ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Saturday, August 25, 2012

Prashnopanishad in Kannada-Prashna-I (3 to 7)


ಮೊದಲನೆಯ ಪ್ರಶ್ನೆ


ಅಥ ಕಬಂಧೀ ಕಾತ್ಯಾಯನ ಉಪೇತ್ಯ ಪಪ್ರಚ್ಛ ಭಗವನ್ ಕುತೋ  ಹ ವಾ ಇಮಾಃ ಪ್ರಜಾಃ ಪ್ರಜಾಯಂತ ಇತಿ

ಪ್ರಶ್ನೆಯನ್ನು ಹೊತ್ತುತಂದ ಆರು ಮಂದಿ ಋಷಿಗಳಲ್ಲಿ ಕೊನೆಯವನಾದ  ಕಬಂಧೀ ಕಾತ್ಯಾಯನ ಗುರುಗಳಿಗೆ ಗೌರವಪೂರ್ವಕ ನಮಿಸಿ, ತನ್ನ ಪ್ರಶ್ನೆಯನ್ನು ಅವರ ಮುಂದಿಡುತ್ತಾನೆ. ಆತ ಕೇಳುತ್ತಾನೆ “ ಭಗವನ್, ಈ ಸೃಷ್ಟಿ ಹೇಗೆ ನಿರ್ಮಾಣವಾಯಿತು? ಯಾರಿಂದ ಸೃಷ್ಟಿಯಾಯಿತು? ಏಕೆ ಸೃಷ್ಟಿಯಾಯಿತು?” ಎಂದು. ಇದು ಅತ್ಯಂತ ಮೂಲಭೂತ ಪ್ರಶ್ನೆ. ಈ ಜಗತ್ತು, ಸಮಸ್ತ ಜೀವಕೋಟಿ ಎಲ್ಲಿಂದ ಬಂದಿರುವುದು? ಪ್ರಳಯಕಾಲದಲ್ಲಿ ಎಲ್ಲವೂ ನಾಶವಾದಾಗ ಅದನ್ನು ಮರಳಿ ಸೃಷ್ಟಿ ಮಾಡುವವರು ಯಾರು? ಈ ಪ್ರಪಂಚದ ಮುಖ್ಯ ಮತ್ತು ಅವಾಂತರ ಕಾರಣ ಯಾರು? ಏತಕ್ಕಾಗಿ ಈ ಸೃಷ್ಟಿ ?  ಇದು ಇಂದು ಎಲ್ಲರನ್ನೂ ಕಾಡುವ ಪ್ರಶ್ನೆ. ವಿಜ್ಞಾನದಲ್ಲಿ ಈ ಪ್ರಶ್ನೆಗೆ ಉತ್ತರವಿಲ್ಲ. ಇಂತಹ ಅಪೂರ್ವ ಪ್ರಶ್ನೆಗೆ ಪಿಪ್ಪಲಾದರ ಉತ್ತರ ಮುಂದಿನ ಗದ್ಯದಿಂದ ಪ್ರಾರಂಭವಾಗುತ್ತದೆ.

ತಸ್ಮೈ ಸ ಹೋವಾಚ ಪ್ರಜಾಕಾಮೋ ವೈ ಪ್ರಜಾಪತಿಃ ಸ ತಪೋಽತಪ್ಯತ; ಸ ತಪಸ್ತಪ್ತ್ವಾ ಸ ಮಿಥುನಮುತ್ಪಾದಯತೇ,   ರಯಿಂ ಚ ಪ್ರಾಣಂ ಚೇತ್ಯೇತೌ ಮೇ ಬಹುಧಾ ಪ್ರಜಾಃ ಕರಿಷ್ಯತ ಇತಿ  

ಇಲ್ಲಿ “ತಸ್ಮೈ ಸಃ ಹ ಉವಾಚ” ಎನ್ನುವಲ್ಲಿ ಹ-ಕಾರ ಬಳಕೆಯಾಗಿದೆ. ಅಂದಿನ ಕಾಲದ ಯಾವ ವಿದ್ವಾಂಸರಿಗೂ ತಿಳಿಯದ ವಿಚಾರವನ್ನು, ಪಿಪ್ಪಲಾದರು ತಿಳಿದಿರುವುದು ಒಂದು ವಿಸ್ಮಯ ಮತ್ತು  ಅದನ್ನು ಅವರಿಂದ ನಾವು ತಿಳಿದುಕೊಳ್ಳುವುದು ಒಂದು ಆನಂದ. ಈ ವಿಸ್ಮಯಾನಂದದ ಸಮನ್ವಯವನ್ನು ಹ-ಕಾರ ವ್ಯಕ್ತಪಡಿಸುತ್ತದೆ. ಇಲ್ಲಿ ಪಿಪ್ಪಲಾದರು ಹೇಳುತ್ತಾರೆ: “ ಸಮಸ್ತ ಪ್ರಪಂಚದ ರಕ್ಷಕ, ಪ್ರಜಾಪಾಲಕ, ಜಗತ್ತಿನ ಸ್ವಾಮಿ, ಭಗವಂತ, ಪ್ರತಿಯೊಂದು ಜೀವದ ವ್ಯಕ್ತಿತ್ವ ವಿಕಸನಕ್ಕಾಗಿ, ಜೀವ ಜ್ಞಾನ ಪಡೆದು ಮುಕ್ತಿ ಸೇರಲಿ ಎನ್ನುವ ಉದ್ದೇಶದಿಂದ ಸೃಷ್ಟಿ ಮಾಡಲು ಬಯಸಿದ” ಎಂದು. ಇಲ್ಲಿ ‘ವೈ’ ಎನ್ನುವ ಪದ ಬಳಕೆಯಾಗಿದೆ. ‘ಇದು ಸಮಸ್ತ ವೇದಜ್ಞರಿಗೆ, ಜ್ಞಾನಿಗಳಿಗೆ ತಿಳಿದ ವಿಷಯ. ಇದರಲ್ಲಿ ಗೊಂದಲವಿಲ್ಲ ಎನ್ನುವುದನ್ನು ‘ವೈ’ ಪ್ರತಿಬಿಂಬಿಸುತ್ತದೆ.   

ಆದಿತ್ಯೋ ಹ ವೈ ಪ್ರಾಣೋ, ರಯಿರೇವ ಚಂದ್ರಮಾ, ರಯಿರ್ವಾ ಏತತ್ ಸರ್ವಂ ಯನ್ಮೂರ್ತಂ ಚಾಮೂರ್ತಂ ಚ; ತಸ್ಮಾನ್ಮೂರ್ತಿರೇವ ರಯಿಃ  

ಜೀವಗಳ ಸೃಷ್ಟಿಗಾಗಿ ಭಗವಂತ ಮೊದಲು ಬ್ರಹ್ಮ-ವಾಯು(ಪ್ರಾಣಃ) ಮತ್ತು ಸರಸ್ವತಿ-ಭಾರತಿ(ರಯಿ)ಯರನ್ನು ಸೃಷ್ಟಿ ಮಾಡಿದ. ಪ್ರಾಣ-ಭಾರತಿಯರಲ್ಲಿ ಭಗವಂತ ಅಂತರ್ಯಾಮಿಯಾಗಿ ಕುಳಿತು, ಸೃಷ್ಟಿ ವಿಸ್ತಾರಕ್ಕೆ ಸೂರ್ಯ-ಚಂದ್ರರನ್ನು ಸೃಷ್ಟಿಮಾಡಿ, ಸೂರ್ಯ-ಚಂದ್ರರೊಳಗೆ ಕುಳಿತ. ಇದೇ ಕಾಲದ ಸೃಷ್ಟಿ. [ಇಲ್ಲಿ ಕಾಲದ ಸೃಷ್ಟಿ ಎಂದರೆ ಕಾಲದ ಘಟಕಗಳ ಸೃಷ್ಟಿ. ಕಾಲದ ವಿಭಾಜಕವಾಗಿ ಸೂರ್ಯ-ಚಂದ್ರರ ಸೃಷ್ಟಿ].  ಹೀಗೆ ಸೃಷ್ಟಿಯಾದ ಸೂರ್ಯನ ಒಳಗೆ ಪ್ರಾಣ, ಚಂದ್ರನ ಒಳಗೆ ಭಾರತಿ ನಿಂತು, ಹಗಲು ರಾತ್ರಿಗಳಲ್ಲಿ ಸೃಷ್ಟಿ ವಿಸ್ತಾರವಾಯಿತು. ಪ್ರಾಣ-ಭಾರತಿಯರ  ಒಳಗೆ ಲಕ್ಷ್ಮೀ-ನಾರಾಯಣರು ನಿಂತು, ಈ ಸೃಷ್ಟಿಗೆ ಬೇಕಾದ ಶಕ್ತಿಪಾತ ಮಾಡಿದರು.
ಪಂಚಭೂತಗಳಲ್ಲಿ ಎರಡು ವಿಧ. ಒಂದು ಮೂರ್ತ(ಆಕಾರ ಉಳ್ಳದ್ದು) ಮತ್ತು ಇನ್ನೊಂದು ಅಮೂರ್ತ(No Form). ಮಣ್ಣು-ನೀರು-ಬೆಂಕಿ ಮೂರ್ತ ಹಾಗೂ ಗಾಳಿ ಮತ್ತು ಆಕಾಶ ಅಮೂರ್ತ. ಮಣ್ಣು-ನೀರು-ಬೆಂಕಿಯಲ್ಲಿ ಭಾರತಿ ತುಂಬಿ, ಗಾಳಿ-ಆಕಾಶದಲ್ಲಿ ಪ್ರಾಣದೇವರು ತುಂಬಿ,  ಪಂಚಭೂತಗಳಿಂದ ಈ ಪ್ರಪಂಚ ಸೃಷ್ಟಿ ಮಾಡಿದರು.
ಓದುಗರು ಇಲ್ಲಿ ಒಂದು ಅಂಶವನ್ನು ತಿಳಿದಿರಬೇಕು. ನಮಗೆ ತಿಳಿದಂತೆ ಪ್ರಳಯ ಕಾಲದಲ್ಲಿ ಎಲ್ಲವೂ ಭಗವಂತನ ಉದರದಲ್ಲಿದ್ದು, ಸೃಷ್ಟಿಕಾಲದಲ್ಲಿ ಭಗವಂತನ ನಾಭಿಯಿಂದ ಬ್ರಹ್ಮಾಂಡ ಸೃಷ್ಟಿಯಾಯಿತು. ಇದು ಮೊತ್ತಮೊದಲ ಸೂಕ್ಷ್ಮಸೃಷ್ಟಿ. ಆನಂತರ ಇನ್ನೂ ಅನೇಕ ಹಂತಗಳಿಂದ ಸ್ಥೂಲ ಸೃಷ್ಟಿಯ ನಿರ್ಮಾಣವಾಯಿತು. ಚತುರ್ಮುಖ ಬ್ರಹ್ಮನನ್ನು ನೋಡಿದರೆ, ಸೂಕ್ಷ್ಮದಿಂದ ಸ್ಥೂಲದ ತನಕ ಆತನಿಗೆ ಮೂರು ಹುಟ್ಟು. ಈ ರೀತಿ ಅನೇಕ ಹಂತಗಳಲ್ಲಿ ಸೃಷ್ಟಿ ನಿರ್ಮಾಣ ಕಾರ್ಯವನ್ನು ಭಗವಂತ ಮಾಡಿರುವುದರಿಂದ, ಅಧ್ಯಾತ್ಮ ಸಾಹಿತ್ಯದಲ್ಲಿ ಒಂದೊಂದು ಕಡೆ ಒಂದೊಂದು ವಿವರಣೆಯನ್ನು ಕಾಣುತ್ತೇವೆ. ಉದಾಹರಣೆಗೆ ಒಂದೆಡೆ ಚತುರ್ಮುಖ ಭಗವಂತನ ನಾಭಿಯಿಂದ ಜನಿಸಿದ ಎಂದರೆ, ಇನ್ನೊಂದೆಡೆ ಚತುರ್ಮುಖನನ್ನು ನಾನು ನನ್ನ ನೆತ್ತಿಯಿಂದ ಹೆತ್ತೆ ಎನ್ನುತ್ತಾಳೆ ಲಕ್ಷ್ಮಿ. ಒಂದು ಕಡೆ  ಚತುರ್ಮುಖನಿಂದ ಈ  ಸೃಷ್ಟಿ ವಿಸ್ತಾರವಾಯಿತು ಎಂದರೆ, ಇನ್ನೊಂದೆಡೆ ಶಿವನಿಂದ ಈ ಸೃಷ್ಟಿ ವಿಸ್ತಾರವಾಯಿತು ಎಂದಿದೆ. ಇದು ನಮಗೆ ಅರ್ಥವಾಗಬೇಕಾದರೆ ನಾವು ಭಗವಂತನ ಸೃಷ್ಟಿ ಪ್ರಕ್ರಿಯೆಯ ವಿವಿಧ ಹಂತಗಳನ್ನು (ಸೂಕ್ಷ್ಮದಿಂದ-ಸ್ಥೂಲದ ತನಕ) ವಿವರವಾಗಿ ತಿಳಿಯಬೇಕು. ಇಲ್ಲದಿದ್ದರೆ ಎಲ್ಲವೂ ಗೊಂದಲ. ಉದಾಹರಣೆಗೆ ಒಂದು ಮಗು ಹುಟ್ಟಿತು ಎಂದರೆ –ಮೇಲ್ನೋಟಕ್ಕೆ ಆ ಮಗುವಿನ ಸೃಷ್ಟಿಕರ್ತೃ ಮಗುವಿನ ತಂದೆ-ತಾಯಿ. ಆದರೆ ಆ ಸೃಷ್ಟಿಯ ಹಿಂದೆ ಶಿವ-ಪಾರ್ವತಿಯರಿದ್ದಾರೆ, ಪ್ರಾಣ-ಭಾರತಿಯರಿದ್ದಾರೆ, ಬ್ರಹ್ಮ-ಸರಸ್ವತಿಯರಿದ್ದಾರೆ, ಎಲ್ಲಕ್ಕೂ ಮೂಲದಲ್ಲಿ ಲಕ್ಷ್ಮೀ-ನಾರಾಯಣರಿದ್ದಾರೆ. ಬನ್ನಿ, ಈ ಹಿನ್ನೆಲೆಯೊಂದಿಗೆ ಪಿಪ್ಪಲಾದರ ಉಪದೇಶವನ್ನಾಲಿಸೋಣ.

ಅಥಾದಿತ್ಯ ಉದಯನ್ ಯತ್ ಪ್ರಾಚೀಂ ದಿಶಂ ಪ್ರವಿಶತಿ, ತೇನ ಪ್ರಾಚ್ಯಾನ್ ಪ್ರಾಣಾನ್ ರಶ್ಮಿಷು ಸಂನಿಧತ್ತೇ   ಯದ್ದಕ್ಷಿಣಾಂ ಯತ್ ಪ್ರತೀಚೀಂ ಯದುದೀಚೀಂ ಯದಧೋ ಯದೂರ್ಧ್ವಂ ಯದಂತರಾ ದಿಶೋ ಯತ್ಸರ್ವಂ ಪ್ರಕಾಶಯತಿ,ತೇನ ಸರ್ವಾನ್ ಪ್ರಾಣಾನ್ ರಶ್ಮಿಷು ಸಂನಿಧತ್ತೇ  

ಸ ಏಷ ವೈಶ್ವಾನರೋ ವಿಶ್ವರೂಪಃ ಪ್ರಾಣೋಽಗ್ನಿರುದಯತೇ ತದೇತದೃಚಾಭ್ಯುಕ್ತಮ್  

ಸೃಷ್ಟಿ ನಿರ್ಮಾಣ ಕಾರ್ಯದಲ್ಲಿ ದಿಕ್ಕುಗಳ ದೇವತೆಗಳ ಪಾತ್ರವನ್ನು ಇಲ್ಲಿ ವಿವರಿಸಲಾಗಿದೆ. ನಮಗೆ ತಿಳಿದಂತೆ ಇಂದ್ರ ಪೂರ್ವ ದಿಕ್ಕಿನ ದೇವತೆ, ಅಗ್ನಿ ಆಗ್ನೇಯ ದಿಕ್ಕಿನ ದೇವತೆ, ಯಮ ದಕ್ಷಿಣ ದಿಕ್ಕಿನ ದೇವತೆ, ನಿರ್ಋತಿ ನೈಋತ್ಯ ದಿಕ್ಕಿನ ದೇವತೆ, ಪಶ್ಚಿಮಕ್ಕೆ ವರುಣ, ವಾಯುವ್ಯಕ್ಕೆ ಪ್ರವಹವಾಯು, ಉತ್ತರಕ್ಕೆ ಚಂದ್ರ, ಈಶಾನ್ಯಕ್ಕೆ ಈಶಾನ(ಶಿವ) ದೇವತೆ. ಅಧೋಲೋಕ(ಕೆಳಗೆ)ಕ್ಕೆ  ಶೇಷ ಮತ್ತು ಮಿತ್ರ ದೇವತೆಗಳಾದರೆ, ಊರ್ಧ್ವ(ಮೇಲೆ)ದಿಕ್ಕಿಗೆ  ಗರುಡ-ಕಾಮರು ದೇವತೆಗಳು.
ಸೂರ್ಯಮಂಡಲದಿಂದ ದಶದಿಕ್ಕುಗಳಿಗೂ ಸೂರ್ಯ ಪ್ರಕಾಶ ಹರಡಿ ಆ ದಿಕ್ಕಿನ ದೇವತಗಳ ಮೇಲೆ ಭಗವಂತನ ಶಕ್ತಿಪಾತವಾಗುತ್ತದೆ. ಇಲ್ಲಿ ಹೇಳಿರುವ ಪ್ರತಿಯೊಬ್ಬ ದೇವತೆಗಳೂ ಪತ್ನಿ ಸಮೇತರಾಗಿ ತಮ್ಮತಮ್ಮ ದಿಕ್ಕುಗಳಲ್ಲಿ ನಿಂತು, ಭಗವಂತನಿಂದ ಶಕ್ತಿಪಡೆದು, ಭಗವಂತನ ಇಚ್ಛೆಗನುಗುಣವಾಗಿ ಸೃಷ್ಟಿ ವಿಸ್ತಾರದಲ್ಲಿ ಪಾಲ್ಗೊಳ್ಳುತ್ತಾರೆ. ಇಂದ್ರ-ಶಚಿ, ಅಗ್ನಿ-ಸ್ವಾಹ, ಯಮ-ಶ್ಯಾಮಲ, ನಿರ್ಋತಿ-ಧೀರ್ಘಾ, ವರುಣ-ಗಂಗಾ, ಪ್ರವಹವಾಯು-ಪ್ರಾವಹೀ, ಚಂದ್ರ-ರೋಹಿಣಿ, ಈಶಾನ-ಪಾರ್ವತಿ, ಶೇಷ-ವಾರುಣಿ, ಮಿತ್ರ-ರೇವತಿ, ಗರುಡ-ಸುಪರ್ಣಿ, ಮನ್ಮಥ-ರತಿ ಹೀಗೆ ಇಪ್ಪತ್ನಾಲ್ಕು ದೇವತೆಗಳಲ್ಲಿ ಭಗವಂತನ ಶಕ್ತಿಪಾತವಾಗಿ ಅವರ ಮುಖೇನ ಪ್ರಪಂಚಕ್ಕೆ ಶಕ್ತಿ ಹರಿದುಬಂದು, ಪ್ರಪಂಚ ನಿರ್ಮಾಣವಾಯಿತು. ಸರ್ವಚೇಷ್ಟಕನಾದ ಭಗವಂತ ವಿಶ್ವರೂಪನಾಗಿ ಬ್ರಹ್ಮಾಂಡದಲ್ಲೂ, ವೈಶ್ವಾನರನಾಗಿ ಎಲ್ಲಾ ಪಿಂಡಾಂಡದಲ್ಲೂ, ಪ್ರಾಣಾಂತರ್ಗತನಾಗಿ ತುಂಬಿದ. ಇದನ್ನು ಋಗ್ವೇದದಲ್ಲೇ ಹೇಳಿದ್ದಾರೆ[ “ತದೇತದೃಚಾಭ್ಯುಕ್ತಮ್”].

No comments:

Post a Comment