ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Sunday, October 14, 2012

Prashnopanishad in Kannada-Prashna-II (05-07)


ಇಲ್ಲಿ ಮೊದಲ ಎರಡು ಮಂತ್ರವನ್ನು ಪರೋಕ್ಷವಾಗಿ ಹೇಳಿದರೆ ಉಳಿದ ಏಳು ಮಂತ್ರಗಳಲ್ಲಿ ನೇರ ಸಂಬೋಧನೆ ಇದೆ. ಬನ್ನಿ ದೇವತೆಗಳು ಮಾಡಿದ ಈ ಶ್ರೇಷ್ಠವಾದ ಹರಿವಾಯು ಸ್ತುತಿಯನ್ನು ಪಿಪ್ಪಲಾದರ ಬಾಯಿಂದ ಕೇಳೋಣ:

ಏಷೋಽಗ್ನಿಸ್ತಪತ್ಯೇಷ ಸೂರ್ಯ ಏಷ ಪರ್ಜನ್ಯೋ ಮಘವಾನೇಷ ವಾಯುಃ
ಏಷ ಪೃಥಿವೀ ರಯಿರ್ದೇವಃ ಸದಸಚ್ಚಾಮೃತಂ ಚ ಯತ್  

ಅಗ್ನಿಯೊಳಗಿದ್ದು  ಅಗ್ನಿ ನಾಮಕನಾಗಿರುವವನು, ಸೂರ್ಯನೊಳಗಿದ್ದು ಸೂರ್ಯ ನಾಮಕನಾಗಿರುವವನು, ಮೋಡದೊಳಗಿದ್ದು ಮಳೆ ಸುರಿಸುವವನು, ಇಂದ್ರನೊಳಗಿದ್ದು ಮೂರು ಲೋಕಗಳ ರಕ್ಷಣೆ ಮಾಡುವವನು, ವಾಯುದೇವರೊಳಗಿದ್ದು ಜಗತ್ತನ್ನು ಉಸಿರಾಡಿಸುವವನು, ಭೂಮಿಯೊಳಗಿದ್ದು ಸಮಸ್ತ ಭೂಲೋಕವನ್ನು ಧಾರಣೆ ಮಾಡಿದವನು, ಭಾರತೀದೇವಿಯೊಳಗಿದ್ದು ಸಮಸ್ತ ವಾಕ್ ನಿಯಂತ್ರಕ ಮತ್ತು ಸಮಸ್ತ ಚರಾಚರಾತ್ಮಕ ಪ್ರಪಂಚವನ್ನು ಧಾರಣೆ ಮಾಡಿದವನು ‘ಅವನು’.[ಇಲ್ಲಿ ‘ಅವನು ಎಂದರೆ ಮೊದಲು ಭಗವಂತ ನಂತರ ಮುಖ್ಯಪ್ರಾಣ-ಈ ಎರಡೂ ಅರ್ಥದಲ್ಲಿ ಈ ಮಂತ್ರವನ್ನು ನೋಡಬಹುದು ಎನ್ನುವುದು ಮುಂದೆ ಬರುವ ಮಂತ್ರಗಳಿಂದ ತಿಳಿಯುತ್ತದೆ].  

ಅರಾ ಇವ ರಥನಾಭೌ ಪ್ರಾಣೇ ಸರ್ವಂ ಪ್ರತಿಷ್ಠಿತಂ
ಋಚೋ ಯಜೂಂ ̐ಷಿ ಸಾಮಾನಿ ಯಜ್ಞಃ ಕ್ಷತ್ರಂ ಬ್ರಹ್ಮ ಚ  

ಯಾವ ರೀತಿ ರಥದ ಚಕ್ರದ ನಾಭಿ(Axle) ಇಡೀ ರಥವನ್ನು ಧಾರಣೆ ಮಾಡಿದೆಯೋ ಹಾಗೇ ಭಗವಂತ ಮತ್ತು ಪ್ರಾಣದೇವರು ಈ ವಿಶ್ವವೆಂಬ ರಥದ ಚಕ್ರದ ನಾಭಿ ರೂಪದಲ್ಲಿ ವಿಶ್ವಧಾರಕರಾಗಿದ್ದಾರೆ. ಇವರು ಕೇವಲ ರೂಪಾತ್ಮಕ ಜಗತ್ತಿನ ಧಾರಕರಷ್ಟೇ ಅಲ್ಲ, ನಾಮಾತ್ಮಕ ಪ್ರಪಂಚದ ಧಾರಕ ಶಕ್ತಿ ಕೂಡಾ ಇವರೇ. [ಗದ್ಯ, ಪದ್ಯ ಮತ್ತು ಗಾನ ರೂಪದ ಮೂರು ವೇದಗಳನ್ನು ಧಾರಣೆ ಮಾಡಿದವನು ಆ ಭಗವಂತ. ಸಮಸ್ತ ವೇದದ ಸಮಸ್ತ ಶಬ್ದವೂ ಆ ಭಗವಂತನನ್ನು ಹೇಳುತ್ತದೆ ಎನ್ನುವುದನ್ನು ನಾವಿಲ್ಲಿ ತಿಳಿದಿರಬೇಕು] ನಾವು ಮಾಡುವ ಯಜ್ಞ[ಸಮಸ್ತ ಕರ್ಮ] ಭಗವಂತನ ಅಧೀನ. ಸಮಾಜದ ರಕ್ಷಕರು, ಸಮಾಜಕ್ಕೆ ಜ್ಞಾನವನ್ನು ಕೊಟ್ಟು ಜ್ಞಾನದಿಂದ ಸಮಾಜವನ್ನು ಶ್ರೀಮಂತಗೊಳಿಸುವವರು ಮತ್ತು  ಎಲ್ಲರೂ ಆ ಭಗವಂತನ ಮತ್ತು ಭಗವಂತನ ನಂತರ ಪ್ರಾಣದೇವರ ಅಧೀನ.    

ಪ್ರಜಾಪತಿಶ್ಚರಸಿ ಗರ್ಭೇ ತ್ವಮೇವ ಪ್ರತಿಜಾಯಸೇ
ತುಭ್ಯಂ ಪ್ರಾಣ ಪ್ರಜಾಸ್ತ್ವಿಮಾ ಯತ್ ಪ್ರಣೈಃ ಪ್ರತಿತಿಷ್ಠಸಿ  

“ಪ್ರಜಾಪತಿಯಾಗಿ ಗರ್ಭದ ಒಳಗಿರುವ ಪ್ರಜೆಯನ್ನು ರಕ್ಷಣೆ ಮಾಡುವವನು ‘ನೀನು’ [ಇಲ್ಲಿ ನೇರವಾಗಿ ‘ನೀನು’ ಎಂದು ಪ್ರಾಣ ದೇವರನ್ನು ದೇವತೆಗಳು ಸ್ತುತಿಸುವುದನ್ನು ನಾವು ಗಮನಿಸಬೇಕು. ಹಿಂದೆ ಪ್ರಜಾಪತಿ ಎಂದರೆ ಭಗವಂತ ಎನ್ನುವುದನ್ನು ನೋಡಿದ್ದೇವೆ. ಭಗವಂತನ ನಂತರ ಪ್ರಜಾಪತಿ: ಬ್ರಹ್ಮ-ವಾಯು] ಹುಟ್ಟಲಿರುವ ಸಂತಾನದ ಪಾಲಕನಾಗಿ, ಗರ್ಭದಲ್ಲಿ ನಿಂತು ಆ ಜೀವಕ್ಕೆ ಒಂದು ಸುಂದರ ರೂಪವನ್ನು ಕೊಡುವ ಶಿಲ್ಪಿ ನೀನು,  ಗರ್ಭದಲ್ಲಿರುವ ಮಗುವಿನೊಂದಿಗೆ ಹುಟ್ಟುವವನು ನೀನು, ಹುಟ್ಟಿದ ಮಗುವನ್ನು ಆ ಮಗುವಿನ ಪೂರ್ಣ ಆಯಸ್ಸಿನ ತನಕ ಅಂತರ್ಯಾಮಿಯಾಗಿ ರಕ್ಷಿಸುವವನು ನೀನು. [ವಯಸ್ಸಾದಂತೆ ಇತರ ದೇವತೆಗಳು ಜೀವನನ್ನು ಬಿಟ್ಟುಹೋಗಬಹುದು. ಆದರೆ ಪ್ರಾಣದೇವರು ಮತ್ತು ಭಗವಂತ ಕೊನೇ ಕ್ಷಣದ ತನಕ ಜೀವನೊಂದಿಗಿದ್ದು ರಕ್ಷಣೆ ಮಾಡುತ್ತಾರೆ]. ಹಾಗಾಗಿ ಸಮಸ್ತ ಜೀವಜಾತವೂ ನಿನ್ನ ಅಧೀನ. ಸಮಸ್ತ ಇಂದ್ರಿಯಾಭಿಮಾನಿ ದೇವತೆಗಳ ಮಧ್ಯದಲ್ಲಿ  ನಿಂತು ಎಲ್ಲವನ್ನು ಪಾಲಿಸುವವನು ನೀನು” ಎಂದು ದೇವತೆಗಳು ಪ್ರಾಣದೇವರನ್ನು [ಮತ್ತು ಭಗವಂತನನ್ನು] ಸ್ತುತಿಸುತ್ತಾರೆ.   

No comments:

Post a Comment