ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Monday, August 20, 2012

Prashnopanishad in Kannada-Prashna-I (1 to 2)


ಹಿನ್ನೆಲೆ


ಸುಕೇಶಾ ಚ ಭಾರದ್ವಾಜಃ, ಶೈಬ್ಯಶ್ಚ ಸತ್ಯಕಾಮಃ, ಸೌರ್ಯಾಯಣೀ ಚ ಗಾರ್ಗ್ಯಃ, ಕೌಸಲ್ಯಶ್ಚಾಶ್ವಲಾಯನೋ, ಭಾರ್ಗವೋ ವೈದರ್ಭಿಃ, ಕಬಂಧೀ ಕಾತ್ಯಾಯನಸ್ತೇ ಹೈತೇ ಬ್ರಹ್ಮಪರಾ ಬ್ರಹ್ಮನಿಷ್ಠಾಃ ಪರಂ ಬ್ರಹ್ಮಾನ್ವೇಷಮಾಣಾ ಏಷ ಹ ವೈ ತತ್ಸರ್ವಂ ವಕ್ಷ್ಯತೀತಿ ತೇ ಹ ಸಮಿತ್ಪಾಣಯೋ ಭಗವಂತಂ ಪಿಪ್ಪಲಾದಮುಪಸನ್ನಾಃ  

ದೇಶದ ಬೇರೆಬೇರೆ ಕಡೆಯಿಂದ ಮಹಾ ವಿದ್ವಾಂಸರಾದ ಆರು ಮಂದಿ ಋಷಿಗಳು ಜ್ಞಾನ ಪಿಪಾಸೆಯಿಂದ, ತಮ್ಮ ಪ್ರಶ್ನೆಗೆ ಉತ್ತರ ಕೊಡುವ ಯೋಗ್ಯ ಗುರುವನ್ನು ಅರಸುತ್ತಾ, ಎಲ್ಲರ ಮಾರ್ಗದರ್ಶನದಂತೆ, ಮಹಾನ್ ಜ್ಞಾನಿ, ಭಗವದ್ ದೃಷ್ಟಾರರಾದ ‘ಪಿಪ್ಪಲಾದ’ ಎನ್ನುವ ಶ್ರೇಷ್ಠ ಮಹರ್ಷಿಯ ಬಳಿ ಬಂದು ಸೇರಿದರು. ಹೀಗೆ ಪಿಪ್ಪಲಾದರಲ್ಲಿಗೆ ತಮ್ಮ ಪ್ರಶ್ನೆಯನ್ನು ಹೊತ್ತು ತಂದ ಆ  ಆರು ಮಂದಿ ಋಷಿಗಳ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಈ ಆರು ಋಷಿಗಳನ್ನು ಅವರ ಯೋಗ್ಯತೆಯ ಕ್ರಮಾಂಕದಲ್ಲಿ ಇಲ್ಲಿ ವಿವರಿಸಿರುವುದನ್ನು ಕಾಣುತ್ತೇವೆ.
ಇವರಲ್ಲಿ ಮೊದಲನೆಯ ಋಷಿಯ ಹೆಸರು ಸುಕೇಶ. ಈತ ಭಾರದ್ವಾಜನ ಮಗ. ಸಾಮಾನ್ಯವಾಗಿ ನಮ್ಮ ಪೌರಾಣಿಕ ಇತಿಹಾಸದಲ್ಲಿ ಭಾರದ್ವಾಜ ಎನ್ನುವ ಹೆಸರನ್ನು ಕ್ಷತ್ರಿಯರಿಗೆ ಬಳಸಿರುವುದು ಬಹಳ ವಿರಳ. ಹಾಗಾಗಿ ಈತ ಒಬ್ಬ ಬ್ರಹ್ಮರ್ಷಿ ಇರಬಹುದು ಎಂದು ನಾವು ತಿಳಿಯಬಹುದು. ಸು-ಕೇಶ ಎಂದರೆ ಸುಂದರವಾದ ವ್ಯಕ್ತಿತ್ವ ಉಳ್ಳವನು ಎನ್ನುವುದು ಮೇಲ್ನೋಟದ ಅರ್ಥ. ಇನ್ನೊಂದು ಮುಖದಲ್ಲಿ ಈ ಹೆಸರಿನ ಅರ್ಥವನ್ನು ನೋಡಿದರೆ: ದುಃಖ ರಹಿತವಾದ ಸುಖಕ್ಕೆ ಅರ್ಹನಾದವ ಅಥವಾ ಮೋಕ್ಷಯೋಗ್ಯ ಎನ್ನುವ ಅರ್ಥ ಕಾಣುತ್ತದೆ. ಆರು ಜನ ಋಷಿಗಳಲ್ಲಿ ಬಹಳ ಶ್ರೇಷ್ಠ ಪ್ರಶ್ನೆ ಕೇಳಿದವ ಈತ. ಆದ್ದರಿಂದ ಈತನ ಹೆಸರನ್ನು ಇಲ್ಲಿ ಮೊದಲು ಹೇಳಲಾಗಿದೆ.
ಇಲ್ಲಿ ನಾವು ಗಮನಿಸಬೇಕಾದ ಇನ್ನೊಂದು ಅಂಶವೆಂದರೆ:  ಮೊದಲ ನಾಲ್ಕು ಮಂದಿ ಋಷಿಗಳ ಕುರಿತು ಹೇಳುವಾಗ ‘ಚ-ಕಾರ’ ಉಪಯೋಗಿಸಿ ಹೇಳಿದ್ದಾರೆ[ಉದಾ:ಸುಕೇಶಾ ಚ].  ಸಂಸ್ಕೃತದಲ್ಲಿ ಚ-ಕಾರವನ್ನು ‘ಅಪೂರ್ವ, ದುರ್ಲಭ’ ಇತ್ಯಾದಿ ಅರ್ಥದಲ್ಲಿ ಬಳಸುತ್ತಾರೆ. ಇಲ್ಲಿ ಮೊದಲ ನಾಲ್ಕು ಮಂದಿ ಋಷಿಗಳು, ಬಹಳ ಅಪೂರ್ವವಾದ ಪ್ರಶ್ನೆಯನ್ನು ಹೊತ್ತು ತಂದ ಶ್ರೇಷ್ಟರು.  ಆದ್ದರಿಂದ ಅವರನ್ನು ಚ-ಕಾರದಿಂದ ಸಂಬೋಧಿಸಲಾಗಿದೆ.
ಎರಡನೇ ಋಷಿಯ ಹೆಸರು ಸತ್ಯಕಾಮಃ. ಈತ ಶಿಬಿ(ವಿ)ಯ ಮಗ. ಶಿಬಿ ಎನ್ನುವ ಹೆಸರು ಸಾಮಾನ್ಯವಾಗಿ ಬ್ರಾಹ್ಮಣರಿಗಿರುವುದಿಲ್ಲ. ಆದ್ದರಿಂದ ಈತ ಕ್ಷತ್ರಿಯ(ರಾಜರ್ಷಿ) ಇರಬಹುದು. ‘ಸತ್ಯಕಾಮಃ’ ಎನ್ನುವಲ್ಲಿ ‘ಸತ್ಯ’ ಎನ್ನುವುದು ಮೂಲಭೂತವಾಗಿ ದೇವರ ಹೆಸರು. ಆದ್ದರಿಂದ ಸತ್ಯಕಾಮಃ ಎಂದರೆ ದೇವರನ್ನು ಪ್ರೀತಿಸುವವ ಎಂದರ್ಥ.
ಗಾರ್ಗ್ಯ ಗೋತ್ರದವನಾದ ಮೂರನೇ ಋಷಿ, ಸೂರ್ಯ ಎನ್ನುವವನ ಮೊಮ್ಮಗ [ಸೌರ್ಯಾಯಣೀ ಎಂದರೆ ಸೌರ್ಯಾಯಣನ ಮಗನ ಮಗ]. ಈತ ಕೂಡಾ ರಾಜರ್ಷಿ ಇದ್ದರೂ ಇರಬಹುದು. ನಾಲ್ಕನೇ ಋಷಿ ಅಶ್ವಲಾಯ ಗೋತ್ರದ, ಕೋಸಲ ದೇಶದ ರಾಜನ ಮಗ.
ಐದನೆಯವ ವಿದರ್ಭ ದೇಶದ ರಾಜನ ಮಗ.  ಈತ ಭಾರ್ಗವ ಗೋತ್ರದವನು. ಆರನೆಯ ಋಷಿ ಕತ್ಯನ ಮಗನಾದ ಕಬಂಧೀ. ‘ಕಬಂಧೀ’ ಎಂದರೆ ಇಂದ್ರಿಯ ನಿಗ್ರಹ ಮಾಡಿದವ ಎಂದರ್ಥ.
ಇಲ್ಲಿ “ತೇ ಹ ಏತೇ” ಎನ್ನುವಲ್ಲಿ ‘ಹ-ಕಾರ’ಕ್ಕೆ ಬಹಳ ಮುಖ್ಯವಾದ ಅರ್ಥವಿದೆ. ಸಂಸ್ಕೃತದಲ್ಲಿ ‘ಹ-ಕಾರ’ ಸಂತೋಷ, ಆಶ್ಚರ್ಯ, ವಿಸ್ಮಯ, ಆನಂದವನ್ನು ವ್ಯಕ್ತಪಡಿಸುವ ಪದ. ಇಲ್ಲಿ ಅದನ್ನು ವಿಸ್ಮಯ ಮತ್ತು ಆನಂದಕಾರಕವಾಗಿ ಉಪಯೋಗಿಸಿದ್ದಾರೆ.  ಇಷ್ಟು ದೊಡ್ಡ ವಿದ್ವಾಂಸರು, ತಿಳಿದುಕೊಳ್ಳಬೇಕು ಎನ್ನುವ ಅಭಿಲಾಷೆಯಿಂದ ಗುರುವನ್ನು ಅರಸಿ ಬಂದಿದ್ದಾರಲ್ಲಾ. ಇದೊಂದು ವಿಸ್ಮಯ ಮತ್ತು ಆನಂದ. ಈ ಋಷಿಗಳು ಸಾಮಾನ್ಯರಲ್ಲ. ಇವರು ವೇದದ ಅರ್ಥಚಿಂತನೆ ಮಾಡಿ, ವೇದೋಕ್ತ  ಕರ್ಮಾನುಷ್ಠಾನ ಮಾಡಿದವರು. ಇಲ್ಲಿ ಸಮಸ್ತ ವೇದದ ಭಗವದ್ ಪರತೆಯನ್ನು ತಿಳಿದುಕೊಳ್ಳಬೇಕು ಎನ್ನುವ ಆಸೆಯಿಂದ ಗುರುವನ್ನು ಹುಡುಕಿ ಬಂದ ಮಹಾತ್ಮರಿವರು.
ಗುರುಗಳ ಬಳಿ ಹೋಗುವಾಗ ಯಾರೂ ಬರಿಗೈಯಲ್ಲಿ ಹೋಗಬಾರದು. ಆದರೆ ಎಲ್ಲವನ್ನೂ ತ್ಯಾಗ ಮಾಡಿ ಕಾಡಿನಲ್ಲಿ ವಾಸ ಮಾಡುತ್ತಿರುವ ಪಿಪ್ಪಲಾದರಲ್ಲಿಗೆ ಧನ-ಕನಕ ಹಿಡಿದುಕೊಂಡು ಹೋಗಲು ಸಾಧ್ಯವಿಲ್ಲ. ಹಾಗಾಗಿ ಈ ಆರು ಜನ ಋಷಿಗಳು ಯಜ್ಞಕ್ಕೆ ಬೇಕಾಗುವ  ಕಟ್ಟಿಗೆಯನ್ನು ಹಿಡಿದುಕೊಂಡು ಮಹಾತ್ಮರಾದ ಪಿಪ್ಪಲಾದರಲ್ಲಿಗೆ, ಬಹಳ ಭಯಭಕ್ತಿಯಿಂದ ಬಂದು ಗೌರವಪೂರ್ವಕವಾಗಿ ನಮಸ್ಕರಿಸಿದರು.
‘ಪಿಪ್ಪಲಾದ’ ಎನ್ನುವುದು ವೇದ ಕಾಲದ ಋಷಿಗಳ ಹೆಸರು. ಇಂದು ಇಂತಹ ಹೆಸರು ಪ್ರಚಲಿತದಲ್ಲಿಲ್ಲ. ಪಿಪ್ಪಲಂ+ಆದ= ಪಿಪ್ಪಲಾದ. ಅಂದರೆ ಕರ್ಮವನ್ನು ದಾಟಿ ನಿಂತವರು ಎಂದರ್ಥ. ಇಲ್ಲಿ ಪಿಪ್ಪಲಾದರನ್ನು ‘ಭಗವಂತಂ’ ಎಂದು ಸಂಬೋಧಿಸಿರುವುದನ್ನು ಕಾಣುತ್ತೇವೆ. ಭಗವಾನ್ ಎನ್ನುವುದಕ್ಕೆ ವಿಶೇಷ ಅರ್ಥವಿದೆ.  “ಉತ್ಪತಿಂ ಪ್ರಳಯಂಚೈವ ಭೂತಾನಾಂ ಆಗತಿಂ ಗತಿಮ್ | ವೇತ್ತಿ ವಿದ್ಯಾಂ ಅವಿದ್ಯಾಂಚ ಸ ವಾಚ್ಯೋ ಭಗವಾನ್ ಇತಿ |”  ಪಿಪ್ಪಲಾದರು ಹುಟ್ಟು-ಸಾವಿನ, ಭೂತ-ಭವಿಷ್ಯದ, ಜ್ಞಾನ-ಅಜ್ಞಾನದ ರಹಸ್ಯ ತಿಳಿದವರಾದ್ದರಿಂದ ಅವರನ್ನು ಇಲ್ಲಿ ‘ಭಗವಂತಂ ಪಿಪ್ಪಲಾದ’  ಎಂದು ಸಂಬೋಧಿಸಿದ್ದಾರೆ.   

ತಾನ್  ಹ ಸ ಋಷಿರುವಾಚ-ಭೂಯ ಏವ ತಪಸಾ ಬ್ರಹ್ಮಚರ್ಯೇಣ ಶ್ರದ್ಧಯಾ ಸಂವತ್ಸರಂ ಸಂವತ್ಸ್ಯಥ; ಯಥಾಕಾಮಂ ಪ್ರಶ್ನಾನ್ ಪೃಚ್ಛತ; ಯದಿ ವಿಜ್ಞಾಸ್ಯಾಮಃ ಸರ್ವಂ ಹ ವೋ ವಕ್ಷ್ಯಾಮ ಇತಿ  

ಬೇರೆಬೇರೆ ಜ್ಞಾನ ಜಿಜ್ಞಾಸೆಯಿಂದ ಬಂದ  ಆರು ಮಂದಿ ಋಷಿಗಳು: “ನಮ್ಮ ಪ್ರಶ್ನೆಗೆ ನೀವು ಉತ್ತರ ಕೊಡಬಲ್ಲಿರಿ ಎಂದು ತಿಳಿದು ನಿಮ್ಮಲ್ಲಿಗೆ ಬಂದಿದ್ದೇವೆ. ನಮಗೆ ನಿಮ್ಮಿಂದ ಉತ್ತರ ಬೇಕು” ಎಂದು ಪ್ರಾರ್ಥಿಸುತ್ತಾರೆ. ಇಲ್ಲಿ ಈ ಆರುಮಂದಿ ಋಷಿಗಳು ತೋರುತ್ತಿರುವ ಗೌರವ ಹಾಗೂ ಪಿಪ್ಪಲಾದರ ವಿನಯವನ್ನು ‘ಹ-ಕಾರ’ ಬಿಂಬಿಸುತ್ತದೆ. ತಮ್ಮ ಬಳಿ ಬಂದ ಈ ಆರು ಮಂದಿ ಋಷಿಗಳನ್ನು ಉದ್ದೇಶಿಸಿ ಪಿಪ್ಪಲಾದರು ಹೇಳುತ್ತಾರೆ: “ಒಂದು ಸಂವತ್ಸರ ನಮ್ಮ ಆಶ್ರಮದಲ್ಲಿ ಬ್ರಹ್ಮಚರ್ಯದಿಂದ, ತಪಸ್ಸನ್ನಾಚರಿಸಿಕೊಂಡು, ಶ್ರದ್ಧೆಯಿಂದ, ಸ್ವಾಧ್ಯಾಯದಲ್ಲಿ ತೊಡಗಿಕೊಂಡು ಇರಿ(ಇರುತ್ತೀರಿ). ಆ ನಂತರ ನಿಮಗೆ ಏನು ಪ್ರಶ್ನೆ ಕೇಳಬೇಕೋ ಅದನ್ನು ಕೇಳಿ. ನನಗೆ ತಿಳಿದಿದ್ದರೆ ಉತ್ತರಿಸುತ್ತೇನೆ” ಎಂದು. ಇಲ್ಲಿ ಒಂದು ವರ್ಷಗಳ ಕಾಲ ಆಶ್ರಮದಲ್ಲಿ ಇರುವಂತೆ ಪಿಪ್ಪಲಾದರು ತಮ್ಮ ಬಳಿಗೆ ಬಂದ ಶಿಷ್ಯರಲ್ಲಿ ಹೇಳುತ್ತಾರೆ. ಇದು ಗುರು ಶಿಷ್ಯರನ್ನು ಪರೀಕ್ಷಿಸುವ ಹಾಗೂ ಶಿಷ್ಯರಿಗೆ ತನ್ನನ್ನು ಪರೀಕ್ಷಿಸಲು ಅವಕಾಶ ಮಾಡಿಕೊಡುವ ಒಂದು ವಿಶಿಷ್ಠ ನಡೆ. ನಂತರ “ನನಗೆ ತಿಳಿದಿದ್ದರೆ ಹೇಳುತ್ತೇನೆ” ಎಂದು ಹೇಳಿದುದರ ಹಿಂದೆ  ಅಹಂಕಾರ ರಹಿತ ವಿನಯ ಅಡಗಿದೆ. ಇದು ಜ್ಞಾನಿಗಳ ವಿಸ್ಮಯ ಮತ್ತು ಗೌರವಾನ್ವಿತ ನಡೆ ಎನ್ನುವುದನ್ನು ಮರಳಿ ಹ-ಕಾರ ಬಿಂಬಿಸುತ್ತದೆ.
ಹೀಗೆ ಗುರುಗಳು ಹೇಳಿದಂತೆ ಆರು ಮಂದಿ ಋಷಿಗಳು ಶ್ರದ್ಧೆಯಿಂದ ವೇದಾರ್ಥ ಚಿಂತನೆ ಮಾಡಿಕೊಂಡು ಒಂದು ವರ್ಷ ಕಳೆಯುತ್ತಾರೆ. ಒಂದು ವರ್ಷದ ನಂತರ, ಪಿಪ್ಪಲಾದರ ಬಳಿ ಆರನೆಯ ಋಷಿ ಕತ್ಯನ ಮಗನಾದ ಕಬಂಧೀ ತನ್ನ ಮೊದಲ ಪ್ರಶ್ನೆಯನ್ನು ನಿವೇದಿಸಿಕೊಳ್ಳುವುದರೊಂದಿಗೆ ಈ ಷಟ್ ಪ್ರಶ್ನ ಉಪನಿಷತ್ತಿನ ಉಪದೇಶ ಭಾಗ ಪ್ರಾರಂಭವಾಗುತ್ತದೆ.
ಪ್ರೀತಿಯ ಅಧ್ಯಾತ್ಮ ಬಂಧುಗಳೇ, ಈ ಕ್ಷಣದಲ್ಲಿ ನಮಗೆ ಈ ಆರು ಮಂದಿ ಋಷಿಗಳು ಕೇಳುವ ಪ್ರಶ್ನೆ ಯಾವುದು, ಅದಕ್ಕೆ ಪಿಪ್ಪಲಾದರು ಏನು ಉತ್ತರ ಕೊಡುತ್ತಾರೆ ಎನ್ನುವ ವಿಷಯ ತಿಳಿದಿಲ್ಲ. ಆದರೆ ನಮಗೆ ಒಂದು ವಿಷಯ ಮಾತ್ರ ಸ್ಪಷ್ಟವಾಗಿ ತಿಳಿದಿದೆ. ಇಲ್ಲಿ ಪ್ರಶ್ನೆ ಹಾಕುತ್ತಿರುವ ಋಷಿಗಳು ಸಾಮಾನ್ಯರಲ್ಲ. ಅವರೆಲ್ಲರೂ ಮಹಾ ವಿದ್ವಾಂಸರು ಎಂದು. ಹೀಗಿರುವಾಗ ಅವರ ಪ್ರಶ್ನೆ ಅದೆಷ್ಟು ಮಹತ್ತಾಗಿರಬೇಕು? ಇಲ್ಲಿ ಗುರುವಿನ ಸ್ಥಾನದಲ್ಲಿ ನಿಂತಿರುವ ವಿನಯಮೂರ್ತಿ ‘ಪಿಪ್ಪಲಾದರು’ ಕರ್ಮವನ್ನೇ ದಾಟಿ ನಿಂತ ಮಹಾನ್ ಜ್ಞಾನಿ. ಇವರ ನಡುವೆ ನಡೆಯಲಿರುವ ಸಂವಾದವನ್ನು ಕೇಳಲು ನಮಗೆ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ. ಬನ್ನಿ, ಈ ಅದ್ಭುತ  ಜ್ಞಾನವನ್ನು ಗ್ರಹಿಸಲು ನಮಗೆ ಶಕ್ತಿ ಕೊಡು ಎಂದು ಆ ಭಗವಂತನಲ್ಲಿ ಬೇಡಿ, ಈ ಉಪದೇಶವನ್ನಾಲಿಸೋಣ.


*******

No comments:

Post a Comment