ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Saturday, October 27, 2012

Prashnopanishad in Kannada-Prashna-III (01-03)


ಅಥ ತೃತೀಯಃ ಪ್ರಶ್ನಃ

ಅಥ ಹೈನಂ ಕೌಸಲ್ಯ ಆಶ್ವಲಾಯನಃ ಪಪ್ರಚ್ಛ   ಭಗವನ್ ಕುತ ಏಷ ಪ್ರಾಣೋ ಜಾಯತೇ ಕಥಮಾಯಾತಿ ಅಸ್ಮಿನ್ ಶರೀರೇ ಆತ್ಮಾನಂ  ವಾ ಪ್ರವಿಭಜ್ಯ ಕಥಂ ಪ್ರತಿಷ್ಠತೇ ಕೇನೋತ್ಕ್ರಮತೇ ಕಥಂ ಬಾಹ್ಯಮಭಿ ಧತೇ ಕಥಮಧ್ಯಾತ್ಮಮಿತಿ  

ಎರಡು ಪ್ರಶ್ನೆಗಳ ವಿವರಣೆಯನ್ನು ಪಿಪ್ಪಲಾದರಿಂದ ಕೇಳಿ ತಿಳಿದ ಮೇಲೆ, ಮೂರನೇ ಋಷಿ ಕೌಸಲ್ಯ ಆಶ್ವಲಾಯನರು ತನ್ನ ಪ್ರಶ್ನೆಯನ್ನು ಗುರುಗಳ ಮುಂದಿಡುತ್ತಾರೆ. ಅವರು ಕೇಳುತ್ತಾರೆ: “ ಯಾವ ಕಾರಣಕ್ಕೋಸ್ಕರ ಪ್ರಾಣತತ್ತ್ವದ ಆವಿರ್ಭಾವವಾಯಿತು ಮತ್ತು ಅದು ಯಾರಿಂದಾಯಿತು” ಎಂದು. ಹಿಂದೆ ಎಲ್ಲವೂ ಪ್ರಜಾಪತಿ ನಾಮಕ ಭಗವಂತನಿಂದ ಸೃಷ್ಟಿಯಾಯಿತು ಎನ್ನುವ ವಿವರಣೆಯನ್ನು ಪಿಪ್ಪಲಾದರು ಕೊಟ್ಟಿರುವುದನ್ನು ನಾವು ನೋಡಿದ್ದೇವೆ. ಇಲ್ಲಿ ಆಶ್ವಲಾಯನರು ವಿಶೇಷವಾಗಿ ಪ್ರಾಣತತ್ವದ ಬಗೆ ಮತ್ತು ಅದರ ಆವಿರ್ಭಾವದ ಹಿನ್ನೆಲೆಯನ್ನು ಪಿಪ್ಪಲಾದರಲ್ಲಿ  ಪ್ರಶ್ನಿಸುತ್ತಿದ್ದಾರೆ. “ಪ್ರಾಣದೇವರು ಹೇಗೆ ನಮ್ಮ ದೇಹವನ್ನು ಪ್ರವೇಶ ಮಾಡುತ್ತಾರೆ ಮತ್ತು ದೇಹದಲ್ಲಿ ಅನೇಕ ರೂಪಗಳಿಂದ ಏನನ್ನು ನಿಯಂತ್ರಣ ಮಾಡುತ್ತಾರೆ ಎನ್ನುವುದನ್ನು ಆಶ್ವಲಾಯನರು ಪಿಪ್ಪಲಾದರಿಂದ ತಿಳಿಯಬಯಸುತ್ತಾರೆ. ನಮಗೆ ತಿಳಿದಂತೆ ಪ್ರಾಣದೇವರು ನಮ್ಮೊಳಗೆ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಎನ್ನುವ ಐದು ರೂಪಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗೆ ದೇಹ ಪ್ರವೇಶಿಸಿ ತನ್ನನ್ನೇ ತಾನು ಐದು ವಿಭಾಗ ಮಾಡಿಕೊಂಡು ಅವರು ನಿರ್ವಹಿಸುವ ಚಟುವಟಿಕೆಗಳೇನು ಎನ್ನುವುದು  ಇಲ್ಲಿರುವ ಪ್ರಶ್ನೆ.
ಪ್ರಾಣದೇವರು ಕೇವಲ ಪಿಂಡಾಂಡದಲ್ಲಷ್ಟೇ ಅಲ್ಲ, ಬ್ರಹ್ಮಾಂಡದಲ್ಲೂ ತುಂಬಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ದೇಹ ಪ್ರವೇಶಿಸಿ ಜೀವ ತುಂಬುವ ಅವರು, ದೇಹವನ್ನು ಬಿಟ್ಟು ಯಾರ ಜೊತೆಗೆ ಹೊರಟು ಹೋಗುತ್ತಾರೆ ಮತ್ತು ಏಕೆ ಹೊರಟು ಹೋಗುತ್ತಾರೆ? ಹೊರಗೆ ಪಂಚಭೂತಗಳಲ್ಲಿ ತುಂಬಿರುವ ಪ್ರಾಣದೇವರ ಚಟುವಟಿಕೆಗಳೇನು-ಎನ್ನುವ ಬಹಳ ಮಹತ್ವವಾದ ಪ್ರಶ್ನೆಯನ್ನು ಆಶ್ವಲಾಯನರು ಪಿಪ್ಪಲಾದರ ಮುಂದಿಡುತ್ತಾರೆ.
ಪ್ರಶ್ನೆಯಿಂದಲೇ ತಿಳಿಯುವಂತೆ ಈ ಅಧ್ಯಾಯ ಪೂರ್ಣವಾಗಿ ಪ್ರಾಣದೇವರ ಮಹಿಮೆಯನ್ನು ಹೇಳುವ ಅಧ್ಯಾಯ. ಬನ್ನಿ,  ಆಶ್ವಲಾಯನರ ಪ್ರಶ್ನೆಗೆ ಪಿಪ್ಪಲಾದರ ಉತ್ತರವನ್ನು ಭಗವಂತನ ಕೃಪೆ ಬೇಡಿ ಆಲಿಸೋಣ.

ತಸ್ಮೈ ಸ ಹೋವಾಚ ಅತಿಪ್ರಶ್ನಾನ್ ಪೃಚ್ಛಸಿ ಬ್ರಹ್ಮಿಷ್ಠೋಽಸೀತಿ ತಸ್ಮಾತ್ ತೇಽಹಂ ಬ್ರವೀಮಿ

ಪಿಪ್ಪಲಾದರಿಗೆ ಆಶ್ವಲಾಯನರ ಪ್ರಶ್ನೆಯನ್ನು ಕೇಳಿ ಬಹಳ ಸಂತೋಷವಾಯಿತು. ಏಕೆಂದರೆ ಇದು ಪಂಚಭೂತಗಳಲ್ಲಿ ಮತ್ತು ದೇಹದಲ್ಲಿ ವಾಯುದೇವರ ಚಟುವಟಿಕೆ ಏನು ಎಂದು ತಿಳಿಯಬಯಸಿ ಕೇಳಿದ ಪ್ರಶ್ನೆ. ಸಾಮಾನ್ಯರಿಗೆ ಇಂತಹ ಪ್ರಶ್ನೆ ಕೇಳಲು ಸಾಧ್ಯವಿಲ್ಲ. ಇಂತಹ ಪ್ರಶ್ನೆಯನ್ನು ಕೇವಲ ವೇದಾಧ್ಯಯನ ಮಾಡಿದ ಜ್ಞಾನಿಯಷ್ಟೇ ಕೇಳಬಲ್ಲರು. ಈ ಪ್ರಶ್ನೆಗೆ ಉತ್ತರಿಸಬೇಕಾದರೆ ದೇಹಶಾಸ್ತ್ರ, ಮನಃಶಾಸ್ತ್ರ ಮತ್ತು ಭೌತಶಾಸ್ತ್ರ ಪೂರ್ಣ ತಿಳಿದಿರಬೇಕು. ಪಿಪ್ಪಲಾದರು ಹೇಳುತ್ತಾರೆ: “ನೀನು ವೇದಾಧ್ಯನ ಮಾಡಿ ಅನೇಕ ಸತ್ಯವನ್ನು ತಿಳಿದಿರುವುದರಿಂದ, ಒಬ್ಬ ಸಾಮಾನ್ಯನಿಗೆ ಹೊಳೆಯದ ಅಪೂರ್ವವಾದ ಈ ಪ್ರಶ್ನೆಯನ್ನು ಕೇಳಿದ್ದೀಯ. ನನಗೆ ಬಹಳ ಸಂತೋಷವಾಯಿತು” ಎಂದು.  ಪ್ರಪಂಚದ ಎಲ್ಲಾ ಜಿಜ್ಞಾಸುಗಳು ತಿಳಿಯಬೇಕಾದ, ಇಡೀ ಮಾನವ ಜನಾಂಗಕ್ಕೆ  ಉಪಕಾರವಾಗುವ, ಅತ್ಯಮೂಲ್ಯವಾದ ವಿಷಯದ ಮೇಲೆ ಕೇಳಿರುವ ಈ ಪ್ರಶ್ನೆ ‘ಅತಿಪ್ರಶ್ನೆ’ ಎಂದು ಪಿಪ್ಪಲಾದರು  ಶಿಷ್ಯನ ಪ್ರಶ್ನೆಯನ್ನು  ಪ್ರಶಂಸಿಸುತ್ತಾರೆ.  

ಆತ್ಮತ  ಏಷ ಪ್ರಾಣೋ ಜಾಯತೇ   ಯಥೈಷಾ ಪುರುಷೇ ಛಾಯ ಏತಸ್ಮಿನ್ನೇತದಾತತಮ್ ಮನೋಕೃತೇನಾಯಾತ್ಯಸ್ಮಿನ್ ಶರೀರೇ

ಪಿಪ್ಪಲಾದರು ಹೇಳುತ್ತಾರೆ: “ಮುಖ್ಯಪ್ರಾಣ ಆತ್ಮನಿಂದ ಹುಟ್ಟಿದ” ಎಂದು.  ಇಲ್ಲಿ ‘ಆತ್ಮ’ ಎಂದರೆ ಪರಮಾತ್ಮ. ಯಾವುದನ್ನು ತಿಳಿದರೆ ಎಲ್ಲವೂ ತಿಳಿಯುತ್ತದೋ  ಅದೇ ಆತ್ಮತತ್ತ್ವ.  ಉಪನಿಷತ್ತಿನಲ್ಲಿ ಹೇಳುವಂತೆ: ಆತ್ಮಾ ವಾ ಅರೇ ದೃಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿಧಿಧ್ಯಾಸಿತ್ವ್ಯಃ ಬೃಹದಾರಣ್ಯಕ-೪-೫-೬ ತಮೇವೈಕಂ ಜಾನಥ ಆತ್ಮಾನಮನ್ಯಾ ವಾಚೋ ವಿಮುಂಚಥಾ ಮುಂಡಕ ಉಪನಿಷತ್-೨-೨-೫  ಮನುಷ್ಯ ತಿಳಿಯಬೇಕಾದ ಸತ್ಯಗಳಲ್ಲಿ ಮೂಲಭೂತವಾದ ಸತ್ಯ ಎಂದರೆ ಆತ್ಮನನ್ನು ತಿಳಿಯುವುದು. ಆತ್ಮಾ ಎನ್ನುವುದಕ್ಕೆ  ಪ್ರಾಚೀನ ವೈದಿಕ ಸಾಹಿತ್ಯದಲ್ಲಿ ಅಂತರ್ಯಾಮಿ, ಸ್ವಾಮಿ ಎನ್ನುವ ಅರ್ಥವಿದೆ. ಎಲ್ಲರೊಳಗೂ ತುಂಬಿ ಎಲ್ಲವನ್ನೂ ನಿಯಂತ್ರಿಸುವ ಪರಶಕ್ತಿ ಆತ್ಮ. ಭಾಗವತದಲ್ಲಿ ಹೇಳುವಂತೆ:  ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ  ಭಾಗವತ-೧-೨-೧೧ ದೇವರನ್ನು  ಬ್ರಹ್ಮ, ಆತ್ಮಾ, ಪರಮಾತ್ಮ, ಭಗವಂತ, ಇತ್ಯಾದಿಯಾಗಿ ಕರೆಯುತ್ತಾರೆ. ಹೀಗಾಗಿ ಪಿಪ್ಪಲಾದರು ಇಲ್ಲಿ ಭಗವದ್ ವಾಚಕವಾದ ‘ಆತ್ಮ’ ಶಬ್ದವನ್ನು ಬಳಸಿದ್ದಾರೆ. ಎಲ್ಲರ ಅಂತರ್ಯಾಮಿ, ಎಲ್ಲರ ನಿಯಾಮಕ ಭಗವಂತ ಆತ್ಮಃ.
ನಮಗೆ ತಿಳಿದಂತೆ ಎಲ್ಲವೂ ಆ ಭಗವಂತನಿಂದ ಹುಟ್ಟಿದೆ. ಹೀಗಿರುವಾಗ ಇಲ್ಲಿ ‘ಪ್ರಾಣ ಭಗವಂತನಿಂದ ಹುಟ್ಟಿದ’ ಎನ್ನುವಲ್ಲಿನ ವಿಶೇಷತೆ ಏನು-ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇಲ್ಲಿ ಒಂದು ವಿಶೇಷವಿದೆ. ಇತರ ದೇವತೆಗಳಿಗೆ ಒಂದು ಕಲ್ಪದಲ್ಲಿ ಅನೇಕ ಹುಟ್ಟಿದೆ. ಆದರೆ ಬ್ರಹ್ಮ-ವಾಯು ಎಲ್ಲಾ ದೇವತೆಗಳಿಗಿಂತ ಮೊದಲು ಭಗವತನಿಂದ ಸೃಷ್ಟಿಯಾಗುವ ತತ್ತ್ವ. ಇವರಿಗೆ ಪುನಃ ಯಾರಿಂದಲೂ ಮರು ಸೃಷ್ಟಿ ಇಲ್ಲ. ಭಗವಂತನಿಂದ ಸಾಕ್ಷಾತ್ ಹುಟ್ಟುವುದರಿಂದ ಮತ್ತು ಕಲ್ಪಾಂತದ ತನಕ ಮರು ಹುಟ್ಟು ಇಲ್ಲವಾದ್ದರಿಂದ ಪ್ರಾಣದೇವರನ್ನು ಭಗವಂತನ ಸಾಕ್ಷಾತ್ ಪುತ್ರ ಎನ್ನುತ್ತಾರೆ. ಹೇಗೆ ನಮ್ಮ ನೆರಳು ನಮ್ಮನ್ನು ಸದಾ ಬಿಡದೆ ಅನುಸರಿಸುತ್ತದೋ ಹಾಗೆ ಇಡೀ ವಿಶ್ವ ಭಗವಂತನನ್ನು ಆಶ್ರಯಿಸಿದೆ. ಇದೇ ರೀತಿ ಲಕ್ಷ್ಮೀ-ನಾರಾಯಣ ಮತ್ತು ಬ್ರಹ್ಮದೇವರನ್ನು ಬಿಟ್ಟರೆ, ಇತರ ಸಮಸ್ತ ವಿಶ್ವವೂ ನೆರಳಿನಂತೆ ಪ್ರಾಣದೇವರನ್ನು ಆಶ್ರಯಿಸಿಕೊಂಡಿದೆ. ಹೀಗೆ ಇಡೀ ವಿಶ್ವದಲ್ಲಿ ತುಂಬಿರುವ ಪ್ರಾಣದೇವರು ಭಗವಂತನ ಆದೇಶದಂತೆ ಪ್ರತಿಯೊಂದು ಜೀವದ ಜೀವಕಲಾಭಿಮಾನಿಯಾಗಿ ಸಮಸ್ತ ಜೀವರ ಒಳಗೆ ಪ್ರವೇಶಿಸಿ ನೆಲೆಸಿದ್ದಾರೆ ಮತ್ತು ನಮ್ಮ ಒಳಗೂ ಹೊರಗೂ ನಿಂತು ನಮ್ಮನ್ನು ರಕ್ಷಿಸಿ ನಡೆಸುತ್ತಿದ್ದಾರೆ.    

No comments:

Post a Comment