ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Friday, August 31, 2012

Prashnopanishad in Kannada-Prashna-I (11)


ಪಂಚಪಾದಂ ಪಿತರಂ ದ್ವಾದಶಾಕೃತಿಂ ದಿವ ಆಹುಃ ಪರೇ ಅರ್ಧೇ ಪುರೀಷಿಣಮ್
ಅಥೇಮೇ ಅನ್ಯ ಉಪರೇ ವಿಚಕ್ಷಣಂ ಸಪ್ತಚಕ್ರೇ ಷಡರ ಆಹುರರ್ಪಿತಮಿತಿ   ೧೧

ಈ ಮಂತ್ರ ಋಗ್ವೇದದಲ್ಲಿ ಬಂದಿದೆ. (೧.೧೬೪.೧೨).  ಋಗ್ವೇದದಲ್ಲಿ ‘ಅಸ್ಯ ವಾಮಸ್ಯ ಸೂಕ್ತ’ ಎಂದಿದೆ[೧.೧೬೪]. ಅಲ್ಲಿ ಐವತ್ತೆರಡು ಮಂತ್ರಗಳಿವೆ. ಎಲ್ಲವೂ ಒಗಟಿನಂತಿರುವ ಮಂತ್ರಗಳು. ಮೇಲ್ನೋಟದಲ್ಲಿ ನೋಡಿದರೆ ಏನೂ ಅರ್ಥವಾಗುವುದಿಲ್ಲ. ಆ ಐವತ್ತೆರಡು ಮಂತ್ರಗಳಲ್ಲಿ ಒಂದನ್ನು ಪಿಪ್ಪಲಾದರು ಇಲ್ಲಿ ಪ್ರಸ್ತಾಪಿಸಿದ್ದಾರೆ. ಈ ಮಂತ್ರದ ಮೇಲ್ನೋಟದ ಅರ್ಥ ಹೀಗಿದೆ: ಐದು ಕಾಲಿನ ತಂದೆಯೊಬ್ಬನಿದ್ದಾನೆ. ಅವನಿಗೆ ಹನ್ನೆರಡು ರೂಪಗಳು. ಅವನು ಸ್ವರ್ಗಲೋಕದ ಆಚೆಗಿನ ಬಂಗಲೆಯಲ್ಲಿ ಪುಷ್ಕಳ ಭೋಜನ ಮಾಡುತ್ತಿದ್ದಾನೆ/ ಆನಂದವಾಗಿದ್ದಾನೆ/ ಆರಾಮವಾಗಿದ್ದಾನೆ/ನೀರು ಸುರಿಸುತ್ತಿದ್ದಾನೆ. ಕೆಲವು ಬೇರೆ ಜನರಿದ್ದಾರೆ. ಅವರು ಹೇಳುತ್ತಾರೆ: “ಆತ ಭಾರೀ ಬುದ್ಧಿವಂತ, ಆತ ಆ ಬಂಗಲೆಯಲ್ಲಿರುವುದಲ್ಲ, ಆತ ಏಳು ಚಕ್ರಗಳ, ಆರು ಅರಗಿಲ ಶರೀರದಲ್ಲಿದ್ದಾನೆ” ಎಂದು. 
ಇದು ಪೂರ್ಣ ಒಗಟಿನ ರೂಪದಲ್ಲಿರುವ ಮಂತ್ರ. ಈ ಮಂತ್ರ ಸೂರ್ಯನನ್ನು, ಪ್ರಾಣದೇವರನ್ನು ಮತ್ತು ಭಗವಂತನನ್ನು ಹೇಳುತ್ತದೆ. ಇಲ್ಲಿ ಒಂದೊಂದಾಗಿ ಈ ವಿವರವನ್ನು ಹುಡುಕಬೇಕು.
ಈ ಮಂತ್ರವನ್ನು ಸೂರ್ಯನ ಪರ ನೋಡಿದಾಗ:  “ಪಂಚಪಾದಂ ಪಿತರಂ”   ಎನ್ನುವಲ್ಲಿ ‘ಪಂಚ’ ಎನ್ನುವ ಪದ  'ವ್ಯಾಪಿಸಿಕೊಂಡಿರುವ' ಎನ್ನುವ ಅರ್ಥವನ್ನು ಕೊಡುತ್ತದೆ[ಉದಾ: ಪಂಚಾಸ್ಯ=ವಿಸ್ತಾರವಾದ ಮೋರೆಯುಳ್ಳದ್ದು=ಸಿಂಹ]. ಸೂರ್ಯನ ಕಿರಣಗಳು ವಿಸ್ತಾರವಾಗಿ ಭೂಮಂಡಲದಲ್ಲಿ ತುಂಬಿದೆ. ಇನ್ನು ‘ಪಂಚ’ ಎಂದರೆ ಐದು ಎನ್ನುವ ಅರ್ಥದಲ್ಲಿ ನೋಡಿದರೆ: ಸೂರ್ಯನನ್ನು ಉಪಾಸನೆಯಲ್ಲಿ ಐದು ದಿಕ್ಕುಗಳಲ್ಲಿ [ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಊರ್ಧ್ವ] ಹೇಳುತ್ತಾರೆ. ಹೀಗೆ ಐದು ಕಡೆ ವಿಶಿಷ್ಟವಾದ ಐದು ಕಿರಣಗಳುಳ್ಳವ ಮತ್ತು ಎಲ್ಲಾ ಕಡೆ ವಿಸ್ತೃತವಾದ ಕಿರಣಗಳುಳ್ಳವ ಸೂರ್ಯ. ಇಲ್ಲಿ ಪಿತರಂ ಎನ್ನುವಲ್ಲಿ ‘ತಪ’ ಎನ್ನುವ ಪದ ಅಡಗಿದೆ. ಅಂದರೆ ಸುಡುವವ ಎಂದರ್ಥ. ಕಿರಣಗಳನ್ನು ಎಲ್ಲಾ ಕಡೆ ಹಬ್ಬಿಸಿ “ದ್ವಾದಶಾಕೃತಿಂ” – ಹನ್ನೆರಡು ತಿಂಗಳು ಪಂಚಋತುಗಳ[ವಸಂತ, ಗ್ರೀಷ್ಮ, ವರ್ಷಾ, ಶರತ್, ಹೇಮಂತಶಿಶಿರ(ಹೇಮಂತ ಮತ್ತು ಶಿಶಿರವನ್ನು ಚಳಿಗಾಲವೆಂದು ಒಂದೇ ಋತುವಾಗಿ ಪರಿಗಣಿಸುವುದು ವೈದಿಕ ಸಂಪ್ರದಾಯ-‘ಪಂಚರ್ತವಃ’ )]  ನಿಯಾಮಕನಾಗಿ ಸೂರ್ಯ ಆಕಾಶದ[ದಿವು] ನಡು ನೆತ್ತಿಯಲ್ಲಿ ನೆಲೆಸಿದ್ದಾನೆ. ಆದರೆ ತಿಳಿದವರು ಹೇಳುತ್ತಾರೆ: ಆತ ನಮ್ಮ ಶರೀರದಲ್ಲೇ, ನಮ್ಮ ಕಣ್ಣಿನಲ್ಲಿ ನೆಲೆಸಿದ್ದಾನೆ ಎಂದು.[ಚಕ್ಷೋಃ ಸೂರ್ಯೋ ಅಜಾಯತ-ಪುರುಷಸೂಕ್ತ. ಭಗವಂತನ ಕಣ್ಣಿನಿಂದ ಹುಟ್ಟಿದ ಸೂರ್ಯ ನಮ್ಮ ಕಣ್ಣಿನ ಅಭಿಮಾನಿ ದೇವತೆ]. ಎಂತಹ ಶರೀರ ಎಂದರೆ - ಏಳು ಚಕ್ರಗಳ, ಆರು ಅರಗಿಲ ಶರೀರ. [ಈ ಶರೀರದ ವಿವರಣೆಯನ್ನು ಮುಂದೆ ನೋಡೋಣ].
ಇದೇ ಮಂತ್ರವನ್ನು ಪ್ರಾಣದೇವರ ಪರ ನೋಡಿದಾಗ: “ಪಂಚಪಾದಂ ಪಿತರಂ”  ಜಗತ್ತಿನ ತಂದೆಯಾದ ಮುಖ್ಯಪ್ರಾಣದೇವರು ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ ಎನ್ನುವ ಐದು ರೂಪಗಳಲ್ಲಿ ಈ ಜಗತ್ತಿನಲ್ಲಿ ತುಂಬಿದ್ದಾರೆ. ಪಂಚಜ್ಞಾನೇಂದ್ರಿಯ, ಪಂಚಕರ್ಮೇಂದ್ರಿಯ, ಮನಸ್ಸು ಮತ್ತು ಬುದ್ಧಿ ಈ ಹನ್ನೆರಡು[ದ್ವಾದಶಾಕೃತಿಂ] ಇಂದ್ರಿಯಗಳ ನಿಯಾಮಕ ಪ್ರಾಣ. ಇಂತಹ ಪ್ರಾಣದೇವರು ತಮ್ಮ ಪುರವಾದ ಸತ್ಯ ಲೋಕದಲ್ಲಿ ಭಾರತಿಯ(ದಿವು) ಬಲಬದಿಯಲ್ಲಿದ್ದಾರೆ. ಆದರೆ ತಿಳಿದವರು ಹೇಳುವಂತೆ ಜೀವ ಕಲಾಭಿಮಾನಿಯಾದ ಪ್ರಾಣದೇವರು ನಮ್ಮ ಶರೀರದಲ್ಲಿ ಅಂತರ್ಯಾಮಿಯಾಗಿ ನೆಲೆಸಿದ್ದಾರೆ.
ಈ ಮಂತ್ರವನ್ನು ಭಗವಂತನ ಪರ ನೋಡಿದಾಗ: ಸೂರ್ಯನೊಳಗೆ ಪಂಚರೂಪದಲ್ಲಿದ್ದು, ಪಂಚರೂಪದಿಂದ, ಪಂಚಋತು ನಿಯಾಮಕನಾಗಿ ಭಗವಂತನಿದ್ದಾನೆ. ಪಂಚಪ್ರಾಣರಲ್ಲಿ ಭಗವಂತನಿದ್ದಾನೆ. ಸ್ವಯಂ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಮತ್ತು ನಾರಾಯಣ  ಎನ್ನುವ ಪಂಚರೂಪದಲ್ಲಿ ಜಗತ್ತಿನ ತಂದೆಯಾದ ಭಗವಂತ ತುಂಬಿದ್ದಾನೆ. ಹನ್ನೆರಡು ಮಾಸಗಳಲ್ಲಿ, ಹನ್ನೆರಡು ಇಂದ್ರಿಯಗಳಲ್ಲಿ ಭಗವಂತ ತುಂಬಿದ್ದಾನೆ. ಮಾರ್ಗಶಿರದಿಂದ ಕಾರ್ತ್ತಿಕದ ತನಕದ ಈ ತಿಂಗಳುಗಳನ್ನು ನಿಯಮಿಸುವ ಭಗವಂತನ ರೂಪಗಳೂ ಹನ್ನೆರಡು. ಅವುಗಳೆಂದರೆ: ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು, ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷಿಕೇಶ, ಪದ್ಮನಾಭ, ದಾಮೋದರ. ಹೀಗೆ ಅನೇಕಾನೇಕ ರೂಪಗಳಿಂದ ಜಗತ್ತಿನ ರಕ್ಷಣೆ ಮಾಡುತ್ತಿದ್ದಾನೆ –ಜಗತ್ತಿನ ರಕ್ಷಕ ಭಗವಂತ. ಇಂತಹ ಭಗವಂತ ಏಳುಲೋಕಗಳಿಂದಾಚೆಗೆ, ಎಲ್ಲವುದಕ್ಕಿಂತ ಎತ್ತರದಲ್ಲಿರುವ ವೈಕುಂಠದಲ್ಲಿ ನೆಲೆಸಿದ್ದಾನೆ. ಭಗವಂತ ಭಕ್ತಿ-ಜ್ಞಾನಗಳ ಮುಖೇನ ಎತ್ತರಕ್ಕೇರಿದ ಜ್ಞಾನಿಯ ಸಾಧನೆ ಪೂರ್ಣವಾದಾಗ ತನ್ನ ಪುರದಲ್ಲಿ ಆತನಿಗೆ ಸ್ಥಾನವನ್ನು ಕೊಡುತ್ತಾನೆ. ಸಾಧನೆ ಪೂರ್ಣವಾಗುವ ತನಕ ಭೂಮಂಡಲದಲ್ಲಿ ಸ್ಥಾನವನ್ನು ಕೊಡುವವನೂ ಅವನೇ. ಭಗವಂತನನ್ನು ಹೃದಯದಲ್ಲಿ ಉಪಾಸನೆ ಮಾಡುವ, ಶತರ್ಚಿಗಳು “ಭಗವಂತ ಎಲ್ಲವನ್ನು ಬಲ್ಲವನಾಗಿ ನಮ್ಮೊಳಗೆ ನಮ್ಮನ್ನು ರಕ್ಷಣೆ ಮಾಡುವುದಕ್ಕಾಗಿ ಕುಳಿತಿದ್ದಾನೆ(ಉಪರೇ)” ಎಂದು ಉಪಾಸನೆ ಮಾಡುತ್ತಾರೆ. ಜ್ಞಾನಿಗಳು ಭಗವಂತನನ್ನು ತಮ್ಮ ಹೃದಯದಲ್ಲಿ ಕುಳ್ಳಿರಿಸಿ ಉಪಾಸನೆ ಮಾಡುತ್ತಾರೆ.
ಈ ರೀತಿ ಸೂರ್ಯ, ಪ್ರಾಣ ಮತ್ತು ಭಗವಂತ ನೆಲೆಸಿರುವ ಶರೀರ ಏಳು ಚಕ್ರಗಳ ಶರೀರ. ನಮ್ಮ ಶರೀರ ಏಳರ ಗುಂಪು. ಅವುಗಳೆಂದರೆ: ತ್ವಕ್(ಹೊರಮೈ), ಚರ್ಮ(ಒಳಮೈ), ಮಾಂಸ, ರಕ್ತ, ಕೊಬ್ಬು, ಎಲುಬು ಮತ್ತು ಮಜ್ಜೆ (ಸಪ್ತ ಧಾತುಗಳು).   ಯಾವುದರಿಂದ ನಾವು ನಡೆಯುತ್ತೇವೋ ಅದು ಚಕ್ರ. ಚಕ್ರ ಎಂದರೆ ಪರಿಮಾಣ. ನಮ್ಮ ಶರೀರ ನಮ್ಮ ಕಾಲಿನ ಏಳುಪಟ್ಟು ಇರುತ್ತದೆ. ಇಂತಹ ದೇಹಕ್ಕೆ  ಆರು ಅರಗಿಲು. ಅವುಗಳೆಂದರೆ: ಎರಡು ಕೈ, ಎರಡು ಕಾಲು, ದೇಹ ಮತ್ತು ತಲೆ.  
ಹೀಗೆ ಈ ಶ್ಲೋಕ- ಸೂರ್ಯ, ಪ್ರಾಣ ಮತ್ತು ನಾರಾಯಣ ಸಮಸ್ತ ಕಾಲದಲ್ಲಿ ತುಂಬಿ ಸೃಷ್ಟಿ ವಿಸ್ತಾರ ಮಾಡುವುದಕ್ಕೆ ಸಂವಾದಿಯಾಗಿದೆ.  

2 comments:

  1. ಮಾನ್ಯರೇ,
    ಪ್ರಶ್ನೋಪನಿಶದ್ ಸಂಪೂರ್ಣ ಓದಿದೆ. ನಿಮ್ಮ ಪ್ರಯತ್ನ ಶ್ಲಾಘನೀಯ.
    ನಿಮ್ಮ ಈ ಕೆಲಸ ನಿಸ್ಸಂಶಯವಾಗಿಯೂ ತುಂಬಾ ಅಮೂಲ್ಯವಾದದ್ದು. ನಿಮಗೆ ಅನಂತ ಅಭಿನಂದನೆಗಳು.

    ReplyDelete
  2. ಓದಿ ಹರಸಿದ ನಿಮಗೂ ನಮ್ಮ ಧನ್ಯವಾದಗಳು.

    ReplyDelete