ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Sunday, August 19, 2012

Prashnopanishad in Kannada-Introduction


ಪ್ರಸ್ತಾವನೆ


ಷಟ್ ಪ್ರಶ್ನೋಪನಿಷತ್ತು  ಅಥರ್ವ ವೇದಕ್ಕೆ ಸೇರಿದ ಉಪನಿಷತ್ತು. ಈ ಉಪನಿಷತ್ತಿಗೆ ತುಂಬಾ ಬಳಕೆಯಲ್ಲಿರುವ ಹೆಸರು ‘ಪ್ರಶ್ನೋಪನಿಷತ್ತು’. ಆದರೆ ಇದರ ಪ್ರಾಚೀನ ಹೆಸರು ‘ಷಟ್ ಪ್ರಶ್ನ ಉಪನಿಷತ್ತು’. ಆರು ಋಷಿಗಳು ಕೇಳುವ ಆರು ಪ್ರಶ್ನೆಗಳಿಗೆ ಪಿಪ್ಪಲಾದರು ಕೊಡುವ ಉತ್ತರವನ್ನು ಇಲ್ಲಿ ಆರು ಅಧ್ಯಾಯ ರೂಪದಲ್ಲಿ ಕಾಣಬಹುದು.
ಉಪನಿಷತ್ತಿಗೆ ಪ್ರವೇಶಿಸುವ ಮುನ್ನ ಉಪನಿಷತ್ತಿನ ಹಿನ್ನಲೆಯನ್ನು ತಿಳಿಯುವುದು ಬಹಳ ಮುಖ್ಯ. ಮೂಲಭೂತವಾಗಿ ಎಲ್ಲಾ ವೇದಗಳಿಗೆ ಮೂಲ ಓಂಕಾರ. ಓಂಕಾರದ ಮೂರು ಅಕ್ಷರಗಳಿಂದ ಓಂ ಭೂಃ ಓಂ ಭುವಃ ಓಂ ಸುವಃ  ಎನ್ನುವ ಮೂರು ವ್ಯಾಹೃತಿಗಳು ಸೃಷ್ಟಿಯಾದವು. ಈ ವ್ಯಾಹೃತಿಯಿಂದ ಮೂರು ಪಾದದ ಗಾಯತ್ತ್ರಿ ಸೃಷ್ಟಿಯಾಯಿತು. ಮುಂದೆ ಮೂರು ಪಾದದ ಗಾಯತ್ತ್ರಿಯಿಂದ  ಮೂರು ವರ್ಗದ ಪುರುಷಸೂಕ್ತ ಸೃಷ್ಟಿಯಾಯಿತು[ಇದು ಋಗ್ವೇದದ ಹದಿನಾರು ಮಂತ್ರಗಳಿರುವ ಪುರುಷಸೂಕ್ತ. ಇಲ್ಲಿ ಮೊದಲ ಐದು, ನಂತರದ ಐದು ಹಾಗೂ ಕೊನೇಯ ಆರು ಮಂತ್ರಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ]. ಹೀಗೆ ಸೃಷ್ಟಿಯಾದ ಪುರುಷಸೂಕ್ತದ ಮೊದಲ ವರ್ಗ ವಿಸ್ತಾರಗೊಂಡು ಋಗ್ವೇದ, ಎರಡನೇ ವರ್ಗ ವಿಸ್ತಾರವಾಗಿ ಯಜುರ್ವೇದ ಮತ್ತು ಮೂರನೇ ವರ್ಗ ವಿಸ್ತಾರವಾಗಿ ಸಾಮವೇದದ ಜನನವಾಯಿತು. ಮುಂದೆ ಅಥರ್ವ ಮುನಿಯಿಂದ ನಾಲ್ಕನೇ ವೇದದ ಸೃಷ್ಟಿಯಾಯಿತು. ಇದು ನಮ್ಮ ವೈದಿಕ ವಾಙ್ಮಯ ಬೆಳೆದುಬಂದ ಬಗೆ. ಓಂಕಾರ ಎನ್ನುವ ಬೀಜದಿಂದ ಮಹಾವೃಕ್ಷವಾಗಿ, ಹೆಮ್ಮರವಾಗಿ ವೈದಿಕ ಸಾಹಿತ್ಯ ಬೆಳೆದಿದೆ.
ಎಲ್ಲಾ ವೇದಗಳಿಗೂ ಸಂಹಿತೆ, ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತು  ಎನ್ನುವ ನಾಲ್ಕು ಮುಖಗಳಿವೆ. ‘ಸಂಹಿತೆ’ ಅಂದರೆ ಮೂಲಪಾಠ(Text). ‘ಬ್ರಾಹ್ಮಣ’ ವೇದದಲ್ಲಿ ಕರ್ಮ ಭಾಗವನ್ನು ಮತ್ತು ಅದರ ಅನುಷ್ಟಾನದ ಬಗೆಯನ್ನು ವಿವರಿಸುವ ಭಾಗ. ಸಾಮಾನ್ಯವಾಗಿ ಬ್ರಹ್ಮಚಾರಿಗಳಿಗೆ (ಮದುವೆಗೆ ಮೊದಲು) ಸಂಹಿತೆಯ  ಅಧ್ಯಯನವಾದರೆ, ಮದುವೆಯಾದ ನಂತರ ಗ್ರಹಸ್ಥ ಜೀವನಕ್ಕೆ ಬೇಕಾದ ವಿವರಗಳನ್ನು ಕೊಡತಕ್ಕಂತಹ ವೇದದ ಭಾಗ ‘ಬ್ರಾಹ್ಮಣ’.
ಹಿಂದಿನ ಕಾಲದಲ್ಲಿ ಗ್ರಹಸ್ಥ ಜೀವನದ ನಂತರ, ಮಕ್ಕಳು ದೊಡ್ಡವರಾದ ಮೇಲೆ, ತಂದೆ-ತಾಯಿ ಸುಮಾರು ಐವತ್ತರಿಂದ ಅರವತ್ತರ ವಯಸ್ಸಿನಲ್ಲಿ ಎಲ್ಲವನ್ನೂ ಮಕ್ಕಳ ಸ್ವಾಧೀನ ಬಿಟ್ಟು, ಕಾಡಿಗೆ ಹೋಗಿ ವಾಸ ಮಾಡುತ್ತಿದ್ದರು. ಅದನ್ನೇ ವಾನಪ್ರಸ್ಥ ಎನ್ನುತ್ತಾರೆ. ಸಾಂಸಾರಿಕ ಜೀವನದ ಬಹುಭಾಗವನ್ನು ಕಳಚಿಕೊಂಡು ಕಾಡಿನಲ್ಲಿ ವಾಸವಾಗಿರುವಾಗ ಹೆಚ್ಚು ಉಪಯೋಗಕ್ಕೆ ಬರುವ ವೇದದ ಭಾಗವೇ ‘ಅರಣ್ಯಕ’. ಸಮಗ್ರವನ್ನೂ ತ್ಯಜಿಸಿರುವ ಸಂನ್ಯಾಸಿಗಳಿಗೆ ನಿರಂತರ ಭಗವಂತನ ಚಿಂತನೆ ಮಾಡಲು ಬೇಕಾಗಿರುವ ವೇದದ ಭಾಗವೇ ಉಪನಿಷತ್ತು. ಒಟ್ಟಿನಲ್ಲಿ ಹೇಳಬೇಕೆಂದರೆ ಸಂಹಿತೆ- ಬ್ರಹ್ಮಚಾರಿಗಳಿಗೆ, ಬ್ರಾಹ್ಮಣ-ಗ್ರಹಸ್ಥರಿಗೆ, ಅರಣ್ಯಕ-ವಾನಪ್ರಸ್ಥರಿಗೆ ಮತ್ತು ಉಪನಿಷತ್ತು-ಸಂನ್ಯಾಸಿಗಳಿಗೆ. ಇದರರ್ಥ ಗ್ರಹಸ್ಥರು ಉಪನಿಷತ್ತನ್ನು ಓದಬಾರದು ಎಂದರ್ಥವಲ್ಲ. ಎಲ್ಲರೂ ಎಲ್ಲವನ್ನೂ ಓದಬೇಕು. ಆದರೆ ವಿಶೇಷ ಒತ್ತುಕೊಟ್ಟು ಮೇಲಿನ ವಿಭಾಗವಿದೆ ಅಷ್ಟೇ.
ಹಿಂದೆ ಹೇಳಿದಂತೆ ಪ್ರತಿಯೊಂದು ವೇದಗಳಿಗೂ ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತುಗಳಿವೆ. ಐತರೇಯ ಬ್ರಾಹ್ಮಣ, ಐತರೇಯ ಅರಣ್ಯಕ ಮತ್ತು ಐತರೇಯ ಉಪನಿಷತ್ತು ಋಗ್ವೇದಕ್ಕೆ ಸಂಬಂಧಪಟ್ಟಿದ್ದು. ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆಗಳಿವೆ ಮತ್ತು ಅಲ್ಲಿ ಪ್ರತೀ ಶಾಖೆಗೂ ಎರಡು ಉಪನಿಷತ್ತುಗಳಿವೆ. ಶುಕ್ಲಯಜುರ್ವೇದದಲ್ಲಿ ಈಶಾವಾಸ್ಯ ಮತ್ತು ಬೃಹದಾರಣ್ಯಕ ಎನ್ನುವ ಎರಡು ಉಪನಿಷತ್ತುಗಳಿವೆ. ಅದೇ ರೀತಿ ಕೃಷ್ಣ ಯಜುರ್ವೇದದಲ್ಲಿ ತೈತ್ತಿರೀಯ ಮತ್ತು ಕಾಠಕ ಎನ್ನುವ ಎರಡು ಉಪನಿಷತ್ತುಗಳಿವೆ. ಇನ್ನು ಸಾಮವೇದದಲ್ಲಿ ಕೂಡಾ  ಎರಡು ಉಪನಿಷತ್ತುಗಳಿವೆ. ಅವುಗಳೆಂದರೆ ಕೇನೋಪನಿಷತ್ತು ಮತ್ತು ಛಂದೋಗ ಉಪನಿಷತ್ತು.  
ಅಥರ್ವವೇದದಲ್ಲಿ ಮೂರು ಉಪನಿಷತ್ತುಗಳಿವೆ. ಅವುಗಳೆಂದರೆ: ಅಥರ್ವವೇದೊಪನಿಷತ್ತು, ಮಾಂಡೂಕ ಉಪನಿಷತ್ತು ಮತ್ತು ಷಟ್ ಪ್ರಶ್ನ ಉಪನಿಷತ್ತು. ಇಲ್ಲಿ ನಾವು ನೋಡುತ್ತಿರುವ ಉಪನಿಷತ್ತು ಈ ಮೇಲಿನ ದಶೋಪನಿಷತ್ತುಗಳಲ್ಲಿ ಒಂದಾದ ಅಥರ್ವವೇದದ   “ಷಟ್ ಪ್ರಶ್ನ ಉಪನಿಷತ್ತು”.
ಪ್ರಶ್ನೋಪನಿಷತ್ತಿನಲ್ಲಿ ಪ್ರತಿಪಾಧ್ಯವಾಗಿರುವ ಮುಖ್ಯ ಸಂಗತಿ  ಪ್ರಾಣತತ್ವ ಮತ್ತು ಪ್ರಾಣನನ್ನು ನಿಯಂತ್ರಿಸುವ ನಾರಾಯಣ. ಮುಖ್ಯವಾಗಿ ಈ ಎರಡು ಉಪಾಸನೆಯನ್ನು ಹೇಳುವ ಉಪನಿಷತ್ತು ‘ಪ್ರಶ್ನೋಪನಿಷತ್ತು’.  ಉಪನಿಷತ್ತಿನ ಛಂದಸ್ಸನ್ನು ನೋಡಿದರೆ ಇಲ್ಲಿ ಹೆಚ್ಚಿನ ಭಾಗ ಗದ್ಯರೂಪದಲ್ಲಿದೆ ಹಾಗೂ ನಡುವೆ ಕೆಲವು ಪದ್ಯಗಳನ್ನೂ ನಾವು ನೋಡಬಹುದು. ಹೆಸರೇ ಸೂಚಿಸುವಂತೆ ಆರು ಮಂದಿ ಋಷಿಗಳು ಪಿಪ್ಪಲಾದರನ್ನು ಪ್ರಶ್ನೆ ಮಾಡುತ್ತಾರೆ ಹಾಗೂ ಪಿಪ್ಪಲಾದರು ಅವರ ಪ್ರಶ್ನೆಗೆ ಕೊಡುವ ಉತ್ತರ ಇಲ್ಲಿ ಉಪನಿಷತ್ತಿನ ರೂಪದಲ್ಲಿ ಮೂಡಿಬಂದಿದೆ. ಆದ್ದರಿಂದ ಈ ಏಳುಮಂದಿ ಋಷಿಗಳು ಈ ‘ಉಪನಿಷತ್ತಿನ ಋಷಿಗಳು’. [ ಈ ಋಷಿಗಳ ವಿವರಣೆ ಮುಂದೆ ಉಪನಿಷತ್ತಿನಲ್ಲೇ ಬರುತ್ತದೆ].
ಎಲ್ಲಾ ಉಪನಿಷತ್ತುಗಳಲ್ಲೂ ನಾವು ಪ್ರಶ್ನೆಯನ್ನು ಕಾಣುತ್ತೇವೆ. ಆದರೆ ಇಲ್ಲಿ ಒಂದು ವಿಶೇಷವಿದೆ. ಇದು ಪ್ರಶ್ನೆಯನ್ನು ಹೇಳುವ ಉಪನಿಷತ್ತಲ್ಲ. ಇದು ಆರು ಮಂದಿ ಋಷಿಗಳು ಹಾಕಿದ ಆರು ಪ್ರಶ್ನೆಗೆ ಉತ್ತರಕೊಡುವ ಉಪನಿಷತ್ತು. ಆದ್ದರಿಂದ ಈ ಉಪನಿಷತ್ತನ್ನು ಕೇವಲ ‘ಪ್ರಶ್ನೋಪನಿಷತ್ತು’ ಎಂದು ಹೇಳದೇ ‘ಷಟ್ ಪ್ರಶ್ನ ಉಪನಿಷತ್ತು’ ಎಂದು ಹೇಳುವುದು ಹೆಚ್ಚು ಅರ್ಥಪೂರ್ಣ.
ದೇಶದ ಬೇರೆಬೇರೆ ಕಡೆಯವರಾದ ಆರು ಮಂದಿ ತತ್ತ್ವ ಜಿಜ್ಞಾಸುಗಳು ತತ್ತ್ವವನ್ನು ತಿಳಿಯುವುದಕ್ಕೋಸ್ಕರ ಒಳ್ಳೆಯ ತತ್ತ್ವಜ್ಞಾನಿ ಗುರುವನ್ನು ಹುಡುಕುತ್ತಾ , ಪಿಪ್ಪಲಾದರ ಕೀರ್ತಿಯನ್ನು ಕೇಳಿ ತಿಳಿದು, ಅವರ ಹತ್ತಿರ ತಮ್ಮ ತಾತ್ತ್ವಿಕ ಜಿಜ್ಞಾಸೆಯನ್ನು ಪರಿಹರಿಸಿಕೊಳ್ಳಬೇಕೆಂದು, ಪಿಪ್ಪಲಾದರ ಆಶ್ರಮದಲ್ಲಿ ಒಟ್ಟಾಗುತ್ತಾರೆ. ಹೀಗೆ ಆರು ಮಹತ್ತರವಾದ ಪ್ರಶ್ನೆಗಳನ್ನು ಹೊತ್ತು ತಂದ ಆರು ಮಂದಿ ಋಷಿಗಳಿಗೆ ಉತ್ತರ ಕೊಟ್ಟವರು ಪಿಪ್ಪಲಾದರು.  ಬನ್ನಿ, ಭಗವಂತನ ಅನುಗ್ರಹ ಬೇಡಿ, ಈ ಆರು ಮಂದಿ ಋಷಿಗಳ ಜೊತೆ ಸೇರಿ,  ನಾವೂ ಕೂಡ ನಮ್ಮಿಂದ ಸಾಧ್ಯವಾದಷ್ಟು ಜ್ಞಾನವನ್ನು ಪಿಪ್ಪಲಾದರಿಂದ ಪಡೆದು ಕೃತಾರ್ಥರಾಗೋಣ.

  *******

2 comments:

  1. ತುಂಬಾ ಚೆನ್ನಾಗಿದೆ ಪ್ರಕಾಶ್.... ನಮಗೆ ಓದಲು ಸುಲಭವಾಗುವಂತಿದೆ... ಧನ್ಯವಾದಗಳು..

    ಶ್ಯಾಮಲ

    ReplyDelete
    Replies
    1. ಈ ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು.

      Delete