್ರವೂ ಹೌದು ಎನ್ನುವುದಕ್ಕೆ ಮುಂದಿನ ಮಂತ್ರದಲ್ಲಿ ನಮಗೆ ಖಚಿತವಾದ ಮಾಹಿತಿ ದೊರೆಯುತ್ತದೆ. ಅಲ್ಲಿ ದೇವತೆಗಳು ಪ್ರಾಣನ ಅಂತರ್ಗತ ನಾರಾಯಣನನ್ನೂ ಕೂಡಾ ಸ್ತೋತ್ರ ಮಾಡಿದ್ದಾರೆ ಎನ್ನುವುದು ಖಚಿತವಾಗಿ ತಿಳಿಯುತ್ತದೆ.      

ಪ್ರಾಣಸ್ಯೇತದ್ ವಶೇ ಸರ್ವಂ ತ್ರಿದಿವೇ ಯತ್ ಪ್ರತಿಷ್ಠಿತಂ
ಮಾತೇವ ಪುತ್ರಾನ್ ರಕ್ಷಸ್ವ  ಶ್ರೀಶ್ಚ ಪ್ರಜ್ಞಾಂ ಚ ವಿಧೇಹಿ ನ ಇತಿ   ೧೩

ದೇವತೆಗಳು ಹೇಳುತ್ತಾರೆ: “ಓ ಪ್ರಾಣದೇವನೇ, ಸರ್ವ ಜಗತ್ ಚೇಷ್ಠಕನಾದ ನಿನ್ನ ವಶದಲ್ಲಿ ಎಲ್ಲವೂ ಇದೆ” ಎಂದು. ಇಲ್ಲಿ ತ್ರಿದಿವ ಎನ್ನುವ ಪದ ಬಳಕೆಯಾಗಿದೆ. ತ್ರಿದಿವ ಎಂದರೆ ಮೇಲಿನ ಸ್ವರ್ಗಲೋಕ ಮತ್ತು ಅದರಿಂದಾಚೆಗೆ ಸತ್ಯಲೋಕದ ತನಕ ಇರುವ ಎಲ್ಲಾ ಲೋಕಗಳು[ಮೇಲಿನ ಏಳು ಲೋಕಗಳು: ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯಲೋಕ] ಪ್ರಾಣದೇವರಿರುವ ಸ್ಥಾನ ಸತ್ಯಲೋಕ. ಇದು ಅತ್ಯಂತ ಉನ್ನತವಾಗಿರುವ ‘ತ್ರಿದಿವ’. ಇಲ್ಲಿಯ ತನಕ ಇರುವ ಸಮಸ್ತವೂ ಪ್ರಾಣ ದೇವರ ಅಧೀನವಾಗಿದೆ.
ಜಡಕ್ಕೆ ರೂಪಕೊಡುವವರು ಪ್ರಾಣದೇವರು. ಜೀವಕ್ಕೆ ಉಸಿರುಕೊಟ್ಟು ಬದುಕಿಸಿ ರಕ್ಷಣೆ ಮಾಡುವವರು ಪ್ರಾಣದೇವರು. ಆದ್ದರಿಂದ ಎಲ್ಲವೂ ಪ್ರಾಣದೇವರ ವಶ. ಸಮಸ್ತ ದೇವತೆಗಳೂ ಪ್ರಾಣದೇವರ ಅಧೀನವಾಗಿ, ಅವರ ನಿಯತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. “ನೀನು ನಿಯಮಿಸಿದ ಕೆಲಸವನ್ನು ನಿನ್ನ ಆಜ್ಞಾನುಸಾರ ನೀನು ಕೊಟ್ಟ ಶಕ್ತಿಯಿಂದ ನಾವು ಮಾಡುತ್ತೇವೆ” ಎನ್ನುತ್ತಾರೆ ದೇವತೆಗಳು. ಇದು ಭಗವಂತನ ಮತ್ತು ಪ್ರಾಣದೇವರ ಶಕ್ತಿ ವಿಶೇಷ.
ಕೊನೆಯದಾಗಿ ದೇವತೆಗಳು ಹೇಳುತ್ತಾರೆ: “ಮಾತೇವ ಪುತ್ರಾನ್ ರಕ್ಷಸ್ವ  ಶ್ರೀಶ್ಚ ಪ್ರಜ್ಞಾಂ ಚ ವಿಧೇಹಿ ನಃ” ಎಂದು. ಇಲ್ಲಿ ನಮಗೆ ಈ ವಾಯುಸ್ತುತಿ ಕೇವಲ ವಾಯುಸ್ತುತಿಯಷ್ಟೇ ಅಲ್ಲ ಹರಿಸ್ತುತಿ ಕೂಡಾ ಹೌದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ದೇವತೆಗಳು ಕೊನೆಯದಾಗಿ “ಓ ಶ್ರೀದೇವಿಯೇ” ಎಂದು ತಾಯಿಯನ್ನು ಸಂಬೋಧಿಸಿದ್ದಾರೆ. ನಮಗೆ ತಿಳಿದಂತೆ ‘ಶ್ರೀ’  ಅಂದರೆ ಲಕ್ಷ್ಮಿ. ಇನ್ನೊಂದು ಅರ್ಥದಲ್ಲಿ ‘ಶಂ’ ಎಂದರೆ ಆನಂದಸ್ವರೂಪನಾಗಿರುವ ಪ್ರಾಣದೇವರು. ಅವನಲ್ಲಿ ರಮಿಸುವವಳು ಶ್ರೀಃ. ಅಂದರೆ ಪ್ರಾಣದೇವರ ಮಡದಿ ಭಾರತೀದೇವಿ. [ಭಾರತೀದೇವಿಯನ್ನೂ ಕೂಡಾ ಶ್ರೀ ಎಂದು ಕರೆಯುತ್ತಾರೆ ಎನ್ನುವುದು ನಮಗೆ ಪಾಂಡವರ ಸ್ವರ್ಗಾರೋಹಣದ ನಂತರ ಬರುವ ಕಥೆಯಲ್ಲಿ ತಿಳಿಯುತ್ತದೆ. ಅಲ್ಲಿ ಧರ್ಮರಾಯ ಭಾರತೀದೇವಿಯನ್ನು ದ್ರೌಪದಿ ಎಂದು ತಪ್ಪಾಗಿ ತಿಳಿದಾಗ ಆತನಿಗೆ ಭಾರತೀದೇವಿಯ ಪರಿಚಯ ಮಾಡುವಾಗ ‘ಶ್ರೀಃ’ ಎಂದು ಪರಿಚಿಸುವುದನ್ನು ಕಾಣುತ್ತೇವೆ]
ದೇವತೆಗಳು ತಮ್ಮ ಸ್ತುತಿಯನ್ನು ಲಕ್ಷ್ಮೀ-ಭಾರತಿಯರ ಸ್ತುತಿಯೊಂದಿಗೆ ಉಪಸಂಹಾರ ಮಾಡುತ್ತಾ ಹೇಳುತ್ತಾರೆ: “ ಓ ಶ್ರೀದೇವಿಯೇ[ಓ ಲಕ್ಷ್ಮೀ ದೇವಿಯೇ, ಓ ಭಾರತೀ ದೇವಿಯೇ] ನೀನು ನಮ್ಮನ್ನು ರಕ್ಷಿಸು. ನಾವು ನಿನ್ನ ಮಕ್ಕಳು. ಮಕ್ಕಳು ತಪ್ಪು ಮಾಡಿದಾಗ ತಾಯಿ ಹೇಗೆ ಕ್ಷಮಿಸುತ್ತಾಳೋ ಹಾಗೆ ನಮ್ಮ ತಪ್ಪನ್ನು ಕ್ಷಮಿಸಿ ನಮ್ಮನ್ನು ಸಲಹು” ಎಂದು. “ನಾವು ನಿನ್ನಲ್ಲಿ ಬೇಡುವುದು ಒಂದನ್ನೇ. ನಮಗೆ ಒಳ್ಳೆಯ ಬುದ್ಧಿಕೊಡು ಎಂದು. ಶ್ರೇಷ್ಠವಾದ ಜ್ಞಾನ, ಜ್ಞಾನದಿಂದ ಪ್ರಾಣ ಮತ್ತು ಭಗವಂತನ ಎಚ್ಚರ, ಅದರಿಂದ ಭಗವಂತನ ನಿಯತಿಗೆ ತಕ್ಕನಾಗಿ ನಮ್ಮ ಕರ್ಮ ನಿರ್ವಹಣೆ ಮಾಡುವ ಶಕ್ತಿಯನ್ನು ನಮಗೆ ಕೊಡು” ಎಂದು ದೇವತೆಗಳು ಬೇಡುತ್ತಾರೆ.
ಇಲ್ಲಿಗೆ ದೇವತೆಗಳು ಪ್ರಾಣದೇವರ ಮುಂದೆ ಹಾಡಿದ  ಒಂಬತ್ತು ಮಂತ್ರಗಳ ಅಪೂರ್ವವಾದ  ಈ ವೈದಿಕ ಹರಿ-ವಾಯುಸ್ತುತಿಯ ಜೊತೆಗೆ  ಎರಡನೇ ಪ್ರಶ್ನೆ/ಅಧ್ಯಾಯ ಮುಕ್ತಾಯವಾಯಿತು(ಇತಿ).

ಇತಿ ಷಟ್ ಪ್ರಶ್ನೋಪನಿಷದಿ ದ್ವಿತೀಯಃ ಪ್ರಶ್ನಃ ॥

ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ಎರಡನೇ ಪ್ರಶ್ನೆ/ಅಧ್ಯಾಯ ಮುಗಿಯಿತು.

*******

No comments:

Post a Comment