ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Wednesday, October 17, 2012

Prashnopanishad in Kannada-Prashna-II (08-09)


ದೇವಾನಾಮಸಿ ವಹ್ನಿತಮಃ ಪಿತೃಣಾಂ ಪ್ರಥಮಾ ಸ್ವಧಾ
ಋಷೀಣಾಂ ಚರಿತಂ ಸತ್ಯಮಥರ್ವಾಂಗಿರಸಾಮಸಿ  

ಹಿಂದಿನ ಮಂತ್ರದಲ್ಲಿ ಅಗ್ನಿ ಶಬ್ದದಲ್ಲಿ ಪ್ರಾಣನನ್ನು ಸಮನ್ವಯ ಮಾಡಿರುವುದನ್ನು ನೋಡಿದ್ದೇವೆ. ಇಲ್ಲಿ  ವಹ್ನಿ ಎನ್ನುವ ಶಬ್ದದಲ್ಲಿ ಪ್ರಾಣನನ್ನು ಸಮನ್ವಯ ಮಾಡಿ ಸ್ತುತಿಸುವುದನ್ನು ಕಾಣುತ್ತೇವೆ. ‘ಅಗ್ನಿ’ ಎಂದರೆ ಚಲನೆ ಇಲ್ಲದ ವಸ್ತುವಿಗೆ ಚಲನೆ ಕೊಡುವಂತಹದ್ದು. ‘ವಹ್ನಿ’ ಎಂದರೆ ಕೊಂಡೊಯ್ಯುವಂತಹದ್ದು. ಈ ಎರಡು ಶಬ್ದಗಳ ನಿರ್ವಚನದ ಅರ್ಥ ಬೇರೆಬೇರೆ. ನಾವು ಯಜ್ಞದಲ್ಲಿ ಯಾವ ದೇವತೆಯ ಮಂತ್ರವನ್ನು ಜಪಿಸಿ ಆಹುತಿ ಕೊಡುತ್ತೇವೋ ಅದನ್ನು ಆ ದೇವತೆಗೆ ಮುಟ್ಟಿಸುವವನು ‘ವಹ್ನಿ’. ಹಾಗಾಗಿ ನಾವು ಕೊಟ್ಟ ಆಹುತಿಯನ್ನು ದೇವತೆಗಳಿಗೆ ತಲುಪಿಸುವವನು ಎನ್ನುವ ಅರ್ಥದಲ್ಲಿ ಬೆಂಕಿಯನ್ನು ವಹ್ನಿ ಎನ್ನುತ್ತಾರೆ. ನಾವು ಮಾಡುವ ಸಮಸ್ತ ಕರ್ಮವನ್ನು ಭಗವಂತನಿಗೆ/ದೇವತೆಗಳಿಗೆ ಕೊಂಡುಹೋಗಿ ಮುಟ್ಟಿಸುವವರು ಮೂಲತಃ ಪ್ರಾಣದೇವರು. ಆದ್ದರಿಂದ “ನೀನು ವಹ್ನಿತಮಃ” ಎಂದು ದೇವತೆಗಳು ಪ್ರಾಣನನ್ನು ಸ್ತುತಿಸುತ್ತಾರೆ. ಕೇವಲ ದೇವತೆಗಳಿಗೆ ಆಹುತಿ ತಲುಪಿಸುವುದಷ್ಟೇ ಅಲ್ಲ, “ಪಿತೃಪತಿಗಳ ಒಳಗಿದ್ದು ಪಿತೃಗಳಿಗೆ ಕವ್ಯವನ್ನು ಸಲ್ಲಿಸುವ ‘ಪ್ರಥಮಾ ಸ್ವಧಾ’ ನೀನು” ಎನ್ನುತ್ತಾರೆ ದೇವತೆಗಳು.
[ನಾವು ದೇವತೆಗಳಿಗೆ ಹವಿಸ್ಸನ್ನು ಅರ್ಪಿಸುವಾಗ ಸ್ವಾಹಾ ಎಂದೂ ಹಾಗೂ ಪಿತೃಗಳಿಗೆ ಕವ್ಯವನ್ನು ಅರ್ಪಿಸುವಾಗ ಸ್ವಧಾ ಎಂದು  ಹೇಳಿ ಅರ್ಪಿಸುತ್ತೇವೆ. ಇದು ಒಂದು ರೀತಿ ಅವರ ವಿಳಾಸವಿದ್ದಂತೆ. ಆದ್ದರಿಂದ ದೇವತೆಗಳಿಗೆ ಹವಿಸ್ಸನ್ನು ಅರ್ಪಿಸುವಾಗ ಸ್ವಧಾ ಎಂದಾಗಲಿ, ಪಿತೃಗಳಿಗೆ ಅರ್ಪಿಸುವಾಗ ಸ್ವಾಹಾ ಎಂದು ಹೇಳಿ ಅರ್ಪಿಸುವುದು ತಪ್ಪು. ಹಾಗೆ ಹೇಳಿ ಅರ್ಪಿಸಿದರೆ ಅದು ತಲುಪಬೇಕಾದವರಿಗೆ ತಲುಪದೇ ದಾನವರ ಪಾಲಾಗಬಹುದು. ಈ ಮಂತ್ರದಲ್ಲಿ ‘ಸ್ವಧಾ’ ಎನ್ನುವ ಪದ ವಿಶೇಷ ಅರ್ಥದಲ್ಲಿ ಬಳಕೆಯಾಗಿದೆ. ಯಮ-ಸೋಮ-ಕವ್ಯವಾಹ ಇವರು ಪಿತೃಪತಿಗಳು. ಇವರು ನಾವು ಅರ್ಪಿಸಿದ ಕವ್ಯವನ್ನು ಇತರ ಪಿತೃದೇವತೆಗಳಿಗೆ ತಲುಪಿಸುವ ಪಿತೃಪತಿಗಳಾದ್ದರಿಂದ ಇವರನ್ನು ಸ್ವಧಾ ಎಂದೂ ಕರೆಯುತ್ತಾರೆ. ಆದರೆ ಪಿತೃಪತಿಗಳಿಗೂ ಮೊದಲಿಗನಾಗಿ ಅವರೊಳಗಿದ್ದು ಆ ಕೆಲಸವನ್ನು ಮಾಡುವ ನೀನು ‘ಪ್ರಥಮಾ ಸ್ವಧಾ’ ಎಂದು ಇಲ್ಲಿ ದೇವತೆಗಳು ಸ್ತುತಿಸಿದ್ದಾರೆ.]
ಋಷಿಗಳ ಬದುಕು, ಜೀವನ, ಸಾತ್ವಿಕವಾಗಿ ಭಗವಂತನನ್ನು ಒಲಿಸಿಕೊಳ್ಳುವುದಕ್ಕಾಗಿ ಅವರು ಮಾಡುವ ಅನುಷ್ಠಾನ, ಅವರಲ್ಲಿರುವ ಪ್ರಾಮಾಣಿಕತೆ, ಭಗವಂತನ ಬಗೆಗಿರುವ ಕಳಕಳಿ ಇವೆಲ್ಲವನ್ನೂ “ಋಷಿಗಳ ಒಳಗಿದ್ದು ನಡೆಸುವವನು ನೀನು” ಎನ್ನುತ್ತಾರೆ ದೇವತೆಗಳು. [ಇಲ್ಲಿ ವಿಶೇಷವಾಗಿ ಅಥರ್ವ ಮತ್ತು ಅಂಗಿರಸ ಋಷಿಗಳನ್ನು ಹೆಸರಿಸಲಾಗಿದೆ. ಚತುರ್ಮುಖನಿಂದ ವೇದವನ್ನು ಉಪದೇಶ ಪಡೆದವನು ಅಥರ್ವ. ಅವರ ನಂತರ ಈ ಪರಂಪರೆಯನ್ನು ಬೆಳೆಸಿಕೊಂಡು ಬಂದವರು ಅಂಗಿರಸರು].

ಇಂದ್ರಸ್ತ್ವಂ ಪ್ರಾಣ ತೇಜಸಾ ರುದ್ರೋಽಸಿ ಪರಿರಕ್ಷಿತಾ
ತ್ವಮಂತರಿಕ್ಷೇ ಚರಸಿ ಸೂರ್ಯಸ್ತ್ವಂ ಜ್ಯೋತಿಷಾಂ ಪತಿಃ  

ಮುಂದುವರಿದು ದೇವತೆಗಳು ಹೇಳುತ್ತಾರೆ: “ನೀನು ಇಂದ್ರಸ್ತ್ವಂ” ಎಂದು. ಇಂದ್ರ ದೇವತೆಗಳ ರಾಜ. ‘ಇಂದ್ರ’ ಎಂದರೆ ಸರ್ವಸಮರ್ಥ. ನಿಜವಾದ ಸರ್ವಸಮರ್ಥ ಭಗವಂತನೊಬ್ಬನೆ. ಭಗವಂತನ ನಂತರ ಸರ್ವಸಮರ್ಥ ಪ್ರಾಣದೇವರು. “ಎಲ್ಲಾ ಜೀವಜಾತಗಳಲ್ಲಿ ಸರ್ವಸಮರ್ಥನಾದ ನಿರ್ವಾಹಕ, ಒಡೆಯ, ದೇವತೆಗಳಿಗೂ ಒಡೆಯ ನೀನು. ಏಕೆಂದರೆ ಇಂದ್ರನನ್ನು ನಿಯಂತ್ರಿಸುವ ತೇಜಸ್ಸು ನಿನ್ನದು. ನಿನ್ನ ತೇಜಸ್ಸಿನಿಂದ ಇಂದ್ರ ಇಂದ್ರನಾಗಿದ್ದಾನೆ. ನೀನೇ ಇಂದ್ರ ಹಾಗೂ ನಿನಗೂ ಇಂದ್ರ ಆ ಭಗವಂತ” ಎಂದು ದೇವತೆಗಳು ಪ್ರಾಣನನ್ನು ಸ್ತುತಿಸುತ್ತಾರೆ.
ಮನಸ್ಸಿಗೆ ಮತ್ತು ದೇಹಕ್ಕೆ ಆರೋಗ್ಯವನ್ನು ಕೊಟ್ಟು ನಮ್ಮನ್ನು ರಕ್ಷಣೆ ಮಾಡುವವ ರುದ್ರ. ಶಿವನಿಲ್ಲದ ದೇಹ ಶವ. ಆದರೆ “ಆ ರುದ್ರಶಕ್ತಿಯ ಒಳಗಿದ್ದು ಎಲ್ಲವನ್ನೂ ಮಾಡುವ ರುದ್ರ ಶಬ್ದವಾಚ್ಯ ನೀನೇ” ಎನ್ನುತ್ತಾರೆ ದೇವತೆಗಳು. ನಮ್ಮೊಳಗೆ ರಕ್ತ, ಗಾಳಿ, ಆಹಾರ  ಸಂಚಾರಕ್ಕೆ ಬೇಕಾದ ಅಂತರಿಕ್ಷ(space, ಆಕಾಶ/ಅವಕಾಶ)ವಿದೆ. “ಆ ಅಂತರಿಕ್ಷವನ್ನು ನಿಯಂತ್ರಿಸಿ, ಶುದ್ಧಿಗೊಳಿಸಿ ನಮಗೆ ಬದುಕು ಕೊಡುವವನು ನೀನು. ಅಷ್ಟೇ ಅಲ್ಲ, ದೇಹದ ಹೊರಗಿರುವ ಆಕಾಶದಲ್ಲಿ ಗಾಳಿಯಾಗಿ ತುಂಬಿ ನಮಗೆ ಉಸಿರು ಕೊಡುವವನು ನೀನು” ಎಂದು ದೇವತೆಗಳು ಸ್ತೋತ್ರ ಮಾಡುತ್ತಾರೆ.
ಹಿಂದೆ ಸೂರ್ಯನ ಅಂತರ್ಯಾಮಿಯಾಗಿ ಪ್ರಾಣನನ್ನು ಹೇಳಿರುವುದನ್ನು ನೋಡಿದ್ದೇವೆ. ಇಲ್ಲಿ  ಅದನ್ನು ವಿವರಿಸುತ್ತಾ ಹೇಳುತ್ತಾರೆ: “ಸೂರ್ಯನ ಒಳಗಿರುವ ನಿಜವಾದ ಸೂರ್ಯ ನೀನು” ಎಂದು. ಏಕೆಂದರೆ ‘ಸೂರ್ಯ’ ಎಂದರೆ ಸೂರಿಗಳಿಗೆ ಗೋಚರವಾಗುವವನು ಎಂದರ್ಥ. ಸೂರಿಗಳು ಎಂದರೆ ಜ್ಞಾನಿಗಳು. ಜ್ಞಾನಿಗಳಿಗೆ ಗೋಚರವಾಗುವವರು ಪ್ರಾಣ ಮತ್ತು ಭಗವಂತ. ಸೂರ್ಯನೊಳಗೆ ಶಿವನಿದ್ದಾನೆ-ಅವನೂ ಸೂರ್ಯ; ಶಿವನೊಳಗೆ ಮುಖ್ಯಪ್ರಾಣನಿದ್ದಾನೆ-ಅವನೂ ಸೂರ್ಯ;   ಮುಖ್ಯಪ್ರಾಣನಲ್ಲಿ ಭಗವಂತನಿದ್ದಾನೆ ಅವನೂ ಸೂರ್ಯ(ಸೂರ್ಯನಾರಾಯಣ). ಹೀಗೆ “ಬೆಳಕುಗಳಲ್ಲೆಲ್ಲಾ ದೊಡ್ಡ ಬೆಳಕು ನೀನು” ಎಂದು ದೇವತೆಗಳು ಪ್ರಾಣ ದೇವರನ್ನು ಮತ್ತು ಭಗವಂತನನ್ನು ಸ್ತುತಿಸುತ್ತಾರೆ. 

No comments:

Post a Comment