ಎರಡನೇ ಪ್ರಶ್ನೆ
ಅಥ ಹೈನಂ ಭಾರ್ಗವೋ ವೈದರ್ಭಿಃ
ಪಪ್ರಚ್ಛ । ಭಗವನ್ ಕತ್ಯೇವ ದೇವಾಃ ಪ್ರಚಾಂ ವಿಧಾರಯಂತೇ,
ಕತರ ಏತತ್ ಪ್ರಕಶಯಂತೇ, ಕಃ ಪುನರೇಷಾಂ ವರಿಷ್ಠ ಇತಿ ॥೧॥
ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗದ ವಿಶ್ಲೇಷಣೆ ಮಾಡಿ ಇಡೀ ಸೃಷ್ಟಿಯ ಬಿತ್ತರವನ್ನು ವಿವರಿಸಿದ
ಪಿಪ್ಪಲಾದರಲ್ಲಿ ಎರಡನೇ ಶಿಷ್ಯ ಭಾರ್ಗವ ವೈದರ್ಭಿಃ ತನ್ನ ಪ್ರಶ್ನೆಯನ್ನು ಕೇಳುತ್ತಾನೆ. ಆತ
ಕೇಳುತ್ತಾನೆ: “ಈ ದೇಹ ಕುಸಿದು ಬೀಳದಂತೆ, ತ್ರಾಣ
ಕೊಟ್ಟು, ನಡೆಸುವವರು ಯಾರು? ಕ್ರಿಯೆ ಮತ್ತು ಜ್ಞಾನ ಕೊಡುವ ದೇವತೆಗಳು ಯಾರು? ಈ ದೇಹವನ್ನು ಧಾರಣೆ ಮಾಡಿ ಜ್ಞಾನ ಕೊಡುವ ದೇವತೆಗಳಲ್ಲಿ
ಶ್ರೇಷ್ಠ ಯಾರು? ಭಗವಂತನ ನಂತರದ ಸರ್ವ ಶ್ರೇಷ್ಠ ದೇವತೆ ಯಾರು?” ಇದು ಭಾರ್ಗವ ವೈದರ್ಭಿಃ ಪ್ರಶ್ನೆ.
ತಸ್ಮೈ ಸ ಹೋವಾಚಾಕಾಶೋ ಹ ವಾ ಏಷ
ದೇವೋ ವಾಯುರಗ್ನಿರಾಪಃ ಪೃಥಿವೀ ವಾಙ್ಮನಶ್ಚಕ್ಷುಃ ಶ್ರೋತ್ರಂ ಚ । ತೇ ಪ್ರಕಾಶ್ಯಾಭಿವದಂತಿ ವಯಮೇತದ್ಬಾಣಮವಷ್ಟಭ್ಯ
ವಿಧಾರಯಾಮಃ ॥ ೨ ॥
ಹಿಂದೆ ಸೃಷ್ಟಿಯ ಬಗ್ಗೆ
ಪಿಪ್ಪಲಾದರು ಕೊಟ್ಟ ಉತ್ತರ ಎಷ್ಟು ವಿಸ್ಮಯಕರವೋ ಅಷ್ಟೇ ವಿಸ್ಮಯಕರವಾದುದು ಈ ಧಾರಣೆ, ಕ್ರಿಯೆ ಮತ್ತು
ಜ್ಞಾನಶಕ್ತಿ ಕೊಡುವ ದೇವತೆಗಳ ವಿವರಣೆ. ಏಕೆ ವಿಸ್ಮಯ ಎಂದರೆ ನಮಗೆ ಗೊತ್ತಿರುವ ಸಂಗತಿಗಳಲ್ಲಿ ಅನೇಕ
ಗೊತ್ತಿಲ್ಲದ ಸಂಗತಿಗಳು ಸೇರಿವೆ. ನಾವು ಸಾಮಾನ್ಯವಾಗಿ ಕೇವಲ ಸ್ಥೂಲ ವಿಚಾರಗಳನ್ನಷ್ಟೇ ತಿಳಿದಿರುತ್ತೇವೆ. ಅದರ ಹಿಂದಿನ ಸೂಕ್ಷ್ಮ ವಿವರಣೆ ನಮಗೆ
ತಿಳಿದಿರುವುದಿಲ್ಲ. ಅಂತಹ ಸೂಕ್ಷ್ಮ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿ ಹೇಳುವ ಪಿಪ್ಪಲಾದರ ಈ ವಿವರಣೆ
ಒಂದು ವಿಸ್ಮಯಕಾರಿ ವಿವರಣೆ.
ಪಿಪ್ಪಲಾದರು ಹೇಳುತ್ತಾರೆ:
“ದೇವತೆಗಳು ನಮಗೆ ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ ಕೊಟ್ಟು, ನಮ್ಮನ್ನು ನಿಯಮನ ಮಾಡಿಕೊಂಡು ಈ ನಮ್ಮ
ದೇಹದಲ್ಲಿ ನೆಲೆಸಿದ್ದಾರೆ” ಎಂದು. ಇವರಲ್ಲಿ ಒಬ್ಬ ದೇವತೆ ಗಣಪತಿ. ಆತ ಆಕಾಶದ ದೇವತೆ.
ಬ್ರಹ್ಮಾಂಡದಲ್ಲಿ ಆಕಾಶ ಹಾಗೂ ಪಿಂಡಾಂಡದಲ್ಲಿ ರಕ್ತಸಂಚಾರ, ಉಸಿರಾಟಕ್ಕೆ ಬೇಕಾದ ಅವಕಾಶ(Space)ವನ್ನು ಒದಗಿಸಿ
ಮನುಷ್ಯ ಜೀವಂತವಾಗಿರುವ ಅವಕಾಶವನ್ನು ಈತ ಕಲ್ಪಿಸಿಕೊಡುತ್ತಾನೆ. ಈತ ಅವಕಾಶದ ದೇವತೆಯಾದ್ದರಿಂದ ವಿಘ್ನನಾಶ.
ಇದು ಸರ್ವ ಶಾಸ್ತ್ರಗಳಲ್ಲೂ ಪ್ರಸಿದ್ಧವಾದ ವಿಷಯ.
ಆಕಾಶ ದೇವತೆಯ ಸೃಷ್ಟಿಯ
ನಂತರ ಆ ಆಕಾಶದಲ್ಲಿ ಗಾಳಿ ಹುಟ್ಟಿತು. ಅಂದರೆ ಗಾಳಿಯ ಅಭಿಮಾನಿ ದೇವತೆಯ ಸೃಷ್ಟಿಯಾಯಿತು. ಈತ ಪ್ರಧಾನವಾಯುವಿನ
ಮಗನಾದ ಭೂತವಾಯು. ಈತನನ್ನು ಮರೀಚಿ ಎಂದೂ ಕರೆಯುತ್ತಾರೆ[ಈ ಕುರಿತ ವಿವರಣೆ ಗೀತೆಯಲ್ಲಿ ಬರುತ್ತದೆ.
ಅ-೧೦ ಶ್ಲೋಕ-೨೧]. ಮರೀಚಿಯ ನಂತರ ಅಗ್ನಿಯ ಜನನ. ಪ್ರಧಾನ ಅಗ್ನಿಯ ಮಗ ‘ಪಾವಕ’ ಎನ್ನುವವನು ಇಲ್ಲಿ
ಅಗ್ನಿದೇವತೆ. ನಂತರ ನೀರಿನ ದೇವತೆ ಬುಧ, ಪ್ರಥಿವೀದೇವತೆ
‘ಶನಿ’. ಹೀಗೆ ಗಣಪತಿ, ಮರೀಚಿ, ಪಾವಕ, ಬುಧ
ಮತ್ತು ಶನಿ ಇವರು ಪಂಚಭೂತಗಳ ದೇವತೆಗಳಾಗಿ ಸೃಷ್ಟಿಯಾದರು. ನಮ್ಮ ದೇಹ ಕೂಡಾ ಪಂಚಭೂತಗಳಿಂದಾಗಿದೆ.
ಈ ಪಂಚದೇವತೆಗಳು ನಮ್ಮ ದೇಹ ಧಾರಣೆ ಮಾಡಿ ನಮಗೆ ಕ್ರಿಯಾಶಕ್ತಿ ಕೊಡುತ್ತಾರೆ.
ನಮಗೆ ಜ್ಞಾನ ಕೊಡುವ ಶಕ್ತಿ ಯಾವುದೆಂದರೆ ‘ವಾಙ್ಮನ’. ನಮಗೆ ಜ್ಞಾನ ಹುಟ್ಟುವುದು ಶಬ್ದದ ಮೂಲಕ. ಮಾತಿಲ್ಲದೆ ಯಾವುದೇ ಅರಿವು ಬರುವುದಿಲ್ಲ. ಮಾತು ಅನ್ನುವುದು ಜ್ಯೋತಿ. ಇದರ ಜೊತೆಗೆ ಕಿವಿ, ಕಣ್ಣು ಹಾಗೂ ಎಲ್ಲವನ್ನೂ ಗ್ರಹಣ ಮಾಡುವ ಮನಸ್ಸು. ಹೀಗೆ ಮನಸ್ಸು, ಮಾತು, ಕಣ್ಣು, ಕಿವಿ, ಇವು ನಮ್ಮ ದೇಹದಲ್ಲಿ ನಮಗೆ ಜ್ಞಾನದ ವಿಕಾಸವನ್ನು ಕೊಡತಕ್ಕಂತವು. ನೋಡಿ-ಕಲಿಯುವುದು, ಕೇಳಿ-ತಿಳಿಯುವುದು. ಹೇಳಿದ್ದನ್ನು, ಕೇಳಿದ್ದನ್ನು, ನೋಡಿದ್ದನ್ನು ಗ್ರಹಿಸುವುದು ಮನಸ್ಸು. ಈ ನಾಲ್ಕು ಇಂದ್ರಿಯಗಳು ಇಲ್ಲದಿದ್ದರೆ ಮನುಷ್ಯನ ಜ್ಞಾನ ಬೆಳವಣಿಗೆ ಆಗುವುದೇ ಇಲ್ಲ. ಇಲ್ಲಿ ಮಾತಿನ ದೇವತೆ ಅಗ್ನಿ, ಕಣ್ಣಿನ ದೇವತೆ ಸೂರ್ಯ, ಕಿವಿಯ ದೇವತೆ ಚಂದ್ರ. ಎಲ್ಲವನ್ನೂ ಗ್ರಹಣ ಮಾಡುವ ಮನಸ್ಸಿನ ದೇವತೆ ಗರುಡ-ಶೇಷ-ರುದ್ರರು. ವಿಶೇಷವಾಗಿ ಶಿವಶಕ್ತಿ. ರುದ್ರ ದೇವರ ಅನುಗ್ರಹ ಇಲ್ಲದೆ ಯಾವುದೇ ಅರಿವು ಬೆಳೆಯದು. ಹೀಗೆ ಪಂಚಭೂತಗಳ ದೇವತೆಗಳಿಂದ ದೇಹ ಧಾರಣೆಯಾದರೆ, ಈ ನಾಲ್ಕು ದೇವತೆಗಳಿಂದ ಅರಿವು ಬೆಳೆಯುತ್ತದೆ. ಇಷ್ಟು ವಿವರಣೆ ನೀಡಿದ
ಪಿಪ್ಪಲಾದರು ಮುಂದೆ ದೇವತೆಗಳ ಒಂದು ಕಥೆಯನ್ನು ಹೇಳುತ್ತಾರೆ.
ಒಮ್ಮೆ ಬೆಳಕು
ನೀಡುವ ದೇವತೆಗಳಲ್ಲಿ [ಕಣ್ಣಿನ, ಕಿವಿಯ, ಬಾಯಿಯ ಮತ್ತು ಮನಸ್ಸಿನ ಅಭಿಮಾನಿ ದೇವತೆಗಳಲ್ಲಿ] ಒಂದು
ಚರ್ಚೆ ಆರಂಭವಾಯಿತಂತೆ. [ಇದು ಒಂದು ಅಪೂರ್ವ ಜ್ಞಾನವನ್ನು ನಮಗೆ ತಿಳಿಸುವುದಕ್ಕೋಸ್ಕರ ದೇವತೆಗಳು
ಆಡಿದ ಒಂದು ನಾಟಕ]. ಇಲ್ಲಿ ಪ್ರತಿಯೊಬ್ಬ ದೇವತೆಯೂ ‘ದೇಹಧಾರಣೆಯಲ್ಲಿ ತಮ್ಮ ಪಾತ್ರ ಮುಖ್ಯ ಎಂದು ಸಮರ್ಥಿಸಿ
ಕೊಳ್ಳುತ್ತಿದ್ದರಂತೆ. ಕಣ್ಣಿನ ದೇವತೆ ಸೂರ್ಯ “ನಾನಿಲ್ಲದೆ ಜೀವನಿಗೆ ಬದುಕೇ ಇಲ್ಲ” ಎಂದರೆ ಕಿವಿಯ
ದೇವತೆ ಚಂದ್ರ “ಕಣ್ಣಿಗಿಂತ ಕಿವಿ ಮುಖ್ಯ ಆದ್ದರಿಂದ ನಾನು ಶ್ರೇಷ್ಠ” ಎಂದನಂತೆ. ಇದಕ್ಕೆ ಬಾಯಿಯ ದೇವತೆ
“ಮಾತೇ ಮುಖ್ಯ, ಮಾತಿಲ್ಲದೆ ಏನೂ ಇಲ್ಲ ಹಾಗಾಗಿ ನಾನು ಮುಖ್ಯ” ಎಂದನಂತೆ. ಆಗ ಮನಸ್ಸಿನ ದೇವತೆ: “ನೋಡುವುದು, ಕೇಳುವುದು ಮಾತನಾಡುವುದು ಎಲ್ಲಕ್ಕಿಂತ ಮುಖ್ಯ
ಗ್ರಹಣ ಮಾಡುವ ಮನಸ್ಸು. ಆದ್ದರಿಂದ ಎಲ್ಲವುದಕ್ಕಿಂತ ಮುಖ್ಯ ನಾನು” ಎಂದನಂತೆ. ಹೀಗೆ ಎಲ್ಲಾ ದೇವತೆಗಳು
ತಾವೇ ಮುಖ್ಯ ಎಂದು ಪ್ರಾಣ ದೇವರ ಮುಂದೆ ನಿಂತು
ಚರ್ಚಿಸಿದರಂತೆ. ಎಲ್ಲರೂ “ಈ ಬಾಣವನ್ನು ಧರಿಸಿದವನು
ನಾನು” ಎನ್ನುವ ಅಭಿಪ್ರಾಯವನ್ನು ಮುಂದಿಟ್ಟರಂತೆ. [ಇಲ್ಲಿ ಬಾಣ ಎನ್ನುವ ಪದ ಬಳಕೆಯಾಗಿದೆ. ಪ್ರಾಚೀನ ಸಂಸ್ಕೃತದಲ್ಲಿ
ಬಾಣ ಎಂದರೆ ಶರೀರ. ಬಾ= ಬಯಕೆ/ಕಾಮನೆ; ಅಣ=ಈಡೇರಿಸುವ ಸಾಧನ. ನಮ್ಮ ಬಯಕೆಗಳನ್ನು ನಾವು ನಮ್ಮ ದೇಹದ
ಮೂಲಕ ಈಡೇರಿಸಿಕೊಳ್ಳುತ್ತೇವೆ. ಆದ್ದರಿಂದ ದೇಹವನ್ನು ಬಾಣ ಎಂದು ಕರೆಯುತ್ತಾರೆ].
No comments:
Post a Comment