ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Sunday, August 26, 2012

Prashnopanishad in Kannada-Prashna-I (8)


                                ವಿಶ್ವರೂಪಂ ಹರಿಣಂ ಜಾತವೇದಸಂ ಪರಾಯಣಂ ಜ್ಯೋತಿರೇಕಂ ತಪಂತಮ್
                                ಸಹಸ್ರರಶ್ಮಿಃ ಶತಧಾ ವರ್ತಮಾನಃ ಪ್ರಾಣಃ ಪ್ರಜಾನಾಮುದಯತ್ಯೇಷ ಸೂರ್ಯಃ  

ಉದಯತಿ ಏಷ ಸೂರ್ಯಃ ಎನ್ನುವುದರ ಅರ್ಥ ನಮಗೆಲ್ಲರಿಗೂ ತಿಳಿದಿದೆ.  ಆದರೆ ಇಲ್ಲಿ “ಪ್ರಾಣಃ ಪ್ರಜಾನಾಮ್ ಉದಯತಿ ಏಷ ಸೂರ್ಯಃ” ಎಂದಿದೆ. ಅಂದರೆ ಸೂರ್ಯನ ಮೂಲಕ ಸೌರಶಕ್ತಿ ಹರಿದುಬರುವುದು ಆತನ ಅಂತರ್ಯಾಮಿಯಾದ ಪ್ರಾಣನಿಂದ. ಈ ಪ್ರಾಣನಿಗೆ ಚೈತನ್ಯ ಕೊಡುವವನು ಆತನ ಅಂತರ್ಯಾಮಿ ಭಗವಂತ. ಆದ್ದರಿಂದ ಸೂರ್ಯೋದಯ ಎಂದರೆ ಸೂರ್ಯ, ಆತನ ಒಳಗೆ ಪ್ರಾಣ, ಪ್ರಾಣನ ಒಳಗೆ ನಾರಾಯಣ. ಇದೇ  ಸಮಸ್ತ ಜೀವಜಾತದ ಪ್ರಾಣಶಕ್ತಿ, ಇಡೀ ವಿಶ್ವವನ್ನು ಬದುಕಿಸುವ ಶಕ್ತಿ. ಹೀಗಾಗಿ ಮುಂಜಾನೆ ಎದ್ದು ಸೂರ್ಯನನ್ನು ಕಾಣುವುದು ಎಂದರೆ ನಮ್ಮ ಪ್ರಾಣಶಕ್ತಿ ಭಗವಂತನನ್ನು ಕಾಣುವುದು. ಆದ್ದರಿಂದ ಸೂರ್ಯನನ್ನು ಸೂರ್ಯನಾರಾಯಣ ಎಂದೂ ಕರೆಯುತ್ತಾರೆ. ಗಾಯತ್ತ್ರಿ ಜಪ ಮಾಡುವವರು ಪ್ರಾರ್ಥನೆ ಮಾಡುವುದು ಗಾಯತ್ತ್ರಿ ಪ್ರತಿಪಾಧ್ಯ ಸೂರ್ಯನಾರಾಯಣನನ್ನು. “ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್”  ಎಂದರೆ: “ಸೂರ್ಯನಲ್ಲಿರುವ ಜ್ಞಾನಾನಂದಮಯವಾದ ಬೆಳಕು ನಮಗೆಲ್ಲರಿಗೂ ಒಳ್ಳೆಯ ಬುದ್ಧಿ ಕೊಟ್ಟು, ನಾವು ಪ್ರಾಮಾಣಿಕವಾಗಿ ಬದುಕುವಂತೆ  ನಮ್ಮನ್ನು ಪಾಲಿಸಲಿ” ಎನ್ನುವ ಪ್ರಾರ್ಥನೆ”.
ಸೂರ್ಯನಲ್ಲಿರುವ ಭಗವದ್ ಶಕ್ತಿಯನ್ನು “ವಿಶ್ವರೂಪಂ ಹರಿಣಂ ಜಾತವೇದಸಮ್” ಎಂದಿದ್ದಾರೆ. ಅಂದರೆ ಇದು ಇಡೀ ವಿಶ್ವಕ್ಕೆ ರೂಪಕೊಟ್ಟ ಶಕ್ತಿ. ಸೂರ್ಯನಿಗಿಂತ ಮೊದಲು ಏನೂ ಇರಲಿಲ್ಲ. ಸೂರ್ಯನೊಳಗೆ ತುಂಬಿದ ಭಗವಂತ ಈ ಪ್ರಪಂಚಕ್ಕೆ ಆಕಾರ ಕೊಟ್ಟು ಬಿಂಬರೂಪನಾಗಿ ನಿಂತ. 
ಇಡೀ ವಿಶ್ವಕ್ಕೆ ಕೇಂದ್ರ ಸ್ಥಾನೀಯನಾಗಿ ಸೂರ್ಯನಿದ್ದಾನೆ. ಸೂರ್ಯನಲ್ಲಿ ಪ್ರಾಣ-ನಾರಾಯಣರಿದ್ದಾರೆ. ಈ ಶಕ್ತಿ ಕೇಂದ್ರವನ್ನು ಇಲ್ಲಿ ‘ಹರಿಣಮ್’ ಎಂದು ಕರೆದಿದ್ದಾರೆ. ಅಂದರೆ ಕೊಳೆಯ, ದೋಷದ ಮತ್ತು ಕತ್ತಲಿನ ಸ್ಪರ್ಶವೇ ಇಲ್ಲದ, ಸರ್ವರಿಗೂ ಆಶ್ರಯವಾದ, ಸರ್ವೋತ್ತಮ  ಬೆಳಕು ಎಂದರ್ಥ. ಇಂತಹ ಬೆಳಕು ಇನ್ನೊಂದಿಲ್ಲ. ಇದು ಎಲ್ಲಾ ಬೆಳಕುಗಳ ಮೂಲ ಬೆಳಕು. ಹೀಗೆ ವಿಶ್ವರೂಪನಾಗಿ ಸೂರ್ಯಮಂಡಲದಲ್ಲಿ ಶಕ್ತಿಯಾಗಿ ನಿಂತಿರುವ ಭಗವಂತ  “ಜಾತವೇದಸಮ್”. ಅಂದರೆ ಎಲ್ಲವನ್ನೂ ತಿಳಿದ ಸರ್ವಜ್ಞ.
ಎಲ್ಲಾ ಬೆಳಕುಗಳ ಮೂಲ ಬೆಳಕಾದ ಭಗವಂತನಿಗೆ ಸಾವಿರಾರು ಕಿರಣಗಳು. ಭಗವಂತನ ಮುಖೇನ ಪ್ರಾಣ-ಸೂರ್ಯರಿಗೂ ಸಾವಿರಾರು ಕಿರಣಗಳು. ಇದಕ್ಕಾಗಿ ಸೂರ್ಯ-ಪ್ರಾಣರನ್ನೂ ‘ಸಹಸ್ರರಶ್ಮಿಃ’ ಎಂದು ಕರೆಯುತ್ತಾರೆ. ಇಲ್ಲಿ “ಶತಧಾ ವರ್ತಮಾನಃ” ಎಂದಿದೆ. ಇದೊಂದು ಅಪೂರ್ವ ವಿಷಯ. ಪ್ರಾಚೀನರು ಸೂರ್ಯ ಕಿರಣವನ್ನು ನೂರು  ವಿಭಾಗವನ್ನಾಗಿ ಮಾಡಿದ್ದರು. ಆದರೆ ಆ ವಿಭಾಗದ ಬಗ್ಗೆ ವಿವರ ಎಲ್ಲಿಯೂ ದೊರೆತಿಲ್ಲ. ಭಗವಂತನಿಗೆ  ನೂರಾರು ರೂಪಗಳು. ಮೂಲರೂಪ, ಭೂಮಿಯಲ್ಲಿ ಅವತರಿಸಿದ ರೂಪ, ಪ್ರತಿಯೊಬ್ಬರ ಅಂತರ್ಯಾಮಿಯಾಗಿ ಬಿಂಬರೂಪ, ಹೀಗೆ ನೂರಾರು ರೂಪಗಳಲ್ಲಿ ಭಗವಂತ ತುಂಬಿದ್ದಾನೆ.  ಅದೇ ರೀತಿ ಪ್ರಾಣದೇವರು ಎಲ್ಲರ ಪ್ರಾಣಶಕ್ತಿಯಾಗಿ ಅನೇಕ ರೂಪಗಳಿಂದ ತುಂಬಿದ್ದರೆ, ಸೂರ್ಯ ಬೇರೆಬೇರೆ ಕಾಲಗಳಲ್ಲಿ ಬೇರೆಬೇರೆ ರೂಪಗಳಿಂದ ಕಾಣಿಸಿಕೊಳ್ಳುತ್ತಾನೆ.
ಇಲ್ಲಿ ನಾವು ಗಮನಿಸಬೇಕಾದ ಒಂದು ವಿಚಾರವೇನೆಂದರೆ: ಪಿಪ್ಪಲಾದರು “ಇದನ್ನು ಋಗ್ವೇದದ ಋಷಿಗಳು ಹೇಳಿದ್ದಾರೆ, ಅವರು ಕಂಡ ಸತ್ಯವನ್ನು ನಾನು ಹೇಳುತ್ತಿದ್ದೇನೆ” ಎಂದಿದ್ದಾರೆ. ಅಧ್ಯಾತ್ಮದಲ್ಲಿ ಯಾವಾಗಲೂ ನನ್ನ ಅನಿಸಿಕೆ ಎಂದು ಹೇಳುವುದಾಗಲೀ, ನನಗೆ ಇದು ಸರಿ ಕಾಣಿಸುತ್ತದೆ ಎನ್ನುವುದು ಸರಿಯಲ್ಲ. ಏಕೆಂದರೆ ನಮ್ಮ ಅನಿಸಿಕೆಯೂ ಸತ್ಯವೂ ಒಂದೇ ಆಗಿರಬೇಕೆಂದೇನೂ ಇಲ್ಲಾ. ನಮಗೆ ಅಸತ್ಯವೂ ಇಷ್ಟವಾಗಬಹುದು. ಆದ್ದರಿಂದ ಅಧ್ಯಾತ್ಮ ಸಾಧನೆಯಲ್ಲಿ ನಾವು ನಿಜವಾದ ಜ್ಞಾನಿಗಳು ಏನನ್ನು ಕಂಡಿದ್ದಾರೆ, ಕಂಡು ಏನನ್ನು ದಾಖಲೆ ಮಾಡಿದ್ದಾರೆ, ಅದರ ಆಧಾರದಲ್ಲಿ ಸತ್ಯವನ್ನು ಕಾಣಲು ಪ್ರಯತ್ನಿಸಬೇಕು.  

No comments:

Post a Comment