ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Tuesday, August 28, 2012

Prashnopanishad in Kannada-Prashna-I (9-10)


ಸಂವತ್ಸರೋ ವೈ ಪ್ರಜಾಪತಿಸ್ತಸ್ಯಾಯನೇ ದಕ್ಷಿಣಂ ಚೋತ್ತರಂ ಚ ತದ್ಯೇ ಹ ವೈ ತದಿಷ್ಟಾಪೂರ್ತೇ ಕೃತಮಿತ್ಯುಪಾಸತೇ ತೇ ಚಾಂದ್ರಮಸಮೇವ ಲೋಕಮಭಿಜಯಂತೇ   ತ ಏವ ಪುನರಾವರ್ತಂತೇ ತಸ್ಮಾದೇತ ಋಷಯಃ ಪ್ರಜಾಕಾಮಾ ದಕ್ಷಿಣಂ ಪ್ರತಿಪದ್ಯಂತೇ   ಏಷ ಹ ವೈ ರಯಿರ್ಯಃ ಪಿತೃಯಾಣಃ  

ಸೂರ್ಯ-ಚಂದ್ರರಿಂದ ಕಾಲದ ಘಟಕಗಳು ನಿರ್ಮಾಣವಾದವು. ಸೂರ್ಯ ಮೇಷದಿಂದ ಮೀನದ ತನಕ ಸಂಕ್ರಮಣ ಮಾಡಿದಾಗ ಅದು ಒಂದು ವರ್ಷವಾಯಿತು. ಇದು ~೩೬೫.೨೫ ದಿನಗಳಿಂದ ಕೂಡಿದ ಸೌರವರ್ಷ. ಇಂದು ವಿಶ್ವದಲ್ಲಿ ಆಚರಣೆಯಲ್ಲಿರುವ ಸಂವತ್ಸರ ಈ ಸೌರಸಂವತ್ಸರ. ಇಲ್ಲಿ ೩೬೫ ದಿನಗಳಿಗೆ ಒಂದು ವರ್ಷ ಹಾಗೂ ನಾಲ್ಕು ವರ್ಷಕ್ಕೊಮ್ಮೆ ಒಂದು ಅಧಿಕ ದಿನ.
ಅದೇ ರೀತಿ ಚಾಂದ್ರಮಾನದ ಪ್ರಕಾರ  ಚೈತ್ರದಿಂದ ಪಾಲ್ಗುಣದ ತನಕ  ೩೫೫ ದಿನಗಳು. ಇಲ್ಲಿ ಕಡಿಮೆಯಾದ ಹತ್ತು ದಿನಗಳನ್ನು ಮೂರು ವರ್ಷಕ್ಕೊಮ್ಮೆ ಒಂದು ಅಧಿಕ ಮಾಸವನ್ನಾಗಿ ಮಾಡಿ ಹೊಂದಾಣಿಕೆ ಮಾಡುತ್ತಾರೆ. ಒಟ್ಟಿನಲ್ಲಿ ಇಡೀ ವರ್ಷದ ಪರಿಗಣನೆಗೆ ನಮಗೆ ಮುಖ್ಯವಾದ ಶಕ್ತಿಗಳು ಸೂರ್ಯ ಮತ್ತು ಚಂದ್ರ. ಎಲ್ಲವೂ ಸೂರ್ಯ ಚಂದ್ರರನ್ನು ಆಧರಿಸಿಕೊಂಡಿದೆ. ಆದ್ದರಿಂದ ಸೂರ್ಯನಲ್ಲಿ ಸನ್ನಿಹಿತನಾಗಿರುವ ಭಗವಂತ ಕಾಲಪುರುಷನಾಗಿ ಸಂವತ್ಸರದಲ್ಲಿ ಸನ್ನಿಹಿತನಾದ. ಒಂದು ಸಂವತ್ಸರದಲ್ಲಿ ಎರಡು ಅಯನಗಳು. ಉತ್ತರಾಯ  ಮತ್ತು ದಕ್ಷಿಣಾಯಣ.  ಸೂರ್ಯನಲ್ಲಿ ಸನ್ನಿಹಿತರಾಗಿರುವ ಪ್ರಾಣದೇವರು ಉತ್ತರಾಯಣದಲ್ಲಿ ಸನ್ನಿಹಿತರಾದರೆ, ಚಂದ್ರನಲ್ಲಿ ಸನ್ನಿಹಿತಳಾಗಿರುವ ಭಾರತಿ ದಕ್ಷಿಣಾಯಣದಲ್ಲಿ ಸನ್ನಿಹಿತಳಾಗಿದ್ದಾಳೆ.
ಮೇಲೆ ಹೇಳಿದ ಎರಡು ಅಯನಗಳಲ್ಲಿ ದಕ್ಷಿಣಾಯಣದಲ್ಲಿ ಇಷ್ಟಾ-ಪೂರ್ತಾದ ಮೂಲಕ, ಐಹಿಕ ಫಲಕಾಮನೆಯಿಂದ  ಕರ್ಮಾನುಷ್ಠಾನ ಮಾಡಿದವನು ಚಂದ್ರಲೋಕವನ್ನು ಪಡೆಯುತ್ತಾನೆ. ಇದು ಮೋಕ್ಷ ಸಾಧನವಲ್ಲ. ಏಕೆಂದರೆ ಚಂದ್ರಲೋಕ ದೇವತೆಗಳ ಲೋಕ. ಅಲ್ಲಿ ನಾವು ನಮ್ಮ ಪುಣ್ಯಫಲ ಮುಗಿದ ಮೇಲೆ ಮರಳಿ ಈ ಸಂಸಾರಕ್ಕೆ ಹಿಂತಿರುಗಬೇಕಾಗುತ್ತದೆ. ಇದು ತಾಯಿ ಭಾರತಿಯ ಸೃಷ್ಟಿ ವಿಸ್ತಾರದ ಪ್ರಚೋದನೆ. ಇಲ್ಲಿ ಹೇಳಿರುವ ಚಂದ್ರಲೋಕ ಎಂದರೆ ಚಂದ್ರ ಗ್ರಹವಲ್ಲ. ಇದು ದೇವತೆಗಳಿರುವ ಸೂಕ್ಷ್ಮಲೋಕ.
ಇಲ್ಲಿ ಹೇಳಲಾದ 'ಇಷ್ಟಾ-ಪೂರ್ತ' ಅನ್ನುವ ಪದಗಳಿಗೆ ವಿಶಿಷ್ಠ ಅರ್ಥವಿದೆ. ಇಷ್ಟಾ ಎಂದರೆ ನಮ್ಮ ವೈಯಕ್ತಿಕ ಅಭಿವೃದ್ಧಿಗೆ ಕಾರಣವಾದ ಪುಣ್ಯಕರ್ಮ. [ಜಪ, ಅನುಷ್ಠಾನ, ಯಜ್ಞ, ವ್ರತ, ಇತ್ಯಾದಿ ನಮಗೆ ಇಷ್ಟವಾಗಿ, ನಾವು ಮಾಡುವ ವೈಯಕ್ತಿಕ ಸಾಧನೆ] ಪೂರ್ತಾ ಎಂದರೆ: ಸಮಾಜದ ಪೂರ್ಣತೆಗೆ ಉಪಯೋಗಬೀಳುವ ಕರ್ಮ. [ಆಸ್ಪತ್ರೆ, ದೇವಸ್ಥಾನ, ಶಾಲೆ, ಇತ್ಯಾದಿಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಕಟ್ಟಿಸುವುದು, ಸಾರ್ವಜನಿಕರಿಗಾಗಿ ಕೆರೆ ಬಾವಿ ತೊಡಿಸುವುದು ಇತ್ಯಾದಿ].  ಒಟ್ಟಿನಲ್ಲಿ ಹೇಳಬೇಕೆಂದರೆ ಪ್ರವೃತ್ತಿಮಾರ್ಗದಲ್ಲಿ ಆಸಕ್ತಿ ಉಳ್ಳವರು ದಕ್ಷಿಣಾಯಣದಲ್ಲಿ ಕರ್ಮ ಮಾಡಿ ಚಂದ್ರಲೋಕವನ್ನು ಪಡೆಯುತ್ತಾರೆ. ಈ ಮಾರ್ಗವನ್ನು ಪಿತೃಗಳ ದಾರಿ ಎನ್ನುತ್ತಾರೆ.

ಅಥೋತ್ತರೇಣ ತಪಸಾ ಬ್ರಹ್ಮಚರ್ಯೇಣ ಶ್ರದ್ಧಯಾ ವಿದ್ಯಯಾಽಽತ್ಮಾನಮನ್ವಿಷ್ಯಾದಿತ್ಯಮಭಿಜಯಂತೇ     ಏತದ್ವೈ  ಪ್ರಾಣಾನಾಮಾಯತನಮೇತದ-ಮೃತಮಭಯಮೇತತ್ಪರಾಯಣಮೇತಸ್ಮಾನ್ನ ಪುನರಾವರ್ತಂತ ಇತ್ಯೇಷ ನಿರೋಧಸ್ತದೇಷ ಶ್ಲೋಕಃ   ೧೦

ಉತ್ತರಾಯಣದಲ್ಲಿ ತಪಸ್ಸು ಮಾಡುವವರು  ಬ್ರಹ್ಮಚರ್ಯಪಾಲನೆ ಮಾಡುತ್ತಾ, ಸದಾ ಸತ್ಯದ ಬಗೆಗೆ ಚಿಂತನೆ ಮಾಡುತ್ತಾರೆ.  ಇಂದ್ರಿಯ ನಿಗ್ರಹ, ನಿರಂತರ ವೇದಾಧ್ಯಯನ ಮಾಡುತ್ತಾ, ಶ್ರದ್ಧೆಯಿಂದ, ಆಸ್ತಿಕ್ಯಪ್ರಜ್ಞೆಯಿಂದ, ಯಥಾರ್ಥ ಜ್ಞಾನ ಪಡೆದು, ನಿಜವಾದ ಅರಿವಿನಿಂದ, ಆತ್ಮನನ್ನು ತಿಳಿದು, ಪರಮಾತ್ಮನನ್ನು ಕಾಣುತ್ತಾರೆ. ನಾವು ಮೊದಲು ನಮ್ಮನ್ನು ನಾವು ತಿಳಿದುಕೊಳ್ಳಬೇಕು. ಆಗ ನಮ್ಮ ಅಂತರ್ಯಾಮಿಯಾದ ಭಗವಂತ ತಿಳಿಯುತ್ತಾನೆ. ಇದು ಎಷ್ಟೋ ಜನ್ಮಗಳ ಸಾಧನೆಯಿಂದ ಸಾಧ್ಯವಾಗುವ ಕ್ರಿಯೆ. ಒಮ್ಮೆ ನಮ್ಮ ಆತ್ಮದ ಅಂತರಾತ್ಮನಾದ ಭಗವಂತನನ್ನು ತಿಳಿದರೆ, ಅದರಿಂದ ಆದಿತ್ಯಲೋಕ ಪ್ರಾಪ್ತಿಯಾಗುತ್ತದೆ. ಪ್ರಾಣದೇವರು ನಮ್ಮನ್ನು ಆದಿತ್ಯಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಆದಿತ್ಯಲೋಕದಲ್ಲಿ ಆದಿತ್ಯನಲ್ಲಿರುವ ಭಗವಂತನ ಮೂಲಕ ಮತ್ತೆ ಮರಳಿ ಬಾರದ ನಿತ್ಯಲೋಕ ಪ್ರಾಪ್ತಿಯಾಗುತ್ತದೆ. ಹೀಗಾಗಿ ಉತ್ತರಾಯಣದ ಸಾಧನೆ ಇಲ್ಲಿಂದ ಬಿಡುಗಡೆಯ ಸಾಧನೆ.
 ಒಟ್ಟಿನಲ್ಲಿ ಹೇಳಬೇಕೆಂದರೆ ದಕ್ಷಿಣಾಯಣದ ಸಾಧನೆ ಸಂಸಾರದ ಚಕ್ರಭ್ರಮಣವಾದರೆ, ಉತ್ತರಾಯಣದ ಸಾಧನೆ ಮೋಕ್ಷಪ್ರದ ಸಾಧನೆ. ಇದನ್ನೇ ದಕ್ಷಿಣ ಮತ್ತು ಉತ್ತರ ಧ್ರುವಗಳು ಸಂಕೇತಿಸುತ್ತವೆ. ಉತ್ತರದಿಂದ ಪೂರ್ವದ ತನಕದ ಸೆಳೆತ ಊರ್ಧ್ವಮುಖವಾದರೆ, ದಕ್ಷಿಣದಿಂದ ಪಶ್ಚಿಮದ ಸೆಳೆತ ಚಕ್ರಭ್ರಮಣ. ಇದಕ್ಕಾಗಿ ಪ್ರಾಚೀನರು ಯಾವುದೇ ಅನುಷ್ಠಾನ, ಪೂಜೆ ಮಾಡುವುದಿದ್ದರೆ, ಮಂತ್ರಜಪ ಮಾಡುವುದಿದ್ದರೆ,  ಉತ್ತರ, ಈಶಾನ್ಯ ಅಥವಾ ಪೂರ್ವಕ್ಕೆ ಮುಖ ಮಾಡಿ ಮಾಡುತ್ತಿದ್ದರು.  ದಕ್ಷಿಣಕ್ಕೆ ಮುಖ ಮಾಡಿ ಪೂಜೆ ಅನುಷ್ಠಾನ ಮಾಡಬಾರದು. ಮಲಗುವಾಗ ಉತ್ತರಕ್ಕೆ ತಲೆ ಹಾಕಿ ಮಲಗಬಾರದು ಎನ್ನುವುದು ಪ್ರಾಚೀನರು ನಮಗೆ ಕೊಟ್ಟ ವಿಜ್ಞಾನ. ಮಲಗುವಾಗ ತಲೆ ಉತ್ತರಕ್ಕೆ ಇದ್ದರೆ ಏಳುವಾಗ ನಾವು ದಕ್ಷಿಣ ಮುಖ ಮಾಡಿ ಎಳುತ್ತೇವೆ. ಹಾಗಾಗಿ ಉತ್ತರಕ್ಕೆ ತಲೆ ಹಾಕಿ ಮಲಗುವುದೂ ನಿಷಿದ್ಧ.   
ಎಲ್ಲಾ ಜೀವರಿಗೂ ಕೊನೇಯ ಆಶ್ರಯ ಆದಿತ್ಯ ಅಂತರ್ಗತ ಭಗವಂತ. ಆತ ಸಮಸ್ತ ಜೀವಜಾತಗಳಿಗೆ ಕೊನೇಯ ನೆಲೆಮನೆ. ಆತನನ್ನು ಸೇರಿದರೆ ಸಾವಿಲ್ಲ, ಭಯವಿಲ್ಲ. ಉತ್ತರಾಯಣದಲ್ಲಿ ಸಾಧನೆ ಮಾಡಿ ಆದಿತ್ಯಲೋಕ ಸೇರಿದವರು ಎಂದೂ ಮರಳಿ ಹುಟ್ಟುವುದಿಲ್ಲ. ಅವರು ಶಾಶ್ವತವಾದ ಮೋಕ್ಷವನ್ನು ಪಡೆಯುತ್ತಾರೆ. ಇದಕ್ಕೆ ಸಂವಾದಿಯಾಗಿ ವೇದದ ಒಂದು ಮಂತ್ರವನ್ನು ಪಿಪ್ಪಲಾದರು ಮುಂದೆ ವಿವರಿಸುತ್ತಾರೆ:

No comments:

Post a Comment