ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Sunday, October 7, 2012

Prashnopanishad in Kannada-Prashna-II (03-04)


ತಾನ್ ವರಿಷ್ಠಃ ಪ್ರಾಣ ಉವಾಚ   ಮಾ ಮೋಹಮಾಪದ್ಯಥ ಅಹಮೇವೈತತ್ ಪಂಚಧಾಽಽತ್ಮಾನಂ ಪ್ರವಿಭಜ್ಯೈತದ್ಬಾಣಮವಷ್ಟಭ್ಯ ವಿಧಾರಯಾಮೀತಿ ತೇಽಶ್ರದ್ದಧಾನಾ ಬಭೂವುಃ  

ದೇವತೆಗಳ ಚರ್ಚೆಯನ್ನು ಕೇಳಿಸಿಕೊಂಡ ದೇವತಾ ಸಮುದಾಯದಲ್ಲಿ ವರಿಷ್ಠನಾದ ಪ್ರಾಣದೇವರು ಹೇಳುತ್ತಾರೆ: “ಏಕೆ ಸುಮ್ಮನೆ ವ್ಯರ್ಥ ಚರ್ಚೆ ಮಾಡುತ್ತೀರಾ? ಈ ದೇಹಕ್ಕೆ ಜ್ಞಾನಶಕ್ತಿ, ಕ್ರಿಯಾಶಕ್ತಿ ಕೊಟ್ಟು ಅದು ಕುಸಿಯದಂತೆ ಧರಿಸಿದವರು ನೀವಲ್ಲ ನಾನೇ. ನಿಮ್ಮ ಕಣ್ಣಮುಂದೆ ಕಾಣುವ ನನ್ನ ಐದು ರೂಪಗಳಿಂದ ಈ ಶರೀರವನ್ನು ಪ್ರವೇಶಮಾಡಿ, ಅದನ್ನು ನಾನು ಧರಿಸಿದ್ದೇನೆ ಹಾಗೂ ನೀವು ನನಗೆ ಅಧೀನರಾಗಿದ್ದೀರಿ” ಎನ್ನುತ್ತಾರೆ. ಪ್ರಾಣದೇವರ ಈ ಮಾತಿಗೆ  ದೇವತೆಗಳು ವಿಶ್ವಾಸ ತೋರುವುದಿಲ್ಲ.

ಸೋಽಭಿಮಾನಾದೂರ್ಧ್ವಮುತ್ಕ್ರಾಮತ ಇವ ತಸ್ಮಿನ್ನುತ್ಕ್ರಾಮತ್ಯಥೇತರೇ ಸರ್ವ ಏವೋತ್ಕ್ರಾಮಂತೇ ತಸ್ಮಿಂಶ್ಚ ಪ್ರತಿಷ್ಠಮಾನೇ ಸರ್ವ ಏವ ಪ್ರತಿಷ್ಠಂತೇ ತದ್ಯಥಾ ಮಕ್ಷಿಕಾ ಮಧುಕರರಾಜಾನಮುತ್ಕ್ರಾಮಂತಂ ಸರ್ವ ಏವೋತ್ಕ್ರಮಂತೇ ತಸ್ಮಿಂಷ್ಚ  ಪ್ರತಿಷ್ಠಮಾನೇ ಸರ್ವಾ ಏವ ಪ್ರತಿಷ್ಠಂತ ಏವಂ ವಾಙ್ಮನಷ್ಚಕ್ಷುಃ ಶ್ರೋತ್ರಂ ಚ ತೇ ಪ್ರೀತಾಃ ಪ್ರಾಣಂ ಸ್ತುನ್ವಂತಿ  

ಪ್ರಾಣದೇವರು ಹೇಳುತ್ತಾರೆ: “ನಮ್ಮಲ್ಲಿ ಒಬ್ಬೊಬ್ಬರಾಗಿ ಈ ದೇಹದಿಂದ ಹೊರ ಹೋಗೋಣ. ಯಾರು ಹೊರ ಹೋದಾಗ ಈ ದೇಹ ಬಿದ್ದು ಹೋಗುತ್ತದೋ ಅವರು ನಿಜವಾದ ಧಾರಕ” ಎಂದು ಹೇಳಿ ದೇಹದಿಂದ ಆಚೆ ಹೊರಟವರಂತೆ ಪ್ರಾಣದೇವರು ಏಳುತ್ತಾರೆ. ಆಗ ಅಲ್ಲಿ ಇತರ ದೇವತೆಗಳಿಗೆ ನಿಲ್ಲಲು ಸಾಧ್ಯವಾಗುವುದಿಲ್ಲ.  ಅದೇ ರೀತಿ ದೇಹ ಪ್ರವೇಶ ಕ್ರಿಯೆಯಲ್ಲಿ ಒಬ್ಬೊಬ್ಬರಾಗಿ ಇತರ ದೇವತೆಗಳನ್ನು ದೇಹ ಪ್ರವೇಶಿಸುವಂತೆ ಹೇಳುತ್ತಾರೆ ಪ್ರಾಣ ದೇವರು. ಆದರೆ ಎಲ್ಲಾ ದೇವತೆಗಳು ಪ್ರವೇಶಿಸಿದರೂ ಕೂಡಾ ಪ್ರಾಣದೇವರ ಪ್ರವೇಶದ ತನಕ ಅಲ್ಲಿ ಯಾವುದೇ ಚಟುವಟಿಕೆ ಅವರಿಂದ ಸಾಧ್ಯವಾಗಲಿಲ್ಲ. ಆಗ ದೇವತೆಗಳಿಗೆ ಪ್ರಾಣದೇವರ ಪ್ರಾಮುಖ್ಯತೆ ಮನವರಿಕೆಯಾಗುತ್ತದೆ. ಅವರನ್ನು ತಮ್ಮೆಲ್ಲರ ಮುಖಂಡ ಎಂದು ಅವರು ಒಪ್ಪಿಕೊಳ್ಳುತ್ತಾರೆ.
ಪ್ರಾಣದೇವರ ಮಹತ್ವವನ್ನು ಇಲ್ಲಿ ಪಿಪ್ಪಲಾದರು ಒಂದು ಅಪೂರ್ವವಾದ ಪ್ರಕೃತಿಯ ದೃಷ್ಟಾಂತದೊಂದಿಗೆ ವಿವರಿಸಿದ್ದಾರೆ. ಒಂದು ಜೇನುಗೂಡು. ಅಲ್ಲಿ ಒಂದು ರಾಣಿಹುಳ ರಾಜನಂತೆ ಕಾರ್ಯಭಾರ ಮಾಡುತ್ತಿರುತ್ತದೆ. ಎಲ್ಲಾ ಜೇನುಹುಳಗಳ ಚಲನವಲನ, ನಿಯಂತ್ರಣ ಆ ಪ್ರಧಾನ ರಾಣಿಹುಳದಲ್ಲಿರುತ್ತದೆ. ಒಂದು ವೇಳೆ ಈ ರಾಣಿಹುಳ ಗೂಡನ್ನು ಬಿಟ್ಟು ಹೊರಟರೆ ಇತರ ಎಲ್ಲಾ ಹುಳಗಳು ಅದನ್ನು ಹಿಂಬಾಲಿಸುತ್ತವೆ. ನಮ್ಮ ದೇಹ ಒಂದು ಜೇನುಗೂಡಿನಂತೆ. ಇಲ್ಲಿ ಪ್ರಾಣದೇವರು ಮಧುಕರ ರಾಜನಂತೆ. ಇತರ ದೇವತೆಗಳು ಜೇನು ಹುಳಗಳಂತೆ. ನಮ್ಮ ದೇಹದಲ್ಲಿ ಭಗವಂತನನ್ನು ಬಿಟ್ಟರೆ ಎರಡನೇ ಸರ್ವಾಧಿಕ, ಸರ್ವೋತ್ಕೃಷ್ಟ ಶಕ್ತಿ ಪ್ರಾಣದೇವರು.  ಅವರ ಅಧೀನವಾಗಿ ಇತರ ಇಂದ್ರಿಯಾಭಿಮಾನಿ ದೇವತೆಗಳಿರುತ್ತಾರೆ. ಈ ವಿವರಣೆಯನ್ನು ಕೇಳಿದ ಎಲ್ಲಾ ದೇವತೆಗಳಿಗೂ ಬಹಳ ಸಂತೋಷವಾಯಿತು. ಅವರು ಪ್ರಾಣದೇವರನ್ನು ಸ್ತೋತ್ರ ಮಾಡಿದರು.
ಈ ಅಧ್ಯಾಯದಲ್ಲಿ ಬರುವ ಮುಂದಿನ ಒಂಬತ್ತು ಮಂತ್ರಗಳು ದೇವತೆಗಳು ಮಾಡಿದ ಪ್ರಾಣಸ್ತುತಿ. ಇದನ್ನು ತ್ರಿವಿಕ್ರಮಪಂಡಿತರ ವಾಯುಸ್ತುತಿಯೊಂದಿಗೆ ನಿತ್ಯ ಪಠಿಸಿದರೆ   ಅದೊಂದು ಅದ್ಭುತ ಅನುಷ್ಠಾನ. ಪುರುಷಸೂಕ್ತ ಭಗವಂತನಿಗೆ ಹೇಗೆ ಅತ್ಯಂತ ಪ್ರಿಯವೋ ಹಾಗೇ ಪ್ರಾಣದೇವರ ಉಪಾಸನೆಯಲ್ಲಿ ವಾಯುಸ್ತುತಿ ಅತ್ಯಂತ ಶ್ರೇಷ್ಠ. ಇಲ್ಲಿ ಕೇವಲ ವಾಯುಸ್ತುತಿ ಮಾತ್ರವಲ್ಲ ಹರಿಸ್ತುತಿಯೂ ಇದೆ. ಆದ್ದರಿಂದ ಇದು ನಿಜವಾದ ಹರಿವಾಯುಸ್ತುತಿ. [ತ್ರಿವಿಕ್ರಮ ಪಂಡಿತರು ಹರಿಸ್ತುತಿ ಮತ್ತು ವಾಯುಸ್ತುತಿಯನ್ನು  ಬೇರೆ ಬೇರೆಯಾಗಿ ಬರೆದಿರುವುದರಿಂದ ಅವರು ಬರೆದಿರುವ ವಾಯುಸ್ತುತಿಯನ್ನು ಹರಿವಾಯು ಸ್ತುತಿ ಎಂದು ಕರೆಯುವುದು ಅಷ್ಟು ಪ್ರಸ್ತುತವಲ್ಲ. ಅವರು ವಿಷ್ಣುಸ್ತುತಿ ಬೇರೆಯಾಗಿ ಬರೆದಿರುವುದರಿಂದ ವಾಯುಸ್ತುತಿ ರಚನೆ ವಿಷ್ಣುಪರ ಅನುಸಂಧಾನದಿಂದ ಬರೆದಿಲ್ಲ ಎನ್ನುವುದು ತಿಳಿಯುತ್ತದೆ. ಆದರೆ ಇಲ್ಲಿ ಬರುವ ಒಂಬತ್ತು ಮಂತ್ರಗಳ ಪ್ರಾಣಸ್ತುತಿ- ವಿಷ್ಣು ಮತ್ತು ವಾಯುಪರವಾಗಿರುವ ವೈದಿಕ ಸ್ತುತಿ]     

No comments:

Post a Comment