ಪ್ರಶ್ನೋಪನಿಷತ್ ಕನ್ನಡದಲ್ಲಿ.

ಷಟ್ ಪ್ರಶ್ನ ಉಪನಿಷತ್: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ಉಪನಿಷತ್ ಪ್ರವಚನ ಆಧಾರಿತ. Prashnopanishad in Kannada: Based on Upanishad discourse by Poojya Bannanje Govindacharya
ಚಿತ್ರಕೃಪೆ: ಅಂತರ್ಜಾಲ
ಓದುಗರ ಗಮನಕ್ಕೆ: ತಪ್ಪುಗಳನ್ನು ಸರಿಪಡಿಸಿ ಈ ಕೆಳಗಿನ PDF ಪ್ರತಿಯಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಆದ್ದರಿಂದ ತಾವು PDF ಪ್ರತಿಯನ್ನು ಓದಬೇಕಾಗಿ ನಮ್ರ ವಿನಂತಿ.
Prashnopanishat in Kannada (PDF):

Saturday, November 3, 2012

Prashnopanishad in Kannada-Prashna-IV (03-04)


ಪ್ರಾಣಾಗ್ರಯ ಏವೈತಸ್ಮಿನ್ ಪುರೇ ಜಾಗ್ರತಿ ಗಾರ್ಹಪತ್ಯೋ ಹವಾ ಏಷೋಽಪಾನೋ ವ್ಯಾನೋಽನ್ವಾಹಾರ್ಯಪಚನೋ ಯದ್ ಗಾರ್ಹಪತ್ಯಾತ್ ಪ್ರಣೀಯತೇ ಪ್ರಣಯನಾದಾಹವನೀಯಃ ಪ್ರಾಣಃ ॥೩॥

ನಾವು ಗಾಢ ನಿದ್ದೆ ಮಾಡಿದಾಗಲೂ ಎಚ್ಚರವಾಗಿದ್ದು ಕಾರ್ಯ ನಿರ್ವಹಿಸುವವರು ‘ಪ್ರಾಣದೇವರು ಎನ್ನುವ ಬೆಂಕಿ’ ಎನ್ನುತ್ತಾರೆ ಪಿಪ್ಪಲಾದರು. ಪ್ರಾಣದೇವರು ಎಂದೂ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಆಯಾಸವಾದರೆ ಮಾತ್ರ ವಿಶ್ರಾಂತಿಯ ಅವಶ್ಯಕತೆ. ಆದರೆ ಪ್ರಾಣದೇವರಿಗೆ ಎಂದೂ ಆಯಾಸವಿಲ್ಲ. ಇದನ್ನು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಹೀಗೆ ವಿವರಿಸಿದ್ದಾರೆ: ನೈವಾತ್ರ ವಿಶ್ರಮಣಾಮೈಚ್ಛತ ನಿಃಶ್ರಮೋSಸೌ ನಿಃಸ್ಸೀಮಪೌರುಷಗುಣಸ್ಸ್ಯ ಕುತಃ ಶ್ರಮೋSಸ್ಯ । ಆಶ್ಲಿಷ್ಯ ಪರ್ವತವರಂ ಸ ದದರ್ಶ ಗಚ್ಛನ್ ದೇವೈಸ್ತು ನಾಗಜನ ನೀಂ ಪ್ರಹಿತಾ ವರೇಣ ॥ಮಹಾಭಾರತ ತಾತ್ಪರ್ಯ ನಿರ್ಣಯ ೭.೪॥  ಪ್ರಾಣದೇವರಿಗೆ ಆಯಾಸವೂ ಇಲ್ಲ, ವಿಶ್ರಾಂತಿಯೂ ಇಲ್ಲ. “ಪ್ರಳಯೇ ಅಪಿ ಪ್ರತಿಭಾತ ಪರಾ-ವರಾಹ”-ಅವರು ಪ್ರಳಯಕಾಲದಲ್ಲಿ ಕೂಡಾ ಎಚ್ಚರವಾಗಿದ್ದು, ಸದಾ ಭಗವಂತನನ್ನು ನೆನೆಯುತ್ತಿರುತ್ತಾರೆ.  ಹೀಗೆ ಪ್ರಾಣದೇವರು ಅನಾದಿ ಅನಂತ ಕಾಲದಲ್ಲಿ ವಿಶ್ರಾಂತಿ ಇಲ್ಲದೇ ಕಾರ್ಯಪ್ರವೃತ್ತರಾಗಿರುವ ತತ್ತ್ವ.
ಪ್ರಾಣ ಎಂದರೆ ಬೆಂಕಿ. ಅದು ಬೆಳಕು. ಜ್ಞಾನದ ಪುಂಜ. ದೇಹದಲ್ಲಿ ಪ್ರಾಣದೇವರ ಐದು ರೂಪಗಳು ಸದಾ ಎಚ್ಚರವಾಗಿರುತ್ತವೆ. ಪ್ರಾಣದೇವರು ದೇಹದ ಒಳಗೆ ಅಗ್ನಿಯ ಕಾರ್ಯವನ್ನು ಮಾಡುವುದರಿಂದ  ಅವರನ್ನು ಇಲ್ಲಿ ಅಗ್ನಿ ಎಂದು ಕರೆದಿದ್ದಾರೆ. [“ನಾನು ವೈಶ್ವಾನರ ಅಗ್ನಿಯಾಗಿ ದೇಹದಲ್ಲಿರುವಾಗ ನನಗೆ ಸಹಾಯಕರಾಗಿ ಪ್ರಾಣಾಪಾನರು ಕಾರ್ಯ ನಿರ್ವಹಿಸುತ್ತಾರೆ”  ಎಂದು ಕೃಷ್ಣ ಗೀತೆಯಲ್ಲಿ ಹೇಳಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.]
ಇಲ್ಲಿ ನಮಗೆ ಪಿಪ್ಪಲಾದರ ಮಾತು ಅರ್ಥವಾಗಬೇಕಾದರೆ, ನಮಗೆ ಪಂಚಾಗ್ನಿಯ ಪರಿಚಯವಿರಬೇಕಾಗುತ್ತದೆ. ಹಿಂದೆ ಯಜ್ಞ ಮಾಡುವಾಗ  ಐದು ಕುಂಡಗಳನ್ನು ಮಾಡಿ ಆರಾಧನೆ ಮಾಡುತ್ತಿದ್ದರು.  ಗಾರ್ಹಪತ್ಯ, ಆಹವನೀಯ, ದಕ್ಷಿಣಾಗ್ನಿ ಇವು ತ್ರೇತಾಗ್ನಿಗಳು. ಇದರೊಂದಿಗೆ ಸಭ್ಯ ಮತ್ತು ಆವಸಥ್ಯ ಎನ್ನುವ ಎರಡು ಉಪ ಅಗ್ನಿ ಸೇರಿದಾಗ ಅದು ಪಂಚಾಗ್ನಿ. ಗ್ರಹಸ್ಥರಾದವರು ಮನೆಯಲ್ಲಿ ತಪ್ಪದೇ ಅಗ್ನಿಹೋತ್ರ  ಮಾಡುವುದು ಹಿಂದಿನ ಕ್ರಮವಾಗಿತ್ತು.[ಹಿಂದಿನವರ ಅಗ್ನಿಕಾರ್ಯ ಉಪನಯನ ಆದ ತಕ್ಷಣ ಆರಂಭವಾಗುತ್ತಿತ್ತು. ಅವರು ಪ್ರಯಾಣ ಕಾಲದಲ್ಲಿ ಸಹ ಅಗ್ನಿ ಸಮೇತರಾಗಿ ಪ್ರಯಾಣಿಸುತ್ತಿದ್ದರು. ರಾಮಾಯಣದಲ್ಲಿ “ಕಾಡಿಗೆ ಹೋದ ಶ್ರೀರಾಮನನ್ನು ಮರಳಿ ಕರೆ ತರಲು ಎಲ್ಲಾ ಪುರುಷರು ಅಗ್ನಿಸಮೇತರಾಗಿ ಹೊರಟರು” ಎಂದು ವಾಲ್ಮೀಕಿ ಉಲ್ಲೇಖ ಮಾಡಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಸನ್ಯಾಸಿಗಳಿಗೆ ಅಗ್ನಿಕಾರ್ಯವಿಲ್ಲ. ಅವರು  ಅಗ್ನಿ ತ್ಯಾಗಿಗಳು. ಜ್ಞಾನಾಗ್ನಿಯೇ ಅವರ ಅಗ್ನಿ ]. ಮನೆಯಲ್ಲಿ ನಿತ್ಯಪೂಜೆಯ ಹೋಮಕ್ಕೆ ಬಳಸುವ ಅಗ್ನಿ ಗಾರ್ಹಪತ್ಯ. ಇದು ನಂದದೇ ನಿತ್ಯ ಉರಿಯುವ ಬೆಂಕಿ. ವಿಶೇಷಯಜ್ಞ ಮಾಡುವಾಗ ಗಾರ್ಹಪತ್ಯದಿಂದ ಪ್ರಜ್ವಲಿಸುವ ಬೆಂಕಿಯನ್ನು ತಂದು ಇನ್ನೊಂದು ಕುಂಡದಲ್ಲಿ ಅಗ್ನಿ ಸ್ಥಾಪನೆ ಮಾಡುತ್ತಾರೆ. ಅದನ್ನು ಆಹವನೀಯ ಎನ್ನುತ್ತಾರೆ. ಪ್ರತಿಯೊಂದು ಶುಭಕರ್ಮ ಮಾಡುವಾಗ ದೇವತೆಗಳ ಆರಾಧನೆಯ ಜೊತೆಗೆ ಪಿತೃಆರಾಧನೆ ಮಾಡಬೇಕು. ಅದಕ್ಕೆ ನಾಂದಿ ಅಥವಾ ನಾಂದಿಶ್ರಾದ್ಧ ಎಂದೂ ಕರೆಯುತ್ತಾರೆ. ಹಾಗಾಗಿ ಪ್ರತಿಯೊಂದು ಯಜ್ಞದಲ್ಲೂ ಕೂಡಾ ಪಿತೃದೇವತೆಗಳ ಆರಾಧನೆ ಮಾಡುವುದು ಕ್ರಮ. ಪಿತೃಗಳಿಗೆ ಆಹುತಿ ಕೊಡಲು ಗಾರ್ಹಪತ್ಯದಿಂದ ತುಂಡು ಬೆಂಕಿಯನ್ನು(ಕೆಂಡವನ್ನು) ತಂದು, ತೆಂಕುಬದಿಯ ಕುಂಡದಲ್ಲಿ ಅಗ್ನಿ ಸ್ಥಾಪನೆ ಮಾಡುತ್ತಾರೆ. ಅದನ್ನು ದಕ್ಷಿಣಾಗ್ನಿ ಎನ್ನುತ್ತಾರೆ. ಹೀಗೆ ಗಾರ್ಹಪತ್ಯ, ಆಹವನೀಯ, ದಕ್ಷಿಣಾಗ್ನಿ ಇವು ತ್ರೇತಾಗ್ನಿಗಳು.
ಪ್ರಾಣದೇವರು ಪಂಚರೂಪದಿಂದ ದೇಹವನ್ನು ರಕ್ಷಣೆ ಮಾಡುವ ಅಗ್ನಿ. ಆದ್ದರಿಂದ ಐದು ಪ್ರಾಣಾಗ್ನಿ ದೇಹದ ಒಳಗಾದರೆ ಐದು ಅಗ್ನಿ  (ಪಂಚಾಗ್ನಿ) ದೇಹದಿಂದ ಹೊರಗೆ. ನಮ್ಮ ಮೂಲಾಧಾರದಲ್ಲಿರುವ ಅಪಾನವಾಯು ಇಡೀ ದೇಹದ ವ್ಯವಸ್ಥೆಗೆ ಮೂಲಶಕ್ತಿ. ಆದ್ದರಿಂದ ಅವನೇ  ಗಾರ್ಹಪತ್ಯಾಗ್ನಿ. ಆತನ ನಂತರ ನಮ್ಮ ನರನಾಡಿಗಳಲ್ಲಿ ಹರಿದು ನಮ್ಮ ನೆತ್ತರನ್ನು ಶುದ್ಧಗೊಳಿಸುವ ವ್ಯಾನನೇ ದಕ್ಷಿಣಾಗ್ನಿ. [ದಕ್ಷಿಣಾಗ್ನಿಯನ್ನು ಗಾರ್ಹಪತ್ಯಾಗ್ನಿಯ ತುಂಡು ಬೆಂಕಿಯಿಂದ ಸ್ಥಾಪನೆ ಮಾಡುತ್ತಾರೆ. ವಿಭಜ್ಯ(ವಿ)+ಆನಯತಿ(ಆ)->ವ್ಯಾನಃ]. ನಮ್ಮ ಊರ್ಧ್ವಭಾಗದ ನಿಯಂತ್ರಣ ಮಾಡುವ ಪ್ರಾಣಃ ಆಹವನೀಯಾಗ್ನಿ.  [ಗಾರ್ಹಪತ್ಯದಿಂದ ಪ್ರಜ್ವಲಿಸುತ್ತಾ ತರಲ್ಪಡುವ ಆಹವನೀಯ  ಪ್ರಜ್ವಲಂ(ಪ್ರ)+ಆನಯತಿ(ಆ)->ಪ್ರಾಣಃ].
ಹಿಂದೆ ಹೇಳಿದಂತೆ ನಮ್ಮ ದೇಹದಲ್ಲಿ ಪ್ರಾಣಃ ಮುಖ್ಯವಾಗಿ ಮುಖದಲ್ಲಿನ ಇಂದ್ರಿಯ ನಿರ್ವಹಣೆ ಮಾಡುತ್ತಾನೆ. ನಮ್ಮ ದೇಹದಲ್ಲಿ  ಮುಖ್ಯವಾಗಿ ಎಲ್ಲಾ ವಿಷಯಗಳ ಹೋಮ ನಡೆಯುವುದು ಮುಖದಲ್ಲಿ. ಕಣ್ಣಿನಲ್ಲಿ-ರೂಪದಹೋಮ, ಕಿವಿಯಲ್ಲಿ-ಶಬ್ದದಹೋಮ, ಮೂಗಿನಲ್ಲಿ-ಗಂಧದಹೋಮ, ಬಾಯಿಯಲ್ಲಿ-ಅನ್ನದಹೋಮ. ಇದೇ ರೀತಿ ಬಾಹ್ಯ ಯಜ್ಞದಲ್ಲಿ ಆಹುತಿ ಕೊಡುವಂತಹ ಜ್ವಲನಶಕ್ತಿ ಇರುವುದು ಪ್ರಾಣನಿಗೆ. ಆದ್ದರಿಂದ ಪ್ರಧಾನ ಹೋಮ ನಡೆಯುವುದು ಆಹವನೀಯಾಗ್ನಿಯಲ್ಲಿ. ಹೀಗೆ ಇಲ್ಲಿ ಪಿಪ್ಪಲಾದರು ತ್ರೇತಾಗ್ನಿ ಮತ್ತು ಅದಕ್ಕೆ ಸಂಬಂಧಸಿದ ಅಂತರಂಗದ ಮುಖ್ಯಪ್ರಾಣ ದೇವರ ಮೂರು ರೂಪಗಳನ್ನು ವಿವರಿಸಿದರು. ಮುಂದೆ ಪಿಪ್ಪಲಾದರು ಮುಖ್ಯಪ್ರಾಣ ದೇವರ ಇನ್ನೆರಡು ರೂಪವನ್ನು ಭಿನ್ನ ಮುಖದಲ್ಲಿ ವಿವರಿಸುವುದನ್ನು ಕಾಣಬಹುದು.        

ಯದುಚ್ಛ್ವಾಸನಿಃ ಶ್ವಾಸಾವೇತಾವಾಹುತಿ ಸಮಂ ನಯತೀತಿ ಸ  ಸಮಾನೋ  ಮನೋ ಹ ವಾವ ಯಜಮಾನ  ಇಷ್ಟಫಲಮೇವೋದಾನಃ ।  ಸ ಏನಂ ಯಜಮಾನಮಹರಹರ್ಬ್ರಹ್ಮ ಗಮಯತಿ ॥೪॥

ಉಚ್ಛ್ವಾಸ ಮತ್ತು ನಿಶ್ವಾಸ ಕೂಡಾ ಪ್ರಾಣದೇವರ ಎರಡು ಆಹುತಿ. ಈ ಆಹುತಿ ದೇಹದಲ್ಲಿರುವ ಸಮಸ್ತ ಅಂಗಾಂಗಗಳಿಗೂ ಅನ್ವಯಪಡುವುದರಿಂದ ಮತ್ತು ಅದನ್ನು ಪ್ರಾಣದೇವರು ಸಮವಾಗಿ ಹಂಚುವುದರಿಂದ, ಅವರಿಗೆ ಸಮಾನ ಎಂದು ಹೆಸರು. ಅಗ್ನಿಹೊತ್ರದಲ್ಲಿ ಅಗ್ನಿಯೇ ಸಮಾನನಾಗಿ ಕೆಲಸ ಮಾಡುವ ಒಂದು ವಿಧಾನವಿದೆ. ಇದನ್ನು ತಿಳಿಯಲು ನಾವು ಅಗ್ನಿಹೋತ್ರದ ಒಂದು ಅದ್ಭುತ ವಿಚಾರವನ್ನು ತಿಳಿದಿರಬೇಕು. ಬನ್ನಿ, ಅಗ್ನಿಹೊತ್ರದ ಷೋಡಶ ಕಲೆಗಳ ಕುರಿತು ತಿಳಿದು, ‘ಸಮಾನ’ ನಾಮಕ ಪ್ರಾಣದೇವರ ಕಾರ್ಯವ್ಯಾಪ್ತಿಯನ್ನರಿಯೋಣ.
ಅಗ್ನಿಹೊತ್ರದಲ್ಲಿ ಪ್ರಧಾನ ಆಹುತಿ ‘ಹಸುವಿನ ಹಾಲು’. ಇಲ್ಲಿ ಮನೆಯಲ್ಲಿ ಸಾಕಿದ ಹಸುವಿನ ಹಾಲನ್ನು ಕರೆದು ಕಾಯಿಸಿ ಅರ್ಪಣೆ ಮಾಡುತ್ತಾರೆ. ಈ ರೀತಿ ಅರ್ಪಣೆ ಮಾಡಲು ಒಟ್ಟು ಹದಿನಾರು ಹಂತಗಳನ್ನು ಅನುಸರಿಸಲಾಗುತ್ತದೆ ಮತ್ತು ಪ್ರತೀ ಹಂತಕ್ಕೂ ಒಬ್ಬ ದೇವತೆ ಇರುತ್ತಾನೆ. ಮೊದಲು ಹಾಲು ದನದ ಕೆಚ್ಚಲಿನಲ್ಲಿರುತ್ತದೆ. ಐತರೇಯ ಆರಣ್ಯಕದಲ್ಲಿ ಹೇಳುವಂತೆ ‘ರೌದ್ರಂ ಗವಿಸತ್’. ಕೆಚ್ಚಲಲ್ಲಿರುವ ಹಾಲಿಗೆ ರುದ್ರದೇವರು ದೇವತೆ. ನಂತರ ಹಾಲನ್ನು ಕರೆಯುವುದಕ್ಕಾಗಿ ಕರುವನ್ನು ಬಿಡುತ್ತೇವೆ. ಕೆಚ್ಚಲಿಗೆ ಕರು ಬಾಯಿ ಹಾಕುವಾಗ ಅದರ ದೇವತೆ ವಾಯು. ನಂತರ ಹಾಲು ಕರೆಯುವುದು; ಕೆಚ್ಚಲಿನಿಂದ ಪಾತ್ರೆಗೆ ಹಾಲು ಬೀಳುವ ಹಂತದ   ದೇವತೆ ಅಶ್ವಿನೀ ದೇವತೆಗಳು. ಆನಂತರ ಪಾತ್ರೆಯಲ್ಲಿ ಹಾಲು ತುಂಬುತ್ತದೆ. ‘ಸೌಮ್ಯಂ ದುಗ್ಧಂ’ – ಹಾಲುತುಂಬಿದ ಪಾತ್ರೆಯ ದೇವತೆ ಚಂದ್ರ. ಈ ಹಾಲನ್ನು ಒಲೆಯ ಮೇಲೆ ಇಟ್ಟೆವು; ಈ ಹಂತದ   ದೇವತೆ ವರುಣ. ಒಲೆಯ ಮೇಲಿಟ್ಟಿರುವ ಹಾಲು ಉಕ್ಕುತ್ತದೆ. ಉಕ್ಕುವ ಹಾಲಿನ ದೇವತೆ ಆದಿತ್ಯ(ಪೂಷಾ). ಹಾಲು ಉಕ್ಕಿ ಕೆಳಕ್ಕೆ ಹರಿಯಿತು; ಈ ಉಕ್ಕಿ ಹರಿಯುವ ಹಾಲಿನ ದೇವತೆ ಮರುತ್ತು. [ಹಾಲು ಉಕ್ಕಿ ಹರಿಯಬೇಕು, ಅದು ಪರಮ ಮಾಂಗಲಿಕ. ಇದಕ್ಕಾಗಿ ಗೃಹ ಪ್ರವೇಶಕಾಲದಲ್ಲಿ ಹಾಲನ್ನು ಉಕ್ಕಿಸುತ್ತಾರೆ]. ಹಾಲು ಉಕ್ಕಿದಮೇಲೆ ಬೆಂಕಿ ಕಡಿಮೆ ಮಾಡುತ್ತೇವೆ. ಆಗ ಹಾಲಿನ ಮೇಲೆ ಸಣ್ಣಸಣ್ಣ ಬಿಂದುಗಳು ಕಾಣಿಸಿಕೊಳ್ಳುತ್ತವೆ. ಈ ರೀತಿ ಚುಕ್ಕೆಬಿದ್ದ ಹಾಲಿಗೆ ದೇವತೆ ವಿಶ್ವೇದೇವತೆಗಳು. ಆ ನಂತರ ಚುಕ್ಕೆ ಹೋಗಿ ಕೆನೆ ಕಾಣಿಸಿಕೊಳ್ಳುತ್ತದೆ. ಕೆನೆ ಕಟ್ಟಿದ ಹಾಲಿಗೆ ಮಿತ್ರ ನಾಮಕ ಆದಿತ್ಯ ದೇವತೆ. ಇಂತಹ ಹಾಲನ್ನು ಒಲೆಯಿಂದ ಕೆಳಗಿಳಿಸುತ್ತೇವೆ. ಹೀಗೆ ಕೆಳಕ್ಕಿಟ್ಟ ಹಾಲಿಗೆ ದ್ಯಾವಾ-ಪ್ರಥ್ವೀ ದೇವತೆಗಳು. ಹಾಲು ತಣ್ಣಗಾದ ಮೇಲೆ ಅದನ್ನು ಎತ್ತಿಕೊಂಡು ಹೋಗುತ್ತೇವೆ. ಆ ಹಂತದಲ್ಲಿ ಸವಿತ್ರ ಅದರ ದೇವತೆ. ಈ ಹಾಲನ್ನು ಯಜ್ಞಶಾಲೆಯೊಳಗೆ ವಯ್ಯುತ್ತೇವೆ. ಆಗ ಸ್ವಯಂ ವಿಷ್ಣು ಅದರ ದೇವತೆ. ಇಂತಹ ಹಾಲನ್ನು ಪುರೋಹಿತರ ಪಕ್ಕದಲ್ಲಿ ಇಟ್ಟೆವು. ಆಗ ಅದಕ್ಕೆ ಬೃಹಸ್ಪತಿ ದೇವತೆ. ನಂತರ ಮೊದಲನೇ ಆಹುತಿ. ಆ ಆಹುತಿಯ ದೇವತೆ  ಅಗ್ನಿ [ಅಗ್ನಯೇ ಪೂರ್ವಾಹುತಿಃ]. ‘ಅಗ್ನಯೇ ಸ್ವಾಹಾ-ಅಗ್ನಯ ಇದಂ ನ ಮಮ’ ಎಂದು ಆಹುತಿ ಕೊಡುವುದು. ನಂತರ - ಪ್ರಜಾಪತೆಯೇ ಸ್ವಾಹ ಪ್ರಜಾಪತಯ ಇದಂ ನ ಮಮ ಎಂದು ಆಹುತಿ ಕೊಡುತ್ತಾರೆ. ಕೊನೆಯದಾಗಿ  ‘ಇಂದ್ರಮ್ ಹುತಮ್’- ಎಂದು ಇಂದ್ರನಿಗೆ ಆಹುತಿ ಕೊಡುತ್ತಾರೆ. ಈತ ಹದಿನಾರನೇ ದೇವತೆ.  ಇವಿಷ್ಟು ಅಗ್ನಿಹೊತ್ರದ ಷೋಡಶ ಕಲೆಗಳು. ಏತದ್ವಾ ಅಗ್ನಿಹೋತ್ರಂ ವೈಶ್ವೇದೇವಂ ಷೋಡಶಕಲಮ್ ಎಂದು ಐತರೇಯ ಹೇಳುತ್ತದೆ. ಈ ಹದಿನಾರು ಕಲೆಗಳಲ್ಲಿ ಸಮಾನವಾಗಿ ಎಲ್ಲಾ ಕಲಾ ದೇವತೆಗಳಿಗೂ ಆಹುತಿಯನ್ನು ಮುಟ್ಟಿಸುವವ ಅಗ್ನಿ. ಆತನನ್ನು  ಹುತವಃ ಎಂದು ಕರೆಯುತ್ತಾರೆ.  ಇದೇ ರೀತಿ ದೇಹದಲ್ಲಿ ಉಚ್ಛ್ವಾಸ ಮತ್ತು ನಿಶ್ವಾಸ ಪೂರ್ವಾಪರ ಆಹುತಿಗಳು. ಈ ಆಹುತಿಯನ್ನು ಸಮನಾಗಿ ದೇಹದ ಅಂಗಾಂಗಗಳಿಗೆ ತಲುಪಿಸುವವರು ಸಮಾನ ನಾಮಕ ಮುಖ್ಯಪ್ರಾಣದೇವರು.
ಸಮಾನನ ನಂತರ ಉದಾನನ ಕುರಿತು ವಿವರಿಸುತ್ತಾ ಪಿಪ್ಪಲಾದರು ಹೇಳುತ್ತಾರೆ: “ಇಷ್ಟಫಲಮೇವೋದಾನಃ” ಎಂದು. ನಾವು ಕೊಡುವ ಆಹುತಿಯಿಂದ ಬರುವ ಪುಣ್ಯಫಲವನ್ನು ಕೊಡುವವ ಉದಾನ. [ಉತ್+ಆನಯತಿ=ಮೇಲಕ್ಕೆ ಕರೆದುಕೊಂಡು ಹೋಗುವವ->ಉದಾನ]. ಪುಣ್ಯದ ಸುಖವನ್ನು ಅನುಭವಿಸುವುದಕ್ಕೊಸ್ಕರ ಊರ್ಧ್ವಲೋಕಕ್ಕೆ ಕೊಂಡೊಯ್ಯುವವನು ಉದಾನ. ಬಾಹ್ಯವಾಗಿ ಅಗ್ನಿಯೂ ಕೂಡ ಪುಣ್ಯಫಲವನ್ನು ಕೊಡುವುದಕ್ಕೊಸ್ಕರ ನಮ್ಮನ್ನು ಊರ್ಧ್ವಲೋಕಕ್ಕೆ ವಯ್ಯುತ್ತಾನೆ.
ಉದಾನ ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾನೆ ಎಂದರೆ-“ಕೊನೇಗೆ ವೈಕುಂಠ ಲೋಕಕ್ಕೆ ಕರೆದುಕೊಂಡು ಹೋಗಬಹುದು” ಎಂದುಕೊಂಡರೆ, ಇಲ್ಲಿ ಪಿಪ್ಪಲಾದರು ಹೇಳುತ್ತಾರೆ: “ಸ ಏನಂ ಯಜಮಾನಮಹರಹರ್ಬ್ರಹ್ಮ ಗಮಯತಿ” - ಪ್ರತಿ ದಿನವೂ ಪ್ರಾಣದೇವರು ನಿಮ್ಮನ್ನು ದೇವರ ಬಳಿ ಕೊಂಡೊಯ್ಯುತ್ತಾರೆ” ಎಂದು. ಪ್ರತಿ ದಿನವೂ ಜೀವ ನಿದ್ರೆಯಲ್ಲಿ ತನ್ನ ಹೃದಯದಲ್ಲಿರುವ ಭಗವಂತನನ್ನು ಸೇರುತ್ತಾನೆ. ಆತನನ್ನು ಅಲ್ಲಿಗೆ ಕರೆದುಕೊಂಡು ಹೋಗುವವರು ಉದಾನ ನಾಮಕ ಪ್ರಾಣದೇವರು. ಹೀಗೆ ಪ್ರತಿದಿನವೂ ನಿದ್ರೆಯಲ್ಲಿ ತಾನು ಎಚ್ಚರವಾಗಿದ್ದು, ನಮ್ಮನ್ನು ಭಗವಂತನ ಬಳಿ ಕರೆದುಕೊಂಡು ಹೋಗಿ, ನಿದ್ರೆಯ ಸುಖವನ್ನು ಕೊಡುವವರು ಪ್ರಾಣದೇವರು. ಇದೇ ಅವರು ನಮಗೆ ಕೊಡುವ ಇಷ್ಟಫಲ. ಹೀಗೆ ಎಚ್ಚರ ಅನ್ನುವುದೇ ಒಂದು ಯಜ್ಞ ಹಾಗೂ ನಿದ್ದೆ ಎನ್ನುವುದೇ ಆ ಯಜ್ಞದ ಇಷ್ಟಫಲ. ಎಚ್ಚರದಲ್ಲಿ ಮಾಡಿದ ಯಜ್ಞದ ಫಲವಾಗಿ ಜೀವ ನಿದ್ರೆಯಲ್ಲಿ ಭಗವಂತನ ಸಮೀಪದಲ್ಲಿ ಕುಳಿತು ಆನಂದಾನುಭವವನ್ನು ಪಡೆಯುತ್ತದೆ. ಇದೊಂದು ಅತ್ಯಂತ ಅಪೂರ್ವವಾದ  ಜೀವನಯಜ್ಞ. ಈ ಯಜ್ಞವನ್ನು  ನಡೆಸುವವರು ನಾವಲ್ಲ,  ನಮ್ಮೊಳಗೆ ಪಂಚರೂಪದಲ್ಲಿದ್ದು ನಿರಂತರ ಎಚ್ಚರ-ಕನಸುಗಳಲ್ಲಿ ಜೀವನಯಜ್ಞ ನಡೆಸುವವರು ಉದಾನ ನಾಮಕ ಪ್ರಾಣತತ್ತ್ವ.
ಎಲ್ಲಾ ಸರಿ, ಇಲ್ಲಿ ಯಜ್ಞದ ಯಜಮಾನ ಯಾರು  ಎನ್ನುವುದು ನಿಮ್ಮ ಪ್ರಶ್ನೆಯಾಗಿದ್ದರೆ ಅದಕ್ಕೆ ಪಿಪ್ಪಲಾದರು ಇಲ್ಲಿ ಉತ್ತರಿಸಿದ್ದಾರೆ.  ಪಿಪ್ಪಲಾದರು ಹೇಳುತ್ತಾರೆ: “ಮನೋ ಹ ವಾವ ಯಜಮಾನಃ ಎಂದು. ಇಲ್ಲಿ ಮನಸ್ಸು ಎಂದರೆ ಮನನಶೀಲವಾದ ಜೀವ. ಈ ‘ಜೀವ’ನ ಮೂಲಕ ದೇವತಾಶಕ್ತಿಗಳು ಯಜ್ಞ ಮಾಡಿಸುತ್ತಾರೆ. ಮಾಡಿದ ಯಜ್ಞದ ಫಲವಾಗಿ  ಉದಾನ ‘ಜೀವ’ನನ್ನು ಪ್ರತಿದಿನ ಭಗವಂತನ ಬಳಿ ಕರೆದುಕೊಂಡುಹೋಗಿ ಆನಂದದ ಅನುಭವನ್ನು ನೀಡುತ್ತಾನೆ. ಹೀಗೆ ನಮ್ಮೊಳಗೆ ಪಂಚರೂಪದಲ್ಲಿ ಪಂಚಾಗ್ನಿಯಾಗಿ ಪ್ರಾಣದೇವರು ನಿರಂತರ ಕಾರ್ಯನಿರ್ವಹಿಸುತ್ತಿರುತ್ತಾರೆ.    

Friday, November 2, 2012

Prashnopanishad in Kannada-Prashna-IV (01-02)


ಅಥ ಚತುರ್ಥಃ ಪ್ರಶ್ನಃ

ಇಲ್ಲಿಯ ತನಕ  ಪ್ರಾಣ ದೇವರು ಭೌತಿಕವಾಗಿ, ಪ್ರಾಪಂಚಿಕವಾಗಿ, ಆಧ್ಯಾತ್ಮಿಕವಾಗಿ, ಹುಟ್ಟಿನಲ್ಲಿ, ಸಾವಿನಲ್ಲಿ ಮತ್ತು  ಬದುಕಿನಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಎಲ್ಲವನ್ನೂ ಹೇಗೆ ನಿಯಂತ್ರಿಸುತ್ತಾರೆ ಎನ್ನುವುದನ್ನು ಪಿಪ್ಪಲಾದರು ವಿವರಿಸಿದರು. ಈ ಎಲ್ಲಾ ವಿವರಣೆಯನ್ನು ಕೇಳಿದ ‘ಸೌರ್ಯಾಯಣಿ ಗಾರ್ಗ್ಯಃರು’ ನಮ್ಮ ನಿದ್ದೆ  ಹಾಗೂ  ಕನಸಿನ ಮನಃಶಾಸ್ತ ಮತ್ತು ಅದರ ಹಿಂದಿನ ವಿಜ್ಞಾನವನ್ನು ತಿಳಿಯಬಯಸಿ ಮುಂದಿನ ಪ್ರಶ್ನೆ ಕೇಳುವುದರೊಂದಿಗೆ ಪ್ರಶ್ನೋಪನಿಷತ್ತಿನ ನಾಲ್ಕನೇ ಅಧ್ಯಾಯ ಆರಂಭವಾಗುತ್ತದೆ.  ಪ್ರೀತಿಯ ಅಧ್ಯಾತ್ಮ ಬಂಧುಗಳೇ, ಬನ್ನಿ, ಎಲ್ಲಿಯೂ ಕಾಣಸಿಗದ ಈ ಅಪೂರ್ವ ವಿಷಯವನ್ನು ಪ್ರಾಣದೇವರ ಮತ್ತು ಪ್ರಾಣಾಂತರ್ಗತ ಭಗವಂತನ ಕೃಪೆ ಬೇಡಿ,  ಆರು ಋಷಿಗಳ ಜೊತೆ ಸೇರಿ ಪಿಪ್ಪಲಾದರಿಂದ ಕೇಳಿ ತಿಳಿಯೋಣ.

ಅಥ ಹೈನಂ ಸೌರ್ಯಾಯಣಿ ಗಾರ್ಗ್ಯಃ ಪಪ್ರಚ್ಛ ।  ಭಗವನ್ನೇತಸ್ಮಿನ್ ಪುರುಷೇ ಕಾನಿ ಸ್ವಪಂತಿ ಕಾನ್ಯಸ್ಮಿನ್ ಜಾಗ್ರತಿ ಕತರ ಏಷ ದೇವಃ ಸ್ವಪ್ನಾನ್ ಪಶ್ಯತಿ । ಕಸ್ಯೈತತ್  ಸುಖಂ ಭವತಿ । ಕಸ್ಮಿನ್ನು ಸರ್ವೇ ಸಂಪ್ರತಿಷ್ಠಿತಾ ಭವಂತೀತಿ ॥೧॥

ಸೌರ್ಯಾಯಣಿ ಗಾರ್ಗ್ಯಃರು’ ಪಿಪ್ಪಲಾದರ ಮುಂದೆ ತಮ್ಮ ಪ್ರಶ್ನೆಯನ್ನು ನಿವೇದಿಸಿಕೊಳ್ಳುತ್ತಾರೆ. ಅವರು ಕೇಳುವ ಪ್ರಶ್ನೆ ಹೀಗಿದೆ: ಎಚ್ಚರ-ಕನಸು-ನಿದ್ದೆ ಇವು ನಾವು ಅನುಭವಿಸುವ ಮೂರು ಅವಸ್ಥೆಗಳು. ನಮ್ಮ ದೇಹದಲ್ಲಿ ನಮ್ಮ ಇಂದ್ರಿಯಗಳನ್ನು ನಿಯಂತ್ರಿಸುವ ತತ್ತ್ವಾಭಿಮಾನಿ ದೇವತೆಗಳಿದ್ದಾರೆ. ನಾವು ಎಚ್ಚರವಾಗಿದ್ದಾಗ ಈ ತತ್ತ್ವಾಭಿಮಾನಿ ದೇವತೆಗಳು ತಮ್ಮ ಕಾರ್ಯನಿರ್ವಹಿಸಿ ನಮಗೆ ಇಂದ್ರಿಯಾನುಭವವನ್ನು ಕೊಡುತ್ತಾರೆ. ನಾವು ಪೂರ್ಣನಿದ್ರಾವಸ್ಥೆಯಲ್ಲಿದ್ದಾಗ[Deep Sleep] ನಮ್ಮ ದೇಹವನ್ನು ನಿಯಂತ್ರಿಸುವ ಯಾವ ದೇವತೆಗಳು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ? ನಾವು ನಿದ್ದೆ ಮಾಡಿದಾಗಲೂ ಎಚ್ಚರವಾಗಿದ್ದು ಈ ದೇಹವನ್ನು ನಿಯಂತ್ರಿಸುವ ದೇವತೆಗಳು ಯಾರು? ನಿದ್ದೆಯಲ್ಲೂ ಜೀವನನ್ನು ಬದುಕಿಸಿ ಜೀವದಾನ ಮಾಡುವ ಶಕ್ತಿ ಯಾವುದು? ಇದು ಗಾರ್ಗ್ಯಃರ ಪ್ರಶ್ನೆ.
ಮುಂದುವರಿದು ಗಾರ್ಗ್ಯಃರು ಕನಸಿನ ಸ್ಥಿತಿಯ ಬಗ್ಗೆ ತಮ್ಮ ಪ್ರಶ್ನೆಯನ್ನು ಪಿಪ್ಪಲಾದರ ಮುಂದೆ ಪ್ರಸ್ತಾಪಿಸುತ್ತಾರೆ. ಎಚ್ಚರವೂ ಅಲ್ಲದ, ನಿದ್ದೆಯೂ ಅಲ್ಲದ ಮೂರನೇ ಸ್ಥಿತಿ ‘ಕನಸಿನ’ ಸ್ಥಿತಿ. ಈ ಕನಸಿನ ಪ್ರಪಂಚ ಬಹಳ ವಿಸ್ಮಯ. ನಾವು ಎಚ್ಚರದಲ್ಲಿ ಕಾಣಲು ಸಾಧ್ಯವೇ ಇಲ್ಲದ ವಿಷಯವನ್ನು ಕನಸಿನಲ್ಲಿ ಕಾಣುತ್ತೇವೆ. ನಾವು ಬಯಸಿದಂತೆ ನಮ್ಮ ಕನಸಿರುವುದಿಲ್ಲ. ನಮಗೆ ನಮ್ಮ ಕನಸಿನ ಮೇಲೆ ನಿಯಂತ್ರಣವಿಲ್ಲ. ಕೆಲವೊಮ್ಮೆ ನಮ್ಮ ಜೀವನದಲ್ಲಿ ಮುಂದೆ ನಡೆಯಬಹುದಾದ ವಿಷಯವನ್ನು ಕನಸಿನರೂಪದಲ್ಲಿ ಕಾಣುತ್ತೇವೆ. ಇನ್ನು ಕೆಲವೊಮ್ಮೆ ಅರ್ಥಶೂನ್ಯ ಕನಸುಗಳನ್ನೂ ಕಾಣುತ್ತೇವೆ. ಈ ಕಾಣದ ಪ್ರಪಂಚವನ್ನು ನಮಗೆ ಕಾಣಿಸುವವರು ಯಾರು? ಯಾವ ದೇವತಾ ಶಕ್ತಿ ನಮಗೆ ಕನಸಿನ ಅನುಭವವನ್ನು ಕೊಡುತ್ತದೆ?
ಸಾಮಾನ್ಯವಾಗಿ ನಾವು ಒಳ್ಳೆಯ ನಿದ್ದೆ ಮಾಡಿ ಎದ್ದಾಗ “ಬಹಳ ಆನಂದವಾಗಿ ನಿದ್ರಿಸಿದೆ” ಎನ್ನುತ್ತೇವೆ. ಕನಸಿನಲ್ಲಿ ದುಃಖ ಪಡಬಹುದು, ಆದರೆ ನಿದ್ದೆಯಲ್ಲಿ ಯಾರೂ ದುಃಖ ಪಡುವುದಿಲ್ಲ. ಜೀವನಿಗೆ ಸುಖದ ಅನುಭವವಾಗುವುದು ಇಂದ್ರಿಯಾನುಭವದಿಂದ. [ನೋಡುವುದು, ಕೇಳುವುದು, ಮುಟ್ಟುವುದು, ತಿನ್ನುವುದು ಇತ್ಯಾದಿ]  ನಿದ್ದೆಯಲ್ಲಿ ನಮಗೆ ಇಂದ್ರಿಯಾನುಭವ ಇರುವುದಿಲ್ಲ. ನಿದ್ದೆಯಲ್ಲಿ ಇಂದ್ರಿಯ ಮತ್ತು ಮನಸ್ಸು ಎರಡೂ ಕಾರ್ಯ ನಿರ್ವಹಿಸುವುದಿಲ್ಲ. ಹೀಗಿರುವಾಗ ಆನಂದ ಆಗುವುದು ಹೇಗೆ? ಈ ಆನಂದವನ್ನು ನೀಡುವವರು ಯಾರು? ನಾವು ನಿದ್ದೆ ಮಾಡಿದಾಗ ನಮ್ಮ ಇಂದ್ರಿಯಾಭಿಮಾನಿ ದೇವತೆಗಳು ಏನಾಗುತ್ತಾರೆ? ಅವರೇಕೆ ಕೆಲಸ ಮಾಡುವುದಿಲ್ಲ? ನಿದ್ದೆಯಲ್ಲಿ ನಮಗೆ ತಿಳಿಯದೇ ಅನೇಕ ಕ್ರಿಯೆಗಳು ನಡೆಯುತ್ತವೆ [ಉದಾಹರಣೆಗೆ: ಜೀರ್ಣಕ್ರಿಯೆ, ಉಸಿರಾಟ]. ನಾವು ನಿದ್ರಿಸಿದಾಗ ಎಚ್ಚರವಾಗಿದ್ದು ಈ  ಕ್ರಿಯೆಗಳನ್ನು ಮಾಡಿ ನಮ್ಮನ್ನು ರಕ್ಷಿಸುವ ಶಕ್ತಿ ಯಾವುದು? ಇದು ಪ್ರಶ್ನೋಪನಿಷತ್ತಿನ ನಾಲ್ಕನೇ ಪ್ರಶ್ನೆ. ಈ ಪ್ರಶ್ನೆ ಅಪೂರ್ವವಾದುದು ಮತ್ತು     ಈ ಪ್ರಶ್ನೆಯ ಉತ್ತರ ಆನಂದ ತರುವಂತಹದ್ದು ಎನ್ನುವುದನ್ನು ಇಲ್ಲಿ ಬಳಸಿರುವ[ಅಥ ಹೈನಂ ಎನ್ನುವಲ್ಲಿ]  ‘ಹ’ಕಾರ ಸೂಚಿಸುತ್ತದೆ. 

ತಸ್ಮೈ ಸ ಹೋವಾಚ ।  ಯಥ ಗಾರ್ಗ್ಯ ಮರೀಚಯೋಽರ್ಕಸ್ಯಾಸ್ತಂ ಗಚ್ಛತಃ ಸರ್ವಾ ಏತಸ್ಮಿಂಸ್ತೇಜೋಮಂಡಲ ಏಕೀಭವಂತಿ ।  ತಾಃ ಪುನರುದಯತಃ ಪ್ರಚರಂತ್ಯೇವಂ ಹ ವೈ ತತ್ ಸರ್ವಂ ಪರೇ ದೇವೇ ಮನಸ್ಯೇಕೀಭವತಿ ।
ತೇನ ತರ್ಹ್ಯೇಷ ಪುರುಷೋ ನ ಶೃಣೋತಿ ನ ಪಶ್ಯತಿ ನ ಜಿಘ್ರತಿ ನ ರಸಯತೇ ನ ಸ್ಪೃಶತೇ ನಾಭಿವದತೇ ನಾSದತ್ತೇ ನಾSನಂದಯತೇ ನ ವಿಸೃಜತೇ ನೇಯಾಯತೇ ಸ್ವಪಿತೀತ್ಯಾಚಕ್ಷತೇ ॥೨॥

ಗಾರ್ಗ್ಯಃರ ಪ್ರಶ್ನೆಗೆ ಇಲ್ಲಿ ಪಿಪ್ಪಲಾದರು ಕೊಡುವ ಉತ್ತರ ಅಪೂರ್ವವಾದುದು(‘ತಸ್ಮೈ ಸ ಹೋವಾಚ’  ಎನ್ನುವಲ್ಲಿ ಹ-ಕಾರ ಈ ಅಪೂರ್ವತೆಯನ್ನು ಸೂಚಿಸುತ್ತದೆ). ನಾವು ನಿತ್ಯವೂ ಅನುಭವಿಸುವ, ಆದರೂ ನಮಗೆ ತಿಳಿಯದ; ಎಂದೂ ಯೋಚಿಸದ; ನಾವು ಯೋಚಿಸಲೇ ಇಲ್ಲವಲ್ಲಾ ಎಂದು ಗಾಬರಿಗೊಳಿಸುವ ಮತ್ತು ಕಣ್ಣುತೆರೆಸುವ; ರೋಚಕವಾದ ಉತ್ತರವನ್ನು ಒಂದು ದೃಷ್ಟಾಂತದ ಮುಖೇನ ಪಿಪ್ಪಲಾದರು ಇಲ್ಲಿ ವಿವರಿಸಿದ್ದಾರೆ.
ಸಂಜೆಯಾದಾಗ ಸೂರ್ಯ ಮುಳುಗುತ್ತಾನೆ. ಆಗ ನಮಗೆ ಆತನ ಕಿರಣಗಳು ಆತನ ಒಳಗೆ ಸೇರಿಕೊಂಡಂತೆ ಕಾಣುತ್ತದೆ. ಆದರೆ ವಾಸ್ತವವಾಗಿ ಸೂರ್ಯ ಮುಳುಗುವುದಿಲ್ಲ, ಆತನ ಕಿರಣಗಳು ಆತನ ಒಳ ಸೇರುವುದಿಲ್ಲ. ಸೂರ್ಯ ಮುಳುಗಿದಂತೆ ಮತ್ತು ಆತನ ಕಿರಣಗಳು ಆತನ ಒಳ ಸೇರಿದಂತೆ ಭೂಮಿಯಲ್ಲಿರುವ ನಮಗೆ ಕಾಣಿಸುತ್ತದೆ ಅಷ್ಟೇ. ಅದೇ ರೀತಿ ಮುಂಜಾನೆ ಸೂರ್ಯ ಉದಯಿಸುತ್ತಾನೆ ಮತ್ತು ಆತನ ಪ್ರಖರವಾದ  ಕಿರಣಗಳು ಆತನಿಂದ ಹೊರಬಂದಂತೆ ಕಾಣುತ್ತವೆ. ಇದೇ ರೀತಿ ನಾವು ಮಲಗಿದಾಗ ನಮ್ಮೊಳಗಿರುವ ದೇವತಾಶಕ್ತಿಗಳು  ತಮ್ಮ ಪರಶಕ್ತಿಯಾದ, ನಮ್ಮ ಮನಸ್ಸಿನಲ್ಲಿ ಸದಾ ಸನ್ನಿಹಿತನಾಗಿರುವ, ಜ್ಞಾನಸ್ವರೂಪ ಭಗವಂತನನ್ನು ಹೋಗಿ ಸೇರುತ್ತವೆ ಮತ್ತು ಮುಂಜಾನೆ ಎದ್ದಾಗ, ಭಗವಂತನಿಂದ ಹೊರಬಂದು ಕಾರ್ಯ ನಿರ್ವಹಿಸುತ್ತವೆ. ವಾಸ್ತವವಾಗಿ ದೇವತೆಗಳು ಭಗವಂತನಲ್ಲಿ ಐಕ್ಯ ಹೊಂದುವುದಿಲ್ಲ.  ಆದರೆ ನಮಗೆ ಆ ರೀತಿ ಅನುಭವವಾಗುತ್ತದೆ.
ಭಗವಂತ ಜ್ಞಾನಸ್ವರೂಪ. ಹೇಗೆ ಸೂರ್ಯನಿಗೆ ಬೆಳಕಿನ ಲೋಪವಿಲ್ಲವೋ ಹಾಗೇ ಭಗವಂತನಿಗೆ ಜ್ಞಾನದ ಲೋಪವಿಲ್ಲ. ಸೂರ್ಯ ಬೆಳಕಿನ ಉಂಡೆಯಾದರೆ ಭಗವಂತ ಜ್ಞಾನಸಾಗರ. ಈ ಜ್ಞಾನಸ್ವರೂಪ ಭಗವಂತ ಮತ್ತು ಪ್ರಾಣದೇವರು ನಿದ್ದೆಯಲ್ಲಿ ನಮ್ಮನ್ನು ನಿಯಂತ್ರಿಸುತ್ತಾರೆ. ಅವರು ನಿದ್ದೆಯಲ್ಲೂ ಸದಾ ನಮ್ಮನ್ನು ಉಸಿರಾಡಿಸಿ, ನಾವು ಸೇವಿಸಿದ ಆಹಾರವನ್ನು ಪಚನ ಮಾಡಿ, ನಮ್ಮನ್ನು ರಕ್ಷಿಸುತ್ತಾರೆ. ಇತರ ದೇವತಾಶಕ್ತಿಗಳು ಈ ಸಮಯದಲ್ಲಿ ಪ್ರಾಣದೇವರು ಮತ್ತು ಭಗವಂತನಲ್ಲಿ  ಸೇರಿಕೊಂಡಿರುತ್ತಾರೆ. ಹೇಗೆ ಭಗವಂತ ಪ್ರಾಣದೇವರ ಅಂತರ್ಯಾಮಿಯಾಗಿ ನೆಲಸಿ ನಾವು ಉಂಡ ಆಹಾರವನ್ನು ಜೀರ್ಣಗೊಳಿಸುತ್ತಾನೆ ಎನ್ನುವುದನ್ನು ಕೃಷ್ಣ ಗೀತೆಯಲ್ಲಿ ಸುಂದರವಾಗಿ ವಿವರಿಸಿದ್ದಾನೆ. ಕೃಷ್ಣ ಹೇಳುತ್ತಾನೆ : ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ । ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ॥ಭಗವದ್ಗೀತಾ-೧೫-೧೪॥ “ನಾನು ‘ವೈಶ್ವಾನರ’ನಾಗಿ ಜೀವಿಗಳ ದೇಹದೊಳಗಿದ್ದು, ಪ್ರಾಣ-ಅಪಾನರಿಂದೊಡಗೂಡಿ [ತಿನ್ನುವ, ಚೀಪುವ, ನೆಕ್ಕುವ, ಕುಡಿಯುವ] ನಾಲ್ಕು ಬಗೆಯ ಆಹಾರವನ್ನು ಕರಗಿಸುತ್ತೇನೆ” ಎಂದು.
ಇಂದ್ರಿಯಾಭಿಮಾನಿ ದೇವತೆಗಳೆಲ್ಲರೂ ಭಗವತನಲ್ಲಿ ಸೇರಿಕೊಂಡಾಗ ಜೀವನಿಗೆ(ಪುರುಷಃ) ಯಾವುದೇ ಇಂದ್ರಿಯಾನುಭವ ಆಗುವುದಿಲ್ಲ. ಆತನಿಗೆ ಮಾತು ಕೇಳದು, ಕಣ್ಣು ಕಾಣದು, ವಾಸನೆ ಗ್ರಹಣವಾಗದು, ರುಚಿ ತಿಳಿಯದು, ಸ್ಪರ್ಶಜ್ಞಾನವಿಲ್ಲ, ಮಾತನಾಡಲಾಗುವುದಿಲ್ಲ, ಕೊಟ್ಟರೆ ಕೈ ತೆಗೆದುಕೊಳ್ಳುವುದಿಲ್ಲ, ಆನಂದಕೊಡುವ ಜನನೇಂದ್ರಿಯ ಕೆಲಸ ಮಾಡದು, ವಿಸರ್ಜನೆ ಕ್ರಿಯೆ ಇಲ್ಲ, ನಡೆಯಲು ಸಾಧ್ಯವಿಲ್ಲ. ಹೀಗೆ ನಿದ್ದೆಯಲ್ಲಿ ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯಗಳೆರಡೂ ಕೆಲಸ ಮಾಡುವುದಿಲ್ಲ. ಈ ಸ್ಥಿತಿಯನ್ನು ‘ಸ್ವಪೀತಿ’ ಎನ್ನುತ್ತಾರೆ. ಮೇಲ್ನೋಟಕ್ಕೆ ಸ್ವಪೀತಿ ಎಂದರೆ ನಿದ್ರಿಸಿದ್ದಾನೆ ಎಂದರ್ಥ. ಆದರೆ ಸ್ವಪೀತಿ ಎಂದರೆ ಸ್ವತಂತ್ರನಾದ ಭಗವಂತನನ್ನು ಸೇರಿದ್ದಾನೆ ಎಂದರ್ಥ.
ಓದುಗರು ಇಲ್ಲಿ ಒಂದು ಅಪೂರ್ವವಾದ ಭಾಷಾ ವಿಶೇಷವನ್ನು ಗಮನಿಸಬೇಕು. ಇಲ್ಲಿ ಇಂದ್ರಿಯಗಳ ಕ್ರಿಯೆಯನ್ನು ಹೇಳುವಾಗ ಕೆಲವು ‘ಪರಸ್ಮೈಪದ’ ಮತ್ತೆ ಕೆಲವು ‘ಆತ್ಮನೇಪದ’ವನ್ನು ಬಳಸಲಾಗಿದೆ. ಪ್ರಾಚೀನ ಸಂಸ್ಕೃತದಲ್ಲಿ ಈ ರೀತಿ ಪ್ರಯೋಗವಿದ್ದರೆ ಅದಕ್ಕೆ  ಅಲ್ಲಿ ಒಂದು ವಿಶೇಷ ಅರ್ಥವಿದೆ ಎಂದರ್ಥ. ಇದನ್ನು ನಾವು ತಿಳಿಯಬೇಕಾದರೆ ಮೊದಲು ನಮಗೆ  ಪರಸ್ಮೈಪದ ಮತ್ತು ಆತ್ಮನೇಪದ ಅಂದರೆ ಏನು ಎನ್ನುವುದು ತಿಳಿದಿರಬೇಕು. ಉದಾಹರಣೆಗೆ ಅಡಿಗೆ ಮಾಡುವುದನ್ನು ಸಂಸ್ಕೃತದಲ್ಲಿ ‘ಪಚತಿ’ ಅಥವಾ ‘ಪಚತೇ’ ಎನ್ನುತ್ತಾರೆ. ಇಲ್ಲಿ ‘ಪಚತಿ’ ಪರಸ್ಮೈಪದ. ಅಡಿಗೆಯನ್ನು ಬೇರೆಯವರಿಗಾಗಿ ಮಾಡುತ್ತಿದ್ದರೆ ಅದು ಪಚತಿ. ತನಗಾಗಿ ತಾನು ಅಡಿಗೆ ಮಾಡಿಕೊಂಡರೆ ಅದು  ಪಚತೇ(ಆತ್ಮನೇಪದ).
ಇಲ್ಲಿ ಮೊದಲ ಮೂರು ಕ್ರೀಯಾಪದಗಳು(ಶೃಣೋತಿ, ಪಶ್ಯತಿ ಮತ್ತು  ಜಿಘ್ರತಿ) ಪರಸ್ಮೈಪದದಲ್ಲಿವೆ.  ಉಳಿದ ಎಲ್ಲಾ ಪದಗಳೂ ಆತ್ಮನೇಪದಗಳು. ಇದನ್ನು ವಿಶ್ಲೇಷಿಸಿದಾಗ ನಮಗೆ ಇದರ ಹಿಂದಿನ ಕಾರಣ ತಿಳಿಯುತ್ತದೆ. ಶೃಣೋತಿ, ಪಶ್ಯತಿ ಮತ್ತು  ಜಿಘ್ರತಿ ಅಂದರೆ ಕೇಳುವುದು, ನೋಡುವುದು ಮತ್ತು ಆಘ್ರಾಣ ಮಾಡುವುದು. ಈ ಮೂರೂ ಕ್ರಿಯೆಗಳು  ಹೊರಗಿನಿಂದ ಬರುವಂತವು. ಇವು ಏಕಕಾಲದಲ್ಲಿ ಎಲ್ಲರಿಗೂ ಅನ್ವಯವಾಗುವ ಕ್ರಿಯೆ. ಏಕಕಾಲದಲ್ಲಿ ಒಂದು ವಸ್ತುವನ್ನು ಅನೇಕ ಮಂದಿ ನೋಡಿ, ಕೇಳಿ, ಮೂಸಿ ಅನುಭವಿಸಬಹುದು. ಆದ್ದರಿಂದ ಈ ಮೂರು ಕ್ರಿಯೆಗಳನ್ನು ಹೇಳುವಾಗ ಪರಸ್ಮೈಪದ ಬಳಸಿದ್ದಾರೆ. ಇತರ ಕ್ರಿಯೆಗಳನ್ನು ನೋಡಿದರೆ ಅವು ಸಾರ್ವತ್ರಿಕವಲ್ಲ. ಅವು ಇಂದ್ರಿಯದಲ್ಲಿದ್ದು ಅನುಭವ ಕೊಡುವಂತಹದ್ದು. ಉದಾಹರಣೆಗೆ ‘ರಸಯತೇ’ . ಇಲ್ಲಿ ರುಚಿಯನ್ನು ಯಾರು ತಿನ್ನುತ್ತಿದ್ದಾನೋ ಅವನಷ್ಟೇ ಅನುಭವಿಸಬಲ್ಲ. ಅದು ಸಾರ್ವತ್ರಿಕವಲ್ಲ. ಅದೇ ರೀತಿ  ಸ್ಪೃಶತೇ-ಸ್ಪರ್ಶ, ನಾಭಿವದತೇ-ಮಾತನಾಡುವುದು, ನಾSದತ್ತೇ-ಸ್ವೀಕರಿಸುವುದು, ನಾSನಂದಯತೇ-ಆನಂದ ಹೊಂದುವುದು[ಗಂಡು-ಹೆಣ್ಣು ಪರಸ್ಪರ, ಆದರೆ ಅದು ಸಾರ್ವತ್ರಿಕವಲ್ಲ] , ವಿಸೃಜತೇ-ವಿಸರ್ಜಿಸುವುದು ಮತ್ತು  ನೇಯಾಯತೇ-ನಡೆಯುವುದು. ಇದು ಸಂಸ್ಕೃತ ಭಾಷೆಯ ಚೆಲುವು. ಈ ಸೊಗಸು ಇನ್ನ್ಯಾವುದೇ ಭಾಷೆಯಲ್ಲಿ ಕಾಣಸಿಗುವುದಿಲ್ಲ.

Prashnopanishad in Kannada-Prashna-III (09-12)


ತೇಜೋ ಹವಾ ಉದಾನಃ । ತಸ್ಮಾದುಪಶಾಂತತೇಜಾಃ ।  ಪುನರ್ಭವಮಿಂದ್ರಿಯೈರ್ಮನಸಿ ಸಂಪಧ್ಯಮಾನೈರ್ಯಚ್ಚಿತ್ತಸ್ತೇನೈಷ ಪ್ರಾಣ ಆಯತಿ ॥  ೯॥
ಪ್ರಾಣಸ್ತೇಜಸಾ ಯುಕ್ತಃ ಸ ಹಾSತ್ಮನಾ ಯಥಾಸಂಕಲ್ಪಿತಂ ಲೋಕಂ ನಯತಿ ॥  ೧೦॥

 ಈ ಹಿಂದೆ ವಿವರಿಸಿದಂತೆ: ‘ಉದಾನ’ ಜೀವನನ್ನು  ದೇಹದಲ್ಲಿನ ಯಾವುದೋ ಒಂದು ನಾಡಿಯ ಮುಖೇನ ದೇಹದಿಂದ ಹೊರ ಕರೆದುಕೊಂಡು ಹೋಗುತ್ತಾನೆ. ಪ್ರಾಣದೇವರು ಜೀವನೊಂದಿಗೆ ದೇಹವನ್ನು ಬಿಟ್ಟ ತಕ್ಷಣ, ದೇಹ ಶವವಾಗುತ್ತದೆ ಮತ್ತು ತಣ್ಣಗಾಗುತ್ತದೆ. ಹೇಗೆ ನಮ್ಮ ದೇಹದ ಒಳಗೆ ಪ್ರಾಣಾಗ್ನಿಯಾಗಿ ತೇಜಸ್ಸಿನ ದೇವತೆ ‘ಉದಾನ’ ಸನ್ನಿಹಿತನಾಗಿದ್ದಾನೋ, ಹಾಗೇ ದೇಹದ ಹೊರಗೆ ಪಂಚಭೂತಗಳಲ್ಲಿ ‘ಉದಾನ’ ನಾಮಕ ಪ್ರಾಣ ಅಗ್ನಿಯಲ್ಲಿ ಸನ್ನಿಹಿತನಾಗಿದ್ದಾನೆ.
ಹೀಗೆ ಸಮಸ್ತ ಬ್ರಹ್ಮಾಂಡ ಮತ್ತು ಪಿಂಡಾಂಡದಲ್ಲಿರುವ ಒಂದೊಂದು ಶಕ್ತಿಯ ಹಿಂದಿರುವ ಮೂಲಶಕ್ತಿ ಪ್ರಾಣದೇವರು. ಪ್ರಪಂಚದಲ್ಲಿ ಪ್ರಾಣದೇವರ ಪ್ರವೇಶವಿಲ್ಲದೇ ಒಂದು ಹುಲ್ಲುಕಡ್ಡಿಗೂ ಅಸ್ತಿತ್ವವಿಲ್ಲ. ಇಡೀ ಬ್ರಹ್ಮಾಂಡದಲ್ಲಿ ಪಂಚಭೂತಗಳ ಒಳಗೆ, ಪಂಚೇಂದ್ರಿಯದ ಒಳಗೆ, ಪಂಚಪ್ರಾಣನಾಗಿ ತುಂಬಿ, ಇಡೀ ಪ್ರಪಂಚವನ್ನು ನಿಯಂತ್ರಿಸುವ ಈ ಪಂಚಪ್ರಾಣರ ಮಹಿಮೆಯೇ ಇಷ್ಟಿರುವಾಗ, ಇನ್ನು  ಈ ಪ್ರಾಣದೇವರನ್ನೂ ನಿಯಂತ್ರಿಸುವ ಭಗವಂತನ ಮಹಿಮೆ ಅದೆಷ್ಟಿರಬಹುದು? ಅದು ನಮ್ಮ ಮನಸ್ಸು ಗ್ರಹಿಸಲು ಅಸಾಧ್ಯವಾದ ಅಗಣಿತ ಶಕ್ತಿ!
ದೇಹದಿಂದ ಜೀವನನ್ನು ಆಚೆ ಕರೆದುಕೊಂಡು ಹೋಗುವ ಪ್ರಾಣದೇವರು, ಆ ಜೀವದ ಮುಂದಿನ ಗತಿಯನ್ನು ಜೀವದ ಕರ್ಮಕ್ಕನುಸಾರವಾಗಿ ನಿರ್ಧರಿಸುತ್ತಾರೆ. ಜೀವಕ್ಕೆ ಮರುಹುಟ್ಟು ತಕ್ಷಣ ಆಗಬಹುದು ಅಥವಾ ಸೂಕ್ಷ್ಮಲೋಕದಲ್ಲಿ ಸುಖವನ್ನೋ ಅಥವಾ ದುಃಖವನ್ನೋ ಅನುಭವಿಸಿದ ನಂತರ ಆಗಬಹುದು. ಜೀವ ದೇಹವನ್ನು ಬಿಟ್ಟು ಹೊರ ಹೋದಾಗ, ಆ ಜೀವಕ್ಕೆ ಸಂಬಂಧಿಸಿದ ಚಕ್ಷುರಾದಿ ಇಂದ್ರಿಯಗಳು  ಮನಸ್ಸಿನ ಜೊತೆಗೆ ಜೀವದ ಸೂಕ್ಷ್ಮ ಶರೀರದೊಂದಿಗಿರುತ್ತವೆ.
ಮೂಲತಃ ಎಲ್ಲಾ ಇಂದ್ರಿಯಗಳು ಇರುವುದು ಸೂಕ್ಷ್ಮ ಶರೀರದಲ್ಲೇ. ಸ್ಥೂಲ ಶರೀರದ ಭೌತಿಕ ಇಂದ್ರಿಯ ಕೆಲಸ ಮಾಡದೇ ಇರಬಹುದು, ಆದರೆ ಸೂಕ್ಷ್ಮ ಶರೀರದಲ್ಲಿನ ಎಲ್ಲಾ ಇಂದ್ರಿಯಗಳು ಸುಸೂತ್ರವಾಗಿರುತ್ತವೆ. ಆದ್ದರಿಂದ ಒಬ್ಬ ವ್ಯಕ್ತಿ ಕುರುಡನಾಗಿದ್ದರೆ, ಆತನ ಸೂಕ್ಷ್ಮ ಶರೀರದ ಇಂದ್ರಿಯ ಕುರುಡಾಗಿರುವುದಿಲ್ಲ. [ಈ ಕುರಿತು ಕೆಲವು ನೈಜ ಘಟನೆಗಳನ್ನೊಳಗೊಂಡ ವಿಷಯವನ್ನು ನಾವು Raymond moody ಬರೆದಿರುವ Life after life  ಎನ್ನುವ ಪುಸ್ತಕದಲ್ಲಿ ಕಾಣಬಹುದು]. ಜೀವ ಮರುಹುಟ್ಟು ಪಡೆದಾಗ ಇದೇ ಇಂದ್ರಿಯಗಳೊಂದಿಗೆ ಮರಳಿ ಹುಟ್ಟುತ್ತಾನೆ.
ಜೀವದ ಮರುಜನ್ಮಕ್ಕೆ ನಿರ್ಣಾಯಕ ‘ದೇಹತ್ಯಾಗ ಮಾಡುವ ಕೊನೇ ಕ್ಷಣದಲ್ಲಿ ಜೀವ ಮಾಡುವ ಚಿಂತನೆ’. ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ: ಯಂ ಯಂ ವಾSಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಳೇಬರಮ್ । ತನ್ತಮೇವೈತಿ ಕೌಂತೇಯ ಸದಾ ತದ್ ಭಾವಭಾವಿತಃ  ॥ಭಗವದ್ಗೀತಾ-೮-೬॥ ಕೃಷ್ಣ ಹೇಳುತ್ತಾನೆ: “ಕೊನೆಯಲ್ಲಿ ಯಾವ ಯಾವ ವಿಷಯವನ್ನು ನೆನೆಯುತ್ತಾ ದೇಹವನ್ನು ತೊರೆಯುತ್ತಾನೋ, ಅದರಲ್ಲೇ ಅನುಗಾಲ ಬೇರೂರಿದ ಸಂಸ್ಕಾರದಿಂದ ಅದನ್ನೆ ಪಡೆಯುತ್ತಾನೆ” ಎಂದು. [ಇದಕ್ಕೆ ಉತ್ತಮ ದೃಷ್ಟಾಂತ ಭರತ ಚಕ್ರವರ್ತಿ ಜಿಂಕೆಯಾಗಿ ಹುಟ್ಟುವ ಕಥೆ (ಭಾಗವತ-೫-೮)]. ಇಲ್ಲಿ ಪಿಪ್ಪಲಾದರು ಇದನ್ನೇ ‘ಯಚ್ಚಿತ್ತಃ’ ಎಂದು ವಿವರಿಸಿದ್ದಾರೆ. ಪ್ರಾಣದೇವರು ಜೀವದ ಕೊನೇ ಕ್ಷಣದ ಇಚ್ಛೆಗನುಗುಣವಾಗಿ ಮತ್ತು ಜೀವದ ಕರ್ಮಕ್ಕನುಗುಣವಾಗಿ, ಆ ಜೀವ ಎಲ್ಲಿ ಮರಳಿ ಹುಟ್ಟಬೇಕೋ ಅಲ್ಲಿಗೆ ಕರೆದುಕೊಂಡು ಹೋಗಿ ಹುಟ್ಟಿಸುತ್ತಾರೆ.[ಇಲ್ಲಿ ಎಲ್ಲವೂ ಪರಾಬ್ಧ ಕರ್ಮಕ್ಕನುಗುಣವಾಗಿ ಭಗವಂತನ ಇಚ್ಛೆಯಂತೆಯೇ ನಡೆಯುತ್ತದೆ. ಚಿತ್ತದ ದೇವತೆ ಕೂಡಾ ಪ್ರಾಣನಾಗಿರುವುದರಿಂದ ಜೀವದ ಕೊನೇ ಇಚ್ಛೆ ಕೂಡಾ ಪ್ರಾಣದೇವರ ಅಧೀನ!]
ಇಲ್ಲಿಯ ತನಕ ಪಿಪ್ಪಲಾದರು ಒಂದು ಅದ್ಭುತವಾದ ಪ್ರಾಣತತ್ತ್ವದ ಮಹಿಮೆಯನ್ನು ವಿವರಿಸಿದರು. ಈ ಪ್ರಾಣತತ್ತ್ವದ ಮಹತ್ವವನ್ನು ನಾವೆಲ್ಲರೂ ಎಲ್ಲಾ ಸಮಯದಲ್ಲೂ ತಿಳಿದಿರಬೇಕು. ಉದಾಹರಣೆಗೆ ನಾವು ದೇವಸ್ಥಾನಕ್ಕೆ ಹೋಗುತ್ತೇವೆ, ಅಥವಾ ಮನೆಯಲ್ಲಿ ಪ್ರಾಣದೇವರ ಉಪಾಸನೆ ಮಾಡುತ್ತೇವೆ. ಈ ರೀತಿ ಪೂಜೆ ಮಾಡುವಾಗ ನಮಗೆ ಪ್ರಾಣದೇವರ ಈ ಮಹಿಮೆಯ ಎಚ್ಚರ ಇರಬೇಕು. ತಿಳಿದು ಉಪಾಸನೆ ಮಾಡಿದಾಗ ಅಲ್ಲಿ ಸಿಗುವ ಆನಂದ ಅಪರಂಪಾರವಾದುದು. ಆ ಆನಂದವನ್ನು ವಿವರಿಸಲು ಸಾಧ್ಯವಿಲ್ಲ, ಕೇವಲ ಅನುಭವಿಸಬೇಕು!  ಇಲ್ಲಿ ಮುಂದುವರಿದು  ಪಿಪ್ಪಲಾದರು ಪ್ರಾಣದೇವರ ಬಗಿಗಿನ ಈ ಜ್ಞಾನವನ್ನು ಅರಿತು ಉಪಾಸನೆ ಮಾಡುವುದರ ಫಲಶ್ರುತಿಯನ್ನು ವಿವರಿಸುತ್ತಾರೆ.

ಯ ಏವಂ ವಿದ್ವಾನ್ ಪ್ರಾಣಂ ವೇದ ನ ಹಾಸ್ಯ ಪ್ರಜಾ ಹೀಯತೇಽಮೃತೋ ಭವತಿ ॥  ೧೧॥

ಪ್ರಾಣದೇವರು ಒಳಗಿನಿಂದ ಪಂಚಪ್ರಾಣರಾಗಿದ್ದಾರೆ; ಹೊರಗೆ ಪಂಚಭೂತಗಳಲ್ಲಿದ್ದಾರೆ; ಸೂರ್ಯನಲ್ಲಿದ್ದಾರೆ; ಇಂದ್ರಿಯಗಳಲ್ಲಿದ್ದಾರೆ; ಹುಟ್ಟು-ಸಾವುಗಳಲ್ಲಿದ್ದಾರೆ; ಪಂಚಕೋಶಗಳಲ್ಲಿ ತುಂಬಿ ನಮ್ಮನ್ನು ನಡೆಸುತ್ತಿದ್ದಾರೆ; ನಮ್ಮ ಬದುಕಿನ ಒಂದೊಂದು ಕ್ಷಣವೂ ಪ್ರಾಣದೇವರಿಂದ ನಿಯಂತ್ರಿಸಲ್ಪಡುತ್ತದೆ-  ಎಂದು ತಿಳಿದು ಯಾರು ಉಪಾಸನೆ ಮಾಡುತ್ತಾರೋ: ಅವರು ಜೀವನದಲ್ಲಿ ಎಂದೂ ದುರಂತವನ್ನು[ಚಿಕ್ಕವರು ತಮ್ಮ ಕಣ್ಣ ಮುಂದೆ ಸಾಯುವ ದುರಂತ] ಕಾಣುವುದಿಲ್ಲ; ಅವರ ಬುದ್ಧಿಶಕ್ತಿ ಎಂದೂ ಕುಂದುವುದಿಲ್ಲ; ಅವರು ಬುದ್ಧಿವಂತ ಜ್ಞಾನಿಯಾಗಿ ಬೆಳೆಯುತ್ತಾರೆ; ಬಂದ ಜ್ಞಾನ ಅವರಲ್ಲಿ ಕೊನೇ ತನಕ ಸ್ಮರಣಶಕ್ತಿಯಾಗಿ ಉಳಿಯುತ್ತದೆ. ಮುಖ್ಯವಾಗಿ ಪ್ರಾಣದೇವರ ಉಪಾಸನೆ ಮಾಡುವುದರಿಂದ ಅವರು ಸಂಸಾರದಿಂದ ಪಾರಾಗಿ, ಶಾಶ್ವತವಾಗಿ ಮೋಕ್ಷದಲ್ಲಿ ಭಗವಂತನನ್ನು ಸೇರುತ್ತಾರೆ.
ಮೋಕ್ಷ ಸಾಧನೆಯಲ್ಲಿ ಅತ್ಯಂತ ಶ್ರೇಷ್ಠ ಸಾಧನೆ –ಭಗವಂತನನ್ನು ಪ್ರಾಣದೇವರ ಮೂಲಕ ಉಪಾಸನೆ ಮಾಡುವುದು. ಇದನ್ನೇ  ವೇದದಲ್ಲಿ ಈ ರೀತಿ ಹೇಳಲಾಗಿದೆ ಎಂದು ಪಿಪ್ಪಲಾದರು ವೇದದ ಒಂದು ಮಂತ್ರವನ್ನು ಉಲ್ಲೇಖಿಸುತ್ತಾರೆ:

ತದೇಷ ಶ್ಲೋಕಃ -
ಉತ್ಪತ್ತಿಮಾಗತಿಂ ಸ್ಥಾನಂ ವಿಭುತ್ವಂ ಚೈವ ಪಂಚಧಾ ।
ಅಧ್ಯಾತ್ಮಂ ಚೈವ ಪ್ರಾಣಸ್ಯ ವಿಜ್ಞಾಯಾಮೃತಮಶ್ನುತೇ ವಿಜ್ಞಾಯಾಮೃತಮಶ್ನುತ ಇತಿ ॥ ೧೨॥

ನಾವು ತಿಳಿಯಬೇಕಾದುದು: ಪ್ರಾಣದೇವರ ಹುಟ್ಟಿನ ಮಹಿಮೆಯನ್ನು; ಇಡೀ ವಿಶ್ವದಲ್ಲಿ ತುಂಬಿರುವ ಪ್ರಾಣಶಕ್ತಿಯ ಮಹಿಮೆಯನ್ನು; ಪಂಚಭೂತಗಳಲ್ಲಿ ಮತ್ತು ಪಂಚಪ್ರಾಣರಾಗಿ ನಮ್ಮ ದೇಹದಲ್ಲಿ ತುಂಬಿರುವ ಅವರ ಮಹಿಮೆಯನ್ನು. ನಾವು ಬ್ರಹ್ಮಾಂಡ ಮತ್ತು ಪಿಂಡಾಂಡದಲ್ಲಿ ಪ್ರಾಣದೇವರ ವೈಭವವನ್ನು ಅರಿತಿರಬೇಕು. ಇದನ್ನೆಲ್ಲವನ್ನು ತಿಳಿದರೆ ಮಾತ್ರ ಭಗವಂತನನ್ನು ಕಾಣಲು ಸಾಧ್ಯ. ಪ್ರಾಣದೇವರನ್ನು ತಿಳಿಯದೇ ಭಗವಂತನನ್ನು ತಿಳಿಯಲು ಸಾಧ್ಯವಿಲ್ಲ.
ಇಲ್ಲಿ ಬಳಕೆಯಾದ ‘ಚ’-ಕಾರ ಅಧ್ಯಾತ್ಮದಲ್ಲಿ ಪ್ರಾಣದೇವರ ಮಹಿಮೆ ಅತ್ಯಂತ ಮುಖ್ಯವಾದುದು ಎನ್ನುವುದನ್ನು ಸೂಚಿಸುತ್ತದೆ. ಅದೇ ರೀತಿ ನಾವು ಅಧ್ಯಾತ್ಮದಲ್ಲಿ ಪ್ರಾಣದೇವರ ಮಹಿಮೆಯನ್ನು ತಿಳಿದಿರಲೇಬೇಕು ಎನ್ನುವುದನ್ನು ‘ಏವ’-ಕಾರ ಸೂಚಿಸುತ್ತದೆ. ಪ್ರಾಣದೇವರ ಈ ಮಹಿಮೆಯನ್ನು ಅರಿತವನು ಸಾವಿಲ್ಲದ, ಆನಂದಮಯವಾದ ಮೋಕ್ಷವನ್ನು ಸೇರುತ್ತಾನೆ ಎನ್ನುತ್ತದೆ ವೇದ.
ಇಲ್ಲಿ ಕೊನೆಯಲ್ಲಿ ‘ವಿಜ್ಞಾಯಾಮೃತಮಶ್ನುತ’ ಎನ್ನುವ ಪದವನ್ನು ಎರಡು ಬಾರಿ ಬಳಸಲಾಗಿದೆ. ಸಂಸ್ಕೃತ ಸಾಹಿತ್ಯದಲ್ಲಿ ಒಂದು ಅಧ್ಯಾಯ ಮುಗಿಯಿತು ಎನ್ನುವುದನ್ನು ಸೂಚಿಸಲು ಈ ರೀತಿ ಕೊನೆಯಲ್ಲಿ ಒಂದು ಪದವನ್ನು ಎರಡು ಬಾರಿ ಬಳಸುತ್ತಾರೆ. ಅದೇ ರೀತಿ  ಇಲ್ಲಿ ಬಳಸಲಾದ ‘ಇತಿ’ ಎನ್ನುವ ಪದ ಇಲ್ಲಿಗೆ ಮೂರನೇ ಪ್ರಶ್ನೆಗೆ ಉತ್ತರರೂಪವಾದ ಗ್ರಂಥ ಸಮಾಪ್ತಿಯಾಯಿತು ಎನ್ನುವುದನ್ನು ಸೂಚಿಸುತ್ತದೆ.

ಇತಿ ಪ್ರಶ್ನೋಪನಿಷದಿ ತೃತೀಯಃ ಪ್ರಶ್ನಃ ॥
ಇಲ್ಲಿಗೆ ಷಟ್ ಪ್ರಶ್ನ ಉಪನಿಷತ್ತಿನ ಮೂರನೇ ಪ್ರಶ್ನೆ/ಅಧ್ಯಾಯ ಮುಗಿಯಿತು.

*******