ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Sunday, August 19, 2012

Prashnopanishad in Kannada-Shanthi Mantra


ಶಾಂತಿಪಾಠ


                                    ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ  ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ
                                   ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯಶೇಮ ದೇವಹಿತಂಯದಾಯುಃ

ಅಧ್ಯಯನ ಪ್ರಾರಂಭಿಸುವ ಮೊದಲು ದೇವರನ್ನು ಪ್ರಾರ್ಥನೆ ಮಾಡಿ, “ನಿರ್ವಿಘ್ನವಾಗಿ ನಮ್ಮ ಅಧ್ಯಯನ ನಡೆಯಲಿ” ಎಂದು ಪ್ರಾರ್ಥಿಸುವ ಸ್ತೋತ್ರ ಶಾಂತಿಮಂತ್ರ. ಇಲ್ಲಿ  ಜ್ಞಾನಾನಂದವನ್ನು ಕೊಡು ಎನ್ನುವ ಪ್ರಾರ್ಥನೆಯ ಜೊತೆಗೆ ವಿಶ್ವಶಾಂತಿಯ ಪ್ರಾರ್ಥನೆ ಕೂಡಾ ಇದೆ. ಹೀಗಾಗಿ ಯಾವುದೇ ಒಂದು ಅಧ್ಯಯನ ಮಾಡುವ ಮೊದಲು ಮತ್ತು ಕೊನೆಯಲ್ಲಿ ಶಾಂತಿಮಂತ್ರ ಹೇಳುವ ಕ್ರಮವಿದೆ. ಇದು ಜೀವನದಲ್ಲಿ ಅಶಾಂತಿ ಬರಬಾರದು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶಾಂತಿಯನ್ನು ಪ್ರಾರ್ಥಿಸುವ ಮಂತ್ರ ಕೂಡಾ ಹೌದು. ಒಂದೊಂದು ವೇದ ಶಾಖೆಯವರಿಗೂ ಒಂದೊಂದು ಶಾಂತಿ ಮಂತ್ರವಿದೆ. ಇಲ್ಲಿ ಬಂದಿರುವುದು ಅಥರ್ವ ವೇದದ ಶಾಂತಿ ಮಂತ್ರ.
  “ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ  ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ”.  ಇಲ್ಲಿ ‘ಯಜತ್ರಾಃ’ ಎಂದರೆ ನಮ್ಮಿಂದ ಪೂಜಿಸಲ್ಪಡುವವರು, ನಮ್ಮನ್ನು ರಕ್ಷಿಸುವವರು ಎಂದರ್ಥ. ಅದೇ ರೀತಿ ‘ದೇವಾಃ’ ಎಂದರೆ ದೇವತೆಗಳು ಮತ್ತು ಅವರ ಅಂತರ್ಯಾಮಿಯಾಗಿರುವ ಭಗವಂತ. ಅಧ್ಯಯನಕ್ಕೆ ಮೊದಲು ಗುರು-ಶಿಷ್ಯರು ಪೂಜಾರ್ಹರಾದ ತಮ್ಮ ಇಂದ್ರಿಯಾಭಿಮಾನಿ ದೇವತೆಗಳಲ್ಲಿ ಈ ರೀತಿ ಪ್ರಾರ್ಥನೆ ಮಾಡುತ್ತಿದ್ದಾರೆ: “ನೀವು ನಮ್ಮ ಕಿವಿ ಒಳ್ಳೆಯದನ್ನು ಕೇಳುವಂತೆ, ನಮ್ಮ ಕಣ್ಣು ಒಳ್ಳೆಯದನ್ನು ನೋಡುವಂತೆ ಅನುಗ್ರಹಿಸಿ” ಎಂದು. ಎಲ್ಲಕ್ಕಿಂತ ಒಳ್ಳೆಯ ಸುದ್ದಿ ಎಂದರೆ ಅದು ದೇವರ ಸುದ್ದಿ. ಒಳ್ಳೆಯದನ್ನು ಕೇಳುವುದು ಎಂದರೆ ಮೊದಲು ಭಗವಂತನ ಬಗೆಗೆ ಕೇಳುವುದು. ನಂತರ ಲೋಕದಲ್ಲಿನ ಒಳ್ಳೆಯ ಸುದ್ದಿಯನ್ನು ಕೇಳುವುದು. ಸಾಮಾನ್ಯವಾಗಿ ಲೋಕದಲ್ಲಿನ ಕೆಟ್ಟ ವಿಷಯ ಕಿವಿಯ ಮೇಲೆ ಬಿದ್ದಾಗ, ಕೆಟ್ಟ ದೃಶ್ಯವನ್ನು ನೋಡಿದಾಗ ಮನಸ್ಸು ಕದಡುತ್ತದೆ. ಅದರಿಂದ ಕೊಪ, ದ್ವೇಷ ಬೆಳೆಯುತ್ತಾ ಹೋಗುತ್ತದೆ. ಅದಕ್ಕಾಗಿ ‘ಕೆಟ್ಟ ವಿಷಯ ಕಿವಿಯ ಮೇಲೆ ಬೀಳದಿರಲಿ, ಕೆಟ್ಟ ದೃಶ್ಯ ಕಣ್ಣಿಗೆ ಕಾಣದಿರಲಿ’ ಎನ್ನುವ ಪ್ರಾರ್ಥನೆ ಇಲ್ಲಿದೆ.
“ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿರ್ವ್ಯಶೇಮ ದೇವಹಿತಂಯದಾಯುಃ”. “ನಾವು ಬದುಕ್ಕಿದ್ದಾಗ ನಮಗೆ ಆರೋಗ್ಯವಂತ ಮತ್ತು ಗಟ್ಟಿಮುಟ್ಟಾದ ಇಂದ್ರಿಯ ಮತ್ತು  ಶರೀರವನ್ನು ಕೊಡು” ಎಂದು ಇಲ್ಲಿ ಪ್ರಾರ್ಥಿಸುತ್ತಾರೆ. ಬದುಕಿರುವಷ್ಟು ಕಾಲ ಇನ್ನೊಬ್ಬರಿಗೆ ಭಾರವಾಗಿ ಬದುಕಿಸಬೇಡ, ಸಾಯುವ ತನಕ ಭಗವಂತನ ಧ್ಯಾನ ಮಾಡುತ್ತಾ, ಜಾಗೃತವಾದ ಮನಸ್ಸಿನಲ್ಲಿ ಭಗವಂತನ ಗುಣಗಳ ಅನುಸಂಧಾನ ಮಾಡುತ್ತಾ, ದೇವರು ಮೆಚ್ಚುವ ಬದುಕನ್ನು ಬಾಳಬೇಕು. ಅದಕ್ಕಾಗಿ “ಓ ತತ್ತ್ವಾಭಿಮಾನಿ ದೇವತೆಗಳೇ ನಮಗೆ ಆರೋಗ್ಯವಂತ ಶರೀರವನ್ನು ಕೊಟ್ಟು ಅನುಗ್ರಹಿಸಿ” ಎಂದು ಇಲ್ಲಿ ಪ್ರಾರ್ಥಿಸಿದ್ದಾರೆ.
ಇಲ್ಲಿ ಶರೀರಗಳು(ತನೂಭಿಃ) ಎಂದು ಬಹುವಚನ ಉಪಯೋಗಿಸಿ ಪ್ರಾರ್ಥಿಸಿರುವುದನ್ನು ಕಾಣುತ್ತೇವೆ. ಇದರ ಹಿಂದೆ ಎರಡು ಅರ್ಥವಿದೆ. “ಜನ್ಮಜನ್ಮಗಳಲ್ಲೂ ಆರೋಗ್ಯವಂತ ಶರೀರ ಕೊಡು” ಎನ್ನುವುದು ಒಂದರ್ಥವಾದರೆ, “ಪ್ರಾರ್ಥಿಸುತ್ತಿರುವ ಎಲ್ಲರಿಗೂ ಆರೋಗ್ಯವಂತ ದೇಹ ಕೊಡು” ಎನ್ನುವುದು ಇನ್ನೊಂದು ಅರ್ಥ.  ಒಟ್ಟಿನಲ್ಲಿ ಹೇಳಬೇಕೆಂದರೆ: “ಒಳ್ಳೆಯದನ್ನು ಕೇಳಿಸು, ಒಳ್ಳೆಯದನ್ನು ನೋಡುವಂತೆ ಮಾಡು, ಉಸಿರಿರುವಷ್ಟು ಕಾಲ ದೇವರು ಮೆಚ್ಚುವ ಬದುಕನ್ನು ಪರಾಧೀನನಾಗದೇ ಬದುಕುವಂತೆ ಮಾಡು” ಎನ್ನುವುದು ಇಲ್ಲಿರುವ ಮೂಲ ಪ್ರಾರ್ಥನೆ.

                         ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ    ಸ್ವಸ್ತಿ ನಃ ಪೂಷಾ ವಿಶ್ವವೇದಾಃ
                         ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ    ಸ್ವಸ್ತಿ ನೋ ಬೃಹಸ್ಪತಿರ್ದಧಾತು
                                 ಓಂ ಶಾಂತಿಃ ಶಾಂತಿಃ ಶಾಂತಿಃ

ಮೇಲ್ನೋಟದಲ್ಲಿ ಈ ಶಾಂತಿಮಂತ್ರವನ್ನು  ನೋಡಿದರೆ ಇಲ್ಲಿ ಇಂದ್ರ, ಪೂಷಾ, ತಾಕ್ಷ್ಯ ಮತ್ತು ಬೃಹಸ್ಪತಿ ಎನ್ನುವ ನಾಲ್ಕು ದೇವತೆಗಳನ್ನು ಪ್ರಾರ್ಥಿಸುತ್ತಿರುವಂತೆ ಕಾಣುತ್ತದೆ. ಆದರೆ ಇದು ಭಗವಂತನ ನಾಲ್ಕು ರೂಪಗಳನ್ನು ಸ್ತೋತ್ರ ಮಾಡುವ ಮಂತ್ರ.  ಸೃಷ್ಟಿ, ಪಾಲನೆ, ಸಂಹಾರ ಮತ್ತು ಮೋಕ್ಷ ಈ ನಾಲ್ಕು ಸ್ಥಿತಿಯಲ್ಲಿ ನಮ್ಮನ್ನು ನಿರಂತರ ನಿಯಂತ್ರಿಸುವ ಭಗವಂತನ ಚತುರ್ಮುಖ ಸ್ತುತಿ ಇದಾಗಿದೆ. ಸೃಷ್ಟಿಗೆ ಕಾರಣವಾದ ಭಗವಂತನ ಪ್ರದ್ಯುಮ್ನ ರೂಪ, ಪಾಲನೆಗೆ ಕಾರಣವಾದ ಅನಿರುದ್ಧರೂಪ, ಸಂಹಾರಕರ್ತ ಸಂಕರ್ಷಣ ರೂಪ ಮತ್ತು ಮೋಕ್ಷಪ್ರದ ವಾಸುದೇವ ರೂಪ  ಇವೇ ಆ ಚತುರ್ಮೂರ್ತಿ ರೂಪಗಳು.
ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ: ‘ಪ್ರದ್ಯುಮ್ನಂಚ ಇಂದ್ರ ನಾಮಕಃ’ ಎಂದು ತೈತ್ತಿರೀಯ ಭಾಷ್ಯದಲ್ಲಿ ಆಚಾರ್ಯರು ಹೇಳಿದ್ದಾರೆ. ಆದ್ದರಿಂದ ಇಲ್ಲಿ ‘ಇಂದ್ರ’ ಎಂದರೆ ಸೃಷ್ಟಿಗೆ ಕಾರಣನಾದ ಭಗವಂತನ ಪ್ರದ್ಯುಮ್ನರೂಪ. “ವೃದ್ಧಶ್ರವಾಃ” ಎಂದರೆ ಎಲ್ಲಾ ಕಡೆ ಹಬ್ಬಿದ ಕೀರ್ತಿ ಉಳ್ಳವನು ಎಂದರ್ಥ. ಜಗತ್ತನ್ನು ಸೃಷ್ಟಿ ಮಾಡಿದ ಭಗವಂತನ ಕೀರ್ತಿಗಿಂತ ಮಹತ್ತಾದ ಇನ್ನೊಂದು ಕೀರ್ತಿ ಯಾವುದಿದೆ? ಜಗತ್ ಸೃಷ್ಟಾ ಎಂದು ನಾವು ಹಾಡಿ ಹೊಗಳುವ ದೇವರು ಆ ಪ್ರದ್ಯುಮ್ನ ದೇವರು. ಅವರು ನಮ್ಮ ಜೀವನದಲ್ಲಿ ಜ್ಞಾನಾನಂದವನ್ನು ಕೊಟ್ಟು ರಕ್ಷಿಸಲಿ ಎನ್ನುವ ಪ್ರಾರ್ಥನೆ ಇಲ್ಲಿದೆ.
ಸ್ವಸ್ತಿ ನಃ ಪೂಷಾ ವಿಶ್ವವೇದಾಃ : ‘ಪೂಷಾ’ ಎಂದರೆ ಪೋಷಣೆ.  ಪಾಲನೆ ಮಾಡುವ ಅನಿರುದ್ಧರೂಪಿ ಭಗವಂತ  ಪೂಷಾ. ‘ವಿಶ್ವವೇದಾಃ’ ಎಂದರೆ ಎಲ್ಲವನ್ನೂ ತಿಳಿದವನು. “ಸರ್ವಜ್ಞನಾಗಿದ್ದು, ಎಲ್ಲರನ್ನೂ ಪಾಲನೆ ಪೋಷಣೆ ಮಾಡುವ ಅನಿರುದ್ಧ ನಮಗೆ ಮಾಂಗಲಿಕವಾದ, ಜ್ಞಾನಾನಂದಮಾಯವಾದ ಬದುಕನ್ನು ಕೊಡಲಿ ಎನ್ನುವುದು ಇಲ್ಲಿರುವ ಪ್ರಾರ್ಥನೆ.
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ : ಇಲ್ಲಿ ‘ನೇಮಿ’ ಎಂದರೆ ಚಕ್ರ.  ಅಧರ್ಮ ಮತ್ತು ಅಜ್ಞಾನದ ನಾಶಕ್ಕಾಗಿ ಕೈಯಲ್ಲಿ ಚಕ್ರವನ್ನು ಹಿಡಿದವನು   ‘ಅರಿಷ್ಟನೇಮಿಃ’. ಸಜ್ಜನರ ಮತ್ತು ಧರ್ಮದ ರಕ್ಷಣೆಗಾಗಿ ಕೈಯಲ್ಲಿ ಆಯುಧ ಹಿಡಿದಿರುವ ಸಂಕರ್ಷಣರೂಪಿ ಭಗವಂತ, ನಮ್ಮ ಸಂಸಾರ ದುಃಖವನ್ನು ನಾಶಮಾಡಿ, ನಮ್ಮನ್ನು ಉದ್ಧಾರ ಮಾಡಲಿ ಎನ್ನುವುದು ಇಲ್ಲಿರುವ ಪ್ರಾರ್ಥನೆ.
ಸ್ವಸ್ತಿ ನೋ ಬೃಹಸ್ಪತಿರ್ದಧಾತು: ಸಂಸಾರ ಬಂಧವನ್ನು ಕಳಚಿಕೊಂಡು ಮೋಕ್ಷವನ್ನು ಸೇರಿದ ದೊಡ್ಡವರ ಸ್ವಾಮಿ, ‘ಮೋಕ್ಷಪ್ರದ ವಾಸುದೇವ’ ನಮ್ಮನ್ನು ಅತ್ಯಂತ ಮಾಂಗಲಿಕ ಸ್ಥಿತಿಯಲ್ಲಿ ಧಾರಣೆ ಮಾಡಿ ರಕ್ಷಿಸಲಿ, ಮೋಕ್ಷಪ್ರದನಾದ ಆತ ನಮಗೆ ಮೋಕ್ಷವನ್ನು ಕರುಣಿಸಲಿ ಎನ್ನುವುದು ಇಲ್ಲಿರುವ ಪ್ರಾರ್ಥನೆ.
ಓಂ ಶಾಂತಿಃ ಶಾಂತಿಃ ಶಾಂತಿಃ :   ‘ಓಂ’ ಎನ್ನುವುದು ಅತ್ಯಂತ ಮೂಲಭೂತವಾದ ಬೀಜಾಕ್ಷರ. ಇದು ಭಗವಂತನ ಹೆಸರು. ‘ಶಂ’ ಎಂದರೆ ಆನಂದ; ‘ಇ’ ಎಂದರೆ ಜ್ಞಾನ; ‘ಅಂತ’ ಎಂದರೆ ತುತ್ತತುದಿ. ಆದ್ದರಿಂದ ‘ಓಂ ಶಾಂತಿಃ’ ಎಂದರೆ: ‘ಭಗವಂತ ಜ್ಞಾನಾನಂದಗಳ ತುತ್ತ ತುದಿಯಲ್ಲಿರುವವ’ ಎಂದರ್ಥ.  ಮೂರು ವೇದಗಳಲ್ಲಿ ಪ್ರತಿಪಾಧ್ಯನಾಗಿರುವ, ಮೂರು ಕಾಲಗಳಲ್ಲಿರುವ, ಎಲ್ಲಾಕಡೆ ಇರುವ ಭಗವಂತ ಜ್ಞಾನಾನಂದಪೂರ್ಣ ಎಂದು ಇಲ್ಲಿ ಮೂರು ಬಾರಿ ಹೇಳಲಾಗಿದೆ. “ಈ ಅನುಸಂಧಾನದ ಮೂಲಕ ನಮ್ಮ ಬದುಕಿನಲ್ಲಿ ಕೂಡಾ ಶಾಂತಿಯನ್ನು ಕೊಡು” ಎನ್ನುವ ಪ್ರಾರ್ಥನೆ ಇಲ್ಲಿದೆ.
*******

No comments:

Post a Comment