ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Friday, August 31, 2012

Prashnopanishad in Kannada-Prashna-I (11)


ಪಂಚಪಾದಂ ಪಿತರಂ ದ್ವಾದಶಾಕೃತಿಂ ದಿವ ಆಹುಃ ಪರೇ ಅರ್ಧೇ ಪುರೀಷಿಣಮ್ ।
ಅಥೇಮೇ ಅನ್ಯ ಉಪರೇ ವಿಚಕ್ಷಣಂ ಸಪ್ತಚಕ್ರೇ ಷಡರ ಆಹುರರ್ಪಿತಮಿತಿ ॥  ೧೧॥

ಈ ಮಂತ್ರ ಋಗ್ವೇದದಲ್ಲಿ ಬಂದಿದೆ. (೧.೧೬೪.೧೨).  ಋಗ್ವೇದದಲ್ಲಿ ‘ಅಸ್ಯ ವಾಮಸ್ಯ ಸೂಕ್ತ’ ಎಂದಿದೆ[೧.೧೬೪]. ಅಲ್ಲಿ ಐವತ್ತೆರಡು ಮಂತ್ರಗಳಿವೆ. ಎಲ್ಲವೂ ಒಗಟಿನಂತಿರುವ ಮಂತ್ರಗಳು. ಮೇಲ್ನೋಟದಲ್ಲಿ ನೋಡಿದರೆ ಏನೂ ಅರ್ಥವಾಗುವುದಿಲ್ಲ. ಆ ಐವತ್ತೆರಡು ಮಂತ್ರಗಳಲ್ಲಿ ಒಂದನ್ನು ಪಿಪ್ಪಲಾದರು ಇಲ್ಲಿ ಪ್ರಸ್ತಾಪಿಸಿದ್ದಾರೆ. ಈ ಮಂತ್ರದ ಮೇಲ್ನೋಟದ ಅರ್ಥ ಹೀಗಿದೆ: ಐದು ಕಾಲಿನ ತಂದೆಯೊಬ್ಬನಿದ್ದಾನೆ. ಅವನಿಗೆ ಹನ್ನೆರಡು ರೂಪಗಳು. ಅವನು ಸ್ವರ್ಗಲೋಕದ ಆಚೆಗಿನ ಬಂಗಲೆಯಲ್ಲಿ ಪುಷ್ಕಳ ಭೋಜನ ಮಾಡುತ್ತಿದ್ದಾನೆ/ ಆನಂದವಾಗಿದ್ದಾನೆ/ ಆರಾಮವಾಗಿದ್ದಾನೆ/ನೀರು ಸುರಿಸುತ್ತಿದ್ದಾನೆ. ಕೆಲವು ಬೇರೆ ಜನರಿದ್ದಾರೆ. ಅವರು ಹೇಳುತ್ತಾರೆ: “ಆತ ಭಾರೀ ಬುದ್ಧಿವಂತ, ಆತ ಆ ಬಂಗಲೆಯಲ್ಲಿರುವುದಲ್ಲ, ಆತ ಏಳು ಚಕ್ರಗಳ, ಆರು ಅರಗಿಲ ಶರೀರದಲ್ಲಿದ್ದಾನೆ” ಎಂದು. 
ಇದು ಪೂರ್ಣ ಒಗಟಿನ ರೂಪದಲ್ಲಿರುವ ಮಂತ್ರ. ಈ ಮಂತ್ರ ಸೂರ್ಯನನ್ನು, ಪ್ರಾಣದೇವರನ್ನು ಮತ್ತು ಭಗವಂತನನ್ನು ಹೇಳುತ್ತದೆ. ಇಲ್ಲಿ ಒಂದೊಂದಾಗಿ ಈ ವಿವರವನ್ನು ಹುಡುಕಬೇಕು.
ಈ ಮಂತ್ರವನ್ನು ಸೂರ್ಯನ ಪರ ನೋಡಿದಾಗ:  “ಪಂಚಪಾದಂ ಪಿತರಂ”   ಎನ್ನುವಲ್ಲಿ ‘ಪಂಚ’ ಎನ್ನುವ ಪದ  'ವ್ಯಾಪಿಸಿಕೊಂಡಿರುವ' ಎನ್ನುವ ಅರ್ಥವನ್ನು ಕೊಡುತ್ತದೆ[ಉದಾ: ಪಂಚಾಸ್ಯ=ವಿಸ್ತಾರವಾದ ಮೋರೆಯುಳ್ಳದ್ದು=ಸಿಂಹ]. ಸೂರ್ಯನ ಕಿರಣಗಳು ವಿಸ್ತಾರವಾಗಿ ಭೂಮಂಡಲದಲ್ಲಿ ತುಂಬಿದೆ. ಇನ್ನು ‘ಪಂಚ’ ಎಂದರೆ ಐದು ಎನ್ನುವ ಅರ್ಥದಲ್ಲಿ ನೋಡಿದರೆ: ಸೂರ್ಯನನ್ನು ಉಪಾಸನೆಯಲ್ಲಿ ಐದು ದಿಕ್ಕುಗಳಲ್ಲಿ [ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಊರ್ಧ್ವ] ಹೇಳುತ್ತಾರೆ. ಹೀಗೆ ಐದು ಕಡೆ ವಿಶಿಷ್ಟವಾದ ಐದು ಕಿರಣಗಳುಳ್ಳವ ಮತ್ತು ಎಲ್ಲಾ ಕಡೆ ವಿಸ್ತೃತವಾದ ಕಿರಣಗಳುಳ್ಳವ ಸೂರ್ಯ. ಇಲ್ಲಿ ಪಿತರಂ ಎನ್ನುವಲ್ಲಿ ‘ತಪ’ ಎನ್ನುವ ಪದ ಅಡಗಿದೆ. ಅಂದರೆ ಸುಡುವವ ಎಂದರ್ಥ. ಕಿರಣಗಳನ್ನು ಎಲ್ಲಾ ಕಡೆ ಹಬ್ಬಿಸಿ “ದ್ವಾದಶಾಕೃತಿಂ” – ಹನ್ನೆರಡು ತಿಂಗಳು ಪಂಚಋತುಗಳ[ವಸಂತ, ಗ್ರೀಷ್ಮ, ವರ್ಷಾ, ಶರತ್, ಹೇಮಂತಶಿಶಿರ(ಹೇಮಂತ ಮತ್ತು ಶಿಶಿರವನ್ನು ಚಳಿಗಾಲವೆಂದು ಒಂದೇ ಋತುವಾಗಿ ಪರಿಗಣಿಸುವುದು ವೈದಿಕ ಸಂಪ್ರದಾಯ-‘ಪಂಚರ್ತವಃ’ )]  ನಿಯಾಮಕನಾಗಿ ಸೂರ್ಯ ಆಕಾಶದ[ದಿವು] ನಡು ನೆತ್ತಿಯಲ್ಲಿ ನೆಲೆಸಿದ್ದಾನೆ. ಆದರೆ ತಿಳಿದವರು ಹೇಳುತ್ತಾರೆ: ಆತ ನಮ್ಮ ಶರೀರದಲ್ಲೇ, ನಮ್ಮ ಕಣ್ಣಿನಲ್ಲಿ ನೆಲೆಸಿದ್ದಾನೆ ಎಂದು.[ಚಕ್ಷೋಃ ಸೂರ್ಯೋ ಅಜಾಯತ-ಪುರುಷಸೂಕ್ತ. ಭಗವಂತನ ಕಣ್ಣಿನಿಂದ ಹುಟ್ಟಿದ ಸೂರ್ಯ ನಮ್ಮ ಕಣ್ಣಿನ ಅಭಿಮಾನಿ ದೇವತೆ]. ಎಂತಹ ಶರೀರ ಎಂದರೆ - ಏಳು ಚಕ್ರಗಳ, ಆರು ಅರಗಿಲ ಶರೀರ. [ಈ ಶರೀರದ ವಿವರಣೆಯನ್ನು ಮುಂದೆ ನೋಡೋಣ].
ಇದೇ ಮಂತ್ರವನ್ನು ಪ್ರಾಣದೇವರ ಪರ ನೋಡಿದಾಗ: “ಪಂಚಪಾದಂ ಪಿತರಂ”  ಜಗತ್ತಿನ ತಂದೆಯಾದ ಮುಖ್ಯಪ್ರಾಣದೇವರು ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ ಎನ್ನುವ ಐದು ರೂಪಗಳಲ್ಲಿ ಈ ಜಗತ್ತಿನಲ್ಲಿ ತುಂಬಿದ್ದಾರೆ. ಪಂಚಜ್ಞಾನೇಂದ್ರಿಯ, ಪಂಚಕರ್ಮೇಂದ್ರಿಯ, ಮನಸ್ಸು ಮತ್ತು ಬುದ್ಧಿ ಈ ಹನ್ನೆರಡು[ದ್ವಾದಶಾಕೃತಿಂ] ಇಂದ್ರಿಯಗಳ ನಿಯಾಮಕ ಪ್ರಾಣ. ಇಂತಹ ಪ್ರಾಣದೇವರು ತಮ್ಮ ಪುರವಾದ ಸತ್ಯ ಲೋಕದಲ್ಲಿ ಭಾರತಿಯ(ದಿವು) ಬಲಬದಿಯಲ್ಲಿದ್ದಾರೆ. ಆದರೆ ತಿಳಿದವರು ಹೇಳುವಂತೆ ಜೀವ ಕಲಾಭಿಮಾನಿಯಾದ ಪ್ರಾಣದೇವರು ನಮ್ಮ ಶರೀರದಲ್ಲಿ ಅಂತರ್ಯಾಮಿಯಾಗಿ ನೆಲೆಸಿದ್ದಾರೆ.
ಈ ಮಂತ್ರವನ್ನು ಭಗವಂತನ ಪರ ನೋಡಿದಾಗ: ಸೂರ್ಯನೊಳಗೆ ಪಂಚರೂಪದಲ್ಲಿದ್ದು, ಪಂಚರೂಪದಿಂದ, ಪಂಚಋತು ನಿಯಾಮಕನಾಗಿ ಭಗವಂತನಿದ್ದಾನೆ. ಪಂಚಪ್ರಾಣರಲ್ಲಿ ಭಗವಂತನಿದ್ದಾನೆ. ಸ್ವಯಂ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಮತ್ತು ನಾರಾಯಣ  ಎನ್ನುವ ಪಂಚರೂಪದಲ್ಲಿ ಜಗತ್ತಿನ ತಂದೆಯಾದ ಭಗವಂತ ತುಂಬಿದ್ದಾನೆ. ಹನ್ನೆರಡು ಮಾಸಗಳಲ್ಲಿ, ಹನ್ನೆರಡು ಇಂದ್ರಿಯಗಳಲ್ಲಿ ಭಗವಂತ ತುಂಬಿದ್ದಾನೆ. ಮಾರ್ಗಶಿರದಿಂದ ಕಾರ್ತ್ತಿಕದ ತನಕದ ಈ ತಿಂಗಳುಗಳನ್ನು ನಿಯಮಿಸುವ ಭಗವಂತನ ರೂಪಗಳೂ ಹನ್ನೆರಡು. ಅವುಗಳೆಂದರೆ: ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು, ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷಿಕೇಶ, ಪದ್ಮನಾಭ, ದಾಮೋದರ. ಹೀಗೆ ಅನೇಕಾನೇಕ ರೂಪಗಳಿಂದ ಜಗತ್ತಿನ ರಕ್ಷಣೆ ಮಾಡುತ್ತಿದ್ದಾನೆ –ಜಗತ್ತಿನ ರಕ್ಷಕ ಭಗವಂತ. ಇಂತಹ ಭಗವಂತ ಏಳುಲೋಕಗಳಿಂದಾಚೆಗೆ, ಎಲ್ಲವುದಕ್ಕಿಂತ ಎತ್ತರದಲ್ಲಿರುವ ವೈಕುಂಠದಲ್ಲಿ ನೆಲೆಸಿದ್ದಾನೆ. ಭಗವಂತ ಭಕ್ತಿ-ಜ್ಞಾನಗಳ ಮುಖೇನ ಎತ್ತರಕ್ಕೇರಿದ ಜ್ಞಾನಿಯ ಸಾಧನೆ ಪೂರ್ಣವಾದಾಗ ತನ್ನ ಪುರದಲ್ಲಿ ಆತನಿಗೆ ಸ್ಥಾನವನ್ನು ಕೊಡುತ್ತಾನೆ. ಸಾಧನೆ ಪೂರ್ಣವಾಗುವ ತನಕ ಭೂಮಂಡಲದಲ್ಲಿ ಸ್ಥಾನವನ್ನು ಕೊಡುವವನೂ ಅವನೇ. ಭಗವಂತನನ್ನು ಹೃದಯದಲ್ಲಿ ಉಪಾಸನೆ ಮಾಡುವ, ಶತರ್ಚಿಗಳು “ಭಗವಂತ ಎಲ್ಲವನ್ನು ಬಲ್ಲವನಾಗಿ ನಮ್ಮೊಳಗೆ ನಮ್ಮನ್ನು ರಕ್ಷಣೆ ಮಾಡುವುದಕ್ಕಾಗಿ ಕುಳಿತಿದ್ದಾನೆ(ಉಪರೇ)” ಎಂದು ಉಪಾಸನೆ ಮಾಡುತ್ತಾರೆ. ಜ್ಞಾನಿಗಳು ಭಗವಂತನನ್ನು ತಮ್ಮ ಹೃದಯದಲ್ಲಿ ಕುಳ್ಳಿರಿಸಿ ಉಪಾಸನೆ ಮಾಡುತ್ತಾರೆ.
ಈ ರೀತಿ ಸೂರ್ಯ, ಪ್ರಾಣ ಮತ್ತು ಭಗವಂತ ನೆಲೆಸಿರುವ ಶರೀರ ಏಳು ಚಕ್ರಗಳ ಶರೀರ. ನಮ್ಮ ಶರೀರ ಏಳರ ಗುಂಪು. ಅವುಗಳೆಂದರೆ: ತ್ವಕ್(ಹೊರಮೈ), ಚರ್ಮ(ಒಳಮೈ), ಮಾಂಸ, ರಕ್ತ, ಕೊಬ್ಬು, ಎಲುಬು ಮತ್ತು ಮಜ್ಜೆ (ಸಪ್ತ ಧಾತುಗಳು).   ಯಾವುದರಿಂದ ನಾವು ನಡೆಯುತ್ತೇವೋ ಅದು ಚಕ್ರ. ಚಕ್ರ ಎಂದರೆ ಪರಿಮಾಣ. ನಮ್ಮ ಶರೀರ ನಮ್ಮ ಕಾಲಿನ ಏಳುಪಟ್ಟು ಇರುತ್ತದೆ. ಇಂತಹ ದೇಹಕ್ಕೆ  ಆರು ಅರಗಿಲು. ಅವುಗಳೆಂದರೆ: ಎರಡು ಕೈ, ಎರಡು ಕಾಲು, ದೇಹ ಮತ್ತು ತಲೆ.  
ಹೀಗೆ ಈ ಶ್ಲೋಕ- ಸೂರ್ಯ, ಪ್ರಾಣ ಮತ್ತು ನಾರಾಯಣ ಸಮಸ್ತ ಕಾಲದಲ್ಲಿ ತುಂಬಿ ಸೃಷ್ಟಿ ವಿಸ್ತಾರ ಮಾಡುವುದಕ್ಕೆ ಸಂವಾದಿಯಾಗಿದೆ.  

Tuesday, August 28, 2012

Prashnopanishad in Kannada-Prashna-I (9-10)


ಸಂವತ್ಸರೋ ವೈ ಪ್ರಜಾಪತಿಸ್ತಸ್ಯಾಯನೇ ದಕ್ಷಿಣಂ ಚೋತ್ತರಂ ಚ । ತದ್ಯೇ ಹ ವೈ ತದಿಷ್ಟಾಪೂರ್ತೇ ಕೃತಮಿತ್ಯುಪಾಸತೇ ತೇ ಚಾಂದ್ರಮಸಮೇವ ಲೋಕಮಭಿಜಯಂತೇ ।  ತ ಏವ ಪುನರಾವರ್ತಂತೇ ತಸ್ಮಾದೇತ ಋಷಯಃ ಪ್ರಜಾಕಾಮಾ ದಕ್ಷಿಣಂ ಪ್ರತಿಪದ್ಯಂತೇ ।  ಏಷ ಹ ವೈ ರಯಿರ್ಯಃ ಪಿತೃಯಾಣಃ ॥  ೯॥

ಸೂರ್ಯ-ಚಂದ್ರರಿಂದ ಕಾಲದ ಘಟಕಗಳು ನಿರ್ಮಾಣವಾದವು. ಸೂರ್ಯ ಮೇಷದಿಂದ ಮೀನದ ತನಕ ಸಂಕ್ರಮಣ ಮಾಡಿದಾಗ ಅದು ಒಂದು ವರ್ಷವಾಯಿತು. ಇದು ~೩೬೫.೨೫ ದಿನಗಳಿಂದ ಕೂಡಿದ ಸೌರವರ್ಷ. ಇಂದು ವಿಶ್ವದಲ್ಲಿ ಆಚರಣೆಯಲ್ಲಿರುವ ಸಂವತ್ಸರ ಈ ಸೌರಸಂವತ್ಸರ. ಇಲ್ಲಿ ೩೬೫ ದಿನಗಳಿಗೆ ಒಂದು ವರ್ಷ ಹಾಗೂ ನಾಲ್ಕು ವರ್ಷಕ್ಕೊಮ್ಮೆ ಒಂದು ಅಧಿಕ ದಿನ.
ಅದೇ ರೀತಿ ಚಾಂದ್ರಮಾನದ ಪ್ರಕಾರ  ಚೈತ್ರದಿಂದ ಪಾಲ್ಗುಣದ ತನಕ  ೩೫೫ ದಿನಗಳು. ಇಲ್ಲಿ ಕಡಿಮೆಯಾದ ಹತ್ತು ದಿನಗಳನ್ನು ಮೂರು ವರ್ಷಕ್ಕೊಮ್ಮೆ ಒಂದು ಅಧಿಕ ಮಾಸವನ್ನಾಗಿ ಮಾಡಿ ಹೊಂದಾಣಿಕೆ ಮಾಡುತ್ತಾರೆ. ಒಟ್ಟಿನಲ್ಲಿ ಇಡೀ ವರ್ಷದ ಪರಿಗಣನೆಗೆ ನಮಗೆ ಮುಖ್ಯವಾದ ಶಕ್ತಿಗಳು ಸೂರ್ಯ ಮತ್ತು ಚಂದ್ರ. ಎಲ್ಲವೂ ಸೂರ್ಯ ಚಂದ್ರರನ್ನು ಆಧರಿಸಿಕೊಂಡಿದೆ. ಆದ್ದರಿಂದ ಸೂರ್ಯನಲ್ಲಿ ಸನ್ನಿಹಿತನಾಗಿರುವ ಭಗವಂತ ಕಾಲಪುರುಷನಾಗಿ ಸಂವತ್ಸರದಲ್ಲಿ ಸನ್ನಿಹಿತನಾದ. ಒಂದು ಸಂವತ್ಸರದಲ್ಲಿ ಎರಡು ಅಯನಗಳು. ಉತ್ತರಾಯಣ  ಮತ್ತು ದಕ್ಷಿಣಾಯಣ.  ಸೂರ್ಯನಲ್ಲಿ ಸನ್ನಿಹಿತರಾಗಿರುವ ಪ್ರಾಣದೇವರು ಉತ್ತರಾಯಣದಲ್ಲಿ ಸನ್ನಿಹಿತರಾದರೆ, ಚಂದ್ರನಲ್ಲಿ ಸನ್ನಿಹಿತಳಾಗಿರುವ ಭಾರತಿ ದಕ್ಷಿಣಾಯಣದಲ್ಲಿ ಸನ್ನಿಹಿತಳಾಗಿದ್ದಾಳೆ.
ಮೇಲೆ ಹೇಳಿದ ಎರಡು ಅಯನಗಳಲ್ಲಿ ದಕ್ಷಿಣಾಯಣದಲ್ಲಿ ಇಷ್ಟಾ-ಪೂರ್ತಾದ ಮೂಲಕ, ಐಹಿಕ ಫಲಕಾಮನೆಯಿಂದ  ಕರ್ಮಾನುಷ್ಠಾನ ಮಾಡಿದವನು ಚಂದ್ರಲೋಕವನ್ನು ಪಡೆಯುತ್ತಾನೆ. ಇದು ಮೋಕ್ಷ ಸಾಧನವಲ್ಲ. ಏಕೆಂದರೆ ಚಂದ್ರಲೋಕ ದೇವತೆಗಳ ಲೋಕ. ಅಲ್ಲಿ ನಾವು ನಮ್ಮ ಪುಣ್ಯಫಲ ಮುಗಿದ ಮೇಲೆ ಮರಳಿ ಈ ಸಂಸಾರಕ್ಕೆ ಹಿಂತಿರುಗಬೇಕಾಗುತ್ತದೆ. ಇದು ತಾಯಿ ಭಾರತಿಯ ಸೃಷ್ಟಿ ವಿಸ್ತಾರದ ಪ್ರಚೋದನೆ. ಇಲ್ಲಿ ಹೇಳಿರುವ ಚಂದ್ರಲೋಕ ಎಂದರೆ ಚಂದ್ರ ಗ್ರಹವಲ್ಲ. ಇದು ದೇವತೆಗಳಿರುವ ಸೂಕ್ಷ್ಮಲೋಕ.
ಇಲ್ಲಿ ಹೇಳಲಾದ 'ಇಷ್ಟಾ-ಪೂರ್ತ' ಅನ್ನುವ ಪದಗಳಿಗೆ ವಿಶಿಷ್ಠ ಅರ್ಥವಿದೆ. ಇಷ್ಟಾ ಎಂದರೆ ನಮ್ಮ ವೈಯಕ್ತಿಕ ಅಭಿವೃದ್ಧಿಗೆ ಕಾರಣವಾದ ಪುಣ್ಯಕರ್ಮ. [ಜಪ, ಅನುಷ್ಠಾನ, ಯಜ್ಞ, ವ್ರತ, ಇತ್ಯಾದಿ ನಮಗೆ ಇಷ್ಟವಾಗಿ, ನಾವು ಮಾಡುವ ವೈಯಕ್ತಿಕ ಸಾಧನೆ] ಪೂರ್ತಾ ಎಂದರೆ: ಸಮಾಜದ ಪೂರ್ಣತೆಗೆ ಉಪಯೋಗಬೀಳುವ ಕರ್ಮ. [ಆಸ್ಪತ್ರೆ, ದೇವಸ್ಥಾನ, ಶಾಲೆ, ಇತ್ಯಾದಿಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಕಟ್ಟಿಸುವುದು, ಸಾರ್ವಜನಿಕರಿಗಾಗಿ ಕೆರೆ ಬಾವಿ ತೊಡಿಸುವುದು ಇತ್ಯಾದಿ].  ಒಟ್ಟಿನಲ್ಲಿ ಹೇಳಬೇಕೆಂದರೆ ಪ್ರವೃತ್ತಿಮಾರ್ಗದಲ್ಲಿ ಆಸಕ್ತಿ ಉಳ್ಳವರು ದಕ್ಷಿಣಾಯಣದಲ್ಲಿ ಕರ್ಮ ಮಾಡಿ ಚಂದ್ರಲೋಕವನ್ನು ಪಡೆಯುತ್ತಾರೆ. ಈ ಮಾರ್ಗವನ್ನು ಪಿತೃಗಳ ದಾರಿ ಎನ್ನುತ್ತಾರೆ.

ಅಥೋತ್ತರೇಣ ತಪಸಾ ಬ್ರಹ್ಮಚರ್ಯೇಣ ಶ್ರದ್ಧಯಾ ವಿದ್ಯಯಾಽಽತ್ಮಾನಮನ್ವಿಷ್ಯಾದಿತ್ಯಮಭಿಜಯಂತೇ ।    ಏತದ್ವೈ  ಪ್ರಾಣಾನಾಮಾಯತನಮೇತದ-ಮೃತಮಭಯಮೇತತ್ಪರಾಯಣಮೇತಸ್ಮಾನ್ನ ಪುನರಾವರ್ತಂತ ಇತ್ಯೇಷ ನಿರೋಧಸ್ತದೇಷ ಶ್ಲೋಕಃ ॥  ೧೦॥

ಉತ್ತರಾಯಣದಲ್ಲಿ ತಪಸ್ಸು ಮಾಡುವವರು  ಬ್ರಹ್ಮಚರ್ಯಪಾಲನೆ ಮಾಡುತ್ತಾ, ಸದಾ ಸತ್ಯದ ಬಗೆಗೆ ಚಿಂತನೆ ಮಾಡುತ್ತಾರೆ.  ಇಂದ್ರಿಯ ನಿಗ್ರಹ, ನಿರಂತರ ವೇದಾಧ್ಯಯನ ಮಾಡುತ್ತಾ, ಶ್ರದ್ಧೆಯಿಂದ, ಆಸ್ತಿಕ್ಯಪ್ರಜ್ಞೆಯಿಂದ, ಯಥಾರ್ಥ ಜ್ಞಾನ ಪಡೆದು, ನಿಜವಾದ ಅರಿವಿನಿಂದ, ಆತ್ಮನನ್ನು ತಿಳಿದು, ಪರಮಾತ್ಮನನ್ನು ಕಾಣುತ್ತಾರೆ. ನಾವು ಮೊದಲು ನಮ್ಮನ್ನು ನಾವು ತಿಳಿದುಕೊಳ್ಳಬೇಕು. ಆಗ ನಮ್ಮ ಅಂತರ್ಯಾಮಿಯಾದ ಭಗವಂತ ತಿಳಿಯುತ್ತಾನೆ. ಇದು ಎಷ್ಟೋ ಜನ್ಮಗಳ ಸಾಧನೆಯಿಂದ ಸಾಧ್ಯವಾಗುವ ಕ್ರಿಯೆ. ಒಮ್ಮೆ ನಮ್ಮ ಆತ್ಮದ ಅಂತರಾತ್ಮನಾದ ಭಗವಂತನನ್ನು ತಿಳಿದರೆ, ಅದರಿಂದ ಆದಿತ್ಯಲೋಕ ಪ್ರಾಪ್ತಿಯಾಗುತ್ತದೆ. ಪ್ರಾಣದೇವರು ನಮ್ಮನ್ನು ಆದಿತ್ಯಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಆದಿತ್ಯಲೋಕದಲ್ಲಿ ಆದಿತ್ಯನಲ್ಲಿರುವ ಭಗವಂತನ ಮೂಲಕ ಮತ್ತೆ ಮರಳಿ ಬಾರದ ನಿತ್ಯಲೋಕ ಪ್ರಾಪ್ತಿಯಾಗುತ್ತದೆ. ಹೀಗಾಗಿ ಉತ್ತರಾಯಣದ ಸಾಧನೆ ಇಲ್ಲಿಂದ ಬಿಡುಗಡೆಯ ಸಾಧನೆ.
 ಒಟ್ಟಿನಲ್ಲಿ ಹೇಳಬೇಕೆಂದರೆ ದಕ್ಷಿಣಾಯಣದ ಸಾಧನೆ ಸಂಸಾರದ ಚಕ್ರಭ್ರಮಣವಾದರೆ, ಉತ್ತರಾಯಣದ ಸಾಧನೆ ಮೋಕ್ಷಪ್ರದ ಸಾಧನೆ. ಇದನ್ನೇ ದಕ್ಷಿಣ ಮತ್ತು ಉತ್ತರ ಧ್ರುವಗಳು ಸಂಕೇತಿಸುತ್ತವೆ. ಉತ್ತರದಿಂದ ಪೂರ್ವದ ತನಕದ ಸೆಳೆತ ಊರ್ಧ್ವಮುಖವಾದರೆ, ದಕ್ಷಿಣದಿಂದ ಪಶ್ಚಿಮದ ಸೆಳೆತ ಚಕ್ರಭ್ರಮಣ. ಇದಕ್ಕಾಗಿ ಪ್ರಾಚೀನರು ಯಾವುದೇ ಅನುಷ್ಠಾನ, ಪೂಜೆ ಮಾಡುವುದಿದ್ದರೆ, ಮಂತ್ರಜಪ ಮಾಡುವುದಿದ್ದರೆ,  ಉತ್ತರ, ಈಶಾನ್ಯ ಅಥವಾ ಪೂರ್ವಕ್ಕೆ ಮುಖ ಮಾಡಿ ಮಾಡುತ್ತಿದ್ದರು.  ದಕ್ಷಿಣಕ್ಕೆ ಮುಖ ಮಾಡಿ ಪೂಜೆ ಅನುಷ್ಠಾನ ಮಾಡಬಾರದು. ಮಲಗುವಾಗ ಉತ್ತರಕ್ಕೆ ತಲೆ ಹಾಕಿ ಮಲಗಬಾರದು ಎನ್ನುವುದು ಪ್ರಾಚೀನರು ನಮಗೆ ಕೊಟ್ಟ ವಿಜ್ಞಾನ. ಮಲಗುವಾಗ ತಲೆ ಉತ್ತರಕ್ಕೆ ಇದ್ದರೆ ಏಳುವಾಗ ನಾವು ದಕ್ಷಿಣ ಮುಖ ಮಾಡಿ ಎಳುತ್ತೇವೆ. ಹಾಗಾಗಿ ಉತ್ತರಕ್ಕೆ ತಲೆ ಹಾಕಿ ಮಲಗುವುದೂ ನಿಷಿದ್ಧ.   
ಎಲ್ಲಾ ಜೀವರಿಗೂ ಕೊನೇಯ ಆಶ್ರಯ ಆದಿತ್ಯ ಅಂತರ್ಗತ ಭಗವಂತ. ಆತ ಸಮಸ್ತ ಜೀವಜಾತಗಳಿಗೆ ಕೊನೇಯ ನೆಲೆಮನೆ. ಆತನನ್ನು ಸೇರಿದರೆ ಸಾವಿಲ್ಲ, ಭಯವಿಲ್ಲ. ಉತ್ತರಾಯಣದಲ್ಲಿ ಸಾಧನೆ ಮಾಡಿ ಆದಿತ್ಯಲೋಕ ಸೇರಿದವರು ಎಂದೂ ಮರಳಿ ಹುಟ್ಟುವುದಿಲ್ಲ. ಅವರು ಶಾಶ್ವತವಾದ ಮೋಕ್ಷವನ್ನು ಪಡೆಯುತ್ತಾರೆ. ಇದಕ್ಕೆ ಸಂವಾದಿಯಾಗಿ ವೇದದ ಒಂದು ಮಂತ್ರವನ್ನು ಪಿಪ್ಪಲಾದರು ಮುಂದೆ ವಿವರಿಸುತ್ತಾರೆ:

Sunday, August 26, 2012

Prashnopanishad in Kannada-Prashna-I (8)


                                ವಿಶ್ವರೂಪಂ ಹರಿಣಂ ಜಾತವೇದಸಂ ಪರಾಯಣಂ ಜ್ಯೋತಿರೇಕಂ ತಪಂತಮ್ ।
                                ಸಹಸ್ರರಶ್ಮಿಃ ಶತಧಾ ವರ್ತಮಾನಃ ಪ್ರಾಣಃ ಪ್ರಜಾನಾಮುದಯತ್ಯೇಷ ಸೂರ್ಯಃ ॥  ೮॥

ಉದಯತಿ ಏಷ ಸೂರ್ಯಃ ಎನ್ನುವುದರ ಅರ್ಥ ನಮಗೆಲ್ಲರಿಗೂ ತಿಳಿದಿದೆ.  ಆದರೆ ಇಲ್ಲಿ “ಪ್ರಾಣಃ ಪ್ರಜಾನಾಮ್ ಉದಯತಿ ಏಷ ಸೂರ್ಯಃ” ಎಂದಿದೆ. ಅಂದರೆ ಸೂರ್ಯನ ಮೂಲಕ ಸೌರಶಕ್ತಿ ಹರಿದುಬರುವುದು ಆತನ ಅಂತರ್ಯಾಮಿಯಾದ ಪ್ರಾಣನಿಂದ. ಈ ಪ್ರಾಣನಿಗೆ ಚೈತನ್ಯ ಕೊಡುವವನು ಆತನ ಅಂತರ್ಯಾಮಿ ಭಗವಂತ. ಆದ್ದರಿಂದ ಸೂರ್ಯೋದಯ ಎಂದರೆ ಸೂರ್ಯ, ಆತನ ಒಳಗೆ ಪ್ರಾಣ, ಪ್ರಾಣನ ಒಳಗೆ ನಾರಾಯಣ. ಇದೇ  ಸಮಸ್ತ ಜೀವಜಾತದ ಪ್ರಾಣಶಕ್ತಿ, ಇಡೀ ವಿಶ್ವವನ್ನು ಬದುಕಿಸುವ ಶಕ್ತಿ. ಹೀಗಾಗಿ ಮುಂಜಾನೆ ಎದ್ದು ಸೂರ್ಯನನ್ನು ಕಾಣುವುದು ಎಂದರೆ ನಮ್ಮ ಪ್ರಾಣಶಕ್ತಿ ಭಗವಂತನನ್ನು ಕಾಣುವುದು. ಆದ್ದರಿಂದ ಸೂರ್ಯನನ್ನು ಸೂರ್ಯನಾರಾಯಣ ಎಂದೂ ಕರೆಯುತ್ತಾರೆ. ಗಾಯತ್ತ್ರಿ ಜಪ ಮಾಡುವವರು ಪ್ರಾರ್ಥನೆ ಮಾಡುವುದು ಗಾಯತ್ತ್ರಿ ಪ್ರತಿಪಾಧ್ಯ ಸೂರ್ಯನಾರಾಯಣನನ್ನು. “ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್”  ಎಂದರೆ: “ಸೂರ್ಯನಲ್ಲಿರುವ ಜ್ಞಾನಾನಂದಮಯವಾದ ಬೆಳಕು ನಮಗೆಲ್ಲರಿಗೂ ಒಳ್ಳೆಯ ಬುದ್ಧಿ ಕೊಟ್ಟು, ನಾವು ಪ್ರಾಮಾಣಿಕವಾಗಿ ಬದುಕುವಂತೆ  ನಮ್ಮನ್ನು ಪಾಲಿಸಲಿ” ಎನ್ನುವ ಪ್ರಾರ್ಥನೆ”.
ಸೂರ್ಯನಲ್ಲಿರುವ ಭಗವದ್ ಶಕ್ತಿಯನ್ನು “ವಿಶ್ವರೂಪಂ ಹರಿಣಂ ಜಾತವೇದಸಮ್” ಎಂದಿದ್ದಾರೆ. ಅಂದರೆ ಇದು ಇಡೀ ವಿಶ್ವಕ್ಕೆ ರೂಪಕೊಟ್ಟ ಶಕ್ತಿ. ಸೂರ್ಯನಿಗಿಂತ ಮೊದಲು ಏನೂ ಇರಲಿಲ್ಲ. ಸೂರ್ಯನೊಳಗೆ ತುಂಬಿದ ಭಗವಂತ ಈ ಪ್ರಪಂಚಕ್ಕೆ ಆಕಾರ ಕೊಟ್ಟು ಬಿಂಬರೂಪನಾಗಿ ನಿಂತ. 
ಇಡೀ ವಿಶ್ವಕ್ಕೆ ಕೇಂದ್ರ ಸ್ಥಾನೀಯನಾಗಿ ಸೂರ್ಯನಿದ್ದಾನೆ. ಸೂರ್ಯನಲ್ಲಿ ಪ್ರಾಣ-ನಾರಾಯಣರಿದ್ದಾರೆ. ಈ ಶಕ್ತಿ ಕೇಂದ್ರವನ್ನು ಇಲ್ಲಿ ‘ಹರಿಣಮ್’ ಎಂದು ಕರೆದಿದ್ದಾರೆ. ಅಂದರೆ ಕೊಳೆಯ, ದೋಷದ ಮತ್ತು ಕತ್ತಲಿನ ಸ್ಪರ್ಶವೇ ಇಲ್ಲದ, ಸರ್ವರಿಗೂ ಆಶ್ರಯವಾದ, ಸರ್ವೋತ್ತಮ  ಬೆಳಕು ಎಂದರ್ಥ. ಇಂತಹ ಬೆಳಕು ಇನ್ನೊಂದಿಲ್ಲ. ಇದು ಎಲ್ಲಾ ಬೆಳಕುಗಳ ಮೂಲ ಬೆಳಕು. ಹೀಗೆ ವಿಶ್ವರೂಪನಾಗಿ ಸೂರ್ಯಮಂಡಲದಲ್ಲಿ ಶಕ್ತಿಯಾಗಿ ನಿಂತಿರುವ ಭಗವಂತ  “ಜಾತವೇದಸಮ್”. ಅಂದರೆ ಎಲ್ಲವನ್ನೂ ತಿಳಿದ ಸರ್ವಜ್ಞ.
ಎಲ್ಲಾ ಬೆಳಕುಗಳ ಮೂಲ ಬೆಳಕಾದ ಭಗವಂತನಿಗೆ ಸಾವಿರಾರು ಕಿರಣಗಳು. ಭಗವಂತನ ಮುಖೇನ ಪ್ರಾಣ-ಸೂರ್ಯರಿಗೂ ಸಾವಿರಾರು ಕಿರಣಗಳು. ಇದಕ್ಕಾಗಿ ಸೂರ್ಯ-ಪ್ರಾಣರನ್ನೂ ‘ಸಹಸ್ರರಶ್ಮಿಃ’ ಎಂದು ಕರೆಯುತ್ತಾರೆ. ಇಲ್ಲಿ “ಶತಧಾ ವರ್ತಮಾನಃ” ಎಂದಿದೆ. ಇದೊಂದು ಅಪೂರ್ವ ವಿಷಯ. ಪ್ರಾಚೀನರು ಸೂರ್ಯ ಕಿರಣವನ್ನು ನೂರು  ವಿಭಾಗವನ್ನಾಗಿ ಮಾಡಿದ್ದರು. ಆದರೆ ಆ ವಿಭಾಗದ ಬಗ್ಗೆ ವಿವರ ಎಲ್ಲಿಯೂ ದೊರೆತಿಲ್ಲ. ಭಗವಂತನಿಗೆ  ನೂರಾರು ರೂಪಗಳು. ಮೂಲರೂಪ, ಭೂಮಿಯಲ್ಲಿ ಅವತರಿಸಿದ ರೂಪ, ಪ್ರತಿಯೊಬ್ಬರ ಅಂತರ್ಯಾಮಿಯಾಗಿ ಬಿಂಬರೂಪ, ಹೀಗೆ ನೂರಾರು ರೂಪಗಳಲ್ಲಿ ಭಗವಂತ ತುಂಬಿದ್ದಾನೆ.  ಅದೇ ರೀತಿ ಪ್ರಾಣದೇವರು ಎಲ್ಲರ ಪ್ರಾಣಶಕ್ತಿಯಾಗಿ ಅನೇಕ ರೂಪಗಳಿಂದ ತುಂಬಿದ್ದರೆ, ಸೂರ್ಯ ಬೇರೆಬೇರೆ ಕಾಲಗಳಲ್ಲಿ ಬೇರೆಬೇರೆ ರೂಪಗಳಿಂದ ಕಾಣಿಸಿಕೊಳ್ಳುತ್ತಾನೆ.
ಇಲ್ಲಿ ನಾವು ಗಮನಿಸಬೇಕಾದ ಒಂದು ವಿಚಾರವೇನೆಂದರೆ: ಪಿಪ್ಪಲಾದರು “ಇದನ್ನು ಋಗ್ವೇದದ ಋಷಿಗಳು ಹೇಳಿದ್ದಾರೆ, ಅವರು ಕಂಡ ಸತ್ಯವನ್ನು ನಾನು ಹೇಳುತ್ತಿದ್ದೇನೆ” ಎಂದಿದ್ದಾರೆ. ಅಧ್ಯಾತ್ಮದಲ್ಲಿ ಯಾವಾಗಲೂ ನನ್ನ ಅನಿಸಿಕೆ ಎಂದು ಹೇಳುವುದಾಗಲೀ, ನನಗೆ ಇದು ಸರಿ ಕಾಣಿಸುತ್ತದೆ ಎನ್ನುವುದು ಸರಿಯಲ್ಲ. ಏಕೆಂದರೆ ನಮ್ಮ ಅನಿಸಿಕೆಯೂ ಸತ್ಯವೂ ಒಂದೇ ಆಗಿರಬೇಕೆಂದೇನೂ ಇಲ್ಲಾ. ನಮಗೆ ಅಸತ್ಯವೂ ಇಷ್ಟವಾಗಬಹುದು. ಆದ್ದರಿಂದ ಅಧ್ಯಾತ್ಮ ಸಾಧನೆಯಲ್ಲಿ ನಾವು ನಿಜವಾದ ಜ್ಞಾನಿಗಳು ಏನನ್ನು ಕಂಡಿದ್ದಾರೆ, ಕಂಡು ಏನನ್ನು ದಾಖಲೆ ಮಾಡಿದ್ದಾರೆ, ಅದರ ಆಧಾರದಲ್ಲಿ ಸತ್ಯವನ್ನು ಕಾಣಲು ಪ್ರಯತ್ನಿಸಬೇಕು.