ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Thursday, October 18, 2012

Prashnopanishad in Kannada-Prashna-II (10-11)

ಯದಾ ತ್ವಮಭಿವರ್ಷಸ್ಯಥೇಮಾಃ ಪ್ರಾಣ ತೇ ಪ್ರಜಾಃ
ಆನಂದರೂಪಾಸ್ತಿಷ್ಠಂತಿ ಕಾಮಾಯಾನ್ನಂ ಭವಿಷ್ಯತೀತಿ   ೧೦
                                 
ಇಳೆಗೆ ಮಳೆ ತರಿಸುವವನು ಪರ್ಜನ್ಯ. ಆತನ ನಿಯಾಮಕ ಇಂದ್ರ. ಆದರೆ ಇಂದ್ರನ ನಿಯಾಮಕ ಮುಖ್ಯಪ್ರಾಣ. ಬಾಹ್ಯವಾಗಿ ನೋಡಿದರೆ ಸೂರ್ಯನ ಬಿಸಿಲಿನಿಂದ ನೀರು ಆವಿಯಾಗಿ ಮೋಡವಾಗುತ್ತದೆ. [ಇದನ್ನು ಮೇಘದೂತದಲ್ಲಿ ಹೀಗೆ ಹೇಳಿದ್ದಾರೆ : ಧೂಮಜ್ಯೋತಿಃಸಲಿಲಮರುತಾಂ ಸನ್ನಿಪಾತಃ ಕ್ವ ಮೇಘಃ]. ಮೋಡ ಮತ್ತು ಗಾಳಿಯ ಸಂಘರ್ಷದಿಂದ ಮಳೆಯಾಗುತ್ತದೆ. ಹಾಗಾಗಿ ಮಳೆಯಾಗುವುದು ವಾಯುದೇವರಿಂದ. ಇಲ್ಲಿ ದೇವತೆಗಳು ಹೇಳುತ್ತಾರೆ:  “ನೀನು ಮಳೆ ಬರಿಸಿದಾಗ ಲೋಕದ ಜನ(ಜೀವಜಾತಗಳು) ಸಂತೋಷದಿಂದ ಕುಣಿದಾಡುತ್ತಾರೆ” ಎಂದು. ಏಕೆಂದರೆ ಮಳೆ ಬಂದರೆ ಬೆಳೆ, ಆಹಾರ ಸಮೃದ್ಧಿ. ಹಾಗಾಗಿ ಜೀವನಕ್ಕೆ ಮುಖ್ಯವಾಗಿ ಬೇಕಾದ ಆಹಾರ ಸಿಗುವುದು ಮಳೆಯಿಂದ. ಆ ಮಳೆಯನ್ನು ಕೊಡುವವನು ಇಂದ್ರನ ಅಂತರ್ಗತ, ಸೂರ್ಯನ ಅಂತರ್ಗತ ವಾಯುದೇವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇಂದ್ರಿಯಗಳಲ್ಲಿರುವವರು, ಭೌತಿಕ ಪ್ರಪಂಚದಲ್ಲಿದ್ದು ಸಲಹುವವರು ಭಗವಂತ ಮತ್ತು  ಪ್ರಾಣದೇವರು.   

ವ್ರಾತ್ಯಸ್ತ್ವಂ ಪ್ರಾಣೈಕರ್ಷರತ್ತಾ ವಿಶ್ವಸ್ಯ ಸತ್ಪತಿಃ
ವಯಮಾದ್ಯಸ್ಯ ದಾತಾರಃ ಪಿತಾ ತ್ವಂ ಮಾತರಿಶ್ವ ನಃ   ೧೧

ಇಲ್ಲಿ ‘ವ್ರಾತ್ಯಸ್ತ್ವಂ’ ಎನ್ನುವ ಪದ ಬಳಕೆಯಾಗಿದೆ. ನಾವು ಮೊದಲು ಈ ಪದದ ಅರ್ಥ ತಿಳಿದುಕೊಳ್ಳಬೇಕು. ಅಥರ್ವವೇದದಲ್ಲಿ ವ್ರಾತ್ಯಕಾಂಡ ಎನ್ನುವ ಒಂದು ಭಾಗ ಕೂಡಾ ಇದೆ. ಸಂಸ್ಕೃತದಲ್ಲಿ ವ್ರಾತ್ಯ ಎಂದರೆ ಆಚಾರಹೀನ ಎನ್ನುವ ಅರ್ಥವಿದೆ. ನೇಮ-ನಿಷ್ಠೆ ಇಲ್ಲದೆ ದಾರಿತಪ್ಪಿದ ವ್ಯಕ್ತಿ ‘ವ್ರಾತ್ಯ’. ಆದರೆ ಈ ಪದಕ್ಕೆ ಒಂದು ವಿಶೇಷ ಅರ್ಥವಿದೆ ಮತ್ತು ಆ ಅರ್ಥದಲ್ಲಿ ಇದನ್ನು ವೇದದಲ್ಲಿ ಬಳಸಿದ್ದಾರೆ. ‘ವ್ರಾತ’ ಎಂದರೆ ಸಮುದಾಯ. ಇಂದ್ರಿಯಾಭಿಮಾನಿ ದೇವತೆಗಳ ಸಮುದಾಯ, ಜೀವಜಾತಗಳ ಸಮುದಾಯ, ಚರಾಚರ ಪ್ರಪಂಚದ ಸಮುದಾಯ. ಅಂತಹ ವ್ರಾತದ ನಿಯಾಮಕ ‘ವ್ರಾತ್ಯ’. ಇಲ್ಲಿ ದೇವತೆಗಳು ಹೇಳುತ್ತಾರೆ: “ ನೀನು ವ್ರಾತ್ಯಸ್ತ್ವಂ ಪ್ರಾಣಃ” ಎಂದು. ಅಂದರೆ  “ಸಮಸ್ತ ಜೀವಸಮುದಾಯದ ನಿಯಾಮಕ ಶಕ್ತಿ ನೀನು” ಎಂದರ್ಥ. ಮುಂದುವರಿದು ದೇವತೆಗಳು ಹೇಳುತ್ತಾರೆ: “ನೀನು ಏಕಋಷಿಃ” ಎಂದು. ಏಕಋಷಿಃ ಎಂದರೆ ಜ್ಞಾನಿಗಳಲ್ಲಿ ಮುಖ್ಯ ಎಂದರ್ಥ. ಇನ್ನು ಅಥರ್ವ ಋಷಿಗಳು ಬಳಸುವ ಅಗ್ನಿಗೆ ‘ಏಕಋಷಿ’ ಎಂದೂ ಕರೆಯುತ್ತಾರೆ. “ಅಥರ್ವವೇದಿಗಳು ಆರಾಧನೆ ಮಾಡತಕ್ಕಂತಹ ಏಕಋಷಿ ಎನ್ನುವ ಅಗ್ನಿಯ ಒಳಗಿದ್ದು  ಆರಾಧ್ಯನಾಗುವವನು ನೀನು” ಎಂದು ದೇವತೆಗಳು ಪ್ರಾಣದೇವರನ್ನು ಸ್ತುತಿಸುತ್ತಾರೆ.
“ಎಲ್ಲವನ್ನು ರಕ್ಷಣೆ ಮಾಡುವವನು, ಹಾಗೇ  ಪ್ರಳಯಕಾಲದಲ್ಲಿ ಇಡೀ ವಿಶ್ವವನ್ನು ಸಂಹಾರಮಾಡಿ ಕಬಳಿಸಿ ನಿಲ್ಲುವ ನೀನು ಸತ್ಪತಿ” ಎಂದು ದೇವತೆಗಳು ವಾಯುದೇವರನ್ನು ಸ್ತುತಿಸುತ್ತಾರೆ.  ಸತ್ಪತಿ ಎನ್ನುವಲ್ಲಿ ‘ಸತ್’ ಎಂದರೆ ಜ್ಞಾನಿ, ಸಾತ್ವಿಕ. ಪ್ರಾಣದೇವರು ಅತಿಶಯ ಸಾತ್ವಿಕಮೂರ್ತಿ. ಸಾತ್ವಿಕರ, ಜ್ಞಾನಿಗಳ ಮತ್ತು ಎಲ್ಲರ ಸ್ವಾಮಿ ಪ್ರಾಣದೇವರು ಮತ್ತು ಆ ಭಗವಂತ ಸತ್ಪತಿಃ. 
ಭಗವಂತನ ಮತ್ತು ಪ್ರಾಣದೇವರ ಮುಂದೆ ತಮ್ಮ ಅಸ್ತಿತ್ವದ ಮಹತ್ವವೇನು ಎನ್ನುವುದನ್ನು  ವಿವರಿಸುತ್ತಾ ದೇವತೆಗಳು ಹೇಳುತ್ತಾರೆ: “ವಯಮಾದ್ಯಸ್ಯ ದಾತಾರಃ ಪಿತಾ ತ್ವಂ ಮಾತರಿಶ್ವ ನಃ” ಎಂದು.    ಅಂದರೆ “ ಸರ್ವ ಜೀವಗಳಲ್ಲಿ ಮೊದಲ ಜೀವನಾದ ನಿನಗೆ ನಾವು ಆಹಾರವನ್ನು ತಂದುಕೊಡುವ ಸೇವಕರು” ಎಂದರ್ಥ. ದೇವತೆಗಳು ಹೇಳುತ್ತಾರೆ “ ಓ ಮಾತರಿಶ್ವನೇ, ನೀನು ಸಮಸ್ತ ದೇವತಾಗಣಗಳ ತಂದೆ” ಎಂದು. [ಇಲ್ಲಿ ಮಾತರಿಶ್ವನ್ ಎಂದು ಹೇಳುವ ಬದಲು ಕೇವಲ ಮಾತರಿಶ್ವ ಎಂದು ಹೇಳಿದ್ದಾರೆ. ಇದು ಭಾಷಾಶಾಸ್ತ್ರ. ಒಂದೇ ಅಕ್ಷರ ಒಟ್ಟಿಗೆ ಎರಡು ಬಾರಿ ಬಂದಾಗ ಅಲ್ಲಿ ಒಂದನ್ನು ಲೋಪ ಮಾಡಬಹುದು.  ಹಾಗಾಗಿ ಮಾತರಿಶ್ವನ್ ನಃ ಎನ್ನುವುದನ್ನು ಇಲ್ಲಿ ‘ಮಾತರಿಶ್ವ ನಃ’ ಎಂದಿದ್ದಾರೆ.] ಮಾತರಿಶ್ವ ಎನ್ನುವ ಹೆಸರು ಕೇವಲ ಪ್ರಾಣದೇವರಿಗೆ ಮಾತ್ರ ಇರುವುದು. ‘ಮಾತರಿ+ಶ್ವ’  ಎಂದರೆ: ಆಕಾಶ(ಮಾತೃ)ದಲ್ಲಿ  ಸಂಚರಿಸುವವ(ಗಾಳಿ) ಎಂದರ್ಥ. ಮಾತೃ ಎಂದರೆ ನಿರ್ಮಾತೃ. ಈ ಜಗತ್ತನ್ನು ನಿರ್ಮಾಣ ಮಾಡಿದ ಭಗವಂತನಲ್ಲಿ ಸದಾ ಸಂಚರಿಸುತ್ತಿರುವ ಪ್ರಾಣದೇವರು ಮಾತರಿಶ್ವ. ಮಾತೃ ಎಂದರೆ ತಾಯಿ. ತಾಯಿಯ ಗರ್ಭದಲ್ಲಿ ಚಲಿಸಿ ಅಲ್ಲಿ ಬೆಳೆಯುತ್ತಿರುವ ಮಗುವನ್ನು ಪಾಲಿಸುವವ ಮಾತರಿಶ್ವ.  ಮಾತೃ ಎಂದರೆ ‘ಮಾತು’. ಋಗ್ವೇದ, ಯಜುರ್ವೇದ, ಸಾಮವೇದಗಳೇ ಮೊದಲ ಮಾತು. ಸದಾ ವೇದಗಳಲ್ಲಿ ಚಲಿಸುವವ, ಸದಾ ವೇದಾರ್ಥ ಚಿಂತನದಲ್ಲಿ ತೊಡಗಿದವ ಮಾತರಿಶ್ವ. ಹೀಗೆ ನಾನಾ ಬಗೆಯಿಂದ ಪ್ರಾಣದೇವರ ಕ್ರಿಯೆಗಳನ್ನು ಹೇಳುವ ಅಪೂರ್ವವಾದ ಶಬ್ದ ‘ಮಾತರಿಶ್ವ’. ಆದ್ದರಿಂದ ದೇವತೆಗಳು ಹೇಳುತ್ತಾರೆ: “ಓ ಮಾತರಿಶ್ವನೇ, ನೀನು ನಮಗೆಲ್ಲಾ ತಂದೆ. ತಾಯಿಯ ಗರ್ಭದಲ್ಲಿದ್ದು ಅದನ್ನು ಬೆಳೆಸುವವನು ನೀನು, ವೇದಗಳ ನಿಜವಾದ ಅರ್ಥವನ್ನು ಬಲ್ಲವನು ನೀನು, ವೇದಾರ್ಥಭೂತನಾದ ಭಗವಂತನನ್ನು ತಿಳಿದವನು ನೀನು, ಎಲ್ಲರಿಗೂ ಉಸಿರು ನೀಡುತ್ತಾ ಆಕಾಶದಲ್ಲಿ ಚಲಿಸುವವನು ನೀನು” ಎಂದು.

No comments:

Post a Comment